ಚಿಕ್ಕಮಗಳೂರು: ಇಂದಿನ ಸಮಾಜದಲ್ಲಿ ಮಾದಕ ದ್ರವ್ಯಗಳ ಹಾವಳಿ ಹೆಚ್ಚಾಗುತ್ತಿದ್ದು, ಇದು ಯುವ ಪೀಳಿಗೆಯ ಭವಿಷ್ಯ ಹಾಗೂ ಸಾಮರ್ಥ್ಯವನ್ನು ಕುಂಠಿತಗೊಳಿಸುತ್ತಿದೆ. ಯುವಕರು ಇಂತಹ ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಕೈ ಜೋಡಿಸಬೇಕು ಎಂದು ಚಿಕ್ಕಮಗಳೂರು ಜಿಲ್ಲಾಧಿಕಾರಿ ಭನ್ವರ್ ಸಿಂಗ್ ಮೀನಾ ಅವರು ಹೇಳಿದರು.
ನಗರದ ಜಿಲ್ಲಾ ಪೊಲೀಸ್ ಕಚೇರಿ ಆವರಣದಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ‘ಅಂತರರಾಷ್ಟ್ರೀಯ ಮಾದಕ ದ್ರವ್ಯ ದುರುಪಯೋಗ ಮತ್ತು ಅಕ್ರಮ ಸಾಗಾಣಿಕೆ ವಿರೋಧಿ ದಿನ’ದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಮಾದಕ ದ್ರವ್ಯ ಎಂದರೆ ಕೇವಲ ತಂಬಾಕು ಅಥವಾ ಸಾಂಪ್ರದಾಯಿಕ ವಸ್ತುಗಳಿಗೆ ಮಾತ್ರ ಸೀಮಿತವಾಗಿತ್ತು. ಆದರೆ ಇಂದು ಮಾರುಕಟ್ಟೆಗೆ ಅಪಾಯಕಾರಿ ಸಿಂಥೆಟಿಕ್ ಮಾದಕ ದ್ರವ್ಯಗಳು ಲಗ್ಗೆ ಇಡುತ್ತಿವೆ. ಇದು ಅತ್ಯಂತ ಸವಾಲಿನ ವಿಷಯವಾಗಿದ್ದು, ಸಮಾಜಕ್ಕೆ ಮತ್ತು ವಿಶೇಷವಾಗಿ ಯುವ ಜನತೆಗೆ ಭಾರಿ ಕಂಟಕವಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಕಡಿಮೆ ವಯಸ್ಸಿನ ಮಕ್ಕಳಲ್ಲಿ ಯೋಚನಾ ಶಕ್ತಿ ಮತ್ತು ಸೂಕ್ಷ್ಮತೆ ಹೆಚ್ಚಿರುವುದರಿಂದ, ಅವರು ಇಂತಹ ಜಾಲಗಳಿಗೆ ಸುಲಭವಾಗಿ ಸಿಲುಕುವ ಸಾಧ್ಯತೆ ಇರುತ್ತದೆ. ಆದ್ದರಿಂದ ಪೋಷಕರು, ಶಾಲಾ-ಕಾಲೇಜುಗಳು ಹಾಗೂ ಸುತ್ತಮುತ್ತಲಿನ ನೆರೆಹೊರೆಯವರು ಎಚ್ಚರಿಕೆಯಿಂದ ಇರಬೇಕು. ಈ ಬಗ್ಗೆ ಪ್ರತಿಯೊಬ್ಬರಲ್ಲೂ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಜಿಲ್ಲಾಧಿಕಾರಿಯವರು ಒತ್ತಿ ಹೇಳಿದರು.
ಮಾದಕ ದ್ರವ್ಯ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಪೊಲೀಸ್ ಇಲಾಖೆಯು ಶಾಲಾ-ಕಾಲೇಜುಗಳು ಮತ್ತು ಬಡಾವಣೆಗಳಲ್ಲಿ ನಿರಂತರವಾಗಿ ಹತ್ತು ಹಲವು ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿದ್ದು, ಸಾರ್ವಜನಿಕರು ಇದಕ್ಕೆ ಪೂರ್ಣ ಸಹಕಾರ ನೀಡಬೇಕು ಎಂದು ಮನವಿ ಮಾಡಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹನುಮಂತಪ್ಪ ಮಾತನಾಡಿ, ಒಂದು ದೇಶವನ್ನು ಹಾಳು ಮಾಡಲು ಅಥವಾ ಸಂಪೂರ್ಣವಾಗಿ ನಾಶ ಮಾಡಲು ಯುದ್ಧ ಸಾರಿ, ಬಾಂಬ್ ದಾಳಿ ನಡೆಸುವ ಅವಶ್ಯಕತೆಯೇ ಇಲ್ಲ. ಯುವ ಪೀಳಿಗೆಗೆ ಮಾದಕ ವಸ್ತುಗಳನ್ನು ತಲುಪಿಸಿದರೆ ಸಾಕು, ಇಡೀ ದೇಶವೇ ನಾಶವಾಗಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಯುವಜನತೆ ಒಮ್ಮೆ ಮಾದಕ ದ್ರವ್ಯಗಳ ದಾಸರಾದರೆ, ಅವರಲ್ಲಿ ಪ್ರಶ್ನಿಸುವ ಮನೋಭಾವ ಮತ್ತು ಆಲೋಚನಾ ಶಕ್ತಿ ಸಂಪೂರ್ಣವಾಗಿ ನಶಿಸಿಹೋಗುತ್ತದೆ. ದೇಶವನ್ನು ಇಂತಹ ದುಸ್ಥಿತಿಗೆ ತಳ್ಳಲು ದೇಶವಿರೋಧಿ ಶಕ್ತಿಗಳು ನಿರಂತರವಾಗಿ ಸಂಚು ರೂಪಿಸುತ್ತಿದ್ದು, ಯುವ ಜನರನ್ನು ಗುರಿಯಾಗಿಸಿಕೊಂಡು ಮಾದಕ ಜಾಲವನ್ನು ಹರಡುತ್ತಿವೆ ಎಂದು ಅವರು ಎಚ್ಚರಿಸಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಕೇವಲ ವೈಯಕ್ತಿಕ ಆರೋಗ್ಯವಷ್ಟೇ ಅಲ್ಲದೆ, ಇಡೀ ಕುಟುಂಬ ಬೀದಿಗೆ ಬೀಳುತ್ತದೆ. ಇದರೊಂದಿಗೆ ಸಮಾಜದ ಸ್ವಾಸ್ಥ್ಯ ಮತ್ತು ಶಾಂತಿ ಕೂಡ ಹಾಳಾಗುತ್ತದೆ. ಈ ಭೀಕರ ಪಿಡುಗಿನ ವಿರುದ್ಧ ಇಡೀ ದೇಶಾದ್ಯಂತ ವ್ಯಾಪಕ ಜಾಗೃತಿ ಮೂಡಿಸಬೇಕಾದ ಅನಿವಾರ್ಯತೆ ಇದೆ ಎಂದು ತಿಳಿಸಿದ ಅವರು, ಯುವಜನರಲ್ಲಿ ಮತ್ತು ವಿದ್ಯಾರ್ಥಿಗಳಲ್ಲಿ ಈ ಕುರಿತು ಜಾಗೃತಿ ಮೂಡಿಸಲು ಇಂತಹ ಉಪಯುಕ್ತ ಕಾರ್ಯಕ್ರಮ ಹಮ್ಮಿಕೊಂಡಿರುವ ಜಿಲ್ಲಾ ಪೊಲೀಸ್ ಇಲಾಖೆಯ ಕಾರ್ಯ ಶ್ಲಾಘನೀಯ ಎಂದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಮಾತನಾಡಿ, ದೇಶದಲ್ಲಿ ಮಾದಕ ದ್ರವ್ಯಗಳ ಬಳಕೆ ಮತ್ತು ಜಾಲ ಅತ್ಯಂತ ಗಂಭೀರ ಸಮಸ್ಯೆಯಾಗಿ ಪರಿಣಮಿಸಿದೆ. ಯಾರು ಈ ಮಾದಕ ದ್ರವ್ಯಗಳನ್ನು ಬಳಸುತ್ತಾರೋ, ಅವರೆಲ್ಲರೂ ನಮ್ಮ ಪೊಲೀಸ್ ಇಲಾಖೆಯ ‘ಕ್ಲೈಂಟ್’ಗಳಾಗುತ್ತಾರೆ” ಎಂದು ಎಚ್ಚರಿಕೆ ನೀಡಿದರು.
ಯುವಜನತೆ ದಯವಿಟ್ಟು ಯಾವುದೇ ಕಾರಣಕ್ಕೂ ನಮ್ಮ ಪೊಲೀಸ್ ಇಲಾಖೆಯ ‘ಕ್ಲೈಂಟ್’ಗಳಾಗಬೇಡಿ. ಅದರ ಬದಲು ಶಿಕ್ಷಣ ಇಲಾಖೆಯ ಕ್ಲೈಂಟ್ಗಳಾಗಿ, ದೇಶದ ಜವಾಬ್ದಾರಿಯುತ ನಾಗರಿಕರಾಗಿ ಹಾಗೂ ಸಮಾಜದ ಆಸ್ತಿಯಾಗಿ ರೂಪಗೊಳ್ಳಿ ಎಂದು ಕಿವಿಮಾತು ಹೇಳಿದರು.
Youth takes the lead in building a drug-free society
Leave a comment