Home namma chikmagalur chikamagalur 19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ
chikamagalurHomeLatest Newsnamma chikmagalur

19 ಲಕ್ಷ ಜನರ ಪಿಂಚಣಿ ರದ್ದು: ಸರ್ಕಾರದ ವಿರುದ್ಧ ವಿಧಾನಮಂಡಲದಲ್ಲಿ ಸಂಗ್ರಾಮ

Share
Share

ಸಖರಾಯಪಟ್ಟಣ: ರಾಜ್ಯದಲ್ಲಿ 19 ಲಕ್ಷಕ್ಕೂ ಹೆಚ್ಚು ಜನರ ವೃದ್ಧಾಪ್ಯ, ವಿಧವಾ ಹಾಗೂ ಅಂಗವಿಕಲ ಪಿಂಚಣಿಯನ್ನು ರದ್ದುಪಡಿಸಲಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲಿ ಸುಮಾರು 67 ಸಾವಿರ ಫಲಾನುಭವಿಗಳ ಪಿಂಚಣಿ ಸ್ಥಗಿತಗೊಳಿಸಲಾಗಿದೆ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಆರೋಪಿಸಿದರು.

ಸಖರಾಯಪಟ್ಟಣದಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಂಚಣಿ ಸ್ಥಗಿತಗೊಂಡು ಐದು ತಿಂಗಳು ಕಳೆದ ಬಳಿಕ ಇದೀಗ ಫಲಾನುಭವಿಗಳಿಗೆ ನೋಟಿಸ್ ನೀಡಲಾಗುತ್ತಿದೆ. ಬದುಕಿರುವ ವೃದ್ಧರು ಹಾಗೂ ಅಂಗವಿಕಲರಿಂದ ಮರಣ ಪ್ರಮಾಣಪತ್ರ ಸಲ್ಲಿಸುವಂತೆ ಕೇಳುತ್ತಿರುವುದು ಅಧಿಕಾರಿಗಳ ಅಸಂಬದ್ಧ ಕ್ರಮವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

“ಬದುಕಿರುವವರಿಗೆ ಮರಣ ಪ್ರಮಾಣಪತ್ರ ಕೇಳುವುದು ಬಡವರಿಗಾಗುವ ಅಪಮಾನ. ಹಣದ ಕೊರತೆಯಿದ್ದರೆ ಜನರಿಗೆ ಗ್ಯಾರಂಟಿ ಯೋಜನೆಗಳ ಭರವಸೆ ನೀಡಬಾರದಿತ್ತು. ಬಡವರು, ವೃದ್ಧರು ಹಾಗೂ ಅಂಗವಿಕಲರಿಗೆ ಮೋಸ ಮಾಡುವ ಕೆಲಸವನ್ನು ಸರ್ಕಾರ ಮಾಡಬಾರದು” ಎಂದು ಅವರು ಹೇಳಿದರು.

ಸ್ಥಗಿತಗೊಳಿಸಿರುವ ಎಲ್ಲ ಪಿಂಚಣಿಗಳನ್ನು ತಕ್ಷಣ ಮರುಸ್ಥಾಪಿಸಿ, ಐದು ತಿಂಗಳ ಬಾಕಿ ಮೊತ್ತವನ್ನೂ ಒಟ್ಟಿಗೆ ಬಿಡುಗಡೆ ಮಾಡಬೇಕು. ಪ್ರತಿಯೊಂದು ಗ್ರಾಮ ಪಂಚಾಯಿತಿಯಲ್ಲೂ ಪಿಂಚಣಿ ಅದಾಲತ್ ನಡೆಸಿ, ಫಲಾನುಭವಿಗಳ ಸಮಸ್ಯೆಗಳನ್ನು ಸ್ಥಳದಲ್ಲೇ ಪರಿಹರಿಸಬೇಕು ಎಂದು ಆಗ್ರಹಿಸಿದರು.

ವೃದ್ಧಾಪ್ಯ ವೇತನಕ್ಕೆ ₹32 ಸಾವಿರ ಆದಾಯ ಮಿತಿ ನಿಗದಿಪಡಿಸಿರುವುದನ್ನೂ ಪ್ರಶ್ನಿಸಿದ ಸಿ.ಟಿ. ರವಿ, ಕನಿಷ್ಠ ಕೂಲಿ ಮೊತ್ತವೇ ಇದಕ್ಕಿಂತ ಹೆಚ್ಚಿರುವ ಸಂದರ್ಭದಲ್ಲಿ ಇಂತಹ ಆದಾಯ ಮಿತಿ ಹೇಗೆ ಸಮರ್ಥನೀಯ ಎಂದು ಪ್ರಶ್ನಿಸಿದರು.

ಉದ್ಯೋಗ ನೇಮಕಾತಿಯಲ್ಲಿ ಭ್ರಷ್ಟಾಚಾರ ಆರೋಪ

ಜಾರ್ಖಂಡ್‌ನಲ್ಲಿ ಪರೀಕ್ಷಾ ಅಕ್ರಮ ಹಾಗೂ ಉದ್ಯೋಗ ನೇಮಕಾತಿಯಲ್ಲಿನ ಭ್ರಷ್ಟಾಚಾರದ ವಿರುದ್ಧ ವಿದ್ಯಾರ್ಥಿಗಳು ನಡೆಸುತ್ತಿರುವ ಹೋರಾಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ವಿದ್ಯಾರ್ಥಿಗಳ ಬೇಡಿಕೆಯಂತೆ ಪ್ರಕರಣವನ್ನು ಸಿಬಿಐ ತನಿಖೆಗೆ ವಹಿಸಬೇಕು ಎಂದು ಅವರು ಆಗ್ರಹಿಸಿದರು.

ಕರ್ನಾಟಕದಲ್ಲೂ ಕೆಪಿಎಸ್‌ಸಿ ಉದ್ಯೋಗ ನೇಮಕಾತಿ ಸಂಸ್ಥೆಯಾಗಿ ಉಳಿದಿಲ್ಲ. ಅದು ಉದ್ಯೋಗದ ವ್ಯಾಪಾರದ ಕಚೇರಿಯಾಗಿ ಬದಲಾಗಿದೆ ಎಂದು ಆರೋಪಿಸಿದ ಅವರು, ಜಾತಿ ಮತ್ತು ಹಣಕ್ಕೆ ಮಣೆ ಹಾಕುವ ಭ್ರಷ್ಟ ವ್ಯವಸ್ಥೆಯಾಗಿ ಕೆಪಿಎಸ್‌ಸಿ ಪರಿವರ್ತನೆಯಾಗಿದೆ ಎಂದು ಟೀಕಿಸಿದರು.

“ಕರ್ನಾಟಕದಲ್ಲಿನ ಕೆಪಿಎಸ್‌ಸಿ ಹೋರಾಟದಲ್ಲಿ ರಾಹುಲ್ ಗಾಂಧಿ ನಾಪತ್ತೆಯಾಗಿದ್ದಾರೆ. ಜಾರ್ಖಂಡ್‌ನ ವಿದ್ಯಾರ್ಥಿಗಳ ಹೋರಾಟದಲ್ಲಿ ಕಾಂಗ್ರೆಸ್ ನಾಪತ್ತೆಯಾಗಿದೆ. ಕರ್ನಾಟಕದಲ್ಲಿ ಕಾಂಗ್ರೆಸ್ ಸರ್ಕಾರವಿದೆ, ಜಾರ್ಖಂಡ್‌ನಲ್ಲಿ ಕಾಂಗ್ರೆಸ್ ಬೆಂಬಲಿತ ಸರ್ಕಾರವಿದೆ. ಭ್ರಷ್ಟಾಚಾರದ ವಿರುದ್ಧ ಮೌನ ಸಮ್ಮತಿ ನೀಡಲಾಗುತ್ತಿದೆ” ಎಂದು ದೂರಿದರು.

ಖಾತೆ ಹಂಚಿಕೆ ವಿಳಂಬಕ್ಕೆ ಟೀಕೆ

ಸರ್ಕಾರದಲ್ಲಿ ಇನ್ನೂ ಖಾತೆ ಹಂಚಿಕೆ ಪೂರ್ಣಗೊಂಡಿಲ್ಲ. ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಸರ್ಕಾರ ಯಾವ ಸ್ಥಿತಿಯಲ್ಲಿದೆ ಎಂಬುದು ಜನರಿಗೆ ಅರ್ಥವಾಗುತ್ತಿಲ್ಲ ಎಂದು ಸಿ.ಟಿ. ರವಿ ಟೀಕಿಸಿದರು.

ಹಿರಿಯ ಶಾಸಕರೇ ಸಚಿವ ಸ್ಥಾನ ಹಂಚಿಕೆ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಒಳ್ಳೆಯವರಿಗೆ ಕಾಲವಿಲ್ಲ, ಭ್ರಷ್ಟರಿಗೆ ಮಾತ್ರ ಸಚಿವ ಸ್ಥಾನ ಸಿಗುತ್ತಿದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಇಂತಹ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿಗಳಿಗೆ ಸಚಿವರಿಗೆ ಖಾತೆ ಹಂಚಿಕೆ ಮಾಡುವ ಅಧಿಕಾರವೂ ಇಲ್ಲದಂತಾಗಿದೆ ಎಂದು ಅವರು ವ್ಯಂಗ್ಯವಾಡಿದರು.

“ಮುಖ್ಯಮಂತ್ರಿಯಾಗಿ ಯಾರನ್ನು ಸಚಿವರನ್ನಾಗಿ ಮಾಡಬೇಕು ಎಂಬ ಅಧಿಕಾರವೂ ನಿಮಗಿಲ್ಲ. ಹೈಕಮಾಂಡ್ ಪಟ್ಟಿ ಕಳುಹಿಸುತ್ತದೆ. ಪಕ್ಷದ ನಾಯಕರು ಸಲಹೆ ನೀಡುವುದು ಸಹಜ, ಆದರೆ ಅದರ ಒಂದು ಮಿತಿ ಇದೆ. ಮಾಧ್ಯಮಗಳ ಮುಂದೆ ಸಚಿವರ ಪಟ್ಟಿಯನ್ನೇ ಬಿಡುಗಡೆ ಮಾಡುವ ಮಟ್ಟಿಗೆ ಹೈಕಮಾಂಡ್ ಹಸ್ತಕ್ಷೇಪ ಮಾಡಿರುವುದು ಮುಖ್ಯಮಂತ್ರಿ ಸ್ಥಾನದ ಗೌರವಕ್ಕೆ ಧಕ್ಕೆ” ಎಂದು ಹೇಳಿದರು.

ಬರಪೀಡಿತ ತಾಲೂಕು ಘೋಷಣೆಗೆ ಆಗ್ರಹ

ಕಳೆದ ಒಂದೂವರೆ ತಿಂಗಳಿಂದ ರಾಜ್ಯದ ಹಲವು ಭಾಗಗಳಲ್ಲಿ ವಾಡಿಕೆಗಿಂತ ಶೇ.40ರಿಂದ 60ರಷ್ಟು ಕಡಿಮೆ ಮಳೆಯಾಗಿದೆ. ಹೀಗಾಗಿ ಅಗತ್ಯವಿರುವ ತಾಲೂಕು ಹಾಗೂ ಜಿಲ್ಲೆಗಳನ್ನು ತಕ್ಷಣ ಬರಪೀಡಿತ ಪ್ರದೇಶಗಳೆಂದು ಘೋಷಿಸಬೇಕು ಎಂದು ಸಿ.ಟಿ. ರವಿ ಒತ್ತಾಯಿಸಿದರು.

ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡದ ಹೊರತು ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ. ಸರ್ಕಾರ ಈ ವಿಚಾರದಲ್ಲೂ ರಾಜಕಾರಣ ಮಾಡದೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದರು.

ಅಗತ್ಯವಿರುವ ಪ್ರದೇಶಗಳಲ್ಲಿ ಮೇವು ಬ್ಯಾಂಕ್‌ಗಳನ್ನು ತೆರೆಯಬೇಕು. ಮೇವು ಬೆಳೆಯಲು ರೈತರಿಗೆ ಉತ್ತೇಜನ ನೀಡಬೇಕು. ಕುಡಿಯುವ ನೀರಿನ ಸಮಸ್ಯೆ ಇರುವ ಪ್ರದೇಶಗಳಿಗೆ ಮೊದಲ ಆದ್ಯತೆಯಲ್ಲಿ ನೀರು ಪೂರೈಸಬೇಕು. ಕುಡಿಯುವ ನೀರಿನ ಮೂಲಗಳನ್ನು ಸಂರಕ್ಷಿಸುವ ಜೊತೆಗೆ ಅಗತ್ಯವಿರುವ ಕಡೆ ಖಾಸಗಿ ಬೋರ್‌ವೆಲ್‌ಗಳನ್ನು ವಶಕ್ಕೆ ಪಡೆದು ಕುಡಿಯುವ ನೀರಿನ ಉದ್ದೇಶಕ್ಕೆ ಬಳಸಬೇಕು ಎಂದು ಆಗ್ರಹಿಸಿದರು.

“ನಮ್ಮ ಕೂಗು ಸರ್ಕಾರದ ಮುಂದೆ ಕಿನ್ನುಡಿಯಂತೆ ಅಥವಾ ಗೋರ್ಕಲ್ ಮೇಲೆ ಮಳೆ ಸುರಿದಂತೆ ವ್ಯರ್ಥವಾಗಬಾರದು. ಜನರ ಸಮಸ್ಯೆಗಳಿಗೆ ಸರ್ಕಾರ ತಕ್ಷಣ ಸ್ಪಂದಿಸಬೇಕು” ಎಂದರು.

ಅಧಿವೇಶನದಲ್ಲಿ ಸರ್ಕಾರದ ವಿರುದ್ಧ ಹೋರಾಟ

ಪಿಂಚಣಿ ರದ್ದು, ರೈತರ ಸಮಸ್ಯೆ, ಭ್ರಷ್ಟರಿಗೆ ಸಚಿವ ಸ್ಥಾನ ನೀಡಿರುವ ಆರೋಪ, ಬರಪೀಡಿತ ತಾಲೂಕು ಮತ್ತು ಜಿಲ್ಲೆಗಳನ್ನು ಘೋಷಣೆ ಮಾಡದಿರುವುದು ಹಾಗೂ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳದಿರುವುದು ಸೇರಿದಂತೆ ಹಲವು ವಿಚಾರಗಳನ್ನು ಮುಂದಿಟ್ಟುಕೊಂಡು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಸರ್ಕಾರದ ವಿರುದ್ಧ “ಸಂಗ್ರಾಮ” ನಡೆಸಲಾಗುವುದು ಎಂದು ಸಿ.ಟಿ. ರವಿ ಎಚ್ಚರಿಸಿದರು.

ವಿಪಕ್ಷ ನಾಯಕರು ಕೇಳುವ ಪ್ರಶ್ನೆಗಳಿಗೆ ತಾವೊಬ್ಬರೇ ಸಮರ್ಥವಾಗಿ ಉತ್ತರ ನೀಡುವುದಾಗಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿರುವುದನ್ನು ಉಲ್ಲೇಖಿಸಿದ ಅವರು, “19 ಲಕ್ಷ ಜನರ ಪಿಂಚಣಿ ಕಿತ್ತುಕೊಂಡಿರುವುದು ನಿಮ್ಮ ಉತ್ತರವೇ? ಬಿಪಿಎಲ್ ಕಾರ್ಡ್ ನೀಡದಿರುವುದು ಉತ್ತರವೇ? ಮನೆ ನೀಡದಿರುವುದು ಉತ್ತರವೇ? ಬರಪೀಡಿತ ತಾಲೂಕುಗಳನ್ನು ಘೋಷಣೆ ಮಾಡದಿರುವುದು ಉತ್ತರವೇ? ಖಾತೆ ಹಂಚಿಕೆ ಮಾಡದಿರುವುದೇ ನಿಮ್ಮ ಉತ್ತರವೇ?” ಎಂದು ಪ್ರಶ್ನಿಸಿದರು.

ಸರ್ಕಾರ ಜನರ ಸಮಸ್ಯೆಗಳಿಗೆ ಉತ್ತರ ನೀಡುವ ಮೂಲಕ ಆಡಳಿತದ ಮೇಲಿನ ವಿಶ್ವಾಸವನ್ನು ಉಳಿಸಿಕೊಳ್ಳಬೇಕು ಎಂದು ಸಿ.ಟಿ. ರವಿ ಹೇಳಿದರು.

Pension cancellation of 19 lakh people: Struggle in the legislature against the government

Share

Leave a comment

Leave a Reply

Your email address will not be published. Required fields are marked *

Don't Miss

ನಾಮಫಲಕದಲ್ಲಿ ಶೇ.೬೦ರಷ್ಟು ಕನ್ನಡಕ್ಕೆ ಪ್ರಾಧಾನ್ಯತೆಗೆ ಸೂಚನೆ

ಚಿಕ್ಕಮಗಳೂರು: ಮುಂದಿನ ಒಂದು ವಾರದೊಳಗೆ ಉದ್ಯಮದ ಎಲ್ಲಾ ನಾಮಫಲಕಗಳಲ್ಲಿ ಸರ್ಕಾರದ ನಿಯಮಗಳ ಅನ್ವಯ ಶೇ. ೬೦ರಷ್ಟು ಕನ್ನಡ ನಾಮಫಲಕ ಇರುವಂತೆ ಕ್ರಮ ಕೈಗೊಳ್ಳಬೇಕು. ತಪ್ಪಿದಲ್ಲಿ ನಗರಸಭೆಯಿಂದ ನಾಮಫಲಕಗಳನ್ನು ತೆರವುಗೊಳಿಸಿ ಕಾನೂನು ರೀತಿ...

ಮದುವೆ ಮನೆಯಲ್ಲಿ ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳವು

ಚಿಕ್ಕಮಗಳೂರು: ಜಿಲ್ಲೆಯ ಬಾಳೆಹೊನ್ನೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮದುವೆ ಕಾರ್ಯಕ್ರಮಕ್ಕೆ ತೆರಳಿದ್ದ ವೇಳೆ ಸುಮಾರು ₹3.75 ಲಕ್ಷ ಮೌಲ್ಯದ ಚಿನ್ನಾಭರಣ ಕಳುವಾಗಿರುವ ಘಟನೆ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಸಂಬಂಧಿಕರ...

Related Articles

ಮನೆಯಲ್ಲಿ ಇಟ್ಟಿದ್ದ ಚಿನ್ನಾಭರಣ-20 ಸಾವಿರ ನಗದು ಕಳವು

ಚಿಕ್ಕಮಗಳೂರು: ಮನೆಯ ಬೀರುವಿನಲ್ಲಿ ಇರಿಸಿದ್ದ ಸುಮಾರು ೨೮ ಗ್ರಾಂ ಚಿನ್ನಾಭರಣ ಹಾಗೂ ?೨೦ ಸಾವಿರ ನಗದು...

ವೃದ್ದಾಪ್ಯ, ಅಂಗವಿಕಲ ವೇತನ ವಿಳಂಬ ಖಂಡಿಸಿ ಬಿಜೆಪಿ ಪ್ರತಿಭಟನೆ

ಚಿಕ್ಕಮಗಳೂರು: ವೃದ್ದಾಪ್ಯ, ವಿಧವಾ, ವಿಕಲಚೇತನ ಹಾಗೂ ಬಿಪಿಎಲ್ ಕಾರ್ಡ್ ರದ್ದು ಪಡಿಸಿರುವ ರಾಜ್ಯದ ಕಾಂಗ್ರೆಸ್ ಸರ್ಕಾರದ...

ಸಖರಾಯಪಟ್ಟಣದ ಮೂಲಸೌಕರ್ಯ ಸಮಸ್ಯೆ ಪರಿಹಾರಕ್ಕೆ 5 ಬೇಡಿಕೆ

ಚಿಕ್ಕಮಗಳೂರು: ಜಿಲ್ಲೆಯ ಪ್ರಮುಖ ಗ್ರಾಮ ಪಂಚಾಯಿತಿಗಳಲ್ಲಿ ಒಂದಾಗಿರುವ ಸಖರಾಯಪಟ್ಟಣದಲ್ಲಿ ಮೂಲಭೂತ ಸೌಲಭ್ಯಗಳ ಕೊರತೆಯಿಂದ ಜನರು ತೊಂದರೆ...

ಆಹಾರ ಇಲಾಖೆ ಉಪನಿರ್ದೇಶಕರಿಗೆ ₹50 ಸಾವಿರ ವಂಚನೆ

ಚಿಕ್ಕಮಗಳೂರು: ಜಿಲ್ಲಾಧಿಕಾರಿ ಹೆಸರಿನಲ್ಲಿ ನಕಲಿ ವಾಟ್ಸಪ್ ಖಾತೆ ಸೃಷ್ಟಿಸಿ, ಆನ್‌ಲೈನ್ ಬ್ಯಾಂಕಿಂಗ್ ಸಮಸ್ಯೆಯ ನೆಪದಲ್ಲಿ ಆಹಾರ...