ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಸಂಘಟನ್ ಸೃಜನ್ ಅಭಿಯಾನ–2 ಅಡಿ ಪ್ರಕ್ರಿಯೆ ಆರಂಭವಾಗಿದೆ. ಬ್ಲಾಕ್ ಅಧ್ಯಕ್ಷರ ಆಯ್ಕೆಯಲ್ಲಿ ಸ್ಥಳೀಯ ಕಾರ್ಯಕರ್ತರು ಹಾಗೂ ನಾಯಕರ ಅಭಿಪ್ರಾಯಕ್ಕೆ ಆದ್ಯತೆ ನೀಡುವುದರ ಜತೆಗೆ, ಪಕ್ಷಕ್ಕಾಗಿ ಸಕ್ರಿಯವಾಗಿ ದುಡಿಯುವವರಿಗೆ ಅವಕಾಶ ಕಲ್ಪಿಸಬೇಕು ಎಂದು ಕೆಪಿಸಿಸಿ ವೀಕ್ಷಕರು ಸೂಚಿಸಿದ್ದಾರೆ.
ನಗರದಲ್ಲಿ ನಡೆದ ಜಿಲ್ಲಾ ಕಾಂಗ್ರೆಸ್ ಸಭೆಯಲ್ಲಿ ಕೆಪಿಸಿಸಿ ವೀಕ್ಷಕರಾದ ಎಂ.ಎ. ಗಫೂರ್ ಹಾಗೂ ಮೋಹನ್ ಅವರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಕುರಿತು ಪಕ್ಷದ ಮುಖಂಡರು ಮತ್ತು ಕಾರ್ಯಕರ್ತರಿಗೆ ಮಾಹಿತಿ ನೀಡಿದರು.
ಸಂಘಟನ್ ಸೃಜನ್ ಅಭಿಯಾನ–2ರ ಪ್ರಕ್ರಿಯೆ ಸೆ.28ರಿಂದ ಆರಂಭವಾಗಿದ್ದು, ಅ.30ರೊಳಗೆ ಬ್ಲಾಕ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ವರದಿ ಹಾಗೂ ಶಿಫಾರಸುಗಳನ್ನು ಕೆಪಿಸಿಸಿ ಅಧ್ಯಕ್ಷರಿಗೆ ಸಲ್ಲಿಸಬೇಕಿದೆ ಎಂದು ಗಫೂರ್ ತಿಳಿಸಿದರು.
ಜಿಲ್ಲೆಯಲ್ಲಿ ಒಟ್ಟು 12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ನಡೆಯಲಿದ್ದು, ಪ್ರತಿ ಬ್ಲಾಕ್‌ಗೆ ಕನಿಷ್ಠ ಮೂರು ಹಾಗೂ ಗರಿಷ್ಠ ಐದು ಆಕಾಂಕ್ಷಿಗಳ ಹೆಸರನ್ನು ಶಿಫಾರಸು ಮಾಡುವ ಪ್ರಕ್ರಿಯೆ ನಡೆಯಲಿದೆ. ಈ ಪಟ್ಟಿಯಲ್ಲಿ ಕನಿಷ್ಠ ಒಬ್ಬ ಮಹಿಳಾ ಆಕಾಂಕ್ಷಿ ಕಡ್ಡಾಯವಾಗಿ ಇರಬೇಕು ಎಂದು ಅವರು ಸ್ಪಷ್ಟಪಡಿಸಿದರು.
ಬ್ಲಾಕ್ ಅಧ್ಯಕ್ಷರ ಆಯ್ಕೆಯಲ್ಲಿ ಯಾವುದೇ ಒತ್ತಡಕ್ಕೆ ಒಳಗಾಗದೆ, ಸ್ಥಳೀಯವಾಗಿ ಪಕ್ಷಕ್ಕಾಗಿ ಕೆಲಸ ಮಾಡುತ್ತಿರುವ ಕಾರ್ಯಕರ್ತರ ಅಭಿಪ್ರಾಯವನ್ನು ಪಡೆಯಲಾಗುವುದು. ಶಾಸಕರು ಸೇರಿದಂತೆ ಸ್ಥಳೀಯ ಪ್ರಮುಖರ ಅಭಿಪ್ರಾಯವನ್ನೂ ಪರಿಗಣಿಸಲಾಗುವುದು ಎಂದು ಕೆಪಿಸಿಸಿ ವೀಕ್ಷಕರು ತಿಳಿಸಿದರು.
ವೀಕ್ಷಕರಿಗೆ ಸಲ್ಲಿಕೆಯಾಗುವ ಅರ್ಜಿಗಳು ಹಾಗೂ ಅಭಿಪ್ರಾಯಗಳನ್ನು ಪರಿಶೀಲಿಸಿ, ಪ್ರತಿ ಬ್ಲಾಕ್‌ಗೆ ಮೂವರು ಹೆಸರುಗಳನ್ನು ಅಂತಿಮವಾಗಿ ಕೆಪಿಸಿಸಿಗೆ ಶಿಫಾರಸು ಮಾಡುವ ಜವಾಬ್ದಾರಿ ವೀಕ್ಷಕರದ್ದಾಗಿದೆ ಎಂದು ತಿಳಿಸಲಾಯಿತು.
ಕೆಪಿಸಿಸಿ ವೀಕ್ಷಕ ಮೋಹನ್ ಮಾತನಾಡಿ, ಮಾಜಿ ಕೆಪಿಸಿಸಿ ಸದಸ್ಯರು, ಪ್ರಧಾನ ಕಾರ್ಯದರ್ಶಿಗಳು, ಜಿಲ್ಲಾ ಪಂಚಾಯಿತಿ ಸದಸ್ಯರು ಸೇರಿದಂತೆ ಪಕ್ಷದ ಪ್ರಮುಖರು ಬ್ಲಾಕ್ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದ ತಮ್ಮ ಅಭಿಪ್ರಾಯವನ್ನು ಲಿಖಿತ ರೂಪದಲ್ಲಿ ನೀಡಬೇಕು ಎಂದು ಮನವಿ ಮಾಡಿದರು.
ವೀಕ್ಷಕರಿಗೆ ಬಂದ ಶಿಫಾರಸುಗಳನ್ನು ಪರಿಶೀಲಿಸಿ, ಅರ್ಹರಾದ ಮೂವರ ಹೆಸರನ್ನು ಕೆಪಿಸಿಸಿಗೆ ಕಳುಹಿಸುವುದಷ್ಟೇ ತಮ್ಮ ಜವಾಬ್ದಾರಿ. ಆಯ್ಕೆಯ ಅಂತಿಮ ನಿರ್ಧಾರವನ್ನು ಪಕ್ಷದ ರಾಜ್ಯ ನಾಯಕತ್ವ ಕೈಗೊಳ್ಳಲಿದೆ ಎಂದು ಅವರು ಹೇಳಿದರು.
ಸಂಘಟನ್ ಸೃಜನ್ ಅಭಿಯಾನ–2ರಡಿ ಬ್ಲಾಕ್ ಅಧ್ಯಕ್ಷರ ನೇಮಕದ ಜತೆಗೆ ಜಿಲ್ಲಾ ಕಾಂಗ್ರೆಸ್ ಸಮಿತಿಯ ಸದಸ್ಯರ ನೇಮಕ, ವಿವಿಧ ಮುಂಚೂಣಿ ಘಟಕಗಳು ಹಾಗೂ ಸೆಲ್‌ಗಳ ಕಾರ್ಯಚಟುವಟಿಕೆಗಳ ಪರಿಶೀಲನೆಯೂ ನಡೆಯಲಿದೆ.
ಸಕ್ರಿಯವಾಗಿಲ್ಲದ ಘಟಕಗಳ ಮಾಹಿತಿ ಸಂಗ್ರಹಿಸಿ, ಅಗತ್ಯವಿದ್ದಲ್ಲಿ ಅವುಗಳನ್ನು ಪುನರ್‌ಚೇತನಗೊಳಿಸುವ ಕ್ರಮ ಕೈಗೊಳ್ಳಲಾಗುವುದು ಎಂದು ಮೋಹನ್ ತಿಳಿಸಿದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ ಮಾತನಾಡಿ, ಬ್ಲಾಕ್ ಅಧ್ಯಕ್ಷರ ಆಯ್ಕೆಯಲ್ಲಿ ಪಕ್ಷಕ್ಕಾಗಿ ನಿಷ್ಠೆಯಿಂದ ಕೆಲಸ ಮಾಡುವವರು, ಸಂಘಟನಾ ಅನುಭವ ಹೊಂದಿರುವವರು ಹಾಗೂ ಸ್ಥಳೀಯವಾಗಿ ಸಕ್ರಿಯರಾಗಿರುವವರನ್ನು ಪರಿಗಣಿಸಲಾಗುವುದು ಎಂದರು.
ಸುಮಾರು 40ರಿಂದ 60 ವರ್ಷದೊಳಗಿನವರಿಗೆ ಆದ್ಯತೆ ನೀಡುವ ಜತೆಗೆ, ಪಕ್ಷದ ಹಿರಿಯರನ್ನು ಗೌರವಿಸಿ ಯುವಕರನ್ನೂ ಒಳಗೊಂಡು ಬಲಿಷ್ಠ ತಂಡ ಕಟ್ಟುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಜಿಲ್ಲೆಯ 12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯಲ್ಲಿ ಮಹಿಳೆಯರಿಗೆ ಅವಕಾಶ ನೀಡುವುದು ಕಡ್ಡಾಯವಾಗಿರುವುದರಿಂದ, ಪ್ರತಿಯೊಂದು ಬ್ಲಾಕ್‌ನ ಶಿಫಾರಸು ಪಟ್ಟಿಯಲ್ಲೂ ಮಹಿಳಾ ಆಕಾಂಕ್ಷಿಗೆ ಅವಕಾಶ ಕಲ್ಪಿಸುವಂತೆ ಸೂಚಿಸಲಾಗಿದೆ.
ಸಭೆಯಲ್ಲಿ ಮಹಿಳಾ ಕಾಂಗ್ರೆಸ್ ಅಧ್ಯಕ್ಷರು ಹಾಗೂ ಮಹಿಳಾ ಕಾಂಗ್ರೆಸ್ ತಂಡದ ಗೈರುಹಾಜರಿ ಕುರಿತು ಮಂಜೇಗೌಡ ಅಸಮಾಧಾನ ವ್ಯಕ್ತಪಡಿಸಿದರು. ಯುವ ಕಾಂಗ್ರೆಸ್ ಘಟಕದ ಅಧ್ಯಕ್ಷರ ಗೈರುಹಾಜರಿಯನ್ನೂ ಅವರು ಪ್ರಸ್ತಾಪಿಸಿದರು. ಮುಂದಿನ ದಿನಗಳಲ್ಲಿ ಎಲ್ಲಾ ಮುಂಚೂಣಿ ಘಟಕಗಳು ಸಕ್ರಿಯವಾಗಿ ಪಕ್ಷದ ಸಂಘಟನಾ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಐದು ವಿಧಾನಸಭಾ ಕ್ಷೇತ್ರಗಳಿದ್ದು, ಪ್ರತಿಯೊಂದು ಕ್ಷೇತ್ರದಲ್ಲಿಯೂ ಬ್ಲಾಕ್ ಮಟ್ಟದ ಸಂಘಟನೆ ಬಲಪಡಿಸುವುದು ಪ್ರಕ್ರಿಯೆಯ ಪ್ರಮುಖ ಉದ್ದೇಶವಾಗಿದೆ.
ಕರಾವಳಿ ಮತ್ತು ಮಲೆನಾಡು ಭಾಗದಲ್ಲಿ ಪಕ್ಷದ ಸಂಘಟನೆ ಬಲಿಷ್ಠವಾದರೆ ರಾಜ್ಯ ಮಟ್ಟದಲ್ಲಿಯೂ ಪಕ್ಷದ ಸಂಘಟನೆಗೆ ಶಕ್ತಿ ಬರಲಿದೆ ಎಂಬ ಅಭಿಪ್ರಾಯವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಬ್ಲಾಕ್ ಅಧ್ಯಕ್ಷರ ನೇಮಕದಲ್ಲಿ ಜಿಲ್ಲೆಯ ಹಿರಿಯ ನಾಯಕರು ಹಾಗೂ ಶಾಸಕರ ಅಭಿಪ್ರಾಯ ಪಡೆಯುವುದಾಗಿ ವೀಕ್ಷಕರು ತಿಳಿಸಿದರು. ಜಿಲ್ಲೆಗೆ ಆಗಮಿಸುವ ಮುನ್ನವೇ ಹಲವು ಹಿರಿಯ ನಾಯಕರೊಂದಿಗೆ ದೂರವಾಣಿ ಮೂಲಕ ಚರ್ಚಿಸಲಾಗಿದ್ದು, ಮುಂದಿನ ದಿನಗಳಲ್ಲಿಯೂ ಅವರ ಸಲಹೆಗಳನ್ನು ಪಡೆಯಲಾಗುವುದು ಎಂದು ಗಫೂರ್ ಹೇಳಿದರು.
ಜಿಲ್ಲೆಯ ಐವರು ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ವಿವಿಧ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಸಭೆಗೆ ಹಾಜರಾಗಲು ಸಾಧ್ಯವಾಗದಿದ್ದರೂ, ಅವರ ಅಭಿಪ್ರಾಯವನ್ನೂ ಪರಿಗಣಿಸಲಾಗುವುದು ಎಂದು ತಿಳಿಸಿದರು.
ಜಿಲ್ಲಾ ಕಾಂಗ್ರೆಸ್‌ಗೆ ನೂತನ ಅಧ್ಯಕ್ಷರಾಗಿ ಎಚ್.ಪಿ. ಮಂಜೇಗೌಡ ಅಧಿಕಾರ ವಹಿಸಿಕೊಂಡಿರುವ ಹಿನ್ನೆಲೆಯಲ್ಲಿ ಮುಂದಿನ ಹಂತದಲ್ಲಿ ಜಿಲ್ಲಾ ಕಾಂಗ್ರೆಸ್ ಸಮಿತಿಯ ರಚನೆಯೂ ನಡೆಯಬೇಕಿದೆ. ಅದರ ಜತೆಗೆ ಬ್ಲಾಕ್ ಅಧ್ಯಕ್ಷರ ನೇಮಕ ಪ್ರಕ್ರಿಯೆ ನಡೆಯುತ್ತಿರುವುದರಿಂದ ಮುಂದಿನ ಒಂದು ತಿಂಗಳು ಸಂಘಟನಾ ಚಟುವಟಿಕೆಗಳಿಗೆ ಮಹತ್ವದ ಅವಧಿಯಾಗಲಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಸ್ಥಾನಕ್ಕೆ ಅರ್ಜಿ ಸಲ್ಲಿಸಿದ್ದ ಹಲವು ಆಕಾಂಕ್ಷಿಗಳು ಸಭೆಯಲ್ಲಿ ಯಾವುದೇ ಅಸಮಾಧಾನವಿಲ್ಲದೆ ಭಾಗವಹಿಸಿರುವುದನ್ನು ಗಫೂರ್ ಶ್ಲಾಘಿಸಿದರು.
ಪಕ್ಷದೊಳಗೆ ಅಭಿಪ್ರಾಯ ಭೇದಗಳು ಇರಬಹುದಾದರೂ, ಪಕ್ಷದ ಸಂಘಟನೆಯ ಪ್ರಶ್ನೆ ಬಂದಾಗ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡುವುದು ಅಗತ್ಯ ಎಂದು ಅವರು ಹೇಳಿದರು. ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಸಂದರ್ಭದಲ್ಲಿ ಅರ್ಜಿ ಸಲ್ಲಿಸಿದ್ದ ಎಲ್ಲರೂ ಪ್ರಕ್ರಿಯೆಯನ್ನು ಸ್ವೀಕರಿಸಿ ಪಕ್ಷದ ಸಂಘಟನೆಗಾಗಿ ಮುಂದುವರಿಯುತ್ತಿರುವುದು ಒಗ್ಗಟ್ಟಿನ ಸಂದೇಶ ನೀಡಿದೆ ಎಂದು ಹೇಳಿದರು.
ಕಾಂಗ್ರೆಸ್ ನೇತೃತ್ವದ ಸರ್ಕಾರದ ವಿವಿಧ ಯೋಜನೆಗಳು ಹಾಗೂ ಕಾರ್ಯಕ್ರಮಗಳ ಬಗ್ಗೆ ಕಾರ್ಯಕರ್ತರು ಜನರಿಗೆ ಮಾಹಿತಿ ತಲುಪಿಸುವ ಕೆಲಸ ಮಾಡಬೇಕು ಎಂದು ಸಭೆಯಲ್ಲಿ ಕರೆ ನೀಡಲಾಯಿತು. ಶಾಸಕರು ಹಾಗೂ ಪಕ್ಷದ ಸಂಘಟನೆಗಳ ಮೂಲಕ ಕಾರ್ಯಕರ್ತರಿಗೆ ದೊರೆಯುತ್ತಿರುವ ಅವಕಾಶಗಳನ್ನು ಬಳಸಿಕೊಂಡು ಬೂತ್ ಮಟ್ಟದಿಂದ ಪಕ್ಷವನ್ನು ಬಲಪಡಿಸಬೇಕು ಎಂದು ಮುಖಂಡರು ಹೇಳಿದರು.
ಚಿಕ್ಕಮಗಳೂರು ಜಿಲ್ಲೆಯ ಬ್ಲಾಕ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಕೆಪಿಸಿಸಿ ವತಿಯಿಂದ ಎಂ.ಎ. ಗಫೂರ್ ಮತ್ತು ಮೋಹನ್ ಸೇರಿದಂತೆ ವೀಕ್ಷಕರ ತಂಡ ಕಾರ್ಯನಿರ್ವಹಿಸುತ್ತಿದೆ. ಕೋಆರ್ಡಿನೇಟರ್ ಕಾವ್ಯ ಅವರು ಸಭೆಗೆ ಹಾಜರಾಗಲು ಸಾಧ್ಯವಾಗಲಿಲ್ಲ. ಮುಂದಿನ ಸಭೆಗಳಲ್ಲಿ ತಂಡದ ಇತರ ಸದಸ್ಯರೂ ಭಾಗವಹಿಸಲಿದ್ದಾರೆ ಎಂದು ತಿಳಿಸಲಾಯಿತು.
ವೀಕ್ಷಕರು ಮುಂದಿನ ದಿನಗಳಲ್ಲಿ ಜಿಲ್ಲೆಯ ವಿವಿಧ ಬ್ಲಾಕ್‌ಗಳಿಗೆ ಭೇಟಿ ನೀಡಿ ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರ ಅಭಿಪ್ರಾಯಗಳನ್ನು ಸಂಗ್ರಹಿಸಲಿದ್ದಾರೆ.
ಸಭೆಯ ಆರಂಭದಲ್ಲಿ ಕಾಂಗ್ರೆಸ್ ಮುಖಂಡ ರೋಬಿನ್ ಮೋಸಸ್ ಸ್ವಾಗತಿಸಿ ಮಾತನಾಡಿದರು. ನೂತನ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಎಚ್.ಪಿ. ಮಂಜೇಗೌಡ, ಕೆಪಿಸಿಸಿ ವೀಕ್ಷಕ ಎಂ.ಎ. ಗಫೂರ್, ಕೆಪಿಸಿಸಿ ಮುಖಂಡರು, ಐದು ಗ್ಯಾರಂಟಿ ಯೋಜನೆಗಳ ಜಿಲ್ಲಾ ಅಧ್ಯಕ್ಷ ಶಿವಾನಂದ ಸ್ವಾಮಿ, ಪ್ರಚಾರ ಸಮಿತಿ ಅಧ್ಯಕ್ಷ ಅನೀಫ್, ಕೆಪಿಸಿಸಿ ವಕ್ತಾರ ರವಿ ಬಾಸಪ್ಪ ಸೇರಿದಂತೆ ವೇದಿಕೆಯಲ್ಲಿದ್ದ ಗಣ್ಯರನ್ನು ಸ್ವಾಗತಿಸಿದರು.
Process to select 12 Block Congress presidents set in motion.
Leave a comment