Home namma chikmagalur chikamagalur ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪ್ರಜಾಸೇವ ಆಂದೋಲನದ ಉದ್ದೇಶ
chikamagalurHomeLatest Newsnamma chikmagalur

ಜನರ ಸಮಸ್ಯೆಗಳಿಗೆ ತ್ವರಿತ ಪರಿಹಾರ ಪ್ರಜಾಸೇವ ಆಂದೋಲನದ ಉದ್ದೇಶ

Share
Share

ಚಿಕ್ಕಮಗಳೂರು:  ಜನರ ಸಮಸ್ಯೆಗಳನ್ನು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಒಗ್ಗೂಡಿ ಆಲಿಸಿ, ಸಾಧ್ಯವಾದಷು ಶೀಘ್ರವಾಗಿ ಇತ್ಯರ್ಥ ಪಡಿಸುವ ಉದ್ದೇಶದಿಂದ ಪ್ರಜಾಸೇವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಇಂಧನ, ಪ್ರವಾಸೋದ್ಯಮ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಮೂಡಿಗೆರೆ ಪಟ್ಟಣದ ಅಡ್ಯಂತಯ್ಯ ರಂಗಮಂದಿರದಲ್ಲಿ ಶನಿವಾರ ಆಯೋಜಿಸಲಾಗಿದ್ದ ತಾಲೂಕು ಮಟ್ಟದ ‘ಪ್ರಜಾಸೇವಾ ಆಂದೋಲನ’ ಸಭೆಯಲ್ಲಿ ಅವರು ಮಾತನಾಡಿ ಜನರು ತಮ್ಮ ಸಮಸ್ಯಗಳಿಗೆ ಪರಿಹಾರ ಪಡೆಯಲು ಸರ್ಕಾರಿ ಕಚೇರಿಗಳಿಗೆ ಪದೇ ಪದೇ ಅಲೆದಾಡುವ ಪರಿಸ್ಥಿತಿ ತಪ್ಪಬೇಕು ಅಧಿಕರಿಗಳು ಜನರ ಬಳಿಗೆ ತೆರಳಿ ಅವರ ಅಹವಾಲುಗಳನ್ನು ಆಲಿಸಿ ಸಾಧ್ಯವಾದಷ್ಟು ಸ್ಥಳೀಯ ಮಟ್ಟದಲ್ಲಿಯೇ ಪರಿಹರ ಕಲ್ಪಿಸಬೇಕು. ಅಗತ್ಯವಿರುವ ಪ್ರಕರಣಗಳನ್ನು ಜಿಲ್ಲಾ ಮಟ್ಟಕ್ಕೆ ಹಾಗೂ ಬೆಂಗಳೂರಿನ ಸಂಬಂಧಪಟ್ಟ ಇಲಾಖೆಗಳ ಗಮನಕ್ಕೆ ಕೊಂಡೊಯ್ದು ಇತ್ಯರ್ಥ ಪಡಿಸುವ ಕಾರ್ಯ ನಡೆಯಲಿದೆ ಎಂದು ತಿಳಿಸಿದರು.

ಕಂದಾಯ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಮತ್ತು ನಗರಸಭೆ ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ಸಮನ್ವಯದಿಂದ ಕಾರ್ಯ ನಿರ್ವಹಿಸಿ ಸಾರ್ವಜನಿಕರ ಸಮಸ್ಯಗಳಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದರು.

ರೈತರ ಸಮಸ್ಯೆಗಳ  ವಿಚಾರದಲ್ಲಿ ವಿಳಂಬ ದೋರಣೆಯನ್ನು ಅಧಿಕಾರಿಗಳು ತೋರಬಾರದು, ಜನ ಸೇವೆಯೇ ಜನಾರ್ದನನ ಸೇವೆ, ಕ್ಷೇತ್ರದ ರೈತಾಪಿ ವರ್ಗದ ಹಿತ ಕಾಪಾಡುವುದು ಹಾಗೂ ಪ್ರತಿಯೊಬ್ಬ ಪ್ರಜೆಯ ಅಹವಾಲುಗಳಿಗೆ ಸ್ಪಂದಿಸುವುದು ನಮ್ಮ ಆದ್ಯತೆಯಾಗಿದೆ. ಅಧಿಕಾರಿಗಳು ಜನರ ಸಮಸ್ಯೆಗಳನ್ನು ತಮ್ಮದೇ ಸಮಸ್ಯೆಗಳೆಂದು ತಿಳಿದು ಕಾರ್ಯ ನಿರ್ವಹಿಸಬೇಕು ಎಂದು ಹೇಳಿದರು.

ಮನೆ ಮೇಲೆ ಬೆಳೆದ ಮರ ತೆರವಿಗೆ ಮನವಿ: ಬಾಳೂರು ಹೋಬಳಿಯ ಕಲ್ಮನೆ ಗ್ರಾಮದಲ್ಲಿರುವ ನಮ್ಮ ಮನೆಯ ಮೇಲೆ ಗಿಡ-ಗೆಂಟೆಗಳು ಹಾಗೂ ಮರಗಳು ಅಪಾಯಕಾರಿಯಾಗಿ ಬೆಳೆದಿವೆ. ಇದರಿಂದ ಮನೆಗೆ ಅಪಾಯ ಉಂಟಾಗುವ ಭೀತಿ ಎದುರಾಗಿದೆ. ಈ ಕುರಿತು ಈಗಾಗಲೇ ಜಿಲ್ಲಾಧಿಕಾರಿ ಕಚೇರಿ, ತಹಸೀಲ್ದಾರ್ ಕಚೇರಿ ಹಾಗೂ ಸ್ಥಳೀಯ ಗ್ರಾಮ ಪಂಚಾಯಿತಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಕಲ್ಮನೆ ಗ್ರಾಮದ ನಿವಾಸಿ ಪವನ್ ಸಭೆಯ ಗಮನಕ್ಕೆ ತಂದರು.

ಈ ಸ್ಥಳವು ಕಂದಾಯ ಜಾಗಕ್ಕೆ ಒಳಪಡುವುದರಿಂದ ಹಾಗೂ ಪಕ್ಕದ ಜಾಗದ ಸರ್ವೇ ನಡೆಸಬೇಕಿರುವುದರಿಂದ, ಕಂದಾಯ ನಿರೀಕ್ಷಕರು ಮತ್ತು ಸರ್ವೇಯರ್ ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ ಬಳಿಕ ಸೂಕ್ತ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

ಈ ವೇಳೆ ಅಧಿಕಾರಿಗಳ ಉತ್ತರಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಸಚಿವ ಕೆ.ಜೆ.ಜಾರ್ಜ್ ಅವರು, ಅರ್ಜಿದಾರರು ಇಲ್ಲಿ ಜಾಗದ ಹಕ್ಕು ಅಥವಾ ವ್ಯಾಜ್ಯದ ಬಗ್ಗೆ ಮಾತನಾಡುತ್ತಿಲ್ಲ. ಮನೆ ಮೇಲೆ ಬಿದ್ದು ಅನಾಹುತ ಸಂಭವಿಸುವ ಮುನ್ನ ಮರ ತೆರವುಗೊಳಿಸಲು ಸಹಾಯ ಕೇಳುತ್ತಿದ್ದಾರೆ. ಈಗಾಗಲೇ ಎರಡನೇ ಬಾರಿಗೆ ಈ ವಿಷಯ ಪ್ರಸ್ತಾಪವಾಗುತ್ತಿದ್ದು, ತಹಸೀಲ್ದಾರರು ತಕ್ಷಣವೇ ಈ ಕುರಿತು ಗಮನಹರಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು. ಇದರಲ್ಲಿ ನಿರ್ಲಕ್ಷ್ಯ ವಹಿಸುವ ಅಧಿಕಾರಿಗಳ ವಿರುದ್ಧ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುವುದು ಎಂದು ಸಚಿವರು ನಿರ್ದೇಶನ ನೀಡಿದರು.

ಶಾಸಕಿ ನಯನ ಮೋಟಮ್ಮ ಮಾತನಾಡಿ, ಸರ್ಕಾರವು ಸಾರ್ವಜನಿಕರ ಕುಂದುಕೊರತೆಗಳಿಗೆ ತಕ್ಷಣ ಸ್ಪಂದಿಸಲು ‘ಪ್ರಜಾಸೇವಾ ಆಂದೋಲನ’ದಂತಹ ಮಹತ್ವಾಕಾಂಕ್ಷಿ ಯೋಜನೆಯನ್ನು ರೂಪಿಸಿದ್ದು, ಕ್ಷೇತ್ರದ ಜನರು ಸಮಾಧಾನದಿಂದ ತಮ್ಮ ಆಹವಾಲುಗಳನ್ನು ಸಲ್ಲಿಸಿ ಪರಿಹಾರ ಕಂಡುಕೊಳ್ಳಬೇಕು ಎಂದು ಮನವಿ ಮಾಡಿದರು.

ಬಾಗಿಲಿಗೆ ಬಂತು ಸರ್ಕಾರ, ಸೇವೆಗಿರಲಿ ನಿಮ್ಮ ಸಹಕಾರ ಎಂಬ ತತ್ವದಡಿ ಈ ಕಾರ್ಯಕ್ರಮ ನಡೆಯುತ್ತಿದ್ದು, ಇದು ಮುಖ್ಯಮಂತ್ರಿಗಳ ಕನಸಿನ ಕೂಸಾಗಿದೆ. ಸಾರ್ವಜನಿಕರಿಗೆ ಸರ್ಕಾರದ ಸೇವೆಗಳು ಸುಲಭವಾಗಿ ದೊರೆಯಲಿ ಎಂಬ ಉದ್ದೇಶದಿಂದ ಈ ಆಂದೋಲನ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದ ದಿನದಿಂದಲೇ ಕ್ಷೇತ್ರದ ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಜನಸಂಪರ್ಕ ಸಭೆಗಳನ್ನು ನಡೆಸಿಕೊಂಡು ಬರಲಾಗಿದೆ. ಕ್ಷೇತ್ರದ ೪೯ ಗ್ರಾಮ ಪಂಚಾಯಿತಿಗಳು ಹಾಗೂ ಒಂದು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಸಾರ್ವಜನಿಕರ ಸಮಸ್ಯೆಗಳನ್ನು ಸ್ವೀಕರಿಸಿ, ತಕ್ಷಣದ ಪರಿಹಾರ ನೀಡಲು ಶ್ರಮಿಸಲಾಗಿದೆ. ಹೀಗಾಗಿ ಕ್ಷೇತ್ರದ ಜನರಿಗೆ ಹಾಗೂ ಅಧಿಕಾರಿಗಳಿಗೆ ಈ ಪ್ರಕ್ರಿಯೆಯ ಪೂರ್ವ ಅನುಭವವಿದೆ ಎಂದು ಹೇಳಿದರು.

ಸಾರ್ವಜನಿಕರು ತಮ್ಮ ಸಮಸ್ಯೆಗಳ ಕುರಿತು ಆಕ್ರೋಶಗೊಳ್ಳದೆ ಅಥವಾ ಅಧಿಕಾರಿಗಳ ಮೇಲೆ ಗದ್ದಲ ಮಾಡದೆ ಸಮಾಧಾನದಿಂದ ವಿಚಾರಗಳನ್ನು ಮಂಡಿಸಬೇಕು. ಕೆಲವೊಮ್ಮೆ ಸರ್ಕಾರಿ ನೀತಿ-ನಿಯಮಗಳು ಹಾಗೂ ಪ್ರಕ್ರಿಯೆಗಳಿಗೆ ಕಾಲಾವಕಾಶದ ಅಗತ್ಯವಿರುತ್ತದೆ. ಸಾರ್ವಜನಿಕರ ಪ್ರತಿಯೊಂದು ನ್ಯಾಯಯುತ ಸಮಸ್ಯೆಗೆ ಪರಿಹಾರ ಒದಗಿಸುವುದು ನಮ್ಮ ಹಾಗೂ ಅಧಿಕಾರಿಗಳ ಕರ್ತವ್ಯವಾಗಿದೆ ಎಂದು ಅಭಯ ನೀಡಿದರು.

ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಮಾತನಾಡಿ, ಶಾಸಕರು ಹಾಗೂ ತಾಲೂಕು ಮಟ್ಟದ ಅಧಿಕಾರಿಗಳ ಸಮ್ಮುಖದಲ್ಲಿ ಸಾರ್ವಜನಿಕರಿಂದ ನೇರವಾಗಿ ಅಹವಾಲುಗಳನ್ನು ಸ್ವೀಕರಿಸಲಾಗುತ್ತಿದೆ. ಜನರ ಕುಂದುಕೊರತೆಗಳ ಸ್ಪಂದನೆಗಾಗಿ ನಾಲ್ಕೈದು ಕೌಂಟರ್‍ಗಳನ್ನು ಸ್ಥಾಪಿಸಲಾಗಿದ್ದು, ವೇದಿಕೆ ಮುಖಾಂತರ ಸಾರ್ವಜನಿಕರ ಸಮಸ್ಯೆಗಳನ್ನು ಆಲಿಸಿ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳಿಂದ ಉತ್ತರ ಕೊಡಿಸಲಾಗುತ್ತಿದೆ. ಅಲ್ಲದೆ, ಸ್ಥಳದಲ್ಲೇ ಪರಿಹರಿಸಲಾಗದ ಸಮಸ್ಯೆಗಳ ಕುರಿತು ಇಲಾಖಾ ಮಟ್ಟದಲ್ಲಿ ಆಕ್ಷನ್ ಪ್ಲಾನ್ ರೂಪಿಸಿ, ರಾಜ್ಯ ಸರ್ಕಾರದ ಗಮನಕ್ಕೆ ತಂದು ಪರಿಹರಿಸಲಾಗುವುದು ಎಂದು ಸ್ಪಷ್ಟಪಡಿಸಿದರು.

ಜಿಲ್ಲೆಯ ತಾಲೂಕು ಮತ್ತು ಹೋಬಳಿ ಮಟ್ಟಗಳಲ್ಲಿ ಈವರೆಗೆ ನಡೆದಿರುವ ಪ್ರಜಾಸೇವಾ ಆಂದೋಲನ ಕಾರ್ಯಕ್ರಮಗಳಲ್ಲಿ ಒಟ್ಟು ೧,೦೦೩ ಅರ್ಜಿಗಳು ಸ್ವೀಕೃತಗೊಂಡಿವೆ. ಅವುಗಳಲ್ಲಿ ನೆನ್ನೆ ಮಧ್ಯಾಹ್ನದ ಮಾಹಿತಿಯಂತೆ ೭೬೧ ಅರ್ಜಿಗಳನ್ನು ವಿಲೇವಾರಿ ಮಾಡಲಾಗಿದ್ದು, ಉಳಿದ ೨೪೩ ಅರ್ಜಿಗಳು ವಿಲೇವಾರಿಗೆ ಬಾಕಿ ಇವೆ. ಪ್ರತಿ ಬುಧವಾರ ಅಧಿಕಾರಿಗಳ ಸಭೆ ನಡೆಸಿ ಇವುಗಳ ಪರೀಶೀಲನೆ ನಡೆಸಲಾಗುತ್ತಿದೆ ಎಂದು ವಿವರ ನೀಡಿದರು.

ಜನರ ಸಮಸ್ಯೆಗಳಿಗೆ ಬರಿ ಹಿಂಬರಹ ನೀಡುವುದಕ್ಕೆ ಸೀಮಿತವಾಗದೆ, ಗುಣಮಟ್ಟದ ಮತ್ತು ಶಾಶ್ವತ ಪರಿಹಾರ ಕಂಡುಕೊಳ್ಳುವುದೇ ಈ ಆಂದೋಲನದ ಪ್ರಮುಖ ಉದ್ದೇಶವಾಗಿದೆ ಎಂದು ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಅವರು ತಿಳಿಸಿದರು.
ಬಹುತೇಕ ಅರ್ಜಿಗಳು ಕಂದಾಯ ಇಲಾಖೆ ಪಟ್ಟಣ ಪಂಚಾಯಿತಿ ಹಾಗೂ ಡೀಮ್ಡ್ ಅರಣ್ಯ, ಹಕ್ಕು ಪತ್ರ, ಬಡಾವಣೆ ಮೂಲ ಸೌಕರ್ಯ, ಕಾಡು ಪ್ರಾಣಿಗಳ ಹಾವಳಿ ಬಗ್ಗೆ ಸಲ್ಲಿಕೆಯಾದವು

ಪ್ರಜಾಸೇವ ಆಂದೋಲನದಲ್ಲಿ ವಿಧಾನ ಪರಿಷತ್ ಶಾಸಕಿ ಗಾಯಿತ್ರಿ ಶಾಂತೇಗೌಡ, ಮಾಜಿ ಸಚಿವೆ ಮೊಟಮ್ಮ, ಜಿಲ್ಲಾ ಪೊಲೀಸ್ ವರಿಷ್ಠ ಅಧಿಕಾರಿ ಜಿತೇಂದರ್ ಕುಮಾರ್ ದಯ್ಮಾ, ಉಸ್ತುವರಿ ಸಚಿವರ ಆಪ್ತ ಕಾರ್ಯದರ್ಶಿ ಸತೀಶ್ ಕುಮಾರ್, ಅಪರ ಜಿಲ್ಲಾಧಿಕಾರಿ ನಂಜುಂಡೇಗೌಡ, ಚಿಕ್ಕಮಗಳೂರು ಉಪ ವಿಭಾಗದ ಉಪವಿಭಾಗಾಧಿಕಾರಿ ಪುರುರಾಜ್ ಸಿಂಗ್ ಸೋಲಂಕಿ, ಅರಣ್ಯಾಧಿಕಾರಿಗಳಾದ ಪುಲ್‌ಕಿತ್ ಮೀನಾ, ಬೋರಯ್ಯ, ತಹಸೀಲ್ದರ್ ಅಶ್ವಿನಿ,  ಜಿಲ್ಲಾ ಮಟ್ಟದ ಅಧಿಕಾರಿಗಳು ಹಾಗೂ ಮೂಡಿಗೆರೆ ತಾಲ್ಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.

The objective of the ‘Prajaseva Andolana’ is to provide swift solutions to people’s problems.

Share

Leave a comment

Leave a Reply

Your email address will not be published. Required fields are marked *

Don't Miss

ಗ್ರಾಮ ಪಂಚಾಯಿತಿ ನೌಕರರ ಬೇಡಿಕೆ ಈಡೇರಿಸಲು ಸೆ.29ರಂದು ಧರಣಿ

ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ (AITUC) ವತಿಯಿಂದ ಸೆ.29ರಂದು...

ಮ್ಯಾಟ್ರಿಮೋನಿಯಲ್ ಸೈಟ್‌ನಲ್ಲಿ ಸುಳ್ಳು ಮಾಹಿತಿ ನೀಡಿ ₹2.20 ಲಕ್ಷ ವಂಚನೆ

ಚಿಕ್ಕಮಗಳೂರು: ಮ್ಯಾಟ್ರಿಮೋನಿಯಲ್ ವೆಬ್‌ಸೈಟ್‌ನಲ್ಲಿ ಸುಳ್ಳು ವೈಯಕ್ತಿಕ ಮಾಹಿತಿ ನೀಡಿ ಮದುವೆಯಾಗುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ *₹2.20 ಲಕ್ಷ ಹಣ ಹಾಗೂ ಮೊಬೈಲ್ ಫೋನ್ ಪಡೆದು ವಂಚಿಸಿರುವ ಆರೋಪ* ಕೇಳಿಬಂದಿದೆ. ಈ...

Related Articles

12 ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಗೆ ಚಾಲನೆ

ಚಿಕ್ಕಮಗಳೂರು: ಜಿಲ್ಲಾ ಕಾಂಗ್ರೆಸ್ ಸಮಿತಿಗೆ ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆ ಪೂರ್ಣಗೊಂಡ ಬೆನ್ನಲ್ಲೇ ಜಿಲ್ಲೆಯ 12...

ಕಳಸದಲ್ಲಿ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷ

ಕಳಸ : ಮನೆಯಂಗಳದಲ್ಲೇ ಬೃಹತ್ ಕಾಳಿಂಗ ಸರ್ಪ ಪ್ರತ್ಯಕ್ಷವಾಗಿ ಸ್ಥಳೀಯರನ್ನು ಬೆಚ್ಚಿಬೀಳಿಸಿದ ಘಟನೆ ಕಳಸ ತಾಲೂಕಿನ...

ಕೆಎಸ್‌ಆರ್‌ಟಿಸಿ ಬಸ್–ಟ್ರ್ಯಾಕ್ಟರ್ ಇಂಜಿನ್ ಡಿಕ್ಕಿಗೆ ಚಾಲಕ ಸಾವು

ತರೀಕೆರೆ: ಕೆಎಸ್‌ಆರ್‌ಟಿಸಿ ಬಸ್ ಹಾಗೂ ಟ್ರ್ಯಾಕ್ಟರ್ ಇಂಜಿನ್ ನಡುವೆ ಸಂಭವಿಸಿದ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಟ್ರ್ಯಾಕ್ಟರ್...

ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ನೇಮಕಕ್ಕೆ ಅ.31ರೊಳಗೆ ಪ್ರಕ್ರಿಯೆ ಪೂರ್ಣ

ಚಿಕ್ಕಮಗಳೂರು: ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷದ ಸಂಘಟನೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ 12 ಬ್ಲಾಕ್ ಕಾಂಗ್ರೆಸ್ ಸಮಿತಿಗಳಿಗೆ...