ಕಡೂರು: ಮನೆಯವರು ಕಣ್ಣಿನ ಚಿಕಿತ್ಸೆಗಾಗಿ ಹೊರಗಡೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ₹90 ಸಾವಿರ ನಗದು ಹಾಗೂ 77 ಗ್ರಾಂ ತೂಕದ ಚಿನ್ನಾಭರಣ ಸೇರಿದಂತೆ ಒಟ್ಟು ₹7.06 ಲಕ್ಷ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ವೈಎಂಸಿ ಕಾಲೇಜು ಸಮೀಪದ ನಿವಾಸಿ ಬಿ.ಎಸ್. ತಿಮ್ಮಪ್ಪ ಅವರು ಈ ಕುರಿತು ಕಡೂರು ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರ ತಿಮ್ಮಪ್ಪ ಅವರು ಪತ್ನಿ ಶಿವಮ್ಮ ಅವರೊಂದಿಗೆ ಕಣ್ಣಿನ ಶಸ್ತ್ರಚಿಕಿತ್ಸೆಗಾಗಿ ಸೆ.26ರಂದು ಬೆಳಗ್ಗೆ 6.30ಕ್ಕೆ ದಾವಣಗೆರೆಗೆ ತೆರಳಿದ್ದರು. ಮನೆಗೆ ಇಂಟರ್ಲಾಕ್ ಹಾಗೂ ಮತ್ತೊಂದು ಬೀಗ ಹಾಕಿ, ಪಕ್ಕದ ಮನೆಯಲ್ಲಿದ್ದ ಪುತ್ರಿ ಯಶೋಧ ಅವರಿಗೆ ಮನೆ ನೋಡಿಕೊಳ್ಳುವಂತೆ ತಿಳಿಸಿದ್ದರು. ದಾವಣಗೆರೆಯಲ್ಲಿ ಚಿಕಿತ್ಸೆ ಪಡೆದ ಬಳಿಕ ದಂಪತಿ ಚಿತ್ರದುರ್ಗದಲ್ಲಿರುವ ಪುತ್ರನ ಮನೆಗೆ ತೆರಳಿದ್ದರು.
ಸೆ.29ರಂದು ರಾತ್ರಿ 11 ಗಂಟೆ ಸುಮಾರಿಗೆ ಯಶೋಧ ಅವರು ಮನೆ ನೋಡಿದಾಗ ಬೀಗ ಸರಿಯಾಗಿತ್ತು. ಆದರೆ ಸೆ.30ರಂದು ಬೆಳಗ್ಗೆ 6.30ಕ್ಕೆ ನೋಡಿದಾಗ ಮನೆಯ ಮುಂಭಾಗದ ಬೀಗ ಮುರಿದಿದ್ದು, ಬಾಗಿಲನ್ನು ಆಯುಧದಿಂದ ಮೀಟಿ ಒಳನುಗ್ಗಿರುವುದು ಕಂಡುಬಂದಿದೆ. ಕೂಡಲೇ ಅವರು ತಂದೆಗೆ ಮಾಹಿತಿ ನೀಡಿದ್ದಾರೆ.
ತಿಮ್ಮಪ್ಪ ಅವರು ಚಿತ್ರದುರ್ಗದಿಂದ ಕಡೂರಿಗೆ ಬಂದು ಪರಿಶೀಲಿಸಿದಾಗ, ಮನೆಯ ಎರಡು ಕೊಠಡಿಗಳಲ್ಲಿದ್ದ ಕಬೋರ್ಡ್ಗಳನ್ನು ಮೀಟಿ ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿತ್ತು. ಕಳ್ಳರು ಒಂದು ಕಬೋರ್ಡ್ನಲ್ಲಿದ್ದ ₹90 ಸಾವಿರ ನಗದು ಹಾಗೂ ವಿವಿಧ ಚಿನ್ನಾಭರಣಗಳು, ಮತ್ತೊಂದು ಕೊಠಡಿಯಲ್ಲಿದ್ದ ಚಿನ್ನಾಭರಣಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ.
ಒಟ್ಟು 77 ಗ್ರಾಂ ತೂಕದ ಚಿನ್ನಾಭರಣಗಳ ಅಂದಾಜು ಮೌಲ್ಯ ₹6.16 ಲಕ್ಷ ಹಾಗೂ ನಗದು ₹90 ಸಾವಿರ ಸೇರಿ ₹7.06 ಲಕ್ಷ ಮೌಲ್ಯದ ವಸ್ತುಗಳು ಕಳವಾಗಿವೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸೆ.29ರ ರಾತ್ರಿ 11 ಗಂಟೆಯಿಂದ ಸೆ.30ರ ಬೆಳಗ್ಗೆ 6.30ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಸಾಧ್ಯತೆಯಿದ್ದು, ಕಡೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ. ಕಳ್ಳರ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
House broken into; jewelry and cash worth ₹7.06 lakh stolen.
Leave a comment