ತರೀಕೆರೆ: ಕಾರ್ಯನಿರ್ವಹಿಸದ ತರೀಕೆರೆ ಉಪಕಾರಾಗೃಹದ ಹಿಂಬಾಗಿಲು ಒಡೆದು ಒಳನುಗ್ಗಿದ ಕಳ್ಳರು ಹಲವು ವಸ್ತುಗಳನ್ನು ಕಳವು ಮಾಡಿರುವುದಲ್ಲದೆ, ಸರ್ಕಾರಿ ದಾಖಲೆಗಳು ಹಾಗೂ ಕಡತಗಳನ್ನು ಸುಟ್ಟು ಹಾಕಿರುವ ಘಟನೆ ಬೆಳಕಿಗೆ ಬಂದಿದೆ.
ತರೀಕೆರೆ ಉಪಕಾರಾಗೃಹವು ಚಿಕ್ಕಮಗಳೂರು ಜಿಲ್ಲಾ ಕಾರಾಗೃಹದ ಅಧೀನದಲ್ಲಿದ್ದು, ಪ್ರಸ್ತುತ ಕಾರ್ಯನಿರ್ವಹಿಸುತ್ತಿಲ್ಲ. ನವೆಂಬರ್ 19ರಂದು ಜಿಲ್ಲಾ ಕಾರಾಗೃಹ ಅಧೀಕ್ಷಕರು ಪರಿಶೀಲನೆಗಾಗಿ ಉಪಕಾರಾಗೃಹಕ್ಕೆ ಭೇಟಿ ನೀಡಿದಾಗ ಘಟನೆ ಬೆಳಕಿಗೆ ಬಂದಿದೆ.
ಕಳ್ಳರು ಕಾರಾಗೃಹದ ಹಿಂಬಾಗಿಲನ್ನು ಒಡೆದು ಒಳನುಗ್ಗಿ ವಿಚಾರಣಾ ಬಂದಿಗಳ ಪಿ.ಸಿ. ಪುಸ್ತಕ, ಮಾರ್ಗ ಬಂದಿಗಳ ದಾಖಲಾತಿ ಪುಸ್ತಕ, ವಕೀಲರು ಹಾಗೂ ವಿಶೇಷ ವ್ಯಕ್ತಿಗಳ ಭೇಟಿ ಪುಸ್ತಕಗಳು ಮತ್ತು ಬಂದಿಗಳ ಭೇಟಿ ಪುಸ್ತಕಗಳು ಸೇರಿದಂತೆ ಹಲವು ವರ್ಷಗಳ ಹಿಂದಿನ ಪ್ರಮುಖ ದಾಖಲೆಗಳನ್ನು ಸುಟ್ಟು ಹಾಕಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಸುಟ್ಟುಹಾಕಲಾದ ದಾಖಲೆಗಳಲ್ಲಿ 1981ರಿಂದ 2018ರವರೆಗಿನ ವಿಚಾರಣಾ ಬಂದಿಗಳ ಪಿ.ಸಿ. ಪುಸ್ತಕ, 2018ರ ಮಾರ್ಗ ಬಂದಿಗಳ ದಾಖಲಾತಿ ಪುಸ್ತಕ, 2013ರಿಂದ 2018ರವರೆಗಿನ ವಕೀಲರು ಹಾಗೂ ವಿಶೇಷ ವ್ಯಕ್ತಿಗಳ ಭೇಟಿ ದಾಖಲೆಗಳು ಮತ್ತು 2003ರಿಂದ 2017ರವರೆಗಿನ ಬಂದಿಗಳ ಭೇಟಿ ಪುಸ್ತಕಗಳು ಸೇರಿವೆ.
ಇದರ ಜೊತೆಗೆ ಜೆರಾಕ್ಸ್ ಯಂತ್ರ, ಮರದ ಪೀಠೋಪಕರಣಗಳು, ಎಲ್ಇಡಿ ಟಿವಿ, ಎಲ್ಜಿ ಫ್ಲಾಟ್ರಾನ್ ಸ್ಕ್ರೀನ್ ಟಿವಿ ಹಾಗೂ ಫ್ಯಾಕ್ಸ್/ಟೆಲಿಫೋನ್ ಯಂತ್ರ ಸೇರಿದಂತೆ ಹಲವು ವಸ್ತುಗಳಿಗೆ ಹಾನಿ ಮಾಡಲಾಗಿದೆ.
ಇನ್ನು ಎರಡು ಸೀಲಿಂಗ್ ಫ್ಯಾನ್ಗಳು, ದುರಸ್ತಿಯಲ್ಲಿದ್ದ ಬೀಗಗಳು, ಎರಡು ಎಸಿಆರ್ ಸಿಪಿಯುಗಳು, ಯುಪಿಎಸ್, ಖಾಲಿ ಸಿಲಿಂಡರ್, ಫೈರ್ ಎಕ್ಸ್ಟಿಂಗ್ವಿಷರ್, ಸ್ಟೀಲ್ ಚಂಬು ಹಾಗೂ ಪಾತ್ರೆಗಳು, ಡೆಸ್ಕ್ ಬ್ಯಾಟರಿಗಳು, ಇನ್ವರ್ಟರ್ ಯುಪಿಎಸ್, ಪ್ಲಾಸ್ಟಿಕ್ ಕುರ್ಚಿಗಳು ಮತ್ತು ಎಲ್ಇಡಿ ಟಿವಿ ಸೇರಿದಂತೆ ಹಲವು ವಸ್ತುಗಳನ್ನು ಕಳವು ಮಾಡಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಕಳ್ಳತನ ಹಾಗೂ ಹಾನಿಗೊಳಗಾದ ವಸ್ತುಗಳ ಒಟ್ಟು ಅಂದಾಜು ಮೌಲ್ಯ ಸುಮಾರು ₹15 ಸಾವಿರ ಎಂದು ತಿಳಿಸಲಾಗಿದೆ. ಘಟನೆ ಮೇ 13ರಿಂದ ನವೆಂಬರ್ 19ರ ನಡುವಿನ ಅವಧಿಯಲ್ಲಿ ನಡೆದಿರುವ ಸಾಧ್ಯತೆ ಇದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಕುರಿತು ಜಿಲ್ಲಾ ಕಾರಾಗೃಹ ಅಧೀಕ್ಷಕಿ ದೀಪಾ ಎಂ. ಅವರು ನವೆಂಬರ್ 19ರಂದು ರಾತ್ರಿ ತರೀಕೆರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನ ಹಾಗೂ ಸರ್ಕಾರಿ ದಾಖಲೆಗಳ ನಾಶದ ಕುರಿತು ತನಿಖೆ ಕೈಗೊಂಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳ ಪತ್ತೆಗೆ ಕ್ರಮ ಕೈಗೊಳ್ಳಲಾಗಿದೆ.
Theft at a non-functional sub-jail
Leave a comment