ಚಿಕ್ಕಮಗಳೂರು: ಗ್ರಾಹಕರಿಗೆ ಹೋಟೆಲ್ ಕೊಠಡಿಗಳನ್ನು ಕಾಯ್ದಿರಿಸಿ ವಸತಿ ಸೇರಿದಂತೆ ವಿವಿಧ ಸೇವೆಗಳನ್ನು ಒದಗಿಸಿದರೂ, ಸೇವಾ ಶುಲ್ಕದ ಹಣವನ್ನು ಪಾವತಿಸದೆ ₹8,28,360 ವಂಚಿಸಿರುವ ಆರೋಪದ ಮೇರೆಗೆ ಇಬ್ಬರ ವಿರುದ್ಧ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಕರ್ಕನಹಳ್ಳಿ ಗ್ರಾಮದ ಬಿಂಡಿಗಾ ಪೀಕ್ ಹೋಟೆಲ್ ಮತ್ತು ರೆಸಾರ್ಟ್‌ನ ವ್ಯವಸ್ಥಾಪಕ ನಿರ್ದೇಶಕ ಆರ್. ಹೇಮಂತ್ ಕುಮಾರ್ ಅವರು ಈ ಕುರಿತು ದೂರು ನೀಡಿದ್ದಾರೆ.
ನಿವಾ ಹೋಟೆಲ್ಸ್ ಅಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಓಂಕಾರಮೂರ್ತಿ ಹಾಗೂ ಟ್ರಿಪ್ ಬನಾವೋ ಟ್ರಾವೆಲ್ ಏಜೆನ್ಸಿಯ ಅನೂಜ್ ಅವರ ಮೂಲಕ ರೆಸಾರ್ಟ್‌ನಲ್ಲಿ ಗ್ರಾಹಕರಿಗೆ ಕೊಠಡಿಗಳನ್ನು ಕಾಯ್ದಿರಿಸುವ ಬಗ್ಗೆ ಮೌಖಿಕ ಒಪ್ಪಂದ ಮಾಡಿಕೊಳ್ಳಲಾಗಿತ್ತು. ಗ್ರಾಹಕರು ಚೆಕ್‌ಇನ್ ಅಥವಾ ಚೆಕ್‌ಔಟ್ ಸಂದರ್ಭದಲ್ಲಿ ಸೇವಾ ಶುಲ್ಕ ಪಾವತಿಸುವ ನಿಯಮದಂತೆ ವ್ಯವಹಾರ ನಡೆಸಲು ಪರಸ್ಪರ ಒಪ್ಪಿಕೊಂಡಿದ್ದರು ಎನ್ನಲಾಗಿದೆ.
ಅದರಂತೆ 2026ರ ಅಕ್ಟೋಬರ್ 15ರಿಂದ 25ರವರೆಗೆ ನಾಲ್ಕು ಹಂತಗಳಲ್ಲಿ ಒಟ್ಟು 82 ಕೊಠಡಿಗಳನ್ನು ಗ್ರಾಹಕರಿಗಾಗಿ ಕಾಯ್ದಿರಿಸಲಾಗಿತ್ತು. ಅಕ್ಟೋಬರ್ 15 ಮತ್ತು 16, 20 ಹಾಗೂ 23ರಂದು ಗ್ರಾಹಕರಿಗೆ ವಸತಿ ಮತ್ತು ಇತರ ಸೇವೆಗಳನ್ನು ರೆಸಾರ್ಟ್ ವತಿಯಿಂದ ಒದಗಿಸಲಾಗಿತ್ತು.
ಈ ನಾಲ್ಕು ಬುಕಿಂಗ್‌ಗಳಿಗೆ ಸಂಬಂಧಿಸಿದಂತೆ ₹7.02 ಲಕ್ಷ ಮೂಲ ಸೇವಾ ಶುಲ್ಕ ಹಾಗೂ ಶೇ.18ರಷ್ಟು ಜಿಎಸ್‌ಟಿ ₹1,26,360 ಸೇರಿ ಒಟ್ಟು ₹8,28,360 ಪಾವತಿಸಬೇಕಾಗಿತ್ತು. ಗ್ರಾಹಕರಿಂದ ಹಣ ಸಂಗ್ರಹಿಸಿದ್ದರೂ, ಅದನ್ನು ರೆಸಾರ್ಟ್ ಸಂಸ್ಥೆಗೆ ವರ್ಗಾಯಿಸದೆ ಬಾಕಿ ಉಳಿಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಹಣ ಪಾವತಿಸುವಂತೆ ನಿವಾ ಹೋಟೆಲ್ಸ್ ಅಂಡ್ ರೆಸಾರ್ಟ್ಸ್‌ನ ನಿರ್ದೇಶಕ ಶೈಲೇಶ್ ಸೇರಿದಂತೆ ಸಂಬಂಧಪಟ್ಟವರನ್ನು ಹಲವು ಬಾರಿ ಸಂಪರ್ಕಿಸಿ ಮನವಿ ಮಾಡಿದರೂ ಯಾವುದೇ ಸ್ಪಂದನೆ ದೊರೆತಿಲ್ಲ. ಹಣಕಾಸಿನ ವ್ಯವಹಾರವನ್ನು ಸೌಹಾರ್ದಯುತವಾಗಿ ಬಗೆಹರಿಸಿಕೊಳ್ಳಲು ಪ್ರಯತ್ನಿಸಿದರೂ ಹಣ ಪಾವತಿಸದೆ ವಂಚಿಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ನಿವಾ ಹೋಟೆಲ್ಸ್ ಅಂಡ್ ರೆಸಾರ್ಟ್ಸ್‌ನ ವ್ಯವಸ್ಥಾಪಕ ನಿರ್ದೇಶಕ ಓಂಕಾರಮೂರ್ತಿ ಹಾಗೂ ಟ್ರಿಪ್ ಬನಾವೋ ಟ್ರಾವೆಲ್ ಏಜೆಂಟ್ ಅನೂಜ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಹೇಮಂತ್ ಕುಮಾರ್ ಅವರು ಮನವಿ ಮಾಡಿದ್ದಾರೆ.
ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.
Travel agent defrauds Bindiga Peak Resort of ₹8.28 lakh
Leave a comment