ಚಿಕ್ಕಮಗಳೂರು:ಕೈಗಾರಿಕಾ ಮಾಲಿನ್ಯ, ರಾಸಾಯನಿಕ ತ್ಯಾಜ್ಯದಿಂದ ಜಲಮೂಲಗಳ ಮಾಲಿನ್ಯ ಹಾಗೂ ಸಾರ್ವಜನಿಕ ಆಸ್ತಿಗಳ ಅತಿಕ್ರಮಣ ಸೇರಿದಂತೆ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗೌಡನಹಳ್ಳಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು ನ.18ರಂದು ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ಬೃಹತ್ ಶಾಂತಿಯುತ ಜನಾಂದೋಲನ ಹಮ್ಮಿಕೊಂಡಿದ್ದಾರೆ.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಗೌಡನಹಳ್ಳಿ ಜನಾಂದೋಲನದ ಮುಖಂಡ ಮೋಹನ್ ಕುಮಾರ್ ಜಿ.ಪಿ., ಚಿಕ್ಕಮಗಳೂರು ತಾಲೂಕಿನ ಅಂಬಳೆ ಹೋಬಳಿಯ ಗೌಡನಹಳ್ಳಿ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ಕೈಗಾರಿಕೆಗಳಿಂದ ಉಂಟಾಗುತ್ತಿರುವ ಧೂಳು, ದುರ್ವಾಸನೆ, ರಾಸಾಯನಿಕ ಮಿಶ್ರಿತ ಕೊಳಚೆ ನೀರಿನಿಂದ ಕೆರೆಕಟ್ಟೆಗಳ ಮಾಲಿನ್ಯ ಹಾಗೂ ಜನರ ಆರೋಗ್ಯದ ಮೇಲಿನ ದುಷ್ಪರಿಣಾಮಗಳಿಂದ ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ತಿಳಿಸಿದರು.
ಕೈಗಾರಿಕೆಗಳಿಂದ ಕೃಷಿ ಭೂಮಿ, ಬೆಳೆಗಳು ಹಾಗೂ ಜಲಮೂಲಗಳಿಗೆ ಹಾನಿಯಾಗುತ್ತಿದೆ. ಇದರೊಂದಿಗೆ ಸಾರ್ವಜನಿಕ ರಸ್ತೆಗಳು ಮತ್ತು ಕಾಲುದಾರಿಗಳ ಅತಿಕ್ರಮಣ, ಗೋಮಾಳ ಹಾಗೂ ಸ್ಮಶಾನ ಭೂಮಿಗೆ ಸಂಬಂಧಿಸಿದ ಸಮಸ್ಯೆಗಳೂ ಎದುರಾಗಿವೆ. ಈ ಎಲ್ಲ ಸಮಸ್ಯೆಗಳ ಪರಿಹಾರಕ್ಕೆ ಆಗ್ರಹಿಸಿ ಗ್ರಾಮಸ್ಥರು ನಡೆಸುತ್ತಿರುವ ಅಹೋರಾತ್ರಿ ಧರಣಿ ನ.16ಕ್ಕೆ 11 ದಿನಗಳನ್ನು ಪೂರೈಸಿದೆ ಎಂದು ಹೇಳಿದರು.
ಸಮಸ್ಯೆಗಳ ಕುರಿತು ಜಿಲ್ಲಾಧಿಕಾರಿಗಳನ್ನು ಭೇಟಿಯಾಗಲು ಗ್ರಾಮಸ್ಥರು ಪಾದಯಾತ್ರೆ ನಡೆಸಿದರೂ ನೇರವಾಗಿ ಭೇಟಿ ಮಾಡಲು ಸಾಧ್ಯವಾಗಲಿಲ್ಲ. ಪೊಲೀಸ್ ಇಲಾಖೆಯು ಪಾದಯಾತ್ರೆಯನ್ನು ತಡೆದು ಸುಮಾರು ಎರಡು ಗಂಟೆಗಳ ಕಾಲ ಬಿಸಿಲಿನಲ್ಲಿ ಕಾಯಿಸಿತು. ಬಳಿಕ ಸ್ಥಳಕ್ಕೆ ಆಗಮಿಸಿದ ಅಪರ ಜಿಲ್ಲಾಧಿಕಾರಿಗಳು ಜಂಟಿ ಸ್ಥಳ ಪರಿಶೀಲನೆಗೆ ದಿನಾಂಕ ನಿಗದಿಪಡಿಸುವುದಾಗಿ ಭರವಸೆ ನೀಡಿದ್ದರೂ ಈವರೆಗೆ ಲಿಖಿತ ದಿನಾಂಕ ಪ್ರಕಟಿಸಿಲ್ಲ. ಜಿಲ್ಲಾಡಳಿತದಿಂದಲೂ ಸಮಸ್ಯೆಗಳ ಪರಿಹಾರಕ್ಕೆ ನಿರೀಕ್ಷಿತ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಈ ಹಿನ್ನೆಲೆಯಲ್ಲಿ ನ.18ರ ಬುಧವಾರ ಬೆಳಿಗ್ಗೆ 6ರಿಂದ ಸಂಜೆ 6ರವರೆಗೆ ಅಂಬಳೆ ಕೈಗಾರಿಕಾ ಪ್ರದೇಶದಲ್ಲಿ ಧರಣಿ ಸ್ಥಳದ ಸಮೀಪ ಬೃಹತ್ ಜನಾಂದೋಲನ ಹಮ್ಮಿಕೊಳ್ಳಲಾಗಿದೆ. ರೈತರು, ಮಹಿಳೆಯರು, ಯುವಕರು ಹಾಗೂ ಶಾಲಾ ಮಕ್ಕಳು ಪೋಷಕರೊಂದಿಗೆ ಪಾಲ್ಗೊಳ್ಳಲಿದ್ದು, ವಿವಿಧ ಜನಪರ ಸಂಘಟನೆಗಳು ಬೆಂಬಲ ಸೂಚಿಸಿವೆ ಎಂದು ತಿಳಿಸಿದರು.
ಪ್ರಮುಖ ಹಕ್ಕೊತ್ತಾಯಗಳು: ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಜಂಟಿ ಸ್ಥಳ ಪರಿಶೀಲನೆ ನಡೆಸಲು ತಕ್ಷಣ ಲಿಖಿತ ದಿನಾಂಕ ಪ್ರಕಟಿಸಬೇಕು. ಕೈಗಾರಿಕಾ ಮಾಲಿನ್ಯದ ವೈಜ್ಞಾನಿಕ ಪರೀಕ್ಷೆ ನಡೆಸಿ ವರದಿಯನ್ನು ಸಾರ್ವಜನಿಕಗೊಳಿಸಬೇಕು. ಕೈಗಾರಿಕಾ ನಿವೇಶನಗಳ ಹಂಚಿಕೆ, ಮಂಜೂರಾತಿ ಹಾಗೂ ಅಕ್ರಮಗಳ ಆರೋಪಗಳ ಕುರಿತು ಸಮಗ್ರ ತನಿಖೆ ನಡೆಸಬೇಕು. ನಿಯಮ ಉಲ್ಲಂಘಿಸಿರುವ ಕೈಗಾರಿಕೆಗಳ ವಿರುದ್ಧ ಕಾನೂನು ಕ್ರಮ ಕೈಗೊಂಡು, ಅಗತ್ಯ ಮಾಲಿನ್ಯ ನಿಯಂತ್ರಣ ವ್ಯವಸ್ಥೆ ಹಾಗೂ ಅನುಮತಿಗಳನ್ನು ಪಡೆಯುವವರೆಗೆ ಅಂತಹ ಘಟಕಗಳ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಬೇಕು ಎಂದು ಒತ್ತಾಯಿಸಿದರು.
ಇದರ ಜತೆಗೆ ಗ್ರಾಮದ ಎಲ್ಲ ಜನರ ಆರೋಗ್ಯ ತಪಾಸಣೆ ನಡೆಸಬೇಕು. ಕೃಷಿ ಭೂಮಿ, ಬೆಳೆಗಳು, ಕೆರೆಗಳು ಹಾಗೂ ಜಲಮೂಲಗಳನ್ನು ರಕ್ಷಿಸಬೇಕು. ಸಾರ್ವಜನಿಕ ರಸ್ತೆಗಳು ಮತ್ತು ಕಾಲುದಾರಿಗಳ ಹಕ್ಕನ್ನು ಮರುಸ್ಥಾಪಿಸಬೇಕು. ಗೋಮಾಳ ಮತ್ತು ಸ್ಮಶಾನ ಭೂಮಿಯನ್ನು ಕಾಯ್ದಿರಿಸಬೇಕು. ಕೈಗಾರಿಕಾ ವಾಹನಗಳ ಸಂಚಾರದಿಂದ ಉಂಟಾಗುತ್ತಿರುವ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಅಗತ್ಯವಿದ್ದಲ್ಲಿ ಗ್ರಾಮಸ್ಥರ ಅಭಿಪ್ರಾಯ ಪಡೆದು ಕಾನೂನುಬದ್ಧ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು. ಎಲ್ಲ ಬೇಡಿಕೆಗಳ ಈಡೇರಿಕೆಗೆ ಕಾಲಮಿತಿಯ ಲಿಖಿತ ಕಾರ್ಯಯೋಜನೆ ರೂಪಿಸಬೇಕು ಎಂದು ಆಗ್ರಹಿಸಿದರು.
ಹನ್ನೊಂದು ದಿನಗಳ ಅಹೋರಾತ್ರಿ ಧರಣಿ ಹಾಗೂ ಹಲವು ಮನವಿಗಳ ಬಳಿಕವೂ ಜಿಲ್ಲಾಡಳಿತದಿಂದ ಸೂಕ್ತ ಸ್ಪಂದನೆ ದೊರೆಯದ ಹಿನ್ನೆಲೆಯಲ್ಲಿ ಜನಾಂದೋಲನ ಅನಿವಾರ್ಯವಾಗಿದೆ. ಜಿಲ್ಲಾಡಳಿತ ಕೂಡಲೇ ಗ್ರಾಮಸ್ಥರ ಅಹವಾಲುಗಳನ್ನು ಆಲಿಸಿ ಸಮಸ್ಯೆಗಳಿಗೆ ಪರಿಹಾರ ಕಲ್ಪಿಸಬೇಕು. ಗ್ರಾಮಸ್ಥರ ಹೋರಾಟ ಕೈಗಾರಿಕೆಗಳ ಬೆಳವಣಿಗೆಗೆ ವಿರೋಧವಲ್ಲ; ಬದಲಾಗಿ ಕೈಗಾರಿಕಾ ಮಾಲಿನ್ಯ ಮತ್ತು ಜನರ ಹಕ್ಕುಗಳಿಗೆ ಧಕ್ಕೆಯಾಗುವ ಕ್ರಮಗಳ ವಿರುದ್ಧವಾಗಿದೆ. ಜನರ ಆರೋಗ್ಯ ಹಾಗೂ ಪರಿಸರ ಸಂರಕ್ಷಣೆಯೇ ಹೋರಾಟದ ಮುಖ್ಯ ಉದ್ದೇಶವಾಗಿದೆ ಎಂದು ಸ್ಪಷ್ಟಪಡಿಸಿದರು.
ಕೈಗಾರಿಕೆಗಳು ಬೆಳೆಯಲಿ, ಜನರ ಬದುಕು ಬಲಿಯಾಗದಿರಲಿ’ ಎಂಬ ಆಶಯದೊಂದಿಗೆ ಗೌಡನಹಳ್ಳಿ ಗ್ರಾಮಸ್ಥರು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಬೆಂಬಲದೊಂದಿಗೆ ಹೋರಾಟ ನಡೆಸುತ್ತಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಂಜುನಾಥ್ ಜಿ.ಸಿ., ಮೋಹನ್ ಕುಮಾರ್, ಮಹೇಶ್ ಜಿ.ಬಿ., ಡಿ.ರಾಮೇಗೌಡ, ಕಲ್ಲಹಳ್ಳಿ ಹಾಗೂ ಜಿ.ಕೆ. ಕಾಂತರಾಜು ಉಪಸ್ಥಿತರಿದ್ದರು.
Chalo from Ambale Gowdanahalli Janandola on November 18th
Leave a comment