ಕಡೂರು: ತೋಟದ ಮನೆಯೊಂದರಲ್ಲಿ ಕಾವಲುಗಾರನನ್ನು ಭೀಕರವಾಗಿ ಕೊಚ್ಚಿ ಕೊಲೆ ಮಾಡಿದ್ದ ಆರೋಪಿಯನ್ನು ಕಡೂರು ಠಾಣೆ ಪೊಲೀಸರು ಯಶಸ್ವಿಯಾಗಿ ಬಂಧಿಸಿದ್ದಾರೆ. ನವೆಂಬರ್ 5ರಂದು ಕಡೂರು ತಾಲೂಕಿನ ಕುಪ್ಪಾಳು ಬಳಿ ನಡೆದಿದ್ದ ಈ ರಕ್ತಸಿಕ್ತ ಕೊಲೆ ಪ್ರಕರಣವನ್ನು ಭೇದಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ ತಿರುಪತಿಹಳ್ಳಿ ಗ್ರಾಮದ ನಿವಾಸಿಯಾಗಿದ್ದ 52 ವರ್ಷದ ಲಕ್ಷ್ಮಣ ಕೊಲೆಯಾದ ದುರ್ದೈವಿ. ಈತ ಕುಪ್ಪಾಳು ಬಳಿಯ ತೋಟದಲ್ಲಿ ಕಾವಲುಗಾರನಾಗಿ ಕೆಲಸ ಮಾಡಿಕೊಂಡಿದ್ದನು. ಕಡೂರು ತಾಲೂಕಿನ ಕರಿಯನಹಳ್ಳಿ ಗ್ರಾಮದ 30 ವರ್ಷದ ನವೀನ್ ಎಂಬಾತನೇ ಈ ಕೃತ್ಯವೆಸಗಿದ ಬಂಧಿತ ಆರೋಪಿಯಾಗಿದ್ದಾನೆ.
ನವೆಂಬರ್ 5ರಂದು ಮೃತ ಲಕ್ಷ್ಮಣ ಹಾಗೂ ಆರೋಪಿ ನವೀನ್ ಇಬ್ಬರೂ ಒಟ್ಟಿಗೆ ಸೇರಿ ಎಣ್ಣೆ ಪಾರ್ಟಿ ಮಾಡಿದ್ದರು. ಈ ವೇಳೆ ಇಬ್ಬರ ನಡುವೆ ಆರಂಭವಾದ ಗಲಾಟೆ ವಿಕೋಪಕ್ಕೆ ತಿರುಗಿ ಕೊಲೆಯಲ್ಲಿ ಅಂತ್ಯವಾಗಿದೆ. ಕೋಪದ ಭರದಲ್ಲಿ ಆರೋಪಿ ನವೀನ್ ಮೊದಲು ಲಕ್ಷ್ಮಣನಿಗೆ ರಾಡ್‌ನಿಂದ ಹೊಡೆದು, ಬಳಿಕ ಮಚ್ಚಿನಿಂದ ಕೊಚ್ಚಿ ಭೀಕರವಾಗಿ ಹತ್ಯೆಗೈದಿದ್ದಾನೆ.
ಕೃತ್ಯವೆಸಗಿದ ಬಳಿಕ ಪೊಲೀಸರ ಕಣ್ಣಿಗೆ ಮಣ್ಣೆರಚಲು ಆರೋಪಿ ನವೀನ್ ರೈಲು ಹತ್ತಿ ನೇರವಾಗಿ ಬೆಂಗಳೂರಿಗೆ ಎಸ್ಕೆಪ್ ಆಗಿದ್ದನು. ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಬಲೆಬೀಸಿದ್ದ ಕಡೂರು ಪೊಲೀಸರು, ಕಾರ್ಯಾಚರಣೆ ನಡೆಸಿ ಬೆಂಗಳೂರಿನಲ್ಲಿ ತಲೆಮರೆಸಿಕೊಂಡಿದ್ದ ನವೀನ್ನನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ.
Accused in watchman’s murder arrested
Leave a comment