ಚಿಕ್ಕಮಗಳೂರು: ಅಪರಾಧ ಪ್ರಕರಣಗಳ ಪತ್ತೆಯಲ್ಲಿ ಪೊಲೀಸರಿಗೆ ಮಹತ್ವದ ಸುಳಿವುಗಳನ್ನು ನೀಡುತ್ತಾ ಇಲಾಖೆಯ ಹೆಮ್ಮೆಯಾಗಿ ಗುರುತಿಸಿಕೊಂಡಿದ್ದ ಜಿಲ್ಲಾ ಪೊಲೀಸ್ ಶ್ವಾನದಳದ ಶ್ವಾನ ‘ದತ್ತ’ ಅನಾರೋಗ್ಯದಿಂದ ಕೊನೆಯುಸಿರೆಳೆದಿದೆ. ಹಲವು ವರ್ಷಗಳ ಕಾಲ ನಿಷ್ಠೆಯಿಂದ ಕರ್ತವ್ಯ ನಿರ್ವಹಿಸಿದ ದತ್ತನಿಗೆ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಕಲ ಪೊಲೀಸ್ ಗೌರವಗಳೊಂದಿಗೆ ಅಶ್ರುಪೂರ್ಣ ವಿದಾಯ ನೀಡಿದರು.
2019ರ ಮೇ ತಿಂಗಳಲ್ಲಿ ಜನಿಸಿದ್ದ ದತ್ತ, ಅದೇ ವರ್ಷ ಅಪರಾಧ ಪತ್ತೆ ಶ್ವಾನವಾಗಿ ಪೊಲೀಸ್ ಇಲಾಖೆಗೆ ಸೇರ್ಪಡೆಗೊಂಡಿತ್ತು. ಬೆಂಗಳೂರಿನಲ್ಲಿ ಕಠಿಣ ತರಬೇತಿ ಪಡೆದಿದ್ದ ದತ್ತ, ಹ್ಯಾಂಡ್ಲರ್ಗಳಾದ ರಾಜಪ್ಪ ಎಲ್.ಜಿ. ಹಾಗೂ ಮಂಜುನಾಥ್ ಎ.ಎಂ. ಅವರ ಮಾರ್ಗದರ್ಶನದಲ್ಲಿ ಕರ್ತವ್ಯ ನಿರ್ವಹಿಸುತ್ತಿತ್ತು.
ತನ್ನ ಸೇವಾವಧಿಯಲ್ಲಿ ಕಳ್ಳತನ, ದರೋಡೆ, ಕೊಲೆ ಸೇರಿದಂತೆ ಒಟ್ಟು 275 ಜಟಿಲ ಪ್ರಕರಣಗಳ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ದತ್ತ, 61 ಪ್ರಕರಣಗಳಲ್ಲಿ ಪೊಲೀಸರಿಗೆ ಮಹತ್ವದ ಸುಳಿವುಗಳನ್ನು ನೀಡಿತ್ತು. ಅಲ್ಲದೆ, 9 ಪ್ರಕರಣಗಳಲ್ಲಿ ಆರೋಪಿಗಳನ್ನು ನಿಖರವಾಗಿ ಪತ್ತೆಹಚ್ಚುವ ಮೂಲಕ ಅಪರಾಧ ಪ್ರಕರಣಗಳ ತನಿಖೆಗೆ ಮಹತ್ವದ ಕೊಡುಗೆ ನೀಡಿತ್ತು.
ದತ್ತನ ಸಾಹಸಮಯ ಕಾರ್ಯಾಚರಣೆಗಳಲ್ಲಿ 2025ನೇ ಸಾಲಿನ ಕೊಪ್ಪ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರಕರಣ ವಿಶೇಷವಾಗಿ ಗಮನ ಸೆಳೆದಿತ್ತು. ನಾಪತ್ತೆಯಾಗಿದ್ದ 70 ವರ್ಷದ ವೃದ್ಧರೊಬ್ಬರನ್ನು ಸತತ ಮೂರು ದಿನಗಳ ಹುಡುಕಾಟದ ಬಳಿಕ ದಟ್ಟ ಕಾಡಿನಲ್ಲಿ ಜೀವಂತವಾಗಿ ಪತ್ತೆಹಚ್ಚುವಲ್ಲಿ ದತ್ತ ಯಶಸ್ವಿಯಾಗಿತ್ತು. ಈ ಕಾರ್ಯಾಚರಣೆಯ ಮೂಲಕ ದತ್ತ ಪೊಲೀಸ್ ಇಲಾಖೆಯ ಮೆಚ್ಚುಗೆಗೆ ಪಾತ್ರವಾಗಿತ್ತು.
ಅಪರಾಧ ಪತ್ತೆಯಲ್ಲಿ ತನ್ನ ವಿಶೇಷ ಸಾಮರ್ಥ್ಯ, ಶಿಸ್ತು ಹಾಗೂ ನಿಷ್ಠೆಯಿಂದ ಇಲಾಖೆಯ ಅವಿಭಾಜ್ಯ ಅಂಗವಾಗಿದ್ದ ದತ್ತನ ಅಗಲಿಕೆ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ದುಃಖ ಮೂಡಿಸಿದೆ. ವರ್ಷಗಳ ಕಾಲ ಇಲಾಖೆಯ ಸೇವೆಯಲ್ಲಿ ತೊಡಗಿಸಿಕೊಂಡಿದ್ದ ನಿಷ್ಠಾವಂತ ಸಹೋದ್ಯೋಗಿಗೆ ಸಕಲ ಪೊಲೀಸ್ ಗೌರವಗಳೊಂದಿಗೆ ಅಂತಿಮ ನಮನ ಸಲ್ಲಿಸಲಾಯಿತು. ತನ್ನ ಸೇವೆ ಮತ್ತು ಸಾಹಸಮಯ ಕಾರ್ಯಾಚರಣೆಗಳ ಮೂಲಕ ದತ್ತ ಪೊಲೀಸ್ ಇಲಾಖೆಯ ನೆನಪಿನಲ್ಲಿ ಸದಾ ಉಳಿಯಲಿದೆ.
Police dog ‘Datta’ is no more
Leave a comment