ಚಿಕ್ಕಮಗಳೂರು: ರಾತ್ರಿ ವಾಕಿಂಗ್‌ಗೆ ತೆರಳಿದ್ದ ಮಹಿಳೆಯೊಬ್ಬರ ಕುತ್ತಿಗೆಯಲ್ಲಿದ್ದ ಸುಮಾರು 6 ಲಕ್ಷ ರೂ. ಮೌಲ್ಯದ ಚಿನ್ನದ ಸರಗಳನ್ನು ಬೈಕ್‌ನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಕಿತ್ತುಕೊಂಡು ಪರಾರಿಯಾಗಿರುವ ಘಟನೆ ನಗರದ ಸ್ಪೆನ್ಸರ್ ರಸ್ತೆಯಲ್ಲಿ ನ.6ರಂದು ರಾತ್ರಿ ನಡೆದಿದೆ.
ನಗರದ ಸ್ಪೆನ್ಸರ್ ರಸ್ತೆಯ ನಿವಾಸಿ ನಂದಿತಾ ಕಿರಣ್ ಎಂಬುವವರು ಚಿನ್ನದ ಸರ ಕಳೆದುಕೊಂಡ ಮಹಿಳೆ. ಇವರು ರಾತ್ರಿ ಸುಮಾರು 9.20ರ ಸಮಯದಲ್ಲಿ ಮನೆಯಲ್ಲಿ ಊಟ ಮುಗಿಸಿಕೊಂಡು ವಾಕಿಂಗ್‌ಗಾಗಿ ಹೊರಗೆ ಬಂದಿದ್ದರು. ಅಗ್ರಹಾರ ಸರ್ಕಲ್ ಕಡೆಗೆ ತೆರಳಿ ಸತ್ಯನಾರಾಯಣ ಎಂಬುವವರ ಮನೆಯ ಮುಂಭಾಗದಿಂದ ವಾಪಸ್ ಮನೆಗೆ ಹಿಂದಿರುಗುತ್ತಿದ್ದಾಗ ಈ ಘಟನೆ ನಡೆದಿದೆ.
ಮಹಿಳೆ ರಸ್ತೆಯ ಎಡಬದಿಯಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಸ್ಪೆನ್ಸರ್ ರಸ್ತೆ ಕ್ರಾಸ್ ಕಡೆಯಿಂದ ಬೈಕ್‌ನಲ್ಲಿ ಬಂದ ಇಬ್ಬರು ಅಪರಿಚಿತರು ಅವರ ಸಮೀಪಕ್ಕೆ ಬಂದಿದ್ದಾರೆ. ಬೈಕ್‌ನ ಹಿಂಬದಿಯಲ್ಲಿ ಕುಳಿತಿದ್ದ ವ್ಯಕ್ತಿ ಏಕಾಏಕಿ ಮಹಿಳೆಯ ಕುತ್ತಿಗೆಗೆ ಕೈಹಾಕಿ ಎರಡು ಎಳೆಯ ಚಿನ್ನದ ಮಾಂಗಲ್ಯ ಸರ ಹಾಗೂ ಒಂದು ಎಳೆಯ ಚಿಕ್ಕ ಚಿನ್ನದ ಸರವನ್ನು ಬಲವಂತವಾಗಿ ಕಿತ್ತುಕೊಂಡಿದ್ದಾನೆ. ಈ ವೇಳೆ ಮಹಿಳೆ ನೆಲಕ್ಕೆ ಬಿದ್ದಿದ್ದು, ದುಷ್ಕರ್ಮಿಗಳು ಬೈಕ್‌ನಲ್ಲಿ ವೇಗವಾಗಿ ಪರಾರಿಯಾಗಿದ್ದಾರೆ.
ಕಳ್ಳತನವಾಗಿರುವ ಎರಡು ಎಳೆಯ ಮಾಂಗಲ್ಯ ಸರಗಳ ತೂಕ ಸುಮಾರು 45 ಗ್ರಾಂ ಹಾಗೂ ಒಂದು ಎಳೆಯ ಚಿಕ್ಕ ಚಿನ್ನದ ಸರದ ತೂಕ 15 ಗ್ರಾಂ ಸೇರಿ ಒಟ್ಟು 60 ಗ್ರಾಂ ಚಿನ್ನಾಭರಣವಾಗಿದ್ದು, ಇವುಗಳ ಅಂದಾಜು ಮೌಲ್ಯ 6 ಲಕ್ಷ ರೂ. ಎಂದು ದೂರಿನಲ್ಲಿ ತಿಳಿಸಿದ್ದಾರೆ.
ಘಟನೆಯ ಬಳಿಕ ಮಹಿಳೆ ಮನೆಯವರಿಗೆ ಮಾಹಿತಿ ನೀಡಿದ್ದು, ನ.7ರಂದು ಚಿಕ್ಕಮಗಳೂರು ನಗರ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬೈಕ್‌ನಲ್ಲಿ ಬಂದು ಚಿನ್ನದ ಸರಗಳನ್ನು ಕಿತ್ತುಕೊಂಡು ಪರಾರಿಯಾಗಿರುವ ಇಬ್ಬರು ಆರೋಪಿಗಳ ಪತ್ತೆಗೆ ಕ್ರಮ ಕೈಗೊಂಡಿದ್ದಾರೆ.
Gold chain worth Rs 6 lakh stolen from woman’s neck
Leave a comment