ಕಡೂರು: ಬರದ ಬೇಗುದಿ, ಕೃಷಿ ನಷ್ಟ ಹಾಗೂ ಸಾಲದ ಹೊರೆ ತಾಳಲಾರದೆ ರೈತರ ಆತ್ಮಹತ್ಯೆ ಪ್ರಕರಣಗಳು ಮುಂದುವರಿದಿದ್ದು, ದೀಪಾವಳಿಯ ಸಂಭ್ರಮದ ನಡುವೆಯೇ ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನಲ್ಲಿ ಮತ್ತೊಬ್ಬ ರೈತ ಆತ್ಮಹತ್ಯೆಗೆ ಶರಣಾಗಿರುವ ದಾರುಣ ಘಟನೆ ನಡೆದಿದೆ.
ತಾಲೂಕಿನ ಹುಳಿನಾಗರು ಗ್ರಾಮದ 55 ವರ್ಷದ ರೈತ ರಾಮಸ್ವಾಮಿ ಅವರು ಸಾಲಬಾಧೆ ಹಾಗೂ ಕೊಳವೆಬಾವಿ ವೈಫಲ್ಯದಿಂದ ಮನನೊಂದು ದೀಪಾವಳಿ ಹಬ್ಬದ ದಿನವೇ ತಮ್ಮ ಅಡಿಕೆ ತೋಟದಲ್ಲಿ ವಿಷ ಸೇವಿಸಿ ಮೃತಪಟ್ಟಿದ್ದಾರೆ. ಕಡೂರು ತಾಲೂಕಿನಲ್ಲಿ ಕೇವಲ ಒಂದು ತಿಂಗಳ ಅಂತರದಲ್ಲಿ ನಡೆದ ಮೂರನೇ ರೈತ ಆತ್ಮಹತ್ಯೆ ಪ್ರಕರಣ ಇದಾಗಿದ್ದು, ಗ್ರಾಮದಲ್ಲಿ ಶೋಕದ ಛಾಯೆ ಆವರಿಸಿದೆ.
ರಾಮಸ್ವಾಮಿ ಅವರು ತಮ್ಮ ಅಡಿಕೆ ತೋಟವನ್ನು ಉಳಿಸಿಕೊಳ್ಳುವ ಉದ್ದೇಶದಿಂದ ಮನೆಯ ಚಿನ್ನಾಭರಣಗಳನ್ನು ಖಾಸಗಿ ಬ್ಯಾಂಕ್‌ನಲ್ಲಿ ಅಡಮಾನವಿಟ್ಟು ಸುಮಾರು 10 ಲಕ್ಷ ರೂ. ಸಾಲ ಪಡೆದಿದ್ದರು. ಈ ಹಣದಲ್ಲಿ ತೋಟಕ್ಕೆ ಹೊಸ ಕೊಳವೆಬಾವಿ ಕೊರೆಸಿದ್ದರು. ಆದರೆ, ತೀವ್ರ ಮಳೆ ಕೊರತೆ ಹಾಗೂ ಅಂತರ್ಜಲ ಮಟ್ಟ ಕುಸಿತದಿಂದ ಕೊಳವೆಬಾವಿಯಲ್ಲಿ ನೀರು ಸಿಗದೆ ಸಂಪೂರ್ಣ ನಿರಾಶೆಯಾಗಿತ್ತು.
ಒಂದೆಡೆ ನೀರಿಲ್ಲದೆ ಅಡಿಕೆ ತೋಟ ಒಣಗುವ ಆತಂಕ, ಮತ್ತೊಂದೆಡೆ ಲಕ್ಷಾಂತರ ರೂಪಾಯಿ ಸಾಲ ಮರುಪಾವತಿಯ ಚಿಂತೆ ಅವರನ್ನು ಕಾಡುತ್ತಿತ್ತು. ಕೃಷಿಯನ್ನೇ ನಂಬಿ ಬದುಕುತ್ತಿದ್ದ ರೈತ, ಮಾಡಿದ ಸಾಲ ತೀರಿಸಲಾಗದೆ ತೀವ್ರ ಸಂಕಷ್ಟಕ್ಕೆ ಸಿಲುಕಿ ಕೊನೆಗೆ ಆತ್ಮಹತ್ಯೆಯ ಹಾದಿ ಹಿಡಿದಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮಳೆ ಕೊರತೆಯಿಂದ ತತ್ತರಿಸಿರುವ ಕಡೂರು ತಾಲೂಕನ್ನು ಸರ್ಕಾರ ಬರಪೀಡಿತ ಪ್ರದೇಶವೆಂದು ಘೋಷಿಸಿದೆ. ಆದರೂ ರೈತರ ಸಂಕಷ್ಟ ಮಾತ್ರ ಕಡಿಮೆಯಾಗಿಲ್ಲ. ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಕೊಳವೆಬಾವಿ ಕೊರೆಸಿದರೂ ನೀರು ಸಿಗದೆ ರೈತರು ನಿರಾಶರಾಗುತ್ತಿದ್ದಾರೆ. ಕೃಷಿ ಉಳಿಸಿಕೊಳ್ಳಲು ಮಾಡಿದ ಸಾಲವೇ ಅವರ ಪಾಲಿಗೆ ಹೊರೆಯಾಗುತ್ತಿದೆ.
ಬರ, ಅಂತರ್ಜಲ ಕುಸಿತ, ಕೃಷಿ ನಷ್ಟ ಹಾಗೂ ಸಾಲದ ಸುಳಿಯಲ್ಲಿ ಸಿಲುಕುತ್ತಿರುವ ಅನ್ನದಾತರ ಬದುಕು ದಿನದಿಂದ ದಿನಕ್ಕೆ ದುಸ್ತರವಾಗುತ್ತಿದೆ. ರೈತರ ಆತ್ಮಹತ್ಯೆ ಪ್ರಕರಣಗಳು ಮರುಕಳಿಸುತ್ತಿರುವುದು ಕೃಷಿ ವಲಯದಲ್ಲಿ ಆತಂಕ ಮೂಡಿಸಿದೆ. ರೈತರ ಸಂಕಷ್ಟಕ್ಕೆ ಶಾಶ್ವತ ಪರಿಹಾರ, ನೀರಾವರಿ ಸೌಲಭ್ಯ ಹಾಗೂ ಸಾಲದ ಹೊರೆಯಿಂದ ಮುಕ್ತಿ ಕಲ್ಪಿಸುವ ಕ್ರಮಗಳ ಅಗತ್ಯವನ್ನು ಈ ಘಟನೆ ಮತ್ತೊಮ್ಮೆ ಮುನ್ನೆಲೆಗೆ ತಂದಿದೆ.
ಘಟನೆಗೆ ಸಂಬಂಧಿಸಿದಂತೆ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Farmer commits suicide in areca nut plantation unable to bear the burden of debt
Leave a comment