ಚಿಕ್ಕಮಗಳೂರು: ಸೈಬರ್ ವಂಚನೆ ಮೂಲಕ ಸಾರ್ವಜನಿಕರಿಂದ ಹಣ ಪಡೆದು, ಅದನ್ನು ತರೀಕೆರೆಯ ಕೆನರಾ ಬ್ಯಾಂಕ್ ಖಾತೆಯೊಂದಕ್ಕೆ ವರ್ಗಾಯಿಸಿಕೊಂಡು ಚೆಕ್ ಮೂಲಕ ಹಣ ವಿತ್‌ಡ್ರಾ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಸೈಬರ್ ಕ್ರೈಂ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ತರೀಕೆರೆ ತಾಲ್ಲೂಕಿನ ಕೆ. ಚಟ್ಟನಹಳ್ಳಿ ಗ್ರಾಮದ ದರ್ಶನ್ ಸಿ.ವಿ. ಎಂಬುವವರಿಗೆ ಸೇರಿದ ಕೆನರಾ ಬ್ಯಾಂಕ್ ಖಾತೆಯ ಮೂಲಕ ಸೈಬರ್ ವಂಚನೆಗೆ ಸಂಬಂಧಿಸಿದ ಹಣದ ವಹಿವಾಟು ನಡೆದಿರುವುದು ಪೊಲೀಸರ ಪರಿಶೀಲನೆಯಿಂದ ಬೆಳಕಿಗೆ ಬಂದಿದೆ.
ಬೆಂಗಳೂರು ಸೈಬರ್ ಕಮಾಂಡ್ ಘಟಕದ ಡಿಜಿಪಿ ಕಚೇರಿಯಿಂದ ಬಂದ ನಿರ್ದೇಶನದ ಮೇರೆಗೆ ಸೈಬರ್ ವಂಚನೆ ಪ್ರಕರಣಗಳಲ್ಲಿ ಮೋಸದಿಂದ ಪಡೆದ ಹಣವನ್ನು ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಿ, ಚೆಕ್ ಮೂಲಕ ನಗದು ರೂಪದಲ್ಲಿ ಹಿಂಪಡೆದಿರುವ ವಹಿವಾಟುಗಳನ್ನು ಪರಿಶೀಲಿಸಲಾಗಿದೆ. ಈ ವೇಳೆ ತರೀಕೆರೆಯ ಕೆನರಾ ಬ್ಯಾಂಕ್ ಖಾತೆಯೊಂದಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ಸೈಬರ್ ಕ್ರೈಂ ವರದಿ ಪೋರ್ಟಲ್‌ನಲ್ಲಿ (NCRP) ಒಟ್ಟು ನಾಲ್ಕು ದೂರುಗಳು ದಾಖಲಾಗಿರುವುದು ಪತ್ತೆಯಾಗಿದೆ.
ಸದರಿ ಖಾತೆಯ ಮೂಲಕ ನಾಲ್ಕು ಪ್ರತ್ಯೇಕ ವಹಿವಾಟುಗಳಲ್ಲಿ ತಲಾ ₹1 ಲಕ್ಷದಂತೆ ಒಟ್ಟು ₹4 ಲಕ್ಷ ಹಣವನ್ನು ಚೆಕ್ ಹಾಗೂ ನಗದು ಹಿಂಪಡೆಯುವ ಸ್ಲಿಪ್ ಮೂಲಕ ವಿತ್‌ಡ್ರಾ ಮಾಡಲಾಗಿದೆ. ಈ ಪೈಕಿ ಪ್ರತಿ ವಹಿವಾಟಿನಲ್ಲಿ ₹20 ಸಾವಿರದಂತೆ ಒಟ್ಟು ₹80 ಸಾವಿರ ಹಣ ಸೈಬರ್ ವಂಚನೆಗೆ ಸಂಬಂಧಿಸಿರುವುದು ತನಿಖೆಯಲ್ಲಿ ತಿಳಿದುಬಂದಿದೆ.
ಖಾತೆದಾರರು ತಮ್ಮ ಬ್ಯಾಂಕ್ ಖಾತೆಯನ್ನು ಇತರರಿಗೆ ಬಳಸಲು ಉದ್ದೇಶಪೂರ್ವಕವಾಗಿ ನೀಡಿದ್ದಾರೆಯೇ ಅಥವಾ ಸೈಬರ್ ವಂಚನೆ ಕೃತ್ಯದಲ್ಲಿ ನೇರವಾಗಿ ಅಥವಾ ಪರೋಕ್ಷವಾಗಿ ಭಾಗಿಯಾಗಿದ್ದಾರೆಯೇ ಎಂಬುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಈ ಸಂಬಂಧ ಸೈಬರ್ ಕ್ರೈಂ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ ಮುಶಾಹಿದ್ ಅಹ್ಮದ್ ಅವರು ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿಕೊಂಡಿದ್ದು, ವಂಚನೆಯ ಹಣದ ವಹಿವಾಟಿನಲ್ಲಿ ಭಾಗಿಯಾಗಿರುವ ಇತರ ವ್ಯಕ್ತಿಗಳ ಪತ್ತೆಗಾಗಿ ತನಿಖೆ ಕೈಗೊಳ್ಳಲಾಗಿದೆ. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
Case registered against bank account of an individual from Tarikere
Leave a comment