ಚಿಕ್ಕಮಗಳೂರು: ರಾಜ್ಯ ಸರ್ಕಾರ ಬಿಡುಗಡೆ ಮಾಡಿರುವ ಬರಪೀಡಿತ ತಾಲ್ಲೂಕುಗಳ ಮೂರನೇ ಪಟ್ಟಿಯಲ್ಲಿ ಜಿಲ್ಲೆಯ ಎರಡು ತಾಲ್ಲೂಕುಗಳು ಸ್ಥಾನ ಪಡೆದಿವೆ. ಚಿಕ್ಕಮಗಳೂರು ತಾಲ್ಲೂಕು ತೀವ್ರ ಬರಪೀಡಿತ ತಾಲ್ಲೂಕುಗಳ ಪಟ್ಟಿಯಲ್ಲಿದ್ದರೆ, ಕಳಸ ತಾಲ್ಲೂಕು ಮಧ್ಯಮ ಬರಪೀಡಿತ ಪಟ್ಟಿ ಸೇರಿದೆ.
ಮೊದಲ ಪಟ್ಟಿಯಲ್ಲಿ ಅಜ್ಜಂಪುರವನ್ನು ತೀವ್ರ ಬರಪೀಡಿತ ತಾಲ್ಲೂಕು ಎಂದು ಫೋಷಣೆ ಮಾಡಲಾಗಿತ್ತು. ಕೊಪ್ಪ, ನರಸಿಂಹರಾಜಪುರ ಹಾಗೂ ತರೀಕೆರೆ ತಾಲ್ಲೂಕುಗಳನ್ನು ಮಧ್ಯಮ ಬರಪೀಡಿತ ತಾಲ್ಲೂಕು ಎಂದು ಘೋಷಿಸಲಾಗಿತ್ತು.
ತೀವ್ರ ಮಳೆ ಕೊರತೆ ಎದುರಿಸುತ್ತಿದ್ದ ಕಡೂರು ತಾಲ್ಲೂಕು ಮೊದಲ ಪಟ್ಟಿಯಲ್ಲಿ ಇರಲಿಲ್ಲ. ತಾಲ್ಲೂಕಿನ ಜನ ಮತ್ತು ಜನಪ್ರತಿನಿಧಿಗಳು ತೀವ್ರ ಹೋರಾಟ ನಡೆಸಿದ ಬಳಿಕ ಎರಡನೇ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಬರಪೀಡಿತ ಪಟ್ಟಿ ಸೇರಿತ್ತು.
ಚಿಕ್ಕಮಗಳೂರು ತಾಲ್ಲೂಕಿನ ಕೆಲ ಹೋಬಳಿಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂಬ ಕಾರಣಕ್ಕೆ ಇಡೀ ತಾಲ್ಲೂಕು ಬರಪಟ್ಟಿಯಿಂದ ಹೊರಗುಳಿದಿತ್ತು. ಲಕ್ಯಾ ಹೋಬಳಿಯಲ್ಲಿ ಶೇ 75ರಷ್ಟು ಮಳೆ ಕೊರತೆಯಾಗಿದ್ದರೆ, ಅಂಬಳೆ, ಆಲ್ಲೂರು, ಸಂಗಮೇಶ್ವರಪೇಟೆ, ಆವತಿ, ಚಿಕ್ಕಮಗಳೂರು ಕಸಬಾ ಹೋಬಳಿಗಳಲ್ಲೂ ಮಳೆ ಕೊರತೆಯಾಗಿತ್ತು.
ಜಾಗರ ಮತ್ತು ವಸ್ತಾರೆ ಹೋಬಳಿಗಳಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ ಎಂಬ ಕಾರಣಕ್ಕೆ ಬರಪಟ್ಟಿಯಿಂದ ಹೊರಗುಳಿದಿತ್ತು. ಚಿಕ್ಕಮಗಳೂರು ತಾಲ್ಲೂಕಿನ ಹೋಬಳಿವಾರು ಮಳೆ ವಿವರ ಒಳಗೊಂಡ ವರದಿಯನ್ನು ಜಿಲ್ಲಾಡಳಿತ ಸರ್ಕಾರಕ್ಕೆ ಸಲ್ಲಿಸಿತ್ತು. ವಿಶೇಷ ಪ್ರಕರಣ ಎಂದು ಪರಿಗಣಿಸಲು ಕೋರಿತ್ತು.
ಇದೀಗ ಮೂರನೇ ಪಟ್ಟಿಯನ್ನು ಸರ್ಕಾರ ಗುರುವಾರ ಬಿಡುಗಡೆ ಮಾಡಿದ್ದು, ಹೊಸದಾಗಿ 40 ತಾಲ್ಲೂಕುಗಳನ್ನು ಬರ ಪಟ್ಟಿಗೆ ಸೇರಿಸಿದೆ. ಚಿಕ್ಕಮಗಳೂರು ಮತ್ತು ಕಳಸ ತಾಲ್ಲೂಕು ಸೇರಿಕೊಂಡಿವೆ.
ಜಿಲ್ಲೆಯಲ್ಲಿ ಈ ವರ್ಷ ಶೇ 37ರಷ್ಟು ಮಳೆ ಕೊರತೆ ಉಂಟಾಗಿದ್ದು, ಶೇ 39ರಷ್ಟು ಮಾತ್ರ ಬಿತ್ತನೆ ಕಾರ್ಯ ನಡೆದಿದೆ. ಜಿಲ್ಲೆಯ ಒಟ್ಟು 9 ತಾಲ್ಲೂಕುಗಳಲ್ಲಿ 7 ತಾಲ್ಲೂಕುಗಳು ಬರಪೀಡಿತ ಪಟ್ಟಿಯಲ್ಲಿ ಸೇರಿದ್ದು, ಮೂಡಿಗೆರೆ ಮತ್ತು ಶೃಂಗೇರಿ ತಾಲ್ಲೂಕುಗಳು ಮಾತ್ರ ಪಟ್ಟಿಯಿಂದ ಹೊರಗುಳಿದಿವೆ.
Chikkamagaluru-Kalasa included in the third list of drought-hit taluks.
Leave a comment