ಚಿಕ್ಕಮಗಳೂರು: ಗ್ರಾಮ ಪಂಚಾಯಿತಿ ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ಕೂಡಲೇ ಜಾರಿಗೊಳಿಸುವುದು ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಫೆಡರೇಶನ್ (AITUC) ವತಿಯಿಂದ ಸೆ.29ರಂದು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಸಲಾಗುವುದು ಎಂದು ಫೆಡರೇಶನ್ ಜಿಲ್ಲಾಧ್ಯಕ್ಷ ಎಸ್. ವಿಜಯಕುಮಾರ್ ತಿಳಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮ ಪಂಚಾಯಿತಿಗಳಲ್ಲಿ ಅಟೆಂಡರ್, ಬಿಲ್ ಕಲೆಕ್ಟರ್, ಕ್ಲರ್ಕ್, ಡಿಇಒ, ವಾಟರ್‌ಮ್ಯಾನ್, ಪಂಪ್ ಆಪರೇಟರ್ ಹಾಗೂ ಸ್ವಚ್ಛತಾ ಕಾರ್ಮಿಕರು ಸೇರಿದಂತೆ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರು ಹಲವು ವರ್ಷಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಅವರ ನ್ಯಾಯಯುತ ಬೇಡಿಕೆಗಳ ಈಡೇರಿಕೆಗಾಗಿ AITUC ನಿರಂತರ ಹೋರಾಟ ನಡೆಸುತ್ತಿದೆ ಎಂದರು.
2017ಕ್ಕೂ ಮೊದಲು ಗ್ರಾಮ ಪಂಚಾಯಿತಿಗಳ ಆದಾಯದಿಂದ ಕೇವಲ ₹500ರಿಂದ ₹2,000ವರೆಗೆ ವೇತನ ಪಡೆಯುತ್ತಿದ್ದ ನೌಕರರಿಗೆ ಸರ್ಕಾರದಿಂದ ನೇರವಾಗಿ ವೇತನ ದೊರೆಯುವಂತೆ ಮಾಡಲು ಸಂಘಟನೆ ಹೋರಾಟ ನಡೆಸಿತ್ತು. ಅಂದಿನ ಸಚಿವ ಹೆಚ್.ಕೆ. ಪಾಟೀಲ್ ಅವರೊಂದಿಗೆ ಸಭೆ ನಡೆಸಿ ಮನವಿ ಸಲ್ಲಿಸುವ ಮೂಲಕ ಈ ನಿಟ್ಟಿನಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.
ಗ್ರಾಮ ಪಂಚಾಯಿತಿ ನೌಕರರಿಗೆ ಕನಿಷ್ಠ ವೇತನ ಜಾರಿಗೊಳಿಸುವಂತೆ AITUC ವತಿಯಿಂದ ಉಚ್ಚ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿತ್ತು. ನ್ಯಾಯಾಲಯದ ಪ್ರಕ್ರಿಯೆಯ ಬಳಿಕ ಕನಿಷ್ಠ ವೇತನ ಜಾರಿಗೊಳಿಸುವಲ್ಲಿ ಯಶಸ್ವಿಯಾಗಿದ್ದರೂ, ರಾಜ್ಯ ಸರ್ಕಾರ ಕನಿಷ್ಠ ವೇತನ ಪರಿಷ್ಕರಣೆಗಾಗಿ ಉಪಸಮಿತಿ ರಚಿಸಿ ಪರಿಷ್ಕೃತ ವೇತನ ಜಾರಿಗೆ ವಿಳಂಬ ಮಾಡುತ್ತಿರುವುದು ಖಂಡನೀಯ ಎಂದು ವಿಜಯಕುಮಾರ್ ಆರೋಪಿಸಿದರು.
ನೌಕರರಿಗೆ ಪರಿಷ್ಕೃತ ಕನಿಷ್ಠ ವೇತನವನ್ನು ತಕ್ಷಣ ಜಾರಿಗೊಳಿಸುವುದು, ನಿವೃತ್ತ ನೌಕರರಿಗೆ ನಿಯಮಾನುಸಾರ ನೀಡಬೇಕಾದ ಉಪದಾನ ಬಿಡುಗಡೆ ಮಾಡುವುದು, ಉಳಿಕೆ ರಜೆ ಮತ್ತು ಗಳಿಕೆ ರಜೆ ಸೌಲಭ್ಯ ಕಲ್ಪಿಸುವುದು ಹಾಗೂ ನೀರುಗಂಟಿ ಮತ್ತು ವಾಟರ್‌ಮ್ಯಾನ್‌ಗಳಿಗೆ ಕಾರ್ಯಸ್ಥಳದ ಅಂತರಕ್ಕೆ ಅನುಗುಣವಾಗಿ ಪೆಟ್ರೋಲ್ ವೆಚ್ಚ ನೀಡಬೇಕು ಎಂದು ಆಗ್ರಹಿಸಿದರು.
ಅದೇ ರೀತಿ ನೌಕರರಿಗೆ ಜಾರಿಯಲ್ಲಿರುವ ಭವಿಷ್ಯ ನಿಧಿ (PF) ಸೌಲಭ್ಯವನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು. 2017ಕ್ಕೂ ಹಿಂದಿನ ಬಾಕಿ ವೇತನವನ್ನು ಪಾವತಿಸಬೇಕು. ಗ್ರಾಮ ಪಂಚಾಯಿತಿಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಅರ್ಹತೆ ಹೊಂದಿರುವ ಹಾಲಿ ಸಿಬ್ಬಂದಿಯಿಂದ ಭರ್ತಿ ಮಾಡಬೇಕು. ಹೆಚ್ಚುವರಿ ಡಿಇಒಗಳ ಸೇವೆಯನ್ನು ಅನುಮೋದಿಸಿ ಖಾಯಂ ನೌಕರರನ್ನಾಗಿ ಪರಿಗಣಿಸಬೇಕು ಎಂದು ಒತ್ತಾಯಿಸಿದರು.
ನೌಕರರ ಸೇವಾ ಪುಸ್ತಕ, ಈಎಸ್‌ಐ ಹಾಗೂ ಪಿಂಚಣಿ ಸೌಲಭ್ಯಗಳಿಗೆ ಆದ್ಯತೆ ನೀಡಬೇಕು. ಬಿಲ್ ಕಲೆಕ್ಟರ್‌ಗಳ ಮೇಲೆ ಮುಂಗಡ ತೆರಿಗೆ ವಸೂಲಿ ರಸೀದಿಗಳ ಹೊರೆ ಹಾಕಲಾಗುತ್ತಿದ್ದು, ಗ್ರಾಮಸ್ಥರು ತೆರಿಗೆ ಪಾವತಿಸದ ಸಂದರ್ಭದಲ್ಲೂ ಬಿಲ್ ಕಲೆಕ್ಟರ್‌ಗಳೇ ರಸೀದಿ ಬರೆಯಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಅವರು ಮಾನಸಿಕ ಹಾಗೂ ಆರ್ಥಿಕ ಒತ್ತಡಕ್ಕೆ ಒಳಗಾಗುತ್ತಿದ್ದಾರೆ. ಈ ಬಗ್ಗೆ ಸೂಕ್ತ ನಿರ್ದೇಶನ ನೀಡಬೇಕು ಎಂದರು.
ಬಿಲ್ ಕಲೆಕ್ಟರ್, ಕ್ಲರ್ಕ್ ಹಾಗೂ ಡಿಇಒಗಳ ಜೇಷ್ಠತಾ ಪಟ್ಟಿ ಸಿದ್ಧಪಡಿಸಿ, ಅರ್ಹ ನೌಕರರಿಗೆ ಮುಂಬಡ್ತಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಸೆ.29ರಂದು ಧರಣಿ: ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸೆ.29ರಂದು ಬೆಳಗ್ಗೆ 11 ಗಂಟೆಗೆ ಚಿಕ್ಕಮಗಳೂರು ಜಿಲ್ಲಾ ಪಂಚಾಯಿತಿ ಕಚೇರಿ ಎದುರು ಧರಣಿ ಪ್ರತಿಭಟನೆ ನಡೆಯಲಿದೆ. ಗ್ರಾಮ ಪಂಚಾಯಿತಿ ನೌಕರರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೋರಾಟವನ್ನು ಯಶಸ್ವಿಗೊಳಿಸಬೇಕು ಎಂದು ವಿಜಯಕುಮಾರ್ ಮನವಿ ಮಾಡಿದರು.
ಗೋಷ್ಠಿಯಲ್ಲಿ ಮಂಜಪ್ಪ ಬಿ., ಉಮೇಶ್ ಕೆ., ವಿ. ಮೋಹನ್, ಉಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Protest on September 29 to press for Gram Panchayat employees’ demands.
Leave a comment