ಚಿಕ್ಕಮಗಳೂರು: ರಾಷ್ಟ್ರೀಯ ಹೆದ್ದಾರಿ 173ರ ವ್ಯಾಪ್ತಿಯಲ್ಲಿ ರಸ್ತೆ ಅಗಲೀಕರಣದ ಹೆಸರಿನಲ್ಲಿ ನಿಯಮಗಳನ್ನು ಗಾಳಿಗೆ ತೂರಿ ಶತಮಾನದ ಇತಿಹಾಸವಿರುವ ಬೃಹತ್ ಮರಗಳಿಗೆ ಕೊಡಲಿ ಪೆಟ್ಟು ನೀಡುತ್ತಿರುವುದಕ್ಕೆ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಮೂಡಿಗೆರೆಯಿಂದ ಮೂಗ್ತಿಹಳ್ಳಿವರೆಗಿನ ಸುಮಾರು 26.326 ಕಿಲೋಮೀಟರ್ ರಸ್ತೆ ಕಾಮಗಾರಿಗಾಗಿ ಬರೋಬ್ಬರಿ 2,500ಕ್ಕೂ ಅಧಿಕ ಮರಗಳು ಹಾಗೂ ಎರಡು ಎಕರೆಗೂ ಹೆಚ್ಚು ಅರಣ್ಯ ಪ್ರದೇಶವನ್ನು ತೆರವುಗೊಳಿಸಲು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಮುಂದಾಗಿದೆ.
ಈಗಾಗಲೇ ಶಿರಗುಂದ ಹಾಗೂ ಮತ್ತಾವರ ಸಮೀಪ 50ಕ್ಕೂ ಹೆಚ್ಚು ವಿವಿಧ ಜಾತಿಯ, ನೂರು ವರ್ಷಕ್ಕೂ ಹಳೆಯದಾದ ಪಾರಂಪರಿಕ ಮರಗಳನ್ನು ಕಡಿದುರುಳಿಸಲಾಗಿದ್ದು, ವೃಕ್ಷ ಸಂರಕ್ಷಣೆ ಕಾಯ್ದೆಯನ್ವಯ ರಸ್ತೆ ಬದಿಯ ಮರಗಳನ್ನು ತೆರವುಗೊಳಿಸುವ ಮುನ್ನ ಅರಣ್ಯ ಇಲಾಖೆಯು ಸಾರ್ವಜನಿಕರ ಅಹವಾಲು ಸಭೆಯನ್ನು ಕಡ್ಡಾಯವಾಗಿ ಕರೆಯಬೇಕಿತ್ತು.
ಆದರೆ, ಈ ಭಾಗದಲ್ಲಿ ಸಾರ್ವಜನಿಕರಿಗೆ ಯಾವುದೇ ಮಾಹಿತಿ ನೀಡದೆ, ಅಹವಾಲು ಸಭೆಯನ್ನೂ ನಡೆಸದೆ ಏಕಾಏಕಿ ಮರ ಕಡಿಯಲಾಗುತ್ತಿದೆ. ಇಷ್ಟಕ್ಕೂ ಈ ಮರಗಳ ಕಡಿತಲೆಗೆ ಅಧಿಕೃತ ಅನುಮತಿ ಸಿಕ್ಕಿದೆಯೇ ಇಲ್ಲವೇ ಎಂಬುದು ಕೂಡ ನಿಗೂಢವಾಗಿದ್ದು, ಅರಣ್ಯ ಪ್ರದೇಶದಲ್ಲಿ ಮರಗಳ ತೆರವಿಗೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯದ ಸಂಪೂರ್ಣ ಒಪ್ಪಿಗೆಯೂ ಲಭ್ಯವಾಗಿಲ್ಲ.
ಇಷ್ಟಾದರೂ ಸ್ಥಳೀಯ ಅರಣ್ಯ ಅಧಿಕಾರಿಗಳು ಯಾವುದನ್ನೂ ಪರಿಶೀಲಿಸದೆ ಮೌನಕ್ಕೆ ಶರಣಾಗಿರುವುದು ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಕೇಂದ್ರ ಸರ್ಕಾರದ ‘ಹಸಿರು ಹೆದ್ದಾರಿ ನೀತಿ’ (ಗ್ರೀನ್ ಹೈವೇ ಪಾಲಿಸಿ) ಹಾಗೂ ರಾಜ್ಯ ಅರಣ್ಯ ಇಲಾಖೆಯ ಸ್ಪಷ್ಟ ಮಾರ್ಗಸೂಚಿಗಳ ಪ್ರಕಾರ, ಇಂತಹ ಹೆದ್ದಾರಿ ಕಾಮಗಾರಿಗಳ ವೇಳೆ ಮರಗಳನ್ನು ಕಡಿಯುವ ಬದಲು ಸ್ಥಳಾಂತರ (ಟ್ರಾನ್ಸ್ ಲೊಕೇಶನ್) ಮಾಡಿ ಉಳಿಸಿಕೊಳ್ಳಲು ಮುಕ್ತ ಅವಕಾಶವಿದೆ.
ಆದರೂ ಅಧಿಕಾರಿಗಳು ಈ ನಿಟ್ಟಿನಲ್ಲಿ ಯಾವುದೇ ಕ್ರಮ ಕೈಗೊಳ್ಳದೆ ಸುಲಭದ ದಾರಿಯಾಗಿ ಕೊಡಲಿ ತಳೆಯುತ್ತಿರುವುದು ಅಕ್ಷಮ್ಯ ಎಂದು ವನ್ಯಜೀವಿ ಹಾಗೂ ಪರಿಸರ ಸಂರಕ್ಷಣಾ ಕಾರ್ಯಕರ್ತ ಜಿ. ವೀರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಚಿಕ್ಕಮಗಳೂರು ಪ್ರಾದೇಶಿಕ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳು ಕಾನೂನು ಪ್ರಕ್ರಿಯೆಗಳನ್ನು ಕಡೆಗಣಿಸಿ, ಯಾವುದೇ ಪರ್ಯಾಯ ಯೋಚಿಸದೆ ತೆರವಿಗೆ ಅನುವು ಮಾಡಿಕೊಡುತ್ತಿರುವುದರ ಹಿಂದೆ ರಾಜಕೀಯ ಒತ್ತಡಗಳಿವೆಯೇ ಎಂಬ ಪ್ರಶ್ನೆಯೂ ಮೂಡಿದೆ.
ಕೂಡಲೇ ಈ ಅಕ್ರಮ ಮರ ಕಡಿತಲೆ ಪ್ರಕ್ರಿಯೆಯನ್ನು ಸ್ಥಗಿತಗೊಳಿಸಿ, ನಿಯಮಾನುಸಾರ ಮರಗಳ ರಕ್ಷಣೆ ಮತ್ತು ಸ್ಥಳಾಂತರಕ್ಕೆ ಹೆದ್ದಾರಿ ಪ್ರಾಧಿಕಾರ ಕ್ರಮ ವಹಿಸಬೇಕು. ಜೊತೆಗೆ ಪರಿಸರ ನಿಯಮಗಳನ್ನು ಗಾಳಿಗೆ ತೂರಿ ಅವಸರದಲ್ಲಿ ಮರಗಳನ್ನು ತೆರವುಗೊಳಿಸುತ್ತಿರುವ ಅಧಿಕಾರಿಗಳ ವಿರುದ್ಧ ಅರಣ್ಯ ಇಲಾಖೆಯ ಉನ್ನತ ಮಟ್ಟದ ಅಧಿಕಾರಿಗಳು ಕಠಿಣ ಕಾನೂನು ಕ್ರಮ ಜರುಗಿಸಬೇಕೆಂದು ಪರಿಸರ ಪ್ರೇಮಿಗಳು ಬಲವಾಗಿ ಒತ್ತಾಯಿಸಿದ್ದಾರೆ.
Large trees face the axe for the widening of National Highway 173.
Leave a comment