Home namma chikmagalur chikamagalur ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದುಪಡಿಸಿ
chikamagalurHomeLatest Newsnamma chikmagalur

ಮಲೆನಾಡಿನ ಕರಾಳ ಅರಣ್ಯ ಕಾಯ್ದೆ ರದ್ದುಪಡಿಸಿ

Share
Share

ಚಿಕ್ಕಮಗಳೂರು: ಮಲೆನಾಡಿನ ಜನರ ಬದುಕಿಗೆ ತೊಂದರೆ ಉಂಟುಮಾಡುತ್ತಿರುವ ಕರಾಳ ಅರಣ್ಯ ಕಾಯ್ದೆಗಳನ್ನು ರದ್ದುಪಡಿಸುವುದರ ಜೊತೆಗೆ, ಹಲವು ವರ್ಷಗಳಿಂದ ಭೂಮಿ ಹಾಗೂ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿ ಕಾಯುತ್ತಿರುವ ರೈತರು, ಕಾರ್ಮಿಕರು, ದಲಿತರು ಹಾಗೂ ಆದಿವಾಸಿಗಳಿಗೆ ಭೂಮಿ ಮತ್ತು ವಸತಿ ಹಕ್ಕು ಖಾತ್ರಿ ಪಡಿಸಬೇಕು ಎಂದು ಕರ್ನಾಟಕ ಜನಶಕ್ತಿ ಸಂಘಟನೆ ರಾಜ್ಯ ಕಾರ್ಯದರ್ಶಿ ಕೆ.ಎಲ್. ಅಶೋಕ್ ಆಗ್ರಹಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕಸ್ತೂರಿ ರಂಗನ್ ವರದಿ ಜಾರಿಗೆ ಸಂಬಂಧಿಸಿದಂತೆ 7ನೇ ಕರಡು ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಸಲು 60 ದಿನಗಳ ಕಾಲಾವಕಾಶ ನೀಡಿದೆ. ಇದರಿಂದ ಮಲೆನಾಡಿನ ರೈತರಲ್ಲಿ ಆತಂಕ ಸೃಷ್ಟಿಯಾಗಿದ್ದು, ಮತ್ತೊಂದೆಡೆ ಬಹುತೇಕ ಕೃಷಿ ಕಾರ್ಮಿಕರು ಹಾಗೂ ಆದಿವಾಸಿಗಳಿಗೆ ಈ ಕುರಿತು ಸೂಕ್ತ ಮಾಹಿತಿ ಇಲ್ಲ ಎಂದು ಹೇಳಿದರು.

ಈ ಹಿಂದೆ ಕೇಂದ್ರ ಪರಿಸರ ಇಲಾಖೆ 5ನೇ ಹಾಗೂ 6ನೇ ಕರಡು ಅಧಿಸೂಚನೆಗಳನ್ನು ಹೊರಡಿಸಿದ ಸಂದರ್ಭದಲ್ಲಿಯೂ ಕರ್ನಾಟಕ ಸರ್ಕಾರಗಳು ವರದಿಯನ್ನು ತಿರಸ್ಕರಿಸಿದ್ದವು. ಮಲೆನಾಡಿನ ಜನರು ಸಹ ಆಕ್ಷೇಪಣೆ ಸಲ್ಲಿಸಿದ್ದರು. ಆದರೂ ಪದೇಪದೇ ಅಧಿಸೂಚನೆಗಳನ್ನು ಹೊರಡಿಸುವ ಮೂಲಕ ಜನರಲ್ಲಿ ಆತಂಕ ಮೂಡಿಸಲಾಗುತ್ತಿದೆ ಎಂದು ಆರೋಪಿಸಿದರು.

ಕಸ್ತೂರಿ ರಂಗನ್ ವರದಿ ವಿಚಾರವಾಗಿ ಕರ್ನಾಟಕ ಸರ್ಕಾರ ವಿಶೇಷ ಅಧಿವೇಶನ ಕರೆದು ಚರ್ಚಿಸಲು ನಿರ್ಧರಿಸಿರುವುದನ್ನು ಹಾಗೂ ಮುಖ್ಯಮಂತ್ರಿ ಮಲೆನಾಡಿನ ಜನರೊಂದಿಗೆ ಸಂವಾದ ನಡೆಸಲು ಜಿಲ್ಲೆಗೆ ಆಗಮಿಸುತ್ತಿರುವುದನ್ನು ಕರ್ನಾಟಕ ಜನಶಕ್ತಿ ಸ್ವಾಗತಿಸುತ್ತದೆ ಎಂದರು.

ಕೇಂದ್ರಕ್ಕೆ ನೀಡಿರುವ ಪ್ರಮಾಣಪತ್ರ ಹಿಂಪಡೆಯಲು ಒತ್ತಾಯ

ಕಸ್ತೂರಿ ರಂಗನ್ ವರದಿ ಜಾರಿ ಮಾಡುವುದಾಗಿ ಕೇಂದ್ರ ಸರ್ಕಾರ ರಾಷ್ಟ್ರೀಯ ಹಸಿರು ನ್ಯಾಯಮಂಡಳಿಗೆ ಪ್ರಮಾಣಪತ್ರ ಸಲ್ಲಿಸಿರುವುದಾಗಿ ಹೇಳಲಾಗುತ್ತಿದ್ದು, ರಾಜ್ಯ ಸರ್ಕಾರ ಕೂಡಲೇ ಈ ಪ್ರಮಾಣಪತ್ರವನ್ನು ಹಿಂಪಡೆಯುವಂತೆ ಕೇಂದ್ರವನ್ನು ಒತ್ತಾಯಿಸಬೇಕು ಎಂದು ಆಗ್ರಹಿಸಿದರು.

ವರದಿ ವ್ಯಾಪ್ತಿಯ ಸಂಸದರು ಕಳೆದ ಹಲವು ವರ್ಷಗಳಿಂದ ವರದಿ ಜಾರಿ ವಿಚಾರದಲ್ಲಿ ಭಾಷಣಗಳಿಗೆ ಸೀಮಿತರಾಗಿದ್ದಾರೆ. ಕೇಂದ್ರ ಸರ್ಕಾರದ ಮೇಲೆ ಪರಿಣಾಮಕಾರಿಯಾಗಿ ಒತ್ತಡ ಹೇರದಿರುವುದರಿಂದ ಮಲೆನಾಡಿನ ಜನರು ಇಂದು ಆತಂಕ ಎದುರಿಸುವಂತಾಗಿದೆ. ಸಂಸದರಿಗೆ ಅವರ ಜವಾಬ್ದಾರಿಯನ್ನು ನೆನಪಿಸಿ, ಕೇಂದ್ರ ಸರ್ಕಾರದೊಂದಿಗೆ ಮಾತುಕತೆ ನಡೆಸುವಂತೆ ರಾಜ್ಯ ಸರ್ಕಾರ ಮನವರಿಕೆ ಮಾಡಬೇಕು ಎಂದರು.

ಕೇಂದ್ರ ಸರ್ಕಾರದೊಂದಿಗೆ ನಡೆಯುವ ಮಾತುಕತೆಯಲ್ಲಿ ಮಲೆನಾಡಿನ ರೈತರು, ಕಾರ್ಮಿಕರು, ದಲಿತರು, ಆದಿವಾಸಿಗಳು, ಜನಪರ ಸಂಘಟನೆಗಳು ಹಾಗೂ ಪರಿಸರವಾದಿಗಳ ಮುಖಂಡರನ್ನು ಒಳಗೊಳ್ಳಬೇಕು ಎಂದು ಒತ್ತಾಯಿಸಿದರು.

ನಿವೇಶನ ರಹಿತರಿಗೆ ಹಕ್ಕುಪತ್ರ ನೀಡಲಿ

ಕಸ್ತೂರಿ ರಂಗನ್ ವರದಿಗಿಂತಲೂ ಜನವಿರೋಧಿಯಾಗಿರುವ ಅರಣ್ಯ ಕಾನೂನುಗಳು ಮಲೆನಾಡಿನ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿವೆ ಎಂದು ಅಶೋಕ್ ಹೇಳಿದರು. ಅರಣ್ಯ ಕಾಯ್ದೆಯ ಸೆಕ್ಷನ್ 4ರ ಮೂಲಕ ಬಡವರು ಹಾಗೂ ರೈತರ ಕೃಷಿ ಭೂಮಿ ಮತ್ತು ಮನೆಗಳನ್ನೂ ಮೀಸಲು ಅರಣ್ಯ ವ್ಯಾಪ್ತಿಗೆ ತರುವ ಆತಂಕವಿದೆ ಎಂದರು.

ಕಳೆದ 15 ವರ್ಷಗಳಿಂದ ನಿವೇಶನಕ್ಕಾಗಿ ಕಾಯುತ್ತಿರುವವರಿಗೆ ಒಂದಡಿ ಭೂಮಿಯನ್ನೂ ಮಂಜೂರು ಮಾಡಲಾಗಿಲ್ಲ. ಮಂಜೂರಾದ ಭೂಮಿಗೂ ಅರಣ್ಯ ಇಲಾಖೆಯಿಂದ ಅನುಮತಿ ದೊರೆಯದ ಪರಿಸ್ಥಿತಿ ಇದೆ. ಪ್ರತಿ ಗ್ರಾಮ ಪಂಚಾಯಿತಿಯಲ್ಲೂ ನಿವೇಶನ ರಹಿತರ ಸಂಖ್ಯೆ ನೂರಾರು ಪ್ರಮಾಣದಲ್ಲಿ ಹೆಚ್ಚುತ್ತಿದೆ. ಆದ್ದರಿಂದ ಸರ್ಕಾರ ಕೂಡಲೇ ನಿವೇಶನಕ್ಕೆ ಭೂಮಿ ಒದಗಿಸಿ, ಅರ್ಹರಿಗೆ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿದರು.

ಅರಣ್ಯ ಮತ್ತು ಕಂದಾಯ ಇಲಾಖೆ ನಡೆಸುತ್ತಿರುವ ಜಂಟಿ ಸರ್ವೆ ಬಗ್ಗೆ ಮಲೆನಾಡಿನ ಜನರಿಗೆ ಸಮರ್ಪಕ ಮಾಹಿತಿ ನೀಡಿಲ್ಲ. ಜಂಟಿ ಸರ್ವೆಗಿಂತ ಮೊದಲು ಅರ್ಹರಿಗೆ ಭೂಮಿ ಹಾಗೂ ನಿವೇಶನದ ಹಕ್ಕುಪತ್ರ ನೀಡಿ, ಮಲೆನಾಡಿನ ಬಡವರಿಗೆ ಬದುಕುವ ಹಾಗೂ ವಾಸಿಸುವ ಹಕ್ಕಿನ ಭರವಸೆ ನೀಡಬೇಕು ಎಂದರು.

ದಲಿತರಿಗೆ ಮಂಜೂರಾದ ಭೂಮಿಗೆ ಹಕ್ಕುಪತ್ರ ನೀಡಲಿ

ಈ ಹಿಂದೆ ಸರ್ಕಾರಗಳು ದಲಿತರಿಗೆ ಭೂಮಿ ಮಂಜೂರು ಮಾಡಿದ್ದು, ಕೆಲವರಿಗೆ ಹಕ್ಕುಪತ್ರ ದೊರೆತಿದೆ. ಆದರೆ ಇನ್ನೂ ಕೆಲವರಿಗೆ ಅರಣ್ಯ ಇಲಾಖೆಯ ಆಕ್ಷೇಪದಿಂದ ಹಕ್ಕುಪತ್ರ ನೀಡಲಾಗುತ್ತಿಲ್ಲ. ಮಂಜೂರಾದ ದಲಿತರ ಭೂಮಿಯನ್ನು ಸಂವಿಧಾನಬದ್ಧ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪರಿಗಣಿಸಿ, ಸೆಕ್ಷನ್ 4ರ ವ್ಯಾಪ್ತಿಯಿಂದ ಹೊರಗಿಟ್ಟು ಹಕ್ಕುಪತ್ರ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.

ಮಲೆನಾಡಿನಲ್ಲಿ ಪರಿಸರ ಮತ್ತು ಅರಣ್ಯ ಸಂರಕ್ಷಣೆ ಅಗತ್ಯ. ಆದರೆ ನೂರಾರು ಎಕರೆ ಪ್ರದೇಶವನ್ನು ಒತ್ತುವರಿ ಮಾಡಿಕೊಂಡಿರುವ ಬಲಾಢ್ಯರ ಒತ್ತುವರಿಯನ್ನು ತೆರವುಗೊಳಿಸಬೇಕು. ಹೊಸದಾಗಿ ನಡೆಯುತ್ತಿರುವ ಒತ್ತುವರಿಯನ್ನೂ ತಡೆಯಬೇಕು ಎಂದು ಹೇಳಿದರು.

ಸಂಜೀವ್ ಕುಮಾರ್ ನೇತೃತ್ವದ ಕಸ್ತೂರಿ ರಂಗನ್ ವರದಿ ಪರಾಮರ್ಶಾ ಸಮಿತಿಗೆ ಮಲೆನಾಡಿನ ವಾಸ್ತವ ಪರಿಸ್ಥಿತಿಯನ್ನು ಎಲ್ಲಾ ಸಂಸದರು ಮನವರಿಕೆ ಮಾಡಿಕೊಡಬೇಕು. ಒಂದು ವೇಳೆ ನ್ಯಾಯಾಲಯದ ನಿರ್ಧಾರದಿಂದ ವರದಿಯನ್ನು ಸಂಪೂರ್ಣವಾಗಿ ತಿರಸ್ಕರಿಸಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾದರೆ, ಜನವಸತಿ ಇಲ್ಲದ ಅಧಿಸೂಚಿತ ಪ್ರದೇಶಗಳಲ್ಲಿನ ಸಾವಿರಾರು ಎಕರೆ ಭೂಮಿಯನ್ನು ವರದಿ ವ್ಯಾಪ್ತಿಗೆ ನೀಡುವ ಕುರಿತು ಪರ್ಯಾಯವಾಗಿ ಚಿಂತಿಸಬೇಕು ಎಂದು ಕೆ.ಎಲ್. ಅಶೋಕ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಟಿ.ಎಲ್. ಗಣೇಶ್, ರಾಮು ಗೌಳಿ, ಸಂದೀಪ್ ಹಾಗೂ ಸುರೇಶ್ ಉಪಸ್ಥಿತರಿದ್ದರು.

Repeal the draconian forest laws of Malenadu.

Share

Leave a comment

Leave a Reply

Your email address will not be published. Required fields are marked *

Don't Miss

ಏಡ್ಸ್ ಭಾದಿತ ವ್ಯಕ್ತಿ ಎಲ್ಲರಂತೆ ಜೀವಿಸಬಹುದು

ಚಿಕ್ಕಮಗಳೂರು:  ಹೆಚ್‌ಐವಿ ಸೋಂಕಿತ ವ್ಯಕ್ತಿಗೆ ಸಾವು ಬಿಟ್ಟರೆ ಬೇರೆ ಯಾವುದೇ ಮಾರ್ಗವಿರ ಲಿಲ್ಲ. ಆದರೆ ಇದೀಗ ವೈದ್ಯಕೀಯ ಸಂಶೋಧನೆಗಳ ಫಲವಾಗಿ ಸೋಂಕಿನ ವ್ಯಕ್ತಿ, ಸಂಪೂರ್ಣ ಕಾಯಿಲೆ ಯಿಂದ ಮುಕ್ತರಾಗದಿದ್ದರೂ ಎಲ್ಲರಂತೆ ದೀರ್ಘಕಾಲ...

ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೆ ಆಗ್ರಹಿಸಿ ನೌಕರರ ಪ್ರತಿಭಟನೆ

ಚಿಕ್ಕಮಗಳೂರು:  ಐದು ದಿನಗಳ ಬ್ಯಾಂಕಿಂಗ್ ಪದ್ಧತಿ ಜಾರಿಗೊಳಿಸಬೇಕು ಎಂದು ಆಗ್ರಹಿಸಿ ನಗರದ ಕೆನರಾ ಬ್ಯಾಂಕ್ ಮುಖ್ಯ ಕಚೇರಿ ಆವರಣದಲ್ಲಿ ಶುಕ್ರವಾರ ಬ್ಯಾಂಕ್ ಕಾರ್ಮಿಕ ಸಂಘಗಳ ಸಂಯು ಕ್ತ ವೇದಿಕೆ ಜಿಲ್ಲಾ ಸಮಿತಿಯಿಂದ...

Related Articles

ಕಾಫಿ ಉದ್ಯಮ ಉಳಿಸಲು ಸಂಘಟಿತ ಹೋರಾಟ ಅಗತ್ಯ

ಚಿಕ್ಕಮಗಳೂರು: ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಹೆಚ್ಚಳ, ಮಾರುಕಟ್ಟೆ...

ಚಿಕ್ಕಮಗಳೂರು ಡಿಸಿಸಿ ಬ್ಯಾಂಕ್‌ಗೆ 6.87 ಕೋಟಿ ರೂ. ನಿವ್ವಳ ಲಾಭ

ಚಿಕ್ಕಮಗಳೂರು: ಚಿಕ್ಕಮಗಳೂರು ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‌ (ಡಿಸಿಸಿ ಬ್ಯಾಂಕ್) 2025-26ನೇ ಸಾಲಿನ ಮಾರ್ಚ್ ಅಂತ್ಯಕ್ಕೆ...

ಜನಾಭಿಪ್ರಾಯ ಆಲಿಸಲು ಸಿಎಂ ಆಗಮನ ಜನಪರ ಕಾಳಜಿಯ ಸಾಕ್ಷಿ

ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಕುರಿತು ಜನಸಾಮಾನ್ಯರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಲಿಸಲು...

ಅಕ್ರಮವಾಗಿ ಕಡವೆ ಬೇಟೆ: 70 ಕೆ.ಜಿ. ಮಾಂಸ ವಶ-ಮೂವರ ಬಂಧನ

ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನಾಗಿ ಕತ್ತರಿಸುತ್ತಿದ್ದ ವೇಳೆ...