ತರೀಕೆರೆ: ಲಕ್ಕವಳ್ಳಿ ವಲಯದ ಎಂ.ಸಿ.ಹಳ್ಳಿ ಶಾಖೆಯ ವ್ಯಾಪ್ತಿಯಲ್ಲಿ ಅಕ್ರಮವಾಗಿ ಕಡವೆಯನ್ನು ಬೇಟೆಯಾಡಿ ಮಾಂಸವನ್ನಾಗಿ ಕತ್ತರಿಸುತ್ತಿದ್ದ ವೇಳೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಇದೇ ವೇಳೆ ನಾಲ್ವರು ಆರೋಪಿಗಳು ಪರಾರಿಯಾಗಿದ್ದಾರೆ.
ಕಾರ್ಯಾಚರಣೆ ವೇಳೆ ಸುಮಾರು 70 ಕೆ.ಜಿ. ಕಡವೆ ಮಾಂಸ, ಕಡವೆಯ ತಲೆ ಮತ್ತು ಕಾಲುಗಳು, ಒಂದು ನಾಡಬಂದೂಕು, ದ್ವಿಚಕ್ರ ವಾಹನ, ಬೇಟೆಗೆ ಬಳಸಿದ್ದ ಕತ್ತಿ, ಚಾಕು, ಚೂರಿ ಹಾಗೂ ಹಣೆಬ್ಯಾಟರಿ ಸೇರಿದಂತೆ ವಿವಿಧ ಪರಿಕರಗಳನ್ನು ಅರಣ್ಯ ಇಲಾಖೆ ವಶಪಡಿಸಿಕೊಂಡಿದೆ.
ಬಂಧಿತರನ್ನು ಎಂ.ಸಿ.ಹಳ್ಳಿ ಕ್ವಾಟ್ರಸ್ ನಿವಾಸಿ ಕಿರಣ್ ಕುಮಾರ್ ಜಿ. (30), ಭದ್ರಾವತಿ ತಾಲೂಕಿನ ಸೀತಾರಾಮಪುರ ನಿವಾಸಿ ಮಣಿಕಂಠ ಡಿ. (29) ಹಾಗೂ ಎಂ.ಸಿ.ಹಳ್ಳಿ ಕ್ವಾಟ್ರಸ್ ನಿವಾಸಿ ಗೋವಿಂದರಾಜು (36) ಎಂದು ಗುರುತಿಸಲಾಗಿದೆ.
ಪ್ರಕರಣದಲ್ಲಿ ಎಂ.ಸಿ.ಹಳ್ಳಿ ಕ್ವಾಟ್ರಸ್ ನಿವಾಸಿಗಳಾದ ಪ್ರವೀಣ್ ಪಿ. (25), ಪ್ರಭು (29), ಚೇತು (25) ಮತ್ತು ವಿಜಯ (30) ಎಂಬವರು ಪರಾರಿಯಾಗಿದ್ದು, ಅವರ ಪತ್ತೆಗೆ ಅರಣ್ಯ ಇಲಾಖೆ ಸಿಬ್ಬಂದಿ ಶೋಧ ಕಾರ್ಯ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಅರಣ್ಯ ಮೊಕದ್ದಮೆ ದಾಖಲಿಸಿಕೊಂಡಿರುವ ಅಧಿಕಾರಿಗಳು ಬಂಧಿತ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಲಕ್ಕವಳ್ಳಿ ವಲಯ ಅರಣ್ಯಾಧಿಕಾರಿ ಇಂದು ಜಿ.ಎಸ್. ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಎಂ.ಸಿ.ಹಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಚನ್ನೇಗೌಡ ಜಿ.ಟಿ., ಲಕ್ಕವಳ್ಳಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ ಮನೋಜ್ ಕೆ.ಎಸ್., ಗಸ್ತು ಅರಣ್ಯ ಪಾಲಕರಾದ ಸಂತೋಷ್ ಎಂ.ಬಿ., ಬಾಲರಾಜ್, ಪುನೀತ್, ವಿಶ್ವನಾಥ್ ಹಾಗೂ ಅರಣ್ಯ ವೀಕ್ಷಕಿ ಶೋಭಾ ಸೇರಿದಂತೆ ಸಿಬ್ಬಂದಿ ಪಾಲ್ಗೊಂಡಿದ್ದರು.
ಭದ್ರಾವತಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ರವೀಂದ್ರ ಕುಮಾರ್, ಐಎಫ್‌ಎಸ್, ಹಾಗೂ ತರೀಕೆರೆ ಉಪ ವಿಭಾಗದ ಅರಣ್ಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅರಣ್ಯ ಇಲಾಖೆ ತಿಳಿಸಿದೆ.
Illegal Sambar Deer Hunting: 70 kg of Meat Seized; Three Arrested
Leave a comment