ಚಿಕ್ಕಮಗಳೂರು: ಕಸ್ತೂರಿ ರಂಗನ್ ವರದಿ ಕುರಿತು ಜನಸಾಮಾನ್ಯರೊಂದಿಗೆ ಚರ್ಚಿಸಿ, ಅವರ ಅಭಿಪ್ರಾಯ ಹಾಗೂ ಆಕ್ಷೇಪಣೆಗಳನ್ನು ಆಲಿಸಲು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು ಜಿಲ್ಲೆಗೆ ಆಗಮಿಸುತ್ತಿರುವುದು ಕಾಂಗ್ರೆಸ್ ಸರ್ಕಾರದ ಜನಪರ ಕಾಳಜಿಗೆ ಸಾಕ್ಷಿಯಾಗಿದೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಹೇಳಿದರು.
ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪಶ್ಚಿಮ ಘಟ್ಟಗಳಿಗೆ ಸಂಬಂಧಿಸಿದ ಕಸ್ತೂರಿ ರಂಗನ್ ಸಮಿತಿಯ ಶಿಫಾರಸುಗಳ ಕುರಿತು ಸ್ಥಳೀಯ ಜನರ ಅಭಿಪ್ರಾಯಗಳನ್ನು ತಿಳಿದುಕೊಳ್ಳುವ ಉದ್ದೇಶದಿಂದ ಮುಖ್ಯಮಂತ್ರಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದಾರೆ ಎಂದು ತಿಳಿಸಿದರು.
ಪಶ್ಚಿಮ ಘಟ್ಟ ಪ್ರದೇಶ ಪರಿಸರ ಹಾಗೂ ಜೀವ ವೈವಿಧ್ಯದ ದೃಷ್ಟಿಯಿಂದ ಅತ್ಯಂತ ಮಹತ್ವದ್ದಾಗಿದೆ. ಇದೇ ಪ್ರದೇಶದಲ್ಲಿ ಕೃಷಿ, ತೋಟಗಾರಿಕೆ ಸೇರಿದಂತೆ ವಿವಿಧ ಜೀವನೋಪಾಯ ಚಟುವಟಿಕೆಗಳನ್ನು ಅವಲಂಬಿಸಿಕೊಂಡು ಸಾವಿರಾರು ಕುಟುಂಬಗಳು ಬದುಕು ಕಟ್ಟಿಕೊಂಡಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ 138 ಗ್ರಾಮಗಳ 2,23,440.41 ಹೆಕ್ಟೇರ್ ಪ್ರದೇಶ ಕಸ್ತೂರಿ ರಂಗನ್ ವರದಿ ವ್ಯಾಪ್ತಿಗೆ ಒಳಪಡುವ ಸಾಧ್ಯತೆಯಿಂದ ಜನರಲ್ಲಿ ಆತಂಕ ಮೂಡಿದೆ ಎಂದು ಹೇಳಿದರು.
ಇದು ಕೇವಲ ಪರಿಸರದ ವಿಚಾರವಲ್ಲ, ಈ ಭಾಗದ ಜನರ ಬದುಕು ಮತ್ತು ಜೀವನೋಪಾಯಕ್ಕೆ ಸಂಬಂಧಿಸಿದ ಪ್ರಶ್ನೆಯಾಗಿದೆ. ಆದ್ದರಿಂದ ಕರ್ನಾಟಕದಿಂದ ಆಯ್ಕೆಯಾಗಿರುವ ಸಂಸದರು ಈ ವಿಚಾರವನ್ನು ಸಂಸತ್ತಿನಲ್ಲಿ ಪ್ರಸ್ತಾಪಿಸಿ, ಜಿಲ್ಲೆಯ ಜನರ ಆತಂಕವನ್ನು ಕೇಂದ್ರ ಸರ್ಕಾರದ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಕಸ್ತೂರಿ ರಂಗನ್ ಸಮಿತಿಯು ಪಶ್ಚಿಮ ಘಟ್ಟಗಳ ಪರಿಸರ ಸೂಕ್ಷ್ಮ ಪ್ರದೇಶಗಳನ್ನು ಗುರುತಿಸುವುದು ಸೇರಿದಂತೆ ಹಲವು ಶಿಫಾರಸುಗಳನ್ನು ಮಾಡಿದ್ದು, ಅದರ ಆಧಾರದ ಮೇಲೆ ಕೇಂದ್ರ ಸರ್ಕಾರ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಸಂಬಂಧಿಸಿದ ಕರಡು ಅಧಿಸೂಚನೆಗಳನ್ನು ಹೊರಡಿಸಿದೆ. ಈ ಹಿನ್ನೆಲೆಯಲ್ಲಿ ಸ್ಥಳೀಯ ಜನರ ಅಭಿಪ್ರಾಯ, ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಲಿಸುವುದು ಅತ್ಯಂತ ಅಗತ್ಯವಾಗಿದೆ ಎಂದರು.
ಮುಖ್ಯಮಂತ್ರಿಗಳ ಕಾರ್ಯಕ್ರಮಕ್ಕೆ ಪಕ್ಷಾತೀತವಾಗಿ ಜನಪರ ಕಾಳಜಿ ಹೊಂದಿರುವ ಎಲ್ಲರೂ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಜಿಲ್ಲಾ ಕಾಂಗ್ರೆಸ್ ವತಿಯಿಂದ ಎಲ್ಲರನ್ನೂ ಸ್ವಾಗತಿಸುವುದಾಗಿ ಮಂಜೇಗೌಡ ಹೇಳಿದರು.
ಇದೇ ವೇಳೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಜವಾಬ್ದಾರಿ ವಹಿಸಿಕೊಳ್ಳಲು ಸಹಕಾರ ನೀಡಿದ ಜಿಲ್ಲಾ ಉಸ್ತುವಾರಿ ಸಚಿವರು, ಐದು ಕ್ಷೇತ್ರಗಳ ಶಾಸಕರು, ಎಐಸಿಸಿ ಮತ್ತು ಕೆಪಿಸಿಸಿ ಪದಾಧಿಕಾರಿಗಳು, ಪಕ್ಷದ ಮುಖಂಡರು, ಬೂತ್ ಮಟ್ಟದ ಕಾಂಗ್ರೆಸ್ ಕಾರ್ಯಕರ್ತರು, ಸ್ಥಳೀಯ ಸಂಸ್ಥೆಗಳ ಚುನಾಯಿತ ಪ್ರತಿನಿಧಿಗಳು ಹಾಗೂ ಮುಂಚೂಣಿ ಘಟಕಗಳ ಪದಾಧಿಕಾರಿಗಳಿಗೆ ಕೃತಜ್ಞತೆ ಸಲ್ಲಿಸಿದರು.
ಪಕ್ಷ ನೀಡಿರುವ ಜವಾಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವುದಾಗಿ ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಹಿರೇಗೌಜ ಶಿವು, ರೂಬಿನ್ ಮೂಸಸ್, ಪ್ರವೀಣ್, ಪ್ರಕಾಶ್ ಹಾಗೂ ನೂರ್ ಅಹಮದ್ ಉಪಸ್ಥಿತರಿದ್ದರು.
The CM’s visit to listen to public opinion is a testament to his concern for the people.
Leave a comment