ಎನ್.ಆರ್. ಪುರ: ಕಾಡಿನಲ್ಲಿ ಮೇಯುತ್ತಿದ್ದ ಜಾನುವಾರನ್ನು ಹಿಡಿದು ತಂದು ಎಸ್ಟೇಟ್ ನ ಕೂಲಿಲೈನ್ ಬಳಿ ಬರ್ಬರವಾಗಿ ಕಡಿದು ಮಾಂಸ ಮಾರಾಟ ಮಾಡಲು ಯತ್ನಿಸುತ್ತಿದ್ದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿರುವ ಘಟನೆ ಬಾಳೆಹೊನ್ನೂರು ಸಮೀಪದ ಅಡಿಗೆಬೈಲು ಗ್ರಾಮದಲ್ಲಿ ಬೆಳಕಿಗೆ ಬಂದಿದೆ.
ಗ್ರಾಮದ ಗಂಟೆನಾಯ್ಕ ಎಸ್ಟೇಟ್ ನಲ್ಲಿ ಕೆಲ ವ್ಯಕ್ತಿಗಳು ಅಕ್ರಮವಾಗಿ ಜಾನುವಾರನ್ನು ವಧೆ ಮಾಡಿ ಮಾಂಸ ಮಾಡುತ್ತಿದ್ದಾರೆ ಎಂಬ ಖಚಿತ ಬಾತ್ಮೀದಾರರ ಮಾಹಿತಿ ಮೇರೆಗೆ ಬಾಳೆಹೊನ್ನೂರು ಠಾಣಾ ಪೊಲೀಸರು ಪಂಚರೊಂದಿಗೆ ಸ್ಥಳಕ್ಕೆ ದಿಢೀರ್ ದಾಳಿ ನಡೆಸಿದ್ದಾರೆ.
ದಾಳಿಯ ವೇಳೆ ಸ್ಥಳದಲ್ಲಿದ್ದ ಐವರ ಪೈಕಿ ಮೂವರನ್ನು ಪೊಲೀಸರು ಸುತ್ತುವರಿದು ಹಿಡಿಯುವಲ್ಲಿ ಯಶಸ್ವಿಯಾಗಿದ್ದು, ಉಳಿದ ಇಬ್ಬರು ಕತ್ತಲಿನಲ್ಲಿ ಕಾಲ್ಕಿತ್ತಿದ್ದಾರೆ. ಬಂಧಿತರನ್ನು ಅಸ್ಸಾಂ ಮೂಲದ ಕಾರ್ಮಿಕರಾದ ಹಶೀಮ್ ಅಲಿ (25), ಶಾಹದತ್ ಅಲಿ (19) ಹಾಗೂ ಆಸಾದುಲ್ ಹಕ್ (19) ಎಂದು ಗುರುತಿಸಲಾಗಿದ್ದು, ಪರಾರಿಯಾದ ಮುಬರಾಕ್ (27) ಮತ್ತು ಸಫಿಕುಲ್ ಇಸ್ಲಾಂ (32) ಗಾಗಿ ಶೋಧ ಮುಂದುವರಿದಿದೆ.
ಸ್ಥಳ ಪರಿಶೀಲನೆ ನಡೆಸಿದಾಗ ಪ್ಲಾಸ್ಟಿಕ್ ಬಕೆಟ್ಳಲ್ಲಿದ್ದ ಸುಮಾರು 20 ಕೆ.ಜಿ ಜಾನುವಾರಿನ ಮಾಂಸ, ಕೃತ್ಯಕ್ಕೆ ಬಳಸಲಾಗಿದ್ದ ಎರಡು ಕತ್ತಿಗಳು ಹಾಗೂ ಮರದ ತುಂಡುಗಳನ್ನು ಪೊಲೀಸರು ಮಹಜರ್ ನಡೆಸಿ ವಶಪಡಿಸಿಕೊಂಡಿದ್ದಾರೆ. ಅಕ್ರಮವಾಗಿ ಜಾನುವಾರು ವಧೆ ಮಾಡಿ ಮಾರಾಟ ಮಾಡಲು ಯತ್ನಿಸಿದ ಆರೋಪದಡಿ ಬಾಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Meat sale – Three arrested
Leave a comment