ಚಿಕ್ಕಮಗಳೂರು: ನಗರದ ಹಿಂದೂ ಮಹಾಗಣಪತಿ ಸೇವಾ ಸಂಘದ ವತಿಯಿಂದ 13ನೇ ವರ್ಷದ ಹಿಂದೂ ಮಹಾಗಣಪತಿ ಗಣೇಶೋತ್ಸವವನ್ನು ಸೆ.14ರಿಂದ 26ರವರೆಗೆ ವಿವಿಧ ಧಾರ್ಮಿಕ, ಸಾಂಸ್ಕೃತಿಕ ಹಾಗೂ ರಾಷ್ಟ್ರೀಯ ಚಿಂತನೆಯ ಕಾರ್ಯಕ್ರಮಗಳೊಂದಿಗೆ ಅದ್ದೂರಿಯಾಗಿ ಆಚರಿಸಲಾಗುವುದು ಎಂದು ಸಂಘದ ಅಧ್ಯಕ್ಷ ಸದಾಶಿವಪ್ಪ ತಿಳಿಸಿದರು.
ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 13 ವರ್ಷಗಳಿಂದ ಹಿಂದೂ ಸಮಾಜದ ಎಲ್ಲರನ್ನೂ ಒಳಗೊಂಡಂತೆ ಗಣೇಶೋತ್ಸವ ಆಚರಿಸಿಕೊಂಡು ಬರಲಾಗುತ್ತಿದೆ. ಗಣೇಶ ಮೂರ್ತಿ ಪ್ರತಿಷ್ಠಾಪನೆಯ ದಿನದಿಂದ ವಿಸರ್ಜನೆಯವರೆಗೆ ತ್ರಿಕಾಲ ಪೂಜೆ, ಗಣಪತಿ ಹೋಮ, ರಂಗಪೂಜೆ, ಮೂಡುಗಣಪತಿ ಸೇವೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಶ್ರದ್ಧಾಭಕ್ತಿಯಿಂದ ನಡೆಸಲಾಗುತ್ತಿದೆ ಎಂದರು.
ಗಣೇಶೋತ್ಸವದ ಅಂಗವಾಗಿ ಭಾರತೀಯ ಸಾಂಸ್ಕೃತಿಕ ಪರಂಪರೆಯನ್ನು ಪರಿಚಯಿಸುವ ಉದ್ದೇಶದಿಂದ ಹಿಂದೂಸ್ತಾನಿ ಹಾಗೂ ಕರ್ನಾಟಕ ಶಾಸ್ತ್ರೀಯ ಸಂಗೀತ, ಭರತನಾಟ್ಯ, ಯಕ್ಷಗಾನ, ಪೌರಾಣಿಕ ನಾಟಕ ಮತ್ತು ಭಕ್ತಿಸಂಗೀತ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ರಾಷ್ಟ್ರೀಯ ಪ್ರಜ್ಞೆ ಹಾಗೂ ಸಾಮಾಜಿಕ ಜಾಗೃತಿ ಮೂಡಿಸುವ ವೈಶಿಷ್ಟ್ಯಪೂರ್ಣ ಕಾರ್ಯಕ್ರಮಗಳಿಗೂ ಆದ್ಯತೆ ನೀಡಲಾಗಿದೆ ಎಂದು ಹೇಳಿದರು.
ಸೆ.14ರಂದು ಪ್ರತಿಷ್ಠಾಪನೆ
ಸೆ.14ರಂದು ಮಧ್ಯಾಹ್ನ 1 ಗಂಟೆಗೆ ಗಣಪತಿ ಪ್ರತಿಷ್ಠಾಪನೆ ನಡೆಯಲಿದೆ. ಪ್ರತಿನಿತ್ಯ ಬೆಳಿಗ್ಗೆ 8ರಿಂದ ಮಧ್ಯಾಹ್ನ 1ರವರೆಗೆ ಹಾಗೂ ಸಂಜೆ 5ರಿಂದ ರಾತ್ರಿ 9ರವರೆಗೆ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ. ಸಂಜೆ 5.30ರಿಂದ 6.30ರವರೆಗೆ ನಗರದ ವಿವಿಧ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಡೆಯಲಿದ್ದು, ರಾತ್ರಿ 7ರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ. ರಾತ್ರಿ 8.45ಕ್ಕೆ ಮಹಾಮಂಗಳಾರತಿ ನೆರವೇರಲಿದೆ.
ಗದಗ ಜಿಲ್ಲೆಯ ಹೊಳೆಆಳೂರಿನ ಅಂಧಮಕ್ಕಳ ಶಾಲೆಯ ಮಕ್ಕಳಿಂದ ಮಲ್ಲಕಂಬ ಹಾಗೂ ಯೋಗಾಸನ ಪ್ರದರ್ಶನ ವಿಶೇಷ ಆಕರ್ಷಣೆಯಾಗಲಿದೆ. ಸೆ.23ರಂದು ನಾಡಿನ ಖ್ಯಾತ ಸಾಮಾಜಿಕ-ಧಾರ್ಮಿಕ ಚಿಂತಕ ಶ್ರೀಕಾಂತ್ ಶೆಟ್ಟಿ ಧಾರ್ಮಿಕ ಉಪನ್ಯಾಸ ನೀಡಲಿದ್ದಾರೆ ಎಂದು ಸದಾಶಿವಪ್ಪ ತಿಳಿಸಿದರು.
ವಿಶೇಷ ಧಾರ್ಮಿಕ ಕಾರ್ಯಕ್ರಮಗಳು
ಸೆ.22ರಂದು ಸಂಜೆ 5.30ರಿಂದ ಸಾಮೂಹಿಕ ಮಂಗಳಗೌರಿ ವ್ರತ ಹಾಗೂ ಮನೆಮನೆಯಿಂದ ಮೋದಕ ಸಮರ್ಪಣೆ ನಡೆಯಲಿದೆ. ಸೆ.23ರಂದು ಬೆಳಿಗ್ಗೆ 10.30ರಿಂದ ಗಣಹೋಮ ಮತ್ತು ಮಧ್ಯಾಹ್ನ 12ರಿಂದ ಅನ್ನಸಂತರ್ಪಣೆ ಆಯೋಜಿಸಲಾಗಿದೆ. ಸೆ.24ರಂದು ರಾತ್ರಿ 8ಕ್ಕೆ ರಂಗಪೂಜೆ ಹಾಗೂ ಸೆ.26ರಂದು ಬೆಳಿಗ್ಗೆ 11ಕ್ಕೆ ಮೂಡುಗಣಪತಿ ಸೇವೆ ನಡೆಯಲಿದೆ.
ಸೆ.26ರಂದು ಭವ್ಯ ಶೋಭಾಯಾತ್ರೆ
ಸೆ.26ರಂದು ನಗರದ ಪ್ರಮುಖ ಬೀದಿಗಳಲ್ಲಿ ವಿವಿಧ ಪ್ರಖ್ಯಾತ ಕಲಾತಂಡಗಳೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಲಿದೆ. ಬಳಿಕ ಕೋಟೆಕೆರೆಯ ಕಲ್ಯಾಣಿಯಲ್ಲಿ ಗಣಪತಿ ವಿಸರ್ಜನೆ ನೆರವೇರಿಸಲಾಗುವುದು ಎಂದು ಅವರು ಹೇಳಿದರು.
ಗಣೇಶೋತ್ಸವದ ಅಂಗವಾಗಿ ನಗರದ ಹನುಮಂತಪ್ಪ ವೃತ್ತ ಸೇರಿದಂತೆ ವಿವಿಧೆಡೆ ದ್ವಾರಗಳು, ಅಲಂಕಾರ ಹಾಗೂ ವಿದ್ಯುತ್ ದೀಪಾಲಂಕಾರಗಳನ್ನು ನಿರ್ಮಿಸಲಾಗುತ್ತಿದೆ. ದ್ವಾರಗಳಿಗೆ ಹೆಸರು ಸೂಚಿಸುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಗಿದ್ದು, ಈಗಾಗಲೇ ನೂರಾರು ಹೆಸರುಗಳು ಬಂದಿವೆ. ಬಹುಜನರ ಬೇಡಿಕೆ ಹಾಗೂ ಸಮಾಜದ ಅಪೇಕ್ಷೆಯ ಆಧಾರದ ಮೇಲೆ ಹೆಸರನ್ನು ಅಂತಿಮಗೊಳಿಸಲಾಗುವುದು ಎಂದರು.
ರೀಲ್ಸ್, ಫೋಟೋಗ್ರಫಿ ಸ್ಪರ್ಧೆ
ಈ ಬಾರಿ ಸಾಮಾಜಿಕ ಜಾಲತಾಣಗಳ ಬಳಕೆಗೆ ಉತ್ತೇಜನ ನೀಡುವ ಉದ್ದೇಶದಿಂದ ರೀಲ್ಸ್ ಸ್ಪರ್ಧೆ ಹಾಗೂ ಫೋಟೋಗ್ರಫಿ ಸ್ಪರ್ಧೆ ಆಯೋಜಿಸಲಾಗಿದೆ. ಗಣೇಶೋತ್ಸವದ ಸಿದ್ಧತೆ, ಅಲಂಕಾರ ಹಾಗೂ ಮೊದಲ ಮೂರು ದಿನಗಳ ಕಾರ್ಯಕ್ರಮಗಳನ್ನು ಕೇಂದ್ರೀಕರಿಸಿ ರೀಲ್ಸ್ ತಯಾರಿಸಿ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಸ್ಪರ್ಧೆಗಳಲ್ಲಿ ಪಾಲ್ಗೊಳ್ಳುವಂತೆ ಸಂಘದ ಅಧ್ಯಕ್ಷರು ಮನವಿ ಮಾಡಿದರು.
ಗಣೇಶೋತ್ಸವದ ಎಲ್ಲ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಾರ್ವಜನಿಕರು ಕುಟುಂಬ ಸಮೇತರಾಗಿ ಆಗಮಿಸಿ ಯಶಸ್ವಿಗೊಳಿಸುವಂತೆ ಅವರು ಕೋರಿದರು.
ಸುದ್ದಿಗೋಷ್ಠಿಯಲ್ಲಿ ಸಂತೋಷ್ ಕೋಟ್ಯನ್, ಸುನೀಲ್, ನೂತನ್, ಕೃಷ್ಣ, ಪ್ರಸಾದ್, ನಯನ್, ಗೌತಮ್, ಕಾರ್ತಿಕ್, ಆಟೋ ಶಿವಣ್ಣ ಸೇರಿದಂತೆ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.
Preparations underway for the 13th Hindu Maha Ganapathi Ganeshotsava.
Leave a comment