ಶೃಂಗೇರಿ : ನದಿಯ ಸೌಂದರ್ಯವನ್ನು ಕ್ಯಾಮೆರಾದಲ್ಲಿ ಸೆರಹಿಡಿಯಲು ಹೋದ ಯುವಕನೊಬ್ಬ ಕಾಲು ಜಾರಿ ನದಿಗೆ ಬಿದ್ದು ಪ್ರಾಣ ಕಳೆದುಕೊಂಡಿರುವ ದಾರುಣ ಘಟನೆ ಶೃಂಗೇರಿ ತಾಲೂಕಿನ ಹಾಲಂದೂರು ಗ್ರಾಮದಲ್ಲಿ ನಡೆದಿದೆ. ಮೃತ ದುರ್ದೈವಿಯನ್ನು ಪ್ರತಿಕ್ (30) ಎಂದು ಗುರುತಿಸಲಾಗಿದೆ.
ಹಾಲಂದೂರು ಗ್ರಾಮದ ಬೆಣ್ಣೆ ಗುಡ್ಡದ ಬಳಿ ಹರಿಯುವ ತುಂಗಾ ನದಿಯ ದಡದಲ್ಲಿ ಫೋಟೋ ತೆಗೆಯಲು ಮುಂದಾದಾಗ ಈ ದುರಂತ ಸಂಭವಿಸಿದೆ ಎನ್ನಲಾಗಿದೆ. ನದಿಯ ಸೆಳೆತ ಹಾಗೂ ಆಳದ ಅರಿವಿಲ್ಲದ ಕಾಲುಜಾರಿ ಬಿದ್ದ ಪರಿಣಾಮ ಪ್ರತಿಕ್ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿದ್ದರು.
ಘಟನಾ ಸ್ಥಳಕ್ಕೆ ಆಗಮಿಸಿದ ಖ್ಯಾತ ಮುಳುಗು ತಜ್ಞ ಈಶ್ವರ್ ಮಲ್ಪೆ ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿಗಳು ಜಂಟಿ ಕಾರ್ಯಾಚರಣೆ ನಡೆಸಿ, ನದಿಯ ಆಳದಲ್ಲಿದ್ದ ಮೃತದೇಹವನ್ನು ಹೊರತೆಗೆದಿದ್ದಾರೆ.
ಸ್ಥಳದಲ್ಲಿ ಕುಟುಂಬಸ್ಥರ ಹಾಗೂ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದ್ದು, ಈ ಸಂಬಂಧ ಶೃಂಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
A young man died after slipping and falling in the Tunga River.
Leave a comment