ಚಿಕ್ಕಮಗಳೂರು: ಕನ್ನಡ ಸಾಹಿತ್ಯ ಪರಿಷತ್ತಿನ ಮೂಲ ಆಶಯಗಳನ್ನು ಪುನರುಜ್ಜೀವನಗೊಳಿಸಿ, ಸಂಸ್ಥೆಯ ಹಿಂದಿನ ಗೌರವ, ಘನತೆ ಮತ್ತು ಸ್ವಾಯತ್ತತೆಯನ್ನು ಮರುಸ್ಥಾಪಿಸುವ ಉದ್ದೇಶದಿಂದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುತ್ತಿರುವುದಾಗಿ ಸಾಹಿತಿ, ಪತ್ರಕರ್ತ ಹಾಗೂ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ತಿಳಿಸಿದರು.
ಚಿಕ್ಕಮಗಳೂರಿನಲ್ಲಿ ಶುಕ್ರವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ವಿವಿಧ ಜಿಲ್ಲೆಗಳಿಗೆ ಭೇಟಿ ನೀಡಿ ಕಸಾಪ ಸದಸ್ಯರು, ಸಾಹಿತಿಗಳು, ಕನ್ನಡಾಭಿಮಾನಿಗಳು ಹಾಗೂ ಕನ್ನಡಪರ ಸಂಘಟನೆಗಳ ಪ್ರತಿನಿಧಿಗಳನ್ನು ಭೇಟಿಯಾಗಿ ತಮ್ಮ ಆಶಯಗಳನ್ನು ಹಂಚಿಕೊಳ್ಳುತ್ತಿರುವುದಾಗಿ ಹೇಳಿದರು. ಸಾಹಿತ್ಯ, ಸಂಸ್ಕೃತಿ ಹಾಗೂ ಜಾನಪದ ಪರಂಪರೆಯಲ್ಲಿ ವಿಶಿಷ್ಟ ಸ್ಥಾನ ಹೊಂದಿರುವ ಚಿಕ್ಕಮಗಳೂರಿನಿಂದ ಬೆಂಬಲ ಕೋರಿ ಬಂದಿರುವುದು ಸಂತಸ ತಂದಿದೆ ಎಂದರು.
ಕನ್ನಡ ಸಾಹಿತ್ಯ ಪರಿಷತ್ತು ಕೇವಲ ಒಂದು ಸಂಘಟನೆಯಲ್ಲ. ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯ ರಕ್ಷಣೆ ಹಾಗೂ ಬೆಳವಣಿಗೆಗಾಗಿ ಶತಮಾನಕ್ಕೂ ಹೆಚ್ಚು ಕಾಲ ಸೇವೆ ಸಲ್ಲಿಸಿರುವ ಕನ್ನಡಿಗರ ಹೆಮ್ಮೆಯ ಸಂಸ್ಥೆಯಾಗಿದೆ. ಆದರೆ ಇತ್ತೀಚಿನ ವರ್ಷಗಳಲ್ಲಿ ಪರಿಷತ್ತಿನ ಮೂಲ ಉದ್ದೇಶಗಳಿಗೆ ಧಕ್ಕೆಯಾಗುವ ಬೆಳವಣಿಗೆಗಳು ನಡೆದಿದ್ದು, ಸಾಹಿತ್ಯಿಕ ಚಟುವಟಿಕೆಗಳು ಕುಂಠಿತಗೊಂಡಿರುವ ಬಗ್ಗೆ ಆತಂಕವಿದೆ ಎಂದು ವೆಂಕಟರಾಮಯ್ಯ ಹೇಳಿದರು.
ಪರಿಷತ್ತಿನ ಸಭಾಂಗಣಗಳು ಹಾಗೂ ಮೂಲಸೌಕರ್ಯಗಳು ಸಾಹಿತಿಗಳು, ಬರಹಗಾರರು, ಸಂಘ-ಸಂಸ್ಥೆಗಳು ಮತ್ತು ಸಾಮಾನ್ಯ ಕನ್ನಡಾಭಿಮಾನಿಗಳಿಗೆ ಮುಕ್ತವಾಗಿ ಲಭ್ಯವಾಗಬೇಕು. ಸಭಾಂಗಣಗಳ ಬಾಡಿಗೆ ಸೇರಿದಂತೆ ವಿವಿಧ ವಿಚಾರಗಳಲ್ಲಿ ಸಾಹಿತ್ಯಾಸಕ್ತರಿಗೆ ಹೊರೆಯಾಗದ ವ್ಯವಸ್ಥೆ ಕಲ್ಪಿಸಬೇಕು. ಕನ್ನಡದ ಚಟುವಟಿಕೆಗಳಿಗೆ ಪರಿಷತ್ತಿನ ಬಾಗಿಲು ಸದಾ ತೆರೆದಿರಬೇಕು ಎಂದು ಅವರು ಅಭಿಪ್ರಾಯಪಟ್ಟರು.
ಪರಿಷತ್ತಿನ ಕಟ್ಟಡ ಮತ್ತು ಆವರಣದಲ್ಲಿ ಭದ್ರತೆ ಹಾಗೂ ಆಡಳಿತದಲ್ಲಿ ಪಾರದರ್ಶಕತೆಗಾಗಿ ಅಗತ್ಯವಿರುವ ಕಡೆ ಸಿಸಿ ಕ್ಯಾಮೆರಾಗಳಂತಹ ವ್ಯವಸ್ಥೆಗಳನ್ನು ಅಳವಡಿಸಬೇಕು. ಪರಿಷತ್ತಿಗೆ ಆಗಮಿಸುವ ಪ್ರತಿಯೊಬ್ಬ ಸಾಹಿತ್ಯಿಕ ಮತ್ತು ಕನ್ನಡಾಭಿಮಾನಿಗೂ ಮುಕ್ತ, ಸ್ನೇಹಪರ ವಾತಾವರಣ ದೊರೆಯಬೇಕು. ಯಾವುದೇ ವ್ಯಕ್ತಿ ಅಥವಾ ಗುಂಪಿನ ಹಿತಾಸಕ್ತಿಗಿಂತ ಕನ್ನಡ ಮತ್ತು ಸಾಹಿತ್ಯದ ಹಿತವೇ ಮೇಲುಗೈ ಸಾಧಿಸಬೇಕು ಎಂದರು.
ನಿರಂತರ ಸಾಹಿತ್ಯಿಕ ಕಾರ್ಯಕ್ರಮಗಳು, ವಿಚಾರ ಸಂಕಿರಣಗಳು, ಚರ್ಚೆಗಳು ಹಾಗೂ ಕನ್ನಡಪರ ಚಟುವಟಿಕೆಗಳನ್ನು ಹಮ್ಮಿಕೊಳ್ಳುವ ಮೂಲಕ ಪರಿಷತ್ತಿಗೆ ಹೊಸ ಚೈತನ್ಯ ನೀಡುವುದು ತಮ್ಮ ಪ್ರಮುಖ ಉದ್ದೇಶವಾಗಿದೆ. ಹಿರಿಯ ಸಾಹಿತಿಗಳು, ಯುವ ಬರಹಗಾರರು, ಜಾನಪದ ಕಲಾವಿದರು ಹಾಗೂ ಸಾಹಿತ್ಯಾಸಕ್ತರನ್ನು ಒಂದೇ ವೇದಿಕೆಯಲ್ಲಿ ಸೇರಿಸುವ ಪ್ರಯತ್ನ ಮಾಡಲಾಗುವುದು ಎಂದು ತಿಳಿಸಿದರು.
“ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಹಿಂದೆ ಯಾವುದೇ ವೈಯಕ್ತಿಕ ಸ್ವಾರ್ಥವಿಲ್ಲ. ಕನ್ನಡ ಸಾಹಿತ್ಯ ಪರಿಷತ್ತನ್ನು ಮತ್ತಷ್ಟು ಬಲಿಷ್ಠಗೊಳಿಸಿ, ಅದರ ಗೌರವವನ್ನು ಮರುಸ್ಥಾಪಿಸುವ ಉದ್ದೇಶದಿಂದಲೇ ಈ ಜವಾಬ್ದಾರಿಯನ್ನು ವಹಿಸಿಕೊಳ್ಳಲು ಮುಂದಾಗಿದ್ದೇನೆ” ಎಂದು ಅವರು ಹೇಳಿದರು.
ರಾಜ್ಯದ ಎಲ್ಲ ಭಾಗಗಳಿಗೂ ಭೇಟಿ ನೀಡಿ ಕಸಾಪ ಸದಸ್ಯರನ್ನು ಸಂಪರ್ಕಿಸುವುದಾಗಿ ತಿಳಿಸಿದ ಅವರು, ಉತ್ತರ ಕರ್ನಾಟಕ ಮತ್ತು ಕಲ್ಯಾಣ ಕರ್ನಾಟಕ ಸೇರಿದಂತೆ ಯಾವುದೇ ಜಿಲ್ಲೆಯನ್ನು ಕಡೆಗಣಿಸದೆ ಸಮಾನ ಪ್ರಾತಿನಿಧ್ಯ ಹಾಗೂ ಅವಕಾಶ ಕಲ್ಪಿಸುವುದು ತಮ್ಮ ಆಶಯವಾಗಿದೆ ಎಂದರು.
ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಬೇಡ
ಕನ್ನಡ ಸಾಹಿತ್ಯ ಪರಿಷತ್ತಿನಂತಹ ಸ್ವಾಯತ್ತ ಸಾಹಿತ್ಯ ಸಂಸ್ಥೆಯ ಕಾರ್ಯಚಟುವಟಿಕೆಗಳಲ್ಲಿ ಯಾವುದೇ ಕಾರಣಕ್ಕೂ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ನೀಡಬಾರದು ಎಂದು ಜಾಣಗೆರೆ ವೆಂಕಟರಾಮಯ್ಯ ಮನವಿ ಮಾಡಿದರು.
ಪರಿಷತ್ತು ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ಪ್ರತಿನಿಧಿಸುವ ಸಂಸ್ಥೆಯಾಗಿದ್ದು, ಅದರ ಪಾವಿತ್ರ್ಯ ಹಾಗೂ ಸ್ವಾಯತ್ತತೆಯನ್ನು ಕಾಪಾಡುವುದು ಪ್ರತಿಯೊಬ್ಬ ಕನ್ನಡಿಗನ ಜವಾಬ್ದಾರಿಯಾಗಿದೆ. ಯಾವುದೇ ರಾಜಕೀಯ ಪಕ್ಷ ಅಥವಾ ರಾಜಕೀಯ ನಾಯಕರ ಹಿತಾಸಕ್ತಿಗಳು ಪರಿಷತ್ತಿನ ಕಾರ್ಯಚಟುವಟಿಕೆಗಳ ಮೇಲೆ ಪ್ರಭಾವ ಬೀರುವಂತಾಗಬಾರದು ಎಂದರು.
ಕಸಾಪ ಚುನಾವಣೆಯನ್ನು ರಾಜಕೀಯ ಮೇಲಾಟವಾಗಿ ನೋಡದೆ ಕನ್ನಡದ ಹಿತಕ್ಕಾಗಿ ನಡೆಯುವ ಪ್ರಕ್ರಿಯೆಯಾಗಿ ಪರಿಗಣಿಸಬೇಕು. ಸದಸ್ಯರು ಯಾವುದೇ ಒತ್ತಡ ಅಥವಾ ರಾಜಕೀಯ ಪ್ರಭಾವಕ್ಕೆ ಒಳಗಾಗದೆ, ಕನ್ನಡ ಮತ್ತು ಸಾಹಿತ್ಯದ ಹಿತದೃಷ್ಟಿಯಿಂದ ತಮ್ಮ ಪ್ರತಿನಿಧಿಯನ್ನು ಆಯ್ಕೆ ಮಾಡಬೇಕು ಎಂದು ಅವರು ಮನವಿ ಮಾಡಿದರು.
“ಪರಿಷತ್ತು ಶುದ್ಧವಾಗಿ, ಸ್ವತಂತ್ರವಾಗಿ ಹಾಗೂ ತನ್ನ ಮೂಲ ಆಶಯದಂತೆ ಕಾರ್ಯನಿರ್ವಹಿಸಬೇಕು. ರಾಜಕೀಯ ಹಸ್ತಕ್ಷೇಪದಿಂದ ಅದರ ಪಾವಿತ್ರ್ಯ ಹಾಳಾಗಬಾರದು. ಕನ್ನಡದ ಸೇವೆಯೇ ಪರಿಷತ್ತಿನ ಏಕೈಕ ಗುರಿಯಾಗಬೇಕು” ಎಂದು ಅವರು ಹೇಳಿದರು.
ಹೋರಾಟದ ಹಿನ್ನೆಲೆಯಿಂದ ಅಭ್ಯರ್ಥಿ: ರಮೇಗೌಡ
ಕನ್ನಡ ಸಾಹಿತ್ಯ ಪರಿಷತ್ತಿನ 111 ವರ್ಷಗಳ ಇತಿಹಾಸದ ಘನತೆ, ಗೌರವ, ಪಾವಿತ್ರ್ಯ ಹಾಗೂ ಸಾಹಿತ್ಯಿಕ ಚಟುವಟಿಕೆಗಳನ್ನು ಪುನರುಜ್ಜೀವನಗೊಳಿಸುವ ಉದ್ದೇಶದಿಂದ ಈ ಬಾರಿಯ ಚುನಾವಣೆಯಲ್ಲಿ ಸಾಹಿತಿ, ಪತ್ರಕರ್ತ ಹಾಗೂ ಹೋರಾಟಗಾರ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಕಣಕ್ಕಿಳಿಸಲಾಗಿದೆ ಎಂದು ಬೆಂಗಳೂರಿನ ಕಸಾಪ ಮಾಜಿ ಗೌರವ ಕಾರ್ಯದರ್ಶಿ ಸಿ.ಕೆ. ರಮೇಗೌಡ ಹೇಳಿದರು.
ಕಳೆದ ಒಂದೂವರೆ ವರ್ಷದಿಂದ ಕನ್ನಡ ಸಾಹಿತ್ಯ ಪರಿಷತ್ತಿನಲ್ಲಿ ನಡೆದಿರುವ ಅಕ್ರಮ, ಭ್ರಷ್ಟಾಚಾರ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ವಿರೋಧಿಸಿ ಸಮಾನ ಮನಸ್ಕರ ವೇದಿಕೆಯ ನೇತೃತ್ವದಲ್ಲಿ ಹೋರಾಟ ನಡೆಸಲಾಗಿದೆ. ಈ ಹೋರಾಟದ ಹಿನ್ನೆಲೆಯಲ್ಲಿ ಸರ್ಕಾರ ತನಿಖೆ ನಡೆಸಿದ್ದು, ಹಲವು ಆರೋಪಗಳು ಸಾಬೀತಾಗಿವೆ ಎಂದು ಅವರು ಹೇಳಿದರು.
ಪರಿಷತ್ತು ಸ್ಥಾಪನೆಯಾದ ಮೂಲ ಉದ್ದೇಶದಿಂದ ದೂರ ಸರಿದಿದ್ದು, ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕನ್ನಡಪರ ಚಟುವಟಿಕೆಗಳು ಸ್ಥಗಿತಗೊಂಡಿದ್ದವು. ಸಾಮಾನ್ಯ ಸದಸ್ಯರು ಹಾಗೂ ಕನ್ನಡಾಭಿಮಾನಿಗಳು ಪರಿಷತ್ತಿನೊಂದಿಗೆ ಮುಕ್ತವಾಗಿ ಬೆರೆಯಲು ಸಾಧ್ಯವಾಗದಂತಹ ವಾತಾವರಣ ನಿರ್ಮಾಣವಾಗಿತ್ತು ಎಂದು ರಮೇಗೌಡ ಆರೋಪಿಸಿದರು.
ಬೆಂಗಳೂರಿನ ಕಸಾಪ ಕೇಂದ್ರ ಕಚೇರಿಯ ಆವರಣದ ಗೋಡೆಯನ್ನು ಎತ್ತರಿಸಿರುವುದು, ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂಬ ಪಂಪನ ಘೋಷವಾಕ್ಯವಿದ್ದ ಫಲಕವನ್ನು ತೆರವುಗೊಳಿಸಿರುವುದು, ಕಸಾಪ ಸ್ಥಾಪನೆಗೆ ಕಾರಣರಾದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರತಿಮೆಯನ್ನು ಸೂಕ್ತ ಸ್ಥಳದಿಂದ ತೆಗೆದುಹಾಕಿರುವುದು ಹಾಗೂ ಕುವೆಂಪು ಸಭಾಂಗಣದ ಸ್ವರೂಪ ಬದಲಿಸಿರುವುದು ಸೇರಿದಂತೆ ಹಲವು ಕ್ರಮಗಳು ಪರಿಷತ್ತಿನ ಪರಂಪರೆಗೆ ಧಕ್ಕೆ ತಂದಿವೆ ಎಂದು ದೂರಿದರು.
ಕಸಾಪ ಸದಸ್ಯತ್ವ ಶುಲ್ಕವನ್ನು ₹210ರಿಂದ ₹400ಕ್ಕೆ ಹೆಚ್ಚಿಸುವ ಮೂಲಕ ಸಾಮಾನ್ಯ ಕನ್ನಡಿಗರನ್ನು ಪರಿಷತ್ತಿನಿಂದ ದೂರ ಮಾಡುವ ಪ್ರಯತ್ನ ನಡೆದಿದೆ ಎಂಬ ಆರೋಪವೂ ಕೇಳಿಬಂದಿದೆ. ಸಮಾನ ಮನಸ್ಕರ ವೇದಿಕೆ ಈ ಬೆಳವಣಿಗೆಗಳನ್ನು ಪ್ರಶ್ನಿಸಿ ಹೋರಾಟ ನಡೆಸಿದ್ದು, ಸರ್ಕಾರದ ಗಮನ ಸೆಳೆದ ಪರಿಣಾಮ ತನಿಖೆ ನಡೆದಿದೆ. ತನಿಖೆಯಲ್ಲಿ ಸುಮಾರು 16 ಆರೋಪಗಳು ಸಾಬೀತಾಗಿದ್ದು, ಕೋಟ್ಯಂತರ ರೂಪಾಯಿ ಹಣದ ದುರುಪಯೋಗದ ವಿಚಾರವೂ ಬೆಳಕಿಗೆ ಬಂದಿದೆ ಎಂದು ರಮೇಗೌಡ ಹೇಳಿದರು.
ಕಸಾಪದ ಪ್ರಸ್ತುತ ಅಧ್ಯಕ್ಷರ ಅವಧಿ ನವೆಂಬರ್ 26, 2026ರಂದು ಮುಕ್ತಾಯಗೊಳ್ಳಲಿದ್ದು, ಮುಂದಿನ ಅವಧಿಯಲ್ಲಿ ಇಂತಹ ಬೆಳವಣಿಗೆಗಳು ಮರುಕಳಿಸಬಾರದು ಎಂಬ ಉದ್ದೇಶದಿಂದ ಚುನಾವಣೆಗೆ ಸ್ಪರ್ಧಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
“ನಾವು ಅಧಿಕಾರಕ್ಕಾಗಿ ಚುನಾವಣೆಗೆ ನಿಲ್ಲುತ್ತಿಲ್ಲ. ಕನ್ನಡ ಸಾಹಿತ್ಯ ಪರಿಷತ್ತನ್ನು ಭ್ರಷ್ಟಾಚಾರ, ಸರ್ವಾಧಿಕಾರಿ ಧೋರಣೆ ಹಾಗೂ ರಾಜಕೀಯ ಹಸ್ತಕ್ಷೇಪದಿಂದ ಮುಕ್ತಗೊಳಿಸಿ, ಸಾಹಿತಿಗಳು, ಬರಹಗಾರರು ಹಾಗೂ ಸಾಮಾನ್ಯ ಕನ್ನಡಿಗರಿಗೆ ಮುಕ್ತವಾಗಿರುವ ಪರಿಷತ್ತನ್ನಾಗಿ ರೂಪಿಸುವುದು ನಮ್ಮ ಉದ್ದೇಶ” ಎಂದು ರಮೇಗೌಡ ಹೇಳಿದರು.
ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ಸಮಾನ ಮನಸ್ಕರ ಸಭೆಯಲ್ಲಿ ಪ್ರೊ. ಜಯಪ್ರಕಾಶ್ ಗೌಡ, ಎಚ್.ಜಿ. ಸಿದ್ದರಾಮಯ್ಯ, ವಸುಂಧರಾ ಭೂಪತಿ, ನಿರ್ಮಲಾ ಸೇರಿದಂತೆ ಹಲವು ಸಾಹಿತಿಗಳು, ಲೇಖಕರು ಹಾಗೂ ಹೋರಾಟಗಾರರು ಭಾಗವಹಿಸಿದ್ದರು. ಅಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯ ಆಯ್ಕೆ ಕುರಿತು ಚರ್ಚೆ ನಡೆದಾಗ ಎಲ್ಲರೂ ಒಮ್ಮತದಿಂದ ಜಾಣಗೆರೆ ವೆಂಕಟರಾಮಯ್ಯ ಅವರ ಹೆಸರನ್ನು ಸೂಚಿಸಿದರು ಎಂದು ಅವರು ತಿಳಿಸಿದರು.
ಸಾಹಿತಿ, ಪತ್ರಕರ್ತ, ಹೋರಾಟಗಾರ
ಜಾಣಗೆರೆ ವೆಂಕಟರಾಮಯ್ಯ ಅವರು ಕನ್ನಡದ ಪ್ರಮುಖ ಕಥೆಗಾರರು, ಕಾದಂಬರಿಕಾರರು, ಪತ್ರಕರ್ತರು ಹಾಗೂ ಹೋರಾಟಗಾರರಾಗಿದ್ದು, ಸರಳ ಮತ್ತು ಪ್ರಾಮಾಣಿಕ ವ್ಯಕ್ತಿತ್ವ ಹೊಂದಿದ್ದಾರೆ. ಅವರ 50 ಕಥೆಗಳ ಸಂಕಲನ ಇತ್ತೀಚೆಗೆ ಪ್ರಕಟವಾಗಿದ್ದು, ಬೆಂಗಳೂರು ವಿಶ್ವವಿದ್ಯಾಲಯದ ಪಠ್ಯಕ್ರಮದಲ್ಲೂ ಅವರ ಕಥಾಸಂಕಲನ ಸ್ಥಾನ ಪಡೆದಿತ್ತು ಎಂದು ರಮೇಗೌಡ ಹೇಳಿದರು.
ಕಂಪೋಸಿಂಗ್ ವಿಭಾಗದಲ್ಲಿ ಅಕ್ಷರಗಳ ಮೊಳೆ ಜೋಡಿಸುವ ಕೆಲಸದಿಂದ ವೃತ್ತಿಜೀವನ ಆರಂಭಿಸಿದ ಅವರು, ಸ್ವಂತ ಮುದ್ರಣಾಲಯ ನಡೆಸುವುದರ ಜೊತೆಗೆ ವಿವಿಧ ಪತ್ರಿಕೆಗಳಲ್ಲಿ ಸಂಪಾದಕರಾಗಿ ಹಾಗೂ ಉಪಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಲಂಕೇಶ್ ಪತ್ರಿಕೆಯ ಉಪಸಂಪಾದಕರಾಗಿ ಸೇವೆ ಸಲ್ಲಿಸಿರುವ ಅವರು, ಅಭಿಮಾನಿ, ಮಾರ್ತಾಂಡ, ಅರಂಗಿಣಿ ಸೇರಿದಂತೆ ಹಲವು ಪತ್ರಿಕೆಗಳ ಸಂಪಾದಕೀಯ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ರೈತ ಹೋರಾಟಗಾರ ನಂಜುಂಡಸ್ವಾಮಿ ಅವರ ‘ನಮ್ಮ ನಾಡು’ ಪತ್ರಿಕೆಯ ಸಹಸಂಪಾದಕರಾಗಿಯೂ ಕಾರ್ಯನಿರ್ವಹಿಸಿದ್ದಾರೆ ಎಂದು ಹೇಳಿದರು.
ಕನ್ನಡ ನಾಡು, ನುಡಿ, ಜಲ, ಗಡಿ ಹಾಗೂ ಭಾಷೆಗೆ ಅನ್ಯಾಯವಾದ ಸಂದರ್ಭಗಳಲ್ಲಿ ಧ್ವನಿ ಎತ್ತಿರುವ ಅವರು, ವಿವಿಧ ಜನಪರ ಹೋರಾಟಗಳಲ್ಲಿ ಭಾಗವಹಿಸಿ ಜೈಲುವಾಸವನ್ನೂ ಅನುಭವಿಸಿದ್ದಾರೆ. ತಮ್ಮ ನೇರ ಹಾಗೂ ನಿರ್ಭೀತ ಬರಹಗಳಿಂದಾಗಿ ಹಲವು ಕಾನೂನು ಹೋರಾಟಗಳನ್ನು ಎದುರಿಸಿದ್ದಾರೆ ಎಂದು ವಿವರಿಸಿದರು.
ಸುಮಾರು ಹತ್ತು ಕಾದಂಬರಿಗಳನ್ನು ರಚಿಸಿರುವ ಜಾಣಗೆರೆ ವೆಂಕಟರಾಮಯ್ಯ ಅವರು ವ್ಯಕ್ತಿಚಿತ್ರ, ನುಡಿಚಿತ್ರ ಸೇರಿದಂತೆ ಹಲವು ಕೃತಿಗಳನ್ನು ಪ್ರಕಟಿಸಿದ್ದಾರೆ. ಕರ್ನಾಟಕದ ಪ್ರಮುಖ ವ್ಯಕ್ತಿಗಳ ಜೀವನ ಮತ್ತು ಸಾಧನೆಗಳನ್ನು ಪರಿಚಯಿಸುವ ನೂರಾರು ವ್ಯಕ್ತಿಚಿತ್ರಗಳ ಮೂಲಕವೂ ಸಾಹಿತ್ಯ ಕ್ಷೇತ್ರಕ್ಕೆ ಕೊಡುಗೆ ನೀಡಿದ್ದಾರೆ ಎಂದು ರಮೇಗೌಡ ಹೇಳಿದರು.
ಪರಿಷತ್ತಿನ ಕರಾಳ ಛಾಯೆ ದೂರವಾಗಲಿ: ಆರ್.ಜೆ. ನಾಗರಾಜ್
ಕನ್ನಡ ಸಾಹಿತ್ಯ ಪರಿಷತ್ತಿನ ಮೇಲೆ ಕಳೆದ ಕೆಲವು ವರ್ಷಗಳಿಂದ ಆವರಿಸಿದ್ದ ಕರಾಳ ಛಾಯೆಯನ್ನು ದೂರ ಮಾಡಿ, ಸ್ಥಗಿತಗೊಂಡಿದ್ದ ಸಾಹಿತ್ಯಿಕ ಚಟುವಟಿಕೆಗಳಿಗೆ ಮತ್ತೆ ಜೀವ ತುಂಬುವ ಉದ್ದೇಶದಿಂದ ಹೋರಾಟ ನಡೆಸಲಾಗಿದೆ ಎಂದು ಸಾಹಿತಿ ಹಾಗೂ ಪತ್ರಕರ್ತ ಆರ್.ಜೆ. ನಾಗರಾಜ್ ಹೇಳಿದರು.
ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಧ್ಯಕ್ಷ ಸ್ಥಾನಕ್ಕೆ ಬೆಂಬಲಿಸಿ ಮಾತನಾಡಿದ ಅವರು, ಕಳೆದ ಒಂದೂವರೆ ವರ್ಷದಿಂದ ಪರಿಷತ್ತಿನ ಪಾವಿತ್ರ್ಯ, ಪರಂಪರೆ ಹಾಗೂ ಸ್ವಾಯತ್ತತೆಯನ್ನು ಉಳಿಸುವ ನಿಟ್ಟಿನಲ್ಲಿ ಹೋರಾಟ ನಡೆಸಲಾಗಿದ್ದು, ಅದರಲ್ಲಿ ಒಂದು ಮಟ್ಟಿಗೆ ಯಶಸ್ಸು ಸಾಧಿಸಲಾಗಿದೆ ಎಂದರು.
ಸರ್ಕಾರದ ಮೇಲೆ ಒತ್ತಡ ಹೇರಿ ಆಡಳಿತಾಧಿಕಾರಿಯನ್ನು ನೇಮಕ ಮಾಡಿಸುವ ಮೂಲಕ ಪರಿಷತ್ತಿನಲ್ಲಿ ಸ್ಥಗಿತಗೊಂಡಿದ್ದ ಹಲವು ಚಟುವಟಿಕೆಗಳಿಗೆ ಚಾಲನೆ ನೀಡಲಾಗಿದೆ. ಹಿಂದಿನ ಅವಧಿಯಲ್ಲಿ ನೀಡಲಾಗದೆ ಬಾಕಿ ಉಳಿದಿದ್ದ ಹಲವು ಮಹತ್ವದ ಪ್ರಶಸ್ತಿಗಳಿಗೆ ಸಮಿತಿಗಳನ್ನು ರಚಿಸಿ ಅರ್ಹ ಸಾಹಿತಿಗಳನ್ನು ಗುರುತಿಸಿ ಪ್ರಶಸ್ತಿ ನೀಡುವ ಕಾರ್ಯಕ್ಕೂ ಚಾಲನೆ ದೊರೆತಿದೆ. ಆಡಳಿತದಲ್ಲಿ ಪಾರದರ್ಶಕತೆ, ಪ್ರಾಮಾಣಿಕತೆ ಮತ್ತು ಸ್ವಚ್ಛತೆಯನ್ನು ತರಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಹೇಳಿದರು.
“ನಾವು ಆರಂಭದಿಂದಲೂ ನಮ್ಮ ಅಭ್ಯರ್ಥಿಯನ್ನು ನಿಲ್ಲಿಸಬೇಕು ಎಂಬ ಉದ್ದೇಶ ಹೊಂದಿರಲಿಲ್ಲ. ಆದರೆ ಇಷ್ಟೆಲ್ಲ ಹೋರಾಟ ನಡೆಸಿದ ನಂತರ ಮತ್ತೆ ಅಧಿಕಾರಶಾಹಿ ಪರಿಷತ್ತಿನ ಮೇಲೆ ಹಿಡಿತ ಸಾಧಿಸಬಾರದು. ಕನ್ನಡದ ಬಗ್ಗೆ ಬದ್ಧತೆ ಹೊಂದಿರುವ ಸಾಹಿತಿಗಳೇ ಪರಿಷತ್ತಿನ ನೇತೃತ್ವ ವಹಿಸಬೇಕು ಎಂಬ ರಾಜ್ಯದ ಸಾಹಿತಿಗಳು ಹಾಗೂ ಕನ್ನಡಪರರ ಒತ್ತಾಯದ ಹಿನ್ನೆಲೆಯಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರನ್ನು ಅಭ್ಯರ್ಥಿಯಾಗಿ ಬಿಂಬಿಸಿದ್ದೇವೆ” ಎಂದು ನಾಗರಾಜ್ ಹೇಳಿದರು.
ಜಾಣಗೆರೆ ವೆಂಕಟರಾಮಯ್ಯ ಅವರು ಕಥೆಗಾರರಾಗಿ ಮಾತ್ರವಲ್ಲದೆ ಕಾದಂಬರಿಕಾರರಾಗಿಯೂ ಗುರುತಿಸಿಕೊಂಡಿದ್ದು, ಸುಮಾರು ಹತ್ತು ಕಾದಂಬರಿಗಳನ್ನು ರಚಿಸಿದ್ದಾರೆ. ಅವರ ಕಥೆಗಳು ರಾಜ್ಯದ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಜನಪರ ಹಾಗೂ ಕನ್ನಡಪರ ಹೋರಾಟಗಳಲ್ಲಿ ಸಕ್ರಿಯವಾಗಿ ಪಾಲ್ಗೊಂಡಿರುವ ಅವರು ತಮ್ಮ ನೇರ ಮತ್ತು ನಿರ್ಭೀತ ಬರಹಗಳ ಮೂಲಕವೂ ಗುರುತಿಸಿಕೊಂಡಿದ್ದಾರೆ ಎಂದರು.
“ಜಾಣಗೆರೆ ವೆಂಕಟರಾಮಯ್ಯ ಅವರೊಂದಿಗೆ ನಾವಿದ್ದೇವೆ ಎಂದರೆ ಒಬ್ಬ ಸಾಹಿತಿಯೊಂದಿಗೆ, ಒಬ್ಬ ಹೋರಾಟಗಾರನೊಂದಿಗೆ, ಒಬ್ಬ ಪತ್ರಕರ್ತನೊಂದಿಗೆ, ಒಬ್ಬ ಸಂವೇದನಾಶೀಲ ಹಾಗೂ ಪ್ರಾಮಾಣಿಕ ವ್ಯಕ್ತಿಯೊಂದಿಗೆ ನಾವಿದ್ದೇವೆ ಎಂದರ್ಥ. ಈ ಎಲ್ಲ ಗುಣಗಳ ಸಮನ್ವಯವಾಗಿರುವ ಅವರನ್ನು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ಅಭ್ಯರ್ಥಿ ಎಂದು ನಾವು ಬೆಂಬಲಿಸಿದ್ದೇವೆ” ಎಂದು ನಾಗರಾಜ್ ಹೇಳಿದರು.
ಕಳೆದ ಹತ್ತು-ಹನ್ನೊಂದು ವರ್ಷಗಳಲ್ಲಿ ಪರಿಷತ್ತಿನ ಮೇಲೆ ಕಳಂಕದ ಛಾಯೆ ಆವರಿಸಿದ್ದು, ಶತಮಾನಕ್ಕೂ ಹೆಚ್ಚು ಕಾಲ ತನ್ನದೇ ಆದ ಗೌರವ ಮತ್ತು ಪಾವಿತ್ರ್ಯವನ್ನು ಕಾಪಾಡಿಕೊಂಡು ಬಂದಿರುವ ಸಂಸ್ಥೆಯ ಘನತೆಯನ್ನು ಮರುಸ್ಥಾಪಿಸುವ ಅಗತ್ಯವಿದೆ ಎಂದರು.
ರಾಜ್ಯಾದ್ಯಂತ ಸಾಹಿತಿಗಳು, ಲೇಖಕರು ಹಾಗೂ ಕನ್ನಡಪರರಿಂದ ಉತ್ತಮ ಬೆಂಬಲ ವ್ಯಕ್ತವಾಗುತ್ತಿದೆ. ಎಸ್.ಸಿ. ಸಿದ್ದರಾಮಯ್ಯ, ಜಯಪ್ರಕಾಶ್ ಗೌಡ, ಸುಂದರ ಭೂಪತಿ, ಸುಕನ್ಯಾ ಮಾರುತಿ ಪುಷ್ಪ ಸೇರಿದಂತೆ ಅನೇಕ ಹಿರಿಯ ಲೇಖಕರು ಹಾಗೂ ಲೇಖಕಿಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ವಿವಿಧ ಜಿಲ್ಲೆಗಳಲ್ಲಿ ಸಭೆಗಳನ್ನು ನಡೆಸಿ ಅಭಿಯಾನವನ್ನು ಮುಂದುವರಿಸಲಾಗುತ್ತಿದೆ ಎಂದು ಆರ್.ಜೆ. ನಾಗರಾಜ್ ತಿಳಿಸಿದರು.
ಈ ಸಂದರ್ಭದಲ್ಲಿ ಜಾಣಗೆರೆ ವೆಂಕಟರಾಮಯ್ಯ ಅವರು ತಮ್ಮ ಆಶಯಗಳು ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಕುರಿತು ತಮ್ಮ ಕನಸುಗಳನ್ನು ಹಂಚಿಕೊಂಡರು.
ಸುದ್ದಿಗೋಷ್ಠಿಯಲ್ಲಿ ಸಾಹಿತಿ ಹಾಗೂ ಪತ್ರಕರ್ತ ಆರ್.ಜೆ. ನಾಗರಾಜ್, ಚಿಕ್ಕಮಗಳೂರು ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷ ಸಚಿನ್ ಸಿಂಗರ, ಕನ್ನಡ ಸೇನೆ ಅಧ್ಯಕ್ಷ ಧರ್ಮರಾಜ ಕಡಗ, ಕಸಾಪ ಸ್ಥಳೀಯ ಮುಖಂಡ ಲಕ್ಷ್ಮೀಕಾಂತ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.
Priority on restoring the honor of the Sahitya Parishat
Leave a comment