ತರೀಕೆರೆ : ನ್ಯಾಯಾಲಯದ ಸ್ಪಷ್ಟ ತಡೆಯಾಜ್ಞೆ ಇದ್ದರೂ ಅದ್ಯಾವುದನ್ನೂ ಲೆಕ್ಕಿಸದೆ, ಜಮೀನಿಗೆ ಅಕ್ರಮವಾಗಿ ನುಗ್ಗಿ ಕಟಾವಿಗೆ ಬಂದಿದ್ದ ರಾಗಿ ಬೆಳೆಯ ಮೇಲೆ ಟ್ರಾಕ್ಟರ್ ಹರಿಸಿ ನಾಶಪಡಿಸಿರುವ ಆಘಾತಕಾರಿ ಘಟನೆಯೊಂದು ತರೀಕೆರೆ ತಾಲೂಕಿನ ಚಿಕ್ಕಾತೂರು ಗ್ರಾಮದಲ್ಲಿ ನಡೆದಿದೆ. ಜಮೀನು ವಿವಾದದ ಹಿನ್ನೆಲೆಯಲ್ಲಿ ಈ ಕೃತ್ಯ ಎಸಗಲಾಗಿದ್ದು, ರೈತನ ತಿಂಗಳುಗಳ ಬೆವರು ಕ್ಷಣಾರ್ಧದಲ್ಲಿ ಮಣ್ಣುಪಾಲಾಗಿದೆ.
ಚಿಕ್ಕಾತೂರು ಗ್ರಾಮ ವ್ಯಾಪ್ತಿಯ ಜಮೀನಿನಲ್ಲಿ ಕನಕ ಬಡಾವಣೆಯ ನಿವಾಸಿ ಎಸ್.ಎಂ. ರಾಜ ತಿಪ್ಪೇಶ್ ಅವರು ಕಷ್ಟಪಟ್ಟು ಬೆಳೆದಿದ್ದ ಸಮೃದ್ದ ರಾಗಿ ಬೆಳೆ ತೆನೆ ಹೊಡೆದು ನಿಂತಿತ್ತು. ಇತ್ತ ಜಮೀನಿನ ಕುರಿತಂತೆ ನ್ಯಾಯಾಲಯದಲ್ಲಿ ವ್ಯಾಜ್ಯವಿದ್ದು, ಸ್ಥಳದಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳುವಂತೆ ಕೋರ್ಟ್ ತಡೆಯಾಜ್ಞೆಯನ್ನೂ ನೀಡಿತ್ತು. ಆದರೂ ಕಾನೂನಿಗೆ ಕವಡೆ ಕಾಸಿನ ಕಿಮ್ಮತ್ತು ನೀಡದ ಕಿಡಿಗೇಡಿಗಳು ಏಕಾಏಕಿ ಜಮೀನಿಗೆ ನುಗ್ಗಿ ನಿಂತ ಬೆಳೆಯ ಮೇಲೆ ಟ್ರಾಕ್ಟರ್ ಓಡಿಸಿ ಉಳುಮೆ ಮಾಡಿ ಇಡೀ ಬೆಳೆಯನ್ನು ನೆಲಸಮ ಮಾಡಿದ್ದಾರೆ.
ಈ ದುಷ್ಕೃತ್ಯದಿಂದಾಗಿ ಸುಮಾರು ₹1.15 ಲಕ್ಷ ಮೌಲ್ಯದ ರಾಗಿ ಬೆಳೆ ಸಂಪೂರ್ಣ ನಾಶವಾಗಿದ್ದು, ಅನ್ನ ನೀಡುವ ಬೆಳೆಯನ್ನು ಈ ರೀತಿ ನಿರ್ದಯವಾಗಿ ಧ್ವಂಸಗೊಳಿಸಿರುವುದನ್ನು ಕಂಡು ಸ್ಥಳೀಯರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ನೇತ್ರಾವತಿ, ದ್ರಾಕ್ಷಾಯಣಮ್ಮ ಹಾಗೂ ಪ್ರವೀಣ್ ಎಂಬುವರ ವಿರುದ್ಧ ಸಂತ್ರಸ್ತ ರಾಜ ತಿಪ್ಪೇಶ್ ಅವರು ನೀಡಿದ ದೂರಿನ ಮೇರೆಗೆ ತರೀಕರೆ ಪೊಲೀಸ್ ಠಾಣೆಯಲ್ಲಿ ಅಕ್ರಮ ಅತಿಕ್ರಮಣ ಮತ್ತು ಆಸ್ತಿ ಹಾನಿ ಆರೋಪದಡಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Ragi crop worth ₹1.15 lakh destroyed by running a tractor over it.
Leave a comment