Home namma chikmagalur chikamagalur ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ
chikamagalurHomeLatest Newsnamma chikmagalur

ಜನರ ಸಮಸ್ಯೆಗಳಿಗೆ ಸರ್ಕಾರ ಸ್ಪಂದಿಸಲಿ

Share
Share

ಚಿಕ್ಕಮಗಳೂರು: ಜನರ ಬದುಕಿನ ಸಮಸ್ಯೆಗಳಿಗೆ ಪರಿಹಾರ ದೊರಕಿಸಬೇಕು ಎಂಬ ಉದ್ದೇಶದಿಂದ ಹೋರಾಟ ನಡೆಸಲಾಗುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.

ಬೆಳವಾಡಿ ಗ್ರಾಮದಲ್ಲಿ ಶನಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ವಿದ್ಯುತ್‌ ಸಮಸ್ಯೆ ತೀವ್ರವಾಗಿದ್ದು, ಈಗಲೇ ಲೋಡ್‌ಶೆಡ್ಡಿಂಗ್‌ ಪರಿಸ್ಥಿತಿ ಹದಗೆಟ್ಟಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಬೇಸಿಗೆಯಲ್ಲಿ ರೈತರ ಸ್ಥಿತಿ ಏನಾಗಲಿದೆ ಎಂಬ ಆತಂಕವಿದೆ. ಸಮರ್ಪಕ ವಿದ್ಯುತ್‌ ಪೂರೈಕೆ ಮಾಡದಿದ್ದರೆ ರೈತರು ತಮ್ಮ ತೋಟಗಳನ್ನು ಉಳಿಸಿಕೊಳ್ಳುವುದು ಹೇಗೆ ಎಂದು ಪ್ರಶ್ನಿಸಿದರು.

ಚಿಕ್ಕಮಗಳೂರು ಜಿಲ್ಲೆಯಲ್ಲಿ 67 ಸಾವಿರಕ್ಕೂ ಹೆಚ್ಚು ಮಂದಿ ಸೇರಿದಂತೆ ರಾಜ್ಯಾದ್ಯಂತ ಸುಮಾರು 23 ಲಕ್ಷ ಜನರ ವಿವಿಧ ಪಿಂಚಣಿ ಯೋಜನೆಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು ಆರೋಪಿಸಿದ ಅವರು, ವೃದ್ಧರು, ವಿಧವೆಯರು ಹಾಗೂ ಅಂಗವಿಕಲರು ಸೇರಿದಂತೆ ಹಲವು ಫಲಾನುಭವಿಗಳಿಗೆ ಐದು–ಆರು ತಿಂಗಳಿಂದ ಪಿಂಚಣಿ ಹಣ ದೊರೆಯುತ್ತಿಲ್ಲ. ಸಣ್ಣಪುಟ್ಟ ಕಾರಣಗಳನ್ನು ಮುಂದಿಟ್ಟುಕೊಂಡು ಪಿಂಚಣಿ ಸ್ಥಗಿತಗೊಳಿಸಿರುವುದನ್ನು ಸರಿಪಡಿಸಿ, ಹಬ್ಬದ ಮುನ್ನ ಫಲಾನುಭವಿಗಳ ಖಾತೆಗೆ ಹಣ ಜಮೆ ಮಾಡಬೇಕು ಎಂದು ಆಗ್ರಹಿಸಿದರು.

ಚಿಕ್ಕಮಗಳೂರು ಹಾಗೂ ಕಡೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸದಿರುವುದು ಆಶ್ಚರ್ಯಕರವಾಗಿದೆ ಎಂದು ಸಿ.ಟಿ. ರವಿ ಹೇಳಿದರು. ಕೊಪ್ಪ ಭಾಗದಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದರೂ ಅದನ್ನು ಬರಪೀಡಿತ ತಾಲೂಕು ಎಂದು ಘೋಷಿಸಿರುವುದನ್ನು ಉಲ್ಲೇಖಿಸಿದ ಅವರು, ಲಕ್ಯಾ ಹೋಬಳಿ ಹಾಗೂ ಕಡೂರು ಭಾಗದಲ್ಲಿ ಸಮರ್ಪಕ ಮಳೆಯಾಗದಿದ್ದರೂ ಬರಪೀಡಿತ ತಾಲೂಕು ಎಂದು ಘೋಷಿಸದಿರುವುದು ಯಾವ ರೀತಿಯ ನ್ಯಾಯ ಎಂದು ಪ್ರಶ್ನಿಸಿದರು.

ಬರದ ವಿಷಯದಲ್ಲಿಯೂ ರಾಜಕಾರಣ ಮಾಡದೆ, ಚಿಕ್ಕಮಗಳೂರು ಮತ್ತು ಕಡೂರು ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ಅಗತ್ಯ ಬರ ಪರಿಹಾರ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಎತ್ತಿನಹೊಳೆ ಯೋಜನೆಯಿಂದ ತಾತ್ಕಾಲಿಕವಾಗಿ ಕೆಲವು ಕೆರೆಗಳಿಗೆ ನೀರು ದೊರೆತಿರುವುದನ್ನು ಉಲ್ಲೇಖಿಸಿದ ಅವರು, ಈ ವ್ಯವಸ್ಥೆಯನ್ನು ಶಾಶ್ವತ ಯೋಜನೆಯನ್ನಾಗಿ ಮಾಡಬೇಕು ಎಂದರು. ಹಳೆಬೀಡು ಮತ್ತು ಬೆಳವಾಡಿ ಕೆರೆಗಳನ್ನು ಯೋಜನೆಗೆ ಸೇರಿಸಿ ನೀರು ತುಂಬಿಸುವ ಅವಕಾಶ ಕಲ್ಪಿಸಬೇಕು ಎಂದು ಆಗ್ರಹಿಸಿದರು.

ಎತ್ತಿನಹೊಳೆ ನೀರು ಶಾಶ್ವತವಾಗಿ ಲಭ್ಯವಾಗದಿದ್ದರೆ ಮುಂದಿನ ದಿನಗಳಲ್ಲಿ ನೀರು ಬೇರೆ ಜಿಲ್ಲೆಗಳತ್ತ ಹರಿದುಹೋಗುವ ಸಾಧ್ಯತೆ ಇದೆ. ಆದ್ದರಿಂದ ಚಿಕ್ಕಮಗಳೂರು ಜಿಲ್ಲೆಯ ಕೆರೆಗಳನ್ನೂ ಯೋಜನೆಯ ವ್ಯಾಪ್ತಿಗೆ ತರಬೇಕು ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ, ಕಡೂರು ಹಾಗೂ ಚಿಕ್ಕಮಗಳೂರು ತಾಲೂಕಿನ ಕೆರೆಗಳಿಗೆ ನೀರು ತುಂಬಿಸುವ ಯೋಜನೆಗೆ ₹1,281 ಕೋಟಿ ಮಂಜೂರು ಮಾಡಿಸಲಾಗಿತ್ತು. ಮೊದಲ ಹಂತದ ಕಾಮಗಾರಿ 2021–22ರಲ್ಲಿ ಹಾಗೂ ಎರಡನೇ ಹಂತದ ಕಾಮಗಾರಿ 2023ರಲ್ಲಿ ಆರಂಭವಾಗಿದ್ದು, ಮೂರನೇ ಹಂತದ ಕಾಮಗಾರಿಯೂ ಪ್ರಾರಂಭವಾಗಿದೆ ಎಂದು ಸಿ.ಟಿ. ರವಿ ತಿಳಿಸಿದರು.

ಇನ್ನೂ ಒಂದೂವರೆ ವರ್ಷದೊಳಗೆ ಹಲವು ಕಾಮಗಾರಿಗಳು ಪೂರ್ಣಗೊಳ್ಳಲಿದ್ದು, ಜಿಲ್ಲೆಯ ಬೈಲಸೀಮೆ ಭಾಗದ ಬಹುತೇಕ ಕೆರೆಗಳಿಗೆ ನೀರು ದೊರೆಯಲಿದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು. ಬರದ ಸಂದರ್ಭದಲ್ಲಿ ಒಂದು ಯೋಜನೆಯಲ್ಲಿ ಸಮಸ್ಯೆ ಎದುರಾದರೆ ಮತ್ತೊಂದು ಯೋಜನೆಯ ಮೂಲಕ ನೀರು ದೊರೆಯುವಂತೆ ಹಲವು ಯೋಜನೆಗಳನ್ನು ರೂಪಿಸಲಾಗಿದೆ ಎಂದರು.

ಮಲೆನಾಡು ಭಾಗದಲ್ಲಿ ಕಸ್ತೂರಿರಂಗನ್ ವರದಿ ಸೇರಿದಂತೆ ವಿವಿಧ ವಿಚಾರಗಳ ಕುರಿತು ವಿರೋಧ ವ್ಯಕ್ತವಾಗುತ್ತಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಭೇಟಿ ನೀಡುವ ಸಾಧ್ಯತೆಯಿದೆ. ಈ ಸಂದರ್ಭದಲ್ಲಿ 2021–22, 2022–23ರ ಬರ ಪರಿಸ್ಥಿತಿ ಹಾಗೂ ಕಸ್ತೂರಿರಂಗನ್ ವರದಿ ಕುರಿತು ಚರ್ಚೆ ನಡೆಯಲಿದೆ ಎಂದು ಹೇಳಿದರು.

ಮಾಧವ ಗಾಡ್ಗೀಳ್ ಸಮಿತಿ 2010ರಲ್ಲಿ ಹಾಗೂ ಕಸ್ತೂರಿರಂಗನ್ ಸಮಿತಿ 2012ರಲ್ಲಿ ರಚನೆಯಾಗಿದ್ದು, ಎರಡೂ ಸಮಿತಿಗಳು ಕಾಂಗ್ರೆಸ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ ರಚನೆಯಾಗಿವೆ ಎಂದು ಸಿ.ಟಿ. ರವಿ ಆರೋಪಿಸಿದರು. ಈ ವಿಚಾರದಲ್ಲಿ ತಮ್ಮ ವಿರುದ್ಧ ರಾಜಕೀಯ ಟೀಕೆ ಮಾಡಿದರೆ ದಾಖಲೆಗಳೊಂದಿಗೆ ಉತ್ತರ ನೀಡುವುದಾಗಿ ಹೇಳಿದರು.

ತಮ್ಮ ಅವಧಿಯಲ್ಲಿ ಚಿಕ್ಕಮಗಳೂರು ಜಿಲ್ಲೆಗೆ ಸಾವಿರಾರು ಕೋಟಿ ರೂಪಾಯಿ ಅನುದಾನ ತಂದು ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗಿದೆ ಎಂದು ಸಿ.ಟಿ. ರವಿ ವಿವರಿಸಿದರು. ವೈದ್ಯಕೀಯ ಕಾಲೇಜು, ಜಿಲ್ಲಾ ಸಂಕೀರ್ಣ, ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ, ಬಹುಗ್ರಾಮ ಕುಡಿಯುವ ನೀರಿನ ಯೋಜನೆ, ಜಲಜೀವನ್ ಮಿಷನ್, ರಸ್ತೆ ಅಭಿವೃದ್ಧಿ, ಕೆರೆಗಳ ಅಭಿವೃದ್ಧಿ, ರೈಲ್ವೆ ಸೇರಿದಂತೆ ಹಲವು ಯೋಜನೆಗಳಿಗೆ ಅನುದಾನ ಮಂಜೂರು ಮಾಡಿಸಲಾಗಿದೆ ಎಂದು ಹೇಳಿದರು.

ಜಲಜೀವನ್ ಮಿಷನ್ ಕಾಮಗಾರಿಗಳ ಗುಣಮಟ್ಟದ ಬಗ್ಗೆ ಸಾರ್ವಜನಿಕರಿಂದ ದೂರುಗಳು ಬರುತ್ತಿದ್ದು, ಈ ಕುರಿತು ಪ್ರಧಾನಮಂತ್ರಿ ಹಾಗೂ ಮುಖ್ಯಮಂತ್ರಿಗಳಿಗೆ ಪತ್ರ ಬರೆದು ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿರುವುದಾಗಿ ತಿಳಿಸಿದರು.

ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಅವಧಿಯಲ್ಲಿ ತಂದಿರುವ ಅನುದಾನ ಹಾಗೂ ಮಂಜೂರಾದ ಯೋಜನೆಗಳ ವಿವರಗಳನ್ನು ಉಲ್ಲೇಖಿಸಿದ ಅವರು, ಹಿಂದಿನ ಸರ್ಕಾರದ ಅವಧಿಯಲ್ಲಿ ಮಂಜೂರಾದ ಯೋಜನೆಗಳನ್ನು ಈಗಿನ ಸರ್ಕಾರ ಉದ್ಘಾಟನೆ ಮಾಡಿಕೊಂಡು ಅದರ ಶ್ರೇಯಸ್ಸು ಪಡೆಯುತ್ತಿದೆ ಎಂದು ಟೀಕಿಸಿದರು.

ಜನರಿಗೆ ಅಗತ್ಯವಿರುವ ಮೂಲಸೌಕರ್ಯ, ನೀರು, ವಿದ್ಯುತ್, ರಸ್ತೆ ಹಾಗೂ ನೀರಾವರಿ ಸಮಸ್ಯೆಗಳಿಗೆ ಆದ್ಯತೆ ನೀಡಿ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂಬುದು ತಮ್ಮ ಪ್ರಮುಖ ಒತ್ತಾಯವಾಗಿದೆ ಎಂದು ಸಿ.ಟಿ. ರವಿ ಹೇಳಿದರು.

The government should respond to people’s problems.

Share

Leave a comment

Leave a Reply

Your email address will not be published. Required fields are marked *

Don't Miss

ಗುಟ್ಕಾ ನಿಷೇಧ ವಿರೋಧಿಸಿ ಬಿಜೆಪಿ ಜಿಲ್ಲಾ ರೈತ ಮೋರ್ಚಾ ಪ್ರತಿಭಟನೆ

ಚಿಕ್ಕಮಗಳೂರು: ಗುಟ್ಕಾ ನಿಷೇಧದ ಕುರಿತು ರಾಜ್ಯ ಸರ್ಕಾರ ನೀಡಿರುವ ಹೇಳಿಕೆಯಿಂದ ಅಡಕೆ ಬೆಲೆ ಕುಸಿದು ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರ ಬದುಕಿಗೆ ಮರಣ ಶಾಸನವಾಗುವ ಗುಟ್ಕಾ ಹಾಗೂ ಅಡಕೆ ನಿಷೇಧ ಪ್ರಸ್ತಾಪವನ್ನು...

ನೂತನ 24 ತಾಲ್ಲೂಕು ಬರಪೀಡಿತ ತಾಲ್ಲೂಕು ಪಟ್ಟಿಯಲ್ಲಿ ಕಡೂರು ಇಲ್ಲ ….?

ಕಡೂರು: ಬರ ಘೋಷಣೆಯ ಮೊದಲ ಪಟ್ಟಿಯಲ್ಲಿ ಕಡೂರು ತಾಲ್ಲೂಕು ಕೈಬಿಡಲಾಗಿತ್ತು. ಇದೀಗ ಶುಕ್ರವಾರ ಕಡೂರು ಸೇರಿದಂತೆ 24 ತಾಲ್ಲೂಕುಗಳನ್ನು ಬರಪೀಡಿತ ತಾಲ್ಲೂಕುಗಳೆಂದು ಕಂದಾಯ ಇಲಾಖೆ ಅನುಮೋದಿಸಿ ಪಟ್ಟಿ ಬಿಡುಗಡೆ ಮಾಡಿದ್ದರೂ, ಚಿಕ್ಕಮಗಳೂರು...

Related Articles

ಸೆ.14ರಂದು ಮುಳ್ಳಯ್ಯನಗಿರಿ ಸೇರಿದಂತೆ ಗಿರಿಧಾಮಗಳಿಗೆ ಪ್ರವಾಸಿಗರ ಪ್ರವೇಶ ನಿರ್ಬಂಧ

ಚಿಕ್ಕಮಗಳೂರು: ಗೌರಿ-ಗಣೇಶ ಹಬ್ಬದ ಹಿನ್ನೆಲೆಯಲ್ಲಿ ಚಂದ್ರದ್ರೋಣ ಪರ್ವತ ಸಾಲಿನ ಪ್ರಮುಖ ಪ್ರವಾಸಿ ತಾಣಗಳಿಗೆ ಸೆಪ್ಟೆಂಬರ್ 14ರಂದು...

ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿ ಲಪಟಾಯಿಸಲು ಯತ್ನ: ಐವರ ವಿರುದ್ಧ ಪ್ರಕರಣ

ಕಡೂರು: ಸುಳ್ಳು ವಂಶವೃಕ್ಷ ಸೃಷ್ಟಿಸಿ, ಅದರ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆ ಮಾಡಿಕೊಂಡು...

ಜನಪರ ಕಾರ್ಯವೇ ನಿಜವಾದ ರಾಜಕಾರಣದ ಮಾನದಂಡ

ಚಿಕ್ಕಮಗಳೂರು: ಅಧಿಕಾರಕ್ಕಾಗಿ ನಾನು ರಾಜಕಾರಣಕ್ಕೆ ಬಂದವನಲ್ಲ, ಸಿದ್ಧಾಂತ ಹಾಗೂ ಜನಪರ ಕಾರ್ಯಗಳಿಗಾಗಿ ರಾಜಕಾರಣಕ್ಕೆ ಬಂದಿz್ದೆÃನೆ. ಅಧಿಕಾರಕ್ಕಿಂತ...

ಜನವಿರೋಧಿ ನೀತಿ ವಿರುದ್ಧ ಬಿಜೆಪಿ ಕಳಸಾಪುರ ಗ್ರಾಮದಲ್ಲಿ ಪ್ರತಿಭಟನೆ

ಚಿಕ್ಕಮಗಳೂರು: ರಾಜ್ಯ ಸರ್ಕಾರದ ಜನವಿರೋಧಿ ನೀತಿ ಅನುಸರಿಸುತ್ತಿದೆ ಎಂದು ಆರೋಪಿಸಿ ಹಾಗೂ ರೈತರು, ಬಡವರು, ವೃದ್ಧರು,...