ಕಡೂರು: ಸುಳ್ಳು ವಂಶವೃಕ್ಷ ಸೃಷ್ಟಿಸಿ, ಅದರ ಆಧಾರದ ಮೇಲೆ ಪಿತ್ರಾರ್ಜಿತ ಆಸ್ತಿಯ ಖಾತೆ ಬದಲಾವಣೆ ಮಾಡಿಕೊಂಡು ಆಸ್ತಿಯನ್ನು ಲಪಟಾಯಿಸಲು ಒಳಸಂಚು ರೂಪಿಸಿ ವಂಚನೆ ನಡೆಸಿರುವ ಆರೋಪದಡಿ ಸಕ್ಕರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಐವರ ವಿರುದ್ಧ ಪ್ರಕರಣ ದಾಖಲಾಗಿದೆ.
ಈ ಸಂಬಂಧ ನ್ಯಾಯಾಲಯದ ಪಿಸಿಆರ್ ನಂ.190/2026ರ ಆದೇಶದ ಮೇರೆಗೆ ಸೆ.10ರಂದು ಪ್ರಕರಣ ದಾಖಲಿಸಲಾಗಿದೆ.
ದೂರಿನ ಪ್ರಕಾರ, ಮಲ್ಲೇನಿಂಗಣ್ಣ ಮತ್ತು ನಿಂಗಮ್ಮ ದಂಪತಿಗೆ ಅಜ್ಜಣ್ಣ ಹಾಗೂ ಬಮ್ಮಯ್ಯ ಎಂಬ ಇಬ್ಬರು ಗಂಡು ಮಕ್ಕಳಿದ್ದರು. ಅಜ್ಜಣ್ಣ ಅವರ ಪುತ್ರ ಕಾಳಪ್ಪನಿಗೆ ವಿರೂಪಾಕ್ಷ, ಕಮಲಮ್ಮ, ಆನಂದ್ ಮತ್ತು ವಿಜಯಕುಮಾರ್ ಎಂಬ ನಾಲ್ವರು ಮಕ್ಕಳಿದ್ದಾರೆ. ಮತ್ತೊಂದೆಡೆ ಬಮ್ಮಯ್ಯ ಅವರ ಪುತ್ರನಿಗೂ ಬಮ್ಮಯ್ಯ ಎಂಬ ಹೆಸರಿದ್ದು, ಅವರಿಗೆ ಜಯಮ್ಮ ಹಾಗೂ ಅಕ್ಕಮ್ಮ ಎಂಬ ಇಬ್ಬರು ಪತ್ನಿಯರು ಮತ್ತು ಯೋಗೀಶ್, ಸುಧಾ ಹಾಗೂ ದೇವರಾಜು ಎಂಬ ಮಕ್ಕಳು ಇದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಆದರೆ ಕಾಳಪ್ಪನ ಪುತ್ರ ಆನಂದ್ ಅವರು ಕುಟುಂಬದ ವಂಶಾವಳಿಯ ವಾಸ್ತವಾಂಶ ತಿಳಿದಿದ್ದರೂ, 13.12.2021ರಂದು ಸೃಷ್ಟಿತ ವಂಶವೃಕ್ಷವೊಂದನ್ನು ತಯಾರಿಸಿ ನೋಟರಿ ಮಾಡಿಸಿ, ಸಾಕ್ಷಿದಾರರ ಸಹಿಗಳನ್ನು ಪಡೆದು ಕಡೂರು ತಾಲ್ಲೂಕು ಕಚೇರಿಗೆ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಅದರ ಆಧಾರದ ಮೇಲೆ RD0038633215635 ಸಂಖ್ಯೆಯ ದೃಢೀಕೃತ ವಂಶವೃಕ್ಷವನ್ನು ಕಂದಾಯ ಇಲಾಖೆಯಿಂದ ಪಡೆದುಕೊಳ್ಳಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ವಂಶವೃಕ್ಷದಲ್ಲಿ ಮಲ್ಲೇನಿಂಗಣ್ಣ ಅವರ ಪುತ್ರ ಅಜ್ಜಣ್ಣನನ್ನು ‘ಅಜ್ಜಣ್ಣ ಯಾನೆ ಮಲ್ಲೇನಿಂಗಣ್ಣನವರ ಅಜ್ಜಣ್ಣ’ ಎಂದು ತಪ್ಪಾಗಿ ನಮೂದಿಸಲಾಗಿದೆ ಎಂದು ಆರೋಪಿಸಲಾಗಿದೆ. ಮಲ್ಲೇನಿಂಗಣ್ಣ ಮತ್ತು ಅಜ್ಜಣ್ಣ ಇಬ್ಬರೂ ಒಂದೇ ವ್ಯಕ್ತಿಗಳು ಎಂಬಂತೆ ಬಿಂಬಿಸುವ ಉದ್ದೇಶದಿಂದ ಈ ರೀತಿಯ ಸುಳ್ಳು ಮಾಹಿತಿ ದಾಖಲಿಸಲಾಗಿದೆ ಎಂದು ದೂರಿನಲ್ಲಿ ಹೇಳಲಾಗಿದೆ.
ಈ ಸೃಷ್ಟಿತ ವಂಶವೃಕ್ಷದ ಆಧಾರದ ಮೇಲೆ ಜೋಡಿಹೋಚಿಹಳ್ಳಿ ಗ್ರಾಮದ ಸರ್ವೆ ನಂ.307/2ರ 4 ಎಕರೆ 15 ಗುಂಟೆ ಹಾಗೂ ಸರ್ವೆ ನಂ.323/2ರ 1 ಎಕರೆ 11 ಗುಂಟೆ ಜಮೀನು ಸೇರಿದಂತೆ ಕುಟುಂಬದ ಪಿತ್ರಾರ್ಜಿತ ಆಸ್ತಿಗಳ ಖಾತೆಯನ್ನು ಕರಿಯಮ್ಮ, ವಿರೂಪಾಕ್ಷಪ್ಪ, ಕಮಲಾಕ್ಷಿ, ಆನಂದ್ ಹಾಗೂ ವಿಜಯಕುಮಾರ್ ಅವರ ಹೆಸರಿಗೆ ಜಂಟಿಯಾಗಿ ವರ್ಗಾವಣೆ ಮಾಡಿಕೊಳ್ಳಲಾಗಿದೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಸದರಿ ಆಸ್ತಿಗಳು ಒಟ್ಟು ಕುಟುಂಬದ ಆಸ್ತಿಗಳಾಗಿದ್ದು, ತಮ್ಮ ಕುಟುಂಬಕ್ಕೂ ಸಮಾನ ಹಕ್ಕು, ಅಧಿಕಾರ ಮತ್ತು ಪಾಲು ಇದೆ ಎಂದು ದೂರುದಾರರು ತಿಳಿಸಿದ್ದಾರೆ. ಈ ವಿಚಾರ ತಿಳಿದಿದ್ದರೂ ಸುಳ್ಳು ವಂಶವೃಕ್ಷ ಸೃಷ್ಟಿಸಿ ಆಸ್ತಿಯ ಖಾತೆ ಬದಲಾವಣೆ ಮಾಡಿಸಿಕೊಂಡು ಕುಟುಂಬದ ಆಸ್ತಿಯನ್ನು ಲಪಟಾಯಿಸಲು ಸಂಚು ರೂಪಿಸಲಾಗಿದೆ ಎಂದು ಆರೋಪಿಸಿದ್ದಾರೆ.
ಈ ಸಂಬಂಧ ಕರಿಯಮ್ಮ, ವಿರೂಪಾಕ್ಷಪ್ಪ, ಕಮಲಾಕ್ಷಿ, ಆನಂದ್ ಹಾಗೂ ವಿಜಯಕುಮಾರ್ ವಿರುದ್ಧ ವಂಚನೆ ಮತ್ತು ಸುಳ್ಳು ದಾಖಲೆ ಸೃಷ್ಟಿಸಿದ ಆರೋಪದಡಿ ಕಾನೂನು ಕ್ರಮ ಕೈಗೊಳ್ಳುವಂತೆ ನ್ಯಾಯಾಲಯಕ್ಕೆ ಪಿಸಿಆರ್ ಸಲ್ಲಿಸಲಾಗಿತ್ತು. ನ್ಯಾಯಾಲಯದ ಆದೇಶದಂತೆ ಸಕ್ಕರಾಯಪಟ್ಟಣ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Case registered against five individuals for attempting to misappropriate property by creating a fake family tree.
Leave a comment