ಚಿಕ್ಕಮಗಳೂರು: ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಉತ್ಪಾದನಾ ವೆಚ್ಚದ ಹೆಚ್ಚಳ, ಮಾರುಕಟ್ಟೆ ಏರಿಳಿತ ಸೇರಿದಂತೆ ವಿವಿಧ ಸಮಸ್ಯೆಗಳಿಗೆ ತಾಂತ್ರಿಕ ಹಾಗೂ ವೈಜ್ಞಾನಿಕ ಪರಿಹಾರ ಕಂಡುಕೊಳ್ಳುವುದರ ಜೊತೆಗೆ ಕಾಫಿ ಉದ್ಯಮದ ಮೇಲೆ ಪರಿಣಾಮ ಬೀರುವ ಕಾಯ್ದೆಗಳನ್ನು ವಿರೋಧಿಸಲು ಎಲ್ಲರೂ ಸಂಘಟಿತರಾಗಿ ಹೋರಾಟ ನಡೆಸಬೇಕಿದೆ ಎಂದು ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಹೇಳಿದರು.
ನಗರದ ಜಿಲ್ಲಾ ಒಕ್ಕಲಿಗರ ಸಮುದಾಯ ಭವನದಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ ಹಾಗೂ ಟೆಂಡರ್ ಟುಡೇ ಗ್ರೂಪ್ ಸಹಯೋಗದಲ್ಲಿ ಆಯೋಜಿಸಿದ್ದ ರಾಜ್ಯಮಟ್ಟದ ಕಾಫಿ ಬೆಳೆಗಾರರ ತಾಂತ್ರಿಕ ಸಮಾವೇಶ, ವಿಚಾರ ಸಂಕೀರ್ಣ ಹಾಗೂ ಅತ್ಯಾಧುನಿಕ ಯಂತ್ರೋಪಕರಣಗಳ ಪ್ರದರ್ಶನವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕಾಫಿಯ ಇತಿಹಾಸವನ್ನು ನೃತ್ಯರೂಪಕದ ಮೂಲಕ ಸುಂದರವಾಗಿ ಪ್ರದರ್ಶಿಸಿರುವುದು ಕಾರ್ಯಕ್ರಮದ ವಿಶೇಷವಾಗಿತ್ತು. ಇಥಿಯೋಪಿಯಾದಲ್ಲಿ 9ನೇ ಶತಮಾನದಲ್ಲಿ ಆರಂಭವಾದ ಕಾಫಿ, ನಂತರ ವಿಶ್ವದ ವಿವಿಧ ಭಾಗಗಳಿಗೆ ಪಸರಿಸಿ ಭಾರತಕ್ಕೆ ಬಂದಿದ್ದು, ಚಿಕ್ಕಮಗಳೂರಿನ ಚಂದಗೋಡು ಪ್ರದೇಶದಲ್ಲಿ ಬಾಬಾ ಬುಡನ್ ಅವರ ಮೂಲಕ ಕಾಫಿ ಬೆಳೆಯು ಆರಂಭಗೊಂಡು ಇಂದು ಬೃಹತ್ ಉದ್ಯಮವಾಗಿ ಬೆಳೆದಿದೆ. ಲಕ್ಷಾಂತರ ಕಾರ್ಮಿಕರಿಗೆ ಉದ್ಯೋಗ ನೀಡುತ್ತಿರುವ ಕಾಫಿ ಉದ್ಯಮ ದೇಶದ ಆರ್ಥಿಕತೆಯಲ್ಲೂ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.
ಭಾರತ ಇಂದು ವಿಶ್ವದ ಪ್ರಮುಖ ಕಾಫಿ ಉತ್ಪಾದಕ ರಾಷ್ಟ್ರಗಳಲ್ಲಿ ಒಂದಾಗಿದೆ. ದೇಶದಲ್ಲಿ ಉತ್ಪಾದನೆಯಾಗುವ ಕಾಫಿಗೆ ದೇಶೀಯ ಹಾಗೂ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಹೆಚ್ಚಿನ ಬೇಡಿಕೆ ಸೃಷ್ಟಿಸಬೇಕಾಗಿದೆ. ಕಾಫಿಯ ಗುಣಮಟ್ಟವನ್ನು ಕಾಪಾಡುವುದು, ಸಂಸ್ಕರಣೆ ಮತ್ತು ಮೌಲ್ಯವರ್ಧನೆಗೆ ಒತ್ತು ನೀಡುವುದು ಹಾಗೂ ಆಧುನಿಕ ಯಂತ್ರೋಪಕರಣಗಳನ್ನು ಬಳಸುವ ಮೂಲಕ ಉತ್ಪಾದನಾ ವೆಚ್ಚ ಕಡಿಮೆ ಮಾಡುವುದು ಇಂದಿನ ಅಗತ್ಯವಾಗಿದೆ ಎಂದು ಹೇಳಿದರು.
ಕಾಫಿ ಬೆಳೆಗಾರರಿಗೆ ತಾಂತ್ರಿಕ ತರಬೇತಿ, ಕಲರ್ ಸೋರ್ಟಿಂಗ್, ಒಣಗಿಸುವಿಕೆ ಸೇರಿದಂತೆ ಆಧುನಿಕ ವಿಧಾನಗಳ ಅರಿವು ಮೂಡಿಸುವ ಕಾರ್ಯ ಈ ಸಮಾವೇಶದ ಮೂಲಕ ನಡೆಯುತ್ತಿರುವುದು ಶ್ಲಾಘನೀಯ. ಕಾಫಿ ಉತ್ಪಾದನೆಯಿಂದ ಹಿಡಿದು ರಫ್ತು ಮಾಡುವವರೆಗಿನ ಪ್ರತಿಯೊಂದು ಹಂತದಲ್ಲೂ ಗುಣಮಟ್ಟಕ್ಕೆ ಆದ್ಯತೆ ನೀಡಬೇಕು ಎಂದರು.
ಕಸ್ತೂರಿ ರಂಗನ್ ವರದಿ ವಿರುದ್ಧ ಒಗ್ಗಟ್ಟಿನ ಹೋರಾಟ
ಮಲೆನಾಡಿನ ಕಾಫಿ ಬೆಳೆಗಾರರ ಮೇಲೆ ಕಸ್ತೂರಿ ರಂಗನ್ ವರದಿ ಜಾರಿಯ ಭೀತಿ ಎದುರಾಗಿದೆ. ಈಗಾಗಲೇ ಆರು ಕರಡುಗಳನ್ನು ತಿರಸ್ಕರಿಸಿರುವ ಸಂದರ್ಭದಲ್ಲಿ ಮತ್ತೆ ಏಳನೇ ಕರಡು ಅಧಿಸೂಚನೆ ಬಂದಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ರಾಜೇಗೌಡ ಹೇಳಿದರು.
ಕಸ್ತೂರಿ ರಂಗನ್ ವರದಿ ಜಾರಿಯಾದರೆ ಕಾಫಿ ಬೆಳೆಗಾರರಷ್ಟೇ ಅಲ್ಲದೆ ಕಾಫಿ ತೋಟಗಳನ್ನು ಅವಲಂಬಿಸಿರುವ ಕಾರ್ಮಿಕ ಕುಟುಂಬಗಳ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ವಿದ್ಯುತ್ ಸಂಪರ್ಕ, ಮನೆ ನಿರ್ಮಾಣ, ರಸ್ತೆ, ತೋಟದ ಅಭಿವೃದ್ಧಿ ಹಾಗೂ ವಿವಿಧ ಕಾಮಗಾರಿಗಳಿಗೆ ಅನುಮತಿ ಪಡೆಯಬೇಕಾದ ಪರಿಸ್ಥಿತಿ ಎದುರಾಗಬಹುದು. ಇದರಿಂದ ಮಲೆನಾಡಿನ ಜನಜೀವನ ಹಾಗೂ ಕಾಫಿ ಉದ್ಯಮದ ಮೇಲೆ ಗಂಭೀರ ಪರಿಣಾಮ ಉಂಟಾಗಬಹುದು ಎಂದು ಆತಂಕ ವ್ಯಕ್ತಪಡಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಮಲೆನಾಡಿನ ಭಾಗಕ್ಕೆ ಆಗಮಿಸಿ ಬೆಳೆಗಾರರ ಅಹವಾಲು ಆಲಿಸಲಿರುವ ಹಿನ್ನೆಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಬೆಳೆಗಾರರು ಭಾಗವಹಿಸಿ ತಮ್ಮ ಸಮಸ್ಯೆಗಳನ್ನು ನೇರವಾಗಿ ಮಂಡಿಸಬೇಕು. ಕಾಫಿ ಉದ್ಯಮದ ಹಿತಕ್ಕಾಗಿ ಅಗತ್ಯವಿದ್ದರೆ ಅಧಿಕಾರ ಹಾಗೂ ಸ್ಥಾನವನ್ನೂ ಲೆಕ್ಕಿಸದೆ ಹೋರಾಟ ನಡೆಸಲು ಸಿದ್ಧ ಎಂದು ಹೇಳಿದರು.
ಕಾಫಿ ಬೆಳೆಗಾರರಿಗೆ ಸಾಲಮನ್ನಾ ಅಗತ್ಯ
ಕಾಫಿ ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಶಾಸಕ ಎಚ್.ಡಿ. ತಮ್ಮಯ್ಯ ಹೇಳಿದರು.
ಕಾಫಿ ಬೆಲೆ ಏರಿಳಿತವಾಗುತ್ತಿದ್ದರೂ ಗೊಬ್ಬರ, ಕಾರ್ಮಿಕರ ಕೂಲಿ ಸೇರಿದಂತೆ ಉತ್ಪಾದನಾ ವೆಚ್ಚದಲ್ಲಿ ಇಳಿಕೆಯಾಗುವುದಿಲ್ಲ. ಹೀಗಾಗಿ ಬೆಳೆಗಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ವಿಶೇಷ ಪ್ಯಾಕೇಜ್ ರೂಪಿಸುವ ಅಗತ್ಯವಿದೆ ಎಂದರು.
ವಿದರ್ಭ ಮಾದರಿಯಲ್ಲಿ ಕಾಫಿ ಬೆಳೆಗಾರರ ಸಾಲಮನ್ನಾ ಅಥವಾ ವಿಶೇಷ ಆರ್ಥಿಕ ನೆರವು ಕಲ್ಪಿಸುವ ಕುರಿತು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ಅಗತ್ಯವಿದೆ. ಈ ನಿಟ್ಟಿನಲ್ಲಿ ಶಾಸಕರು, ಸಂಸದರು ಹಾಗೂ ಕಾಫಿ ಮಂಡಳಿ ಒಟ್ಟಾಗಿ ಪ್ರಯತ್ನಿಸಬೇಕು ಎಂದು ಹೇಳಿದರು.
ಕಸ್ತೂರಿ ರಂಗನ್ ವರದಿಯ ಏಳನೇ ಕರಡನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು. ವರದಿಯಿಂದ ಮಲೆನಾಡಿನ ಹತ್ತು ಜಿಲ್ಲೆಗಳ ಜನರಿಗೆ ಉಂಟಾಗಬಹುದಾದ ಸಮಸ್ಯೆಗಳನ್ನು ಸದನದಲ್ಲಿ ನಿರಂತರವಾಗಿ ಪ್ರಸ್ತಾಪಿಸಲಾಗುತ್ತಿದೆ. ಕಾಫಿ ಬೆಳೆಗಾರರಷ್ಟೇ ಅಲ್ಲದೆ ತೋಟ ಕಾರ್ಮಿಕರ ಬದುಕಿನ ಮೇಲೂ ಇದರ ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದರು.
ಕಾಫಿ ಬೆಳೆಯುವುದರ ಜೊತೆಗೆ ಅದಕ್ಕೆ ಸೂಕ್ತವಾದ ಮಾರುಕಟ್ಟೆ ಕಲ್ಪಿಸುವುದು ಮುಖ್ಯ. ಭಾರತೀಯ ಕಾಫಿಯನ್ನು ಜಾಗತಿಕ ಮಾರುಕಟ್ಟೆಯಲ್ಲಿ ಪ್ರತ್ಯೇಕ ಬ್ರ್ಯಾಂಡ್ ಆಗಿ ಗುರುತಿಸುವ ಕೆಲಸವಾಗಬೇಕು ಎಂದು ಹೇಳಿದರು.
ತಂತ್ರಜ್ಞಾನ ಅಳವಡಿಸಿಕೊಂಡು ಉತ್ಪಾದನಾ ವೆಚ್ಚ ಕಡಿಮೆ ಮಾಡಿ
ಕಾಫಿ ಬೆಳೆಗಾರರು ಎದುರಿಸುತ್ತಿರುವ ಕಾರ್ಮಿಕರ ಕೊರತೆ, ಹವಾಮಾನ ವೈಪರೀತ್ಯ, ಬೆಳೆ ಮತ್ತು ಬೆಲೆ ನಡುವಿನ ಅಸಮತೋಲನ ಹಾಗೂ ಮೌಲ್ಯವರ್ಧನೆಯ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಕೊಳ್ಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದರು.
ಕಾರ್ಮಿಕರ ಕೊರತೆಗೆ ತಂತ್ರಜ್ಞಾನ ಬಳಕೆ ಪರಿಣಾಮಕಾರಿ ಪರಿಹಾರವಾಗಬಹುದು. ಕಾಫಿ ಸಂಸ್ಕರಣೆ, ಕೊಯ್ಲು, ವಿಂಗಡಣೆ ಸೇರಿದಂತೆ ವಿವಿಧ ಹಂತಗಳಲ್ಲಿ ಯಾಂತ್ರೀಕರಣಕ್ಕೆ ಒತ್ತು ನೀಡಬೇಕು. ಕಾಫಿಗೆ ಮೌಲ್ಯವರ್ಧನೆ ಮಾಡಿ, ಭಾರತೀಯ ಕಾಫಿಗೆ ಅಂತರರಾಷ್ಟ್ರೀಯ ಮಟ್ಟದಲ್ಲಿ ಪ್ರತ್ಯೇಕ ಬ್ರ್ಯಾಂಡ್ ರೂಪಿಸಬೇಕು ಎಂದರು.
ಕಾಫಿ ತೋಟಗಳಲ್ಲಿ ಕಾಳುಮೆಣಸಿನ ಜೊತೆಗೆ ಸ್ಥಳೀಯ ಹವಾಮಾನಕ್ಕೆ ಹೊಂದುವ ಪರ್ಯಾಯ ಬೆಳೆಗಳನ್ನು ಬೆಳೆಯುವ ಕುರಿತು ಸಂಶೋಧನೆ ಅಗತ್ಯ. ಕಾಫಿ ಬೆಳೆಗಾರರ ಸಮಸ್ಯೆಗಳಿಗೆ ಸಂಶೋಧನಾ ಸಂಸ್ಥೆಗಳು ಹಾಗೂ ಕಾಫಿ ಮಂಡಳಿ ವೈಜ್ಞಾನಿಕ ಪರಿಹಾರಗಳನ್ನು ಒದಗಿಸಬೇಕು ಎಂದು ಹೇಳಿದರು.
ಆಧುನಿಕ ಕೃಷಿ ಪದ್ಧತಿಗೆ ಒತ್ತು
ಕಾಫಿ ಬೆಳೆಗಾರರು ಹಳೆಯ ಪದ್ಧತಿಗಳಿಂದ ಆಧುನಿಕ ಕೃಷಿ ತಂತ್ರಜ್ಞಾನಗಳತ್ತ ಸಾಗಬೇಕಾಗಿದೆ ಎಂದು ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹೇಳಿದರು.
ಕಾರ್ಮಿಕರ ಕೊರತೆ ಹಾಗೂ ಹವಾಮಾನ ವೈಪರೀತ್ಯದಿಂದಾಗಿ ಕಾಫಿ ಕೊಯ್ಲು ಮತ್ತು ಒಣಗಿಸುವಿಕೆ ಸೇರಿದಂತೆ ಹಲವು ಹಂತಗಳಲ್ಲಿ ಸಮಸ್ಯೆ ಎದುರಾಗುತ್ತಿದೆ. ಮಳೆಯ ಸಂದರ್ಭದಲ್ಲಿ ಕಾಫಿ ಒಣಗಿಸಲು ಆಧುನಿಕ ಡ್ರೈಯಿಂಗ್ ವ್ಯವಸ್ಥೆ ಸೇರಿದಂತೆ ಯಂತ್ರೋಪಕರಣಗಳನ್ನು ಬಳಸಬೇಕು. ಹಣ್ಣು ಮತ್ತು ಕಾಯಿಯನ್ನು ವಿಂಗಡಿಸುವ ಯಂತ್ರಗಳು ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುವುದರಿಂದ ಕಡಿಮೆ ಕಾರ್ಮಿಕರ ಮೂಲಕ ಹೆಚ್ಚಿನ ಉತ್ಪಾದನೆ ಸಾಧಿಸಬಹುದು ಎಂದರು.
ಕಾಫಿ ಬೆಳೆಗಾರರನ್ನು ಕೇವಲ ಶ್ರೀಮಂತ ವರ್ಗವೆಂದು ನೋಡುವುದು ಸರಿಯಲ್ಲ. ಅನೇಕ ಸಣ್ಣ ಹಾಗೂ ಮಧ್ಯಮ ಬೆಳೆಗಾರರು ಕಾಫಿ ಬೆಳೆಯನ್ನೇ ಅವಲಂಬಿಸಿ ಕುಟುಂಬ ನಿರ್ವಹಿಸುತ್ತಿದ್ದಾರೆ. ಕಾಫಿ ಉದ್ಯಮದ ಮೇಲೆ ಪರಿಣಾಮ ಬೀರುವ ಯಾವುದೇ ನೀತಿ ರೂಪಿಸುವಾಗ ಅವರ ಬದುಕನ್ನೂ ಪರಿಗಣಿಸಬೇಕು ಎಂದರು.
ಕಸ್ತೂರಿ ರಂಗನ್ ವರದಿಯ ಏಳನೇ ಕರಡನ್ನು ವಿರೋಧಿಸುವ ನಿಲುವನ್ನು ಸದನದಲ್ಲಿಯೂ ವ್ಯಕ್ತಪಡಿಸಲಾಗುತ್ತಿದೆ. ಕಾಫಿ ಬೆಳೆಗಾರರ ಪರವಾಗಿ ಸರ್ಕಾರದ ಮುಂದೆ ಧ್ವನಿ ಎತ್ತುವುದಾಗಿ ಭರವಸೆ ನೀಡಿದರು.
ಸಂಘಟನೆಯೇ ಬೆಳೆಗಾರರ ಶಕ್ತಿ
ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಅಧ್ಯಕ್ಷ ರತೇಶ್ ಕುಮಾರ್ ಮಾತನಾಡಿ, ಜಿಲ್ಲೆಯ ಕಾಫಿ ಬೆಳೆಗಾರರನ್ನು ಒಂದೇ ವೇದಿಕೆಯಡಿ ಸಂಘಟಿಸುವ ಉದ್ದೇಶದಿಂದ ಜಿಲ್ಲಾ ಬೆಳೆಗಾರರ ಸಂಘವನ್ನು ಬಲಪಡಿಸಲಾಗುತ್ತಿದೆ ಎಂದರು.
ಕಾಫಿ ಉದ್ಯಮದಿಂದ ದೂರ ಸರಿದು ಯುವಕರು ನಗರಗಳತ್ತ ತೆರಳುತ್ತಿರುವುದು ಆತಂಕಕಾರಿ ಬೆಳವಣಿಗೆ. ಕಾಫಿ ತೋಟಗಳಲ್ಲಿ ಆಧುನಿಕ ತಂತ್ರಜ್ಞಾನ, ಮೌಲ್ಯವರ್ಧನೆ ಹಾಗೂ ನೇರ ಮಾರುಕಟ್ಟೆ ವ್ಯವಸ್ಥೆ ರೂಪಿಸಿದರೆ ಯುವಕರನ್ನು ಮತ್ತೆ ಕೃಷಿಯತ್ತ ಆಕರ್ಷಿಸಬಹುದು ಎಂದು ಹೇಳಿದರು.
ಕಾಫಿ ತೋಟ ನಷ್ಟದ ಉದ್ಯಮ ಎಂಬ ಮನೋಭಾವ ಬದಲಾಗಬೇಕು. ಗುಣಮಟ್ಟದ ಕಾಫಿ ಉತ್ಪಾದನೆ, ನೇರ ಮಾರುಕಟ್ಟೆ ಹಾಗೂ ಸ್ವಂತ ಬ್ರ್ಯಾಂಡಿಂಗ್ ಮೂಲಕ ಬೆಳೆಗಾರರು ಹೆಚ್ಚಿನ ಆದಾಯ ಗಳಿಸುವ ಅವಕಾಶವಿದೆ ಎಂದರು.
ಕಸ್ತೂರಿ ರಂಗನ್ ವರದಿ, ಅರಣ್ಯ ಕಾಯ್ದೆಗಳು ಹಾಗೂ ಭೂಮಿ ಸಂಬಂಧಿತ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ಕಲ್ಪಿಸುವಂತೆ ಶಾಸಕರು ಹಾಗೂ ಸರ್ಕಾರವನ್ನು ಒತ್ತಾಯಿಸಿದರು.
ಕಾಫಿ ಮಂಡಳಿ ಅಧ್ಯಕ್ಷ ಎಂ.ಜೆ. ದಿನೇಶ್ ಅವರು ಬೆಳೆಗಾರರ ಸಮಸ್ಯೆಗಳಿಗೆ ಸ್ಪಂದಿಸಿ ಮಂಡಳಿಯನ್ನು ಜನಸ್ನೇಹಿಯಾಗಿ ರೂಪಿಸಲು ಪ್ರಯತ್ನಿಸುತ್ತಿರುವುದು ಆಶಾದಾಯಕವಾಗಿದೆ. ಮಂಡಳಿಯ ಸಿಇಒ ಸೇರಿದಂತೆ ಅಧಿಕಾರಿಗಳು ಹಾಗೂ ಬೆಳೆಗಾರರ ಸಂಘಟನೆಗಳು ಒಗ್ಗೂಡಿ ಕೆಲಸ ಮಾಡಿದರೆ ಕಾಫಿ ಉದ್ಯಮಕ್ಕೆ ಮತ್ತಷ್ಟು ಬಲ ಸಿಗಲಿದೆ ಎಂದರು.
ಕಾರ್ಯಕ್ರಮದಲ್ಲಿ ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘದ ಪದಾಧಿಕಾರಿಗಳು, ವಿವಿಧ ಹೋಬಳಿ ಬೆಳೆಗಾರರ ಸಂಘಗಳ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಮಹಿಳಾ ಕಾಫಿ ಫೋರಂನ ಪ್ರತಿನಿಧಿಗಳು, ಕಾಫಿ ಮಂಡಳಿ ಅಧಿಕಾರಿಗಳು, ತಜ್ಞರು, ಕಾಫಿ ಬೆಳೆಗಾರರು ಹಾಗೂ ವಿವಿಧ ಸಂಘಟನೆಗಳ ಮುಖಂಡರು ಭಾಗವಹಿಸಿದ್ದರು.
A united struggle is necessary to save the coffee industry.
Leave a comment