ಚಿಕ್ಕಮಗಳೂರು: ಭೀಕರ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಮರ್ಪಕವಾಗಿ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿ, ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ಸೆ.28ರಂದು ನಗರದಲ್ಲಿ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ.
ನಗರದ ಪ್ರೆಸ್ಕ್ಲಬ್ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಮುಖಂಡ ಗುರುಶಾಂತಪ್ಪ ಮಾತನಾಡಿ, ಸೆ.28ರಂದು ತಾಲ್ಲೂಕು ಕಚೇರಿಯಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲಾಗುವುದು. ರೈತರ ಕೃಷಿ ಸಾಲ ಮನ್ನಾ ಮಾಡುವುದು, ಕೃಷಿ ಪಂಪ್ಸೆಟ್ಗಳಿಗೆ ಸಮರ್ಪಕ ವಿದ್ಯುತ್ ಪೂರೈಸುವುದು ಹಾಗೂ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀಡುವುದು ಸೇರಿದಂತೆ ವಿವಿಧ ಬೇಡಿಕೆಗಳನ್ನು ಸರ್ಕಾರದ ಮುಂದಿಡಲಾಗುವುದು ಎಂದು ತಿಳಿಸಿದರು.
ರಾಜ್ಯದಲ್ಲಿ ದೀರ್ಘಕಾಲದ ಬಳಿಕ ತೀವ್ರ ಬರಗಾಲದ ಪರಿಸ್ಥಿತಿ ನಿರ್ಮಾಣವಾಗಿದೆ. ಮುಂಗಾರು ಅವಧಿಯಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆಯಾಗದೆ ಕೆರೆ-ಕಟ್ಟೆಗಳು ಒಣಗಿವೆ. ಜಲಮೂಲಗಳು ಬತ್ತಿದ್ದು, ಕೊಳವೆಬಾವಿಗಳಲ್ಲೂ ನೀರಿನ ಮಟ್ಟ ಕುಸಿದಿದೆ. ಇದರಿಂದ ಜನ-ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ. ಕೃಷಿ ಚಟುವಟಿಕೆ ಕುಂಠಿತಗೊಂಡಿರುವುದರಿಂದ ರೈತರಿಗೆ ಕೆಲಸವಿಲ್ಲದೆ, ಕೃಷಿ ಕಾರ್ಮಿಕರಿಗೆ ಕೂಲಿ ಸಿಗದೆ ಉದ್ಯೋಗ ಅರಸಿ ನಗರ ಪ್ರದೇಶಗಳಿಗೆ ಗುಳೆ ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ಹೇಳಿದರು.
ಸರ್ಕಾರ ಕೆಲ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಿದ್ದರೂ ತೀವ್ರ ಬರ ಎದುರಿಸುತ್ತಿರುವ ಇನ್ನಷ್ಟು ಪ್ರದೇಶಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಲು ವಿಳಂಬ ಮಾಡುತ್ತಿದೆ. ಹಳೆಯ ಮಾನದಂಡಗಳ ನೆಪ ಹೇಳಿ ಸರ್ಕಾರಗಳು ಹೊಣೆಗಾರಿಕೆಯಿಂದ ನುಣುಚಿಕೊಳ್ಳಬಾರದು. ವಾಸ್ತವ ಪರಿಸ್ಥಿತಿಯನ್ನು ಆಧರಿಸಿ ವೈಜ್ಞಾನಿಕವಾಗಿ ಬರ ಪರಿಹಾರ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಮಳೆಯ ಕೊರತೆಯಿಂದ ಪರಿಸ್ಥಿತಿ ಬಿಗಡಾಯಿಸಿದೆ. ವಿಶೇಷವಾಗಿ ಬಯಲುಸೀಮೆ ಭಾಗದಲ್ಲಿ ಕೆರೆ-ಕಟ್ಟೆಗಳು ಒಣಗಿದ್ದು, ಕೊಳವೆಬಾವಿಗಳು ಬತ್ತಿವೆ. ಭತ್ತ, ರಾಗಿ, ಜೋಳ, ಎಳ್ಳು, ಸೂರ್ಯಕಾಂತಿ ಸೇರಿದಂತೆ ಹಲವು ಬೆಳೆಗಳನ್ನು ಬೆಳೆಯಲು ಸಾಧ್ಯವಾಗದ ಸ್ಥಿತಿ ನಿರ್ಮಾಣವಾಗಿದೆ. ಅಡಿಕೆ ತೋಟಗಳಿಗೂ ನೀರಿನ ಕೊರತೆ ಎದುರಾಗಿದ್ದು, ವರ್ಷಗಳ ಕಾಲ ಕಷ್ಟಪಟ್ಟು ಬೆಳೆಸಿದ ಅಡಿಕೆ ಮರಗಳು ಒಣಗುವ ಆತಂಕ ಎದುರಾಗಿದೆ ಎಂದು ಹೇಳಿದರು.
ಗ್ರಾಮೀಣ ಪ್ರದೇಶದ ಪ್ರಮುಖ ಆರ್ಥಿಕ ಚಟುವಟಿಕೆಗಳಲ್ಲಿ ಒಂದಾದ ಹೈನುಗಾರಿಕೆಯ ಮೇಲೂ ಬರದ ಪರಿಣಾಮ ಬೀರಿದೆ. ಜಾನುವಾರುಗಳಿಗೆ ಮೇವು ಮತ್ತು ನೀರಿನ ಕೊರತೆ ಉಂಟಾಗಿದೆ. ಕುರಿ ಸಾಕಾಣಿಕೆದಾರರೂ ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಭದ್ರಾ ಉಪಕಣಿವೆ ಯೋಜನೆಯಡಿ ಬಯಲು ಭಾಗದ ಕೆರೆಗಳನ್ನು ತುಂಬಿಸುವ ಕಾಮಗಾರಿ ನಿಧಾನಗತಿಯಲ್ಲಿ ಸಾಗುತ್ತಿದೆ. ತರೀಕೆರೆ, ಅಜ್ಜಂಪುರ, ಕಡೂರು ಹಾಗೂ ಚಿಕ್ಕಮಗಳೂರು ತಾಲ್ಲೂಕುಗಳ ಕೆರೆಗಳಿಗೆ ಯೋಜನೆಯಂತೆ ನೀರು ಹರಿಸುವ ಕಾಮಗಾರಿಯನ್ನು ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲೆಯಲ್ಲಿ ಹುಟ್ಟಿ ಹರಿಯುವ ನದಿ ನೀರನ್ನು ಜಿಲ್ಲೆಯ ಕೆರೆಗಳಿಗೆ ಸಮರ್ಪಕವಾಗಿ ಬಳಸಿಕೊಳ್ಳಬೇಕು. ತೀವ್ರ ಬರಗಾಲದ ಹಿನ್ನೆಲೆಯಲ್ಲಿ ಭದ್ರಾ ಉಪಕಣಿವೆ ಯೋಜನೆಯ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಿ ಬಯಲು ಭಾಗದ ಕೆರೆಗಳಿಗೆ ನೀರು ತುಂಬಿಸಬೇಕು. ರಣಘಟ್ಟ ಯೋಜನೆಯನ್ನೂ ತ್ವರಿತವಾಗಿ ಪೂರ್ಣಗೊಳಿಸಿ ರೈತರಿಗೆ ನೀರು ಒದಗಿಸಬೇಕು ಎಂದು ಒತ್ತಾಯಿಸಿದರು.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ, ಕಸಬಾ ಹಾಗೂ ಲಕ್ಯಾ ಹೋಬಳಿಗಳು ತೀವ್ರ ಬರಗಾಲಕ್ಕೆ ತುತ್ತಾಗಿದ್ದರೂ ಬರಪೀಡಿತ ಪಟ್ಟಿಯಿಂದ ಹೊರಗಿಡಲಾಗಿದೆ ಎಂದು ಗುರುಶಾಂತಪ್ಪ ಆರೋಪಿಸಿದರು.
ಲಕ್ಯಾ ಹೋಬಳಿಯ ಹಲವು ಗ್ರಾಮಗಳಿಗೆ ನೀರು ಒದಗಿಸುತ್ತಿದ್ದ ದಾಸರಹಳ್ಳಿ ಕೆರೆಯ ಏರಿ ದುರಸ್ತಿ ಕಾಮಗಾರಿ ವಿಳಂಬವಾಗುತ್ತಿದೆ. ಕೆರೆಯಲ್ಲಿದ್ದ ನೀರನ್ನು ಕಾಮಗಾರಿ ಹೆಸರಿನಲ್ಲಿ ಖಾಲಿ ಮಾಡಲಾಗಿದ್ದು, ವರ್ಷ ಕಳೆದರೂ ಕಾಮಗಾರಿ ಪೂರ್ಣಗೊಂಡಿಲ್ಲ. ಗುತ್ತಿಗೆದಾರರ ಮೇಲೆ ಒತ್ತಡ ಹೇರಿ ಕಾಮಗಾರಿ ತ್ವರಿತವಾಗಿ ಪೂರ್ಣಗೊಳಿಸಬೇಕು ಎಂದು ಆಗ್ರಹಿಸಿದರು.
ಕರಗಡ ಏತ ನೀರಾವರಿ ಯೋಜನೆಯ ಮೂಲಕ ಕಳಸಾಪುರ ಹಾಗೂ ಈಶ್ವರಹಳ್ಳಿ ಭಾಗದ ಕೆರೆಗಳಿಗೆ ನೀರು ಹರಿಸಬೇಕು. ಬೈರಾಪುರ ಪಿಕಪ್ನಿಂದ ಲಕ್ಯಾ ಮಾದರಸನ ಕೆರೆಗೆ ನೀರು ತುಂಬಿಸಲು ಪಂಪ್ಗಳನ್ನು ಕೂಡಲೇ ಚಾಲನೆಗೊಳಿಸಬೇಕು ಎಂದು ಒತ್ತಾಯಿಸಿದರು.
36 ವರ್ಷಗಳ ಹೋರಾಟದ ಫಲವಾಗಿ ಕೈಗೆತ್ತಿಕೊಂಡಿರುವ ಮಳಲೂರು ಏತ ನೀರಾವರಿ ಯೋಜನೆಯ ಕಾಮಗಾರಿ ಅರ್ಧಕ್ಕೆ ನಿಂತಿದೆ. ಯೋಜನೆಗಾಗಿ ಭೂಮಿ ನೀಡಿರುವ ರೈತರಿಗೆ ಪರಿಹಾರ ನೀಡುವಲ್ಲಿಯೂ ವಿಳಂಬವಾಗುತ್ತಿದೆ. ಪರಿಹಾರಕ್ಕೆ ಹಣ ಮಂಜೂರಾಗಿದ್ದರೂ ತಾಂತ್ರಿಕ ಕಾರಣಗಳ ನೆಪದಲ್ಲಿ ವಿಳಂಬ ಮಾಡಲಾಗುತ್ತಿದೆ ಎಂದು ಆರೋಪಿಸಿದರು.
ಕಾವೇರಿ ನೀರಾವರಿ ನಿಗಮವು ಅರ್ಧಕ್ಕೆ ನಿಂತಿರುವ ಕಾಮಗಾರಿಗೆ ಕೂಡಲೇ ಚಾಲನೆ ನೀಡಿ ಸಮರೋಪಾದಿಯಲ್ಲಿ ಪೂರ್ಣಗೊಳಿಸಬೇಕು. ರೈತರಿಗೆ ನೀರು ದೊರೆಯುವಂತೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಅಜ್ಜಂಪುರ ತಾಲ್ಲೂಕಿನ ಕೆಲವು ಗ್ರಾಮಗಳು ಭದ್ರಾ ಉಪಕಣಿವೆ ಹಾಗೂ ಉಬ್ರಾಣಿ ಏತ ನೀರಾವರಿ ಯೋಜನೆಗಳಿಂದ ಹೊರಗುಳಿದಿವೆ. ಈ ಭಾಗದ ಕೆರೆಗಳಿಗೂ ನೀರು ಹರಿಸಲು ಜಿಲ್ಲಾಡಳಿತ ಮತ್ತು ಸ್ಥಳೀಯ ಶಾಸಕರು ತಕ್ಷಣ ಕ್ರಮ ಕೈಗೊಳ್ಳಬೇಕು. ಹುಣಸೆಕಟ್ಟೆ ದುರಸ್ತಿಪಡಿಸಬೇಕು ಎಂದು ರೈತ ಸಂಘ ಒತ್ತಾಯಿಸಿತು.
ಮಲೆನಾಡಿನ ರೈತರ ಬದುಕಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇರುವ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸಬೇಕು ಎಂದು ರೈತ ಸಂಘ ಆಗ್ರಹಿಸಿತು.
ತಲತಲಾಂತರಗಳಿಂದ ಕಾಡಂಚಿನಲ್ಲಿ ಬದುಕು ಕಟ್ಟಿಕೊಂಡಿರುವ ರೈತರ ಹಕ್ಕು ಮತ್ತು ಜೀವನೋಪಾಯವನ್ನು ರಕ್ಷಿಸಬೇಕು. ಪರಿಸರ ಸಂರಕ್ಷಣೆಯ ಹೆಸರಿನಲ್ಲಿ ಸ್ಥಳೀಯ ಜನರ ಬದುಕಿಗೆ ತೊಂದರೆಯಾಗುವ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದರು.
ರೈತರ ಕೃಷಿ ಸಾಲವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ ಶೇ.50ರ ಅನುಪಾತದಲ್ಲಿ ಮನ್ನಾ ಮಾಡಬೇಕು. ಬ್ಯಾಂಕ್ಗಳ ಸಾಲ ವಸೂಲಾತಿಗೆ ತಡೆ ನೀಡಬೇಕು. ಕೃಷಿ ಪಂಪ್ಸೆಟ್ಗಳಿಗೆ ಕನಿಷ್ಠ ಏಳು ಗಂಟೆ ವಿದ್ಯುತ್ ಪೂರೈಸಬೇಕು. ಕೆರೆ-ಕಟ್ಟೆಗಳಿಗೆ ನೀರು ತುಂಬಿಸಬೇಕು.
ಬೆಳೆ ನಷ್ಟಕ್ಕೆ ವೈಜ್ಞಾನಿಕವಾಗಿ ಪರಿಹಾರ ನಿಗದಿಪಡಿಸಿ ಎಕರೆಗೆ ಕನಿಷ್ಠ ₹50 ಸಾವಿರ ಪರಿಹಾರ ನೀಡಬೇಕು. ವಿಮಾ ಕಂಪನಿಗಳಿಂದ ಸಂಪೂರ್ಣ ಬೆಳೆ ನಷ್ಟ ಪರಿಹಾರವನ್ನು ರೈತರ ಖಾತೆಗೆ ಜಮಾ ಮಾಡಿಸಬೇಕು. ಜನ-ಜಾನುವಾರುಗಳಿಗೆ ಕುಡಿಯುವ ನೀರು ಹಾಗೂ ಜಾನುವಾರುಗಳಿಗೆ ಮೇವು ಒದಗಿಸಬೇಕು. ಹೆಚ್ಚಿನ ಪಡಿತರ ನೀಡಬೇಕು. ಖರೀದಿ ಕೇಂದ್ರಗಳಲ್ಲಿ ಖರೀದಿಸಿರುವ ಭತ್ತ, ಜೋಳ ಮತ್ತು ರಾಗಿಯ ಬಾಕಿ ಹಣವನ್ನು ಕೂಡಲೇ ರೈತರ ಖಾತೆಗೆ ಜಮಾ ಮಾಡಬೇಕು ಎಂದು ಆಗ್ರಹಿಸಿದರು.
ಗ್ರಾಮೀಣ ಭಾಗದಲ್ಲಿಯೇ ಉದ್ಯೋಗ ಕಲ್ಪಿಸುವುದರ ಜತೆಗೆ ಭವಿಷ್ಯದಲ್ಲಿ ಬರ ಪರಿಸ್ಥಿತಿ ಮರುಕಳಿಸದಂತೆ ಶಾಶ್ವತ ಹಾಗೂ ದೂರದೃಷ್ಟಿಯ ಕಾರ್ಯಕ್ರಮಗಳನ್ನು ರೂಪಿಸಬೇಕು ಎಂದು ರೈತ ಸಂಘ ಒತ್ತಾಯಿಸಿತು.
ಸುದ್ದಿಗೋಷ್ಠಿಯಲ್ಲಿ ರೈತ ಸಂಘದ ಜಿಲ್ಲಾಧ್ಯಕ್ಷ ಡಿ.ಮಲ್ಲೇಶ್, ಜಿಲ್ಲಾ ಗೌರವಾಧ್ಯಕ್ಷ ಎಂ.ಸಿ.ಬಸವರಾಜು, ಜಿಲ್ಲಾ ಖಜಾಂಚಿ ಕುಮಾರಸ್ವಾಮಿ, ತಾಲ್ಲೂಕು ಅಧ್ಯಕ್ಷ ಭದ್ರೇಗೌಡ ಹಾಗೂ ಪ್ರಧಾನ ಕಾರ್ಯದರ್ಶಿ ಎಂ.ಬಿ.ಚಂದ್ರಶೇಖರ್ ಉಪಸ್ಥಿತರಿದ್ದರು.
Farmers’ association protest march on September 28 demanding drought relief.
Leave a comment