ಚಿಕ್ಕಮಗಳೂರು: ಮಳಲೂರು ಏತ ನೀರಾವರಿ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಹರಿಸುವುದು ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಹಾಳಾಗಿರುವ ಅರಸನ ನಾಲೆಯನ್ನು ಪುನಶ್ಚೇತನಗೊಳಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ನೇತೃತ್ವದಲ್ಲಿ ಸೆ.22ರಂದು ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ.
ಚಿಕ್ಕಮಗಳೂರು ತಾಲ್ಲೂಕಿನ ಅಂಬಳೆ ಹೋಬಳಿಯ ಮಳಲೂರು ಏತ ನೀರಾವರಿ ಯೋಜನೆ ಹಾಗೂ ಅರಸನ ನಾಲೆಯ ಸಮಸ್ಯೆಗಳಿಂದ ಮಳಲೂರು ಮತ್ತು ಕೆ.ಆರ್.ಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾವಣಿಗೆನಾಡಿನ ಸಾವಿರಾರು ರೈತರು ಹಾಗೂ ಸಾವಿರಾರು ಎಕರೆ ಕೃಷಿ ಜಮೀನುಗಳಿಗೆ ನೀರಿನ ಸಮಸ್ಯೆ ಎದುರಾಗಿದೆ. ಹೀಗಾಗಿ ಎರಡೂ ನೀರಾವರಿ ಯೋಜನೆಗಳನ್ನು ತುರ್ತಾಗಿ ಪೂರ್ಣಗೊಳಿಸಿ ರೈತರ ಜಮೀನುಗಳಿಗೆ ನೀರು ಒದಗಿಸಬೇಕು ಎಂದು ರೈತ ಮುಖಂಡರು ಒತ್ತಾಯಿಸಿದರು.
ಚಿಕ್ಕಮಗಳೂರಿನಲ್ಲಿ ಸೋಮವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಅಧ್ಯಕ್ಷೀಯ ಮಂಡಳಿ ಸದಸ್ಯ ಡಿ.ರಾಮೇಗೌಡ ಮಾತನಾಡಿ, ಮಳಲೂರು ಏತ ನೀರಾವರಿ ಯೋಜನೆ ರೈತರ ಬಹುದಿನಗಳ ಬೇಡಿಕೆಯಾಗಿದೆ. ಯೋಜನೆಗೆ ಭೂಮಿ ಕಳೆದುಕೊಂಡ ರೈತರು ಸೇರಿದಂತೆ ನೀರಿನ ಫಲಾನುಭವಿಗಳು ಹಲವು ವರ್ಷಗಳಿಂದ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸುತ್ತಿದ್ದರೂ ಶಾಶ್ವತ ಪರಿಹಾರ ದೊರೆತಿಲ್ಲ ಎಂದು ಹೇಳಿದರು.
ಅರಸನ ನಾಲೆಯಲ್ಲಿ ಅವೈಜ್ಞಾನಿಕ ಕಾಮಗಾರಿಗಳಿಂದ ನೀರು ಸರಾಗವಾಗಿ ಹರಿಯದೆ ರೈತರಿಗೆ ತೊಂದರೆಯಾಗಿದೆ. ಆದ್ದರಿಂದ ಸಂಬಂಧಪಟ್ಟ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಾಲೆಯನ್ನು ಸಮರ್ಪಕವಾಗಿ ಪುನಶ್ಚೇತನಗೊಳಿಸಬೇಕು ಎಂದು ಆಗ್ರಹಿಸಿದರು.
ಮಳಲೂರು ಏತ ನೀರಾವರಿ ಯೋಜನೆ ಹಾಗೂ ಅರಸನ ನಾಲೆಯ ಸಮಸ್ಯೆಗಳನ್ನು 15 ದಿನಗಳೊಳಗಾಗಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ, ಕಾಮಗಾರಿಗಳನ್ನು ಆರಂಭಿಸಿ ಪೂರ್ಣಗೊಳಿಸಲು ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು. ಈ ಅವಧಿಯಲ್ಲಿ ಕ್ರಮ ಕೈಗೊಳ್ಳದಿದ್ದರೆ ಮುಂದಿನ ಹಂತದಲ್ಲಿ ಪ್ರಜಾಸತ್ತಾತ್ಮಕ ಹಾಗೂ ಕಾನೂನುಬದ್ಧ ಹೋರಾಟ ನಡೆಸುವುದು ಅನಿವಾರ್ಯವಾಗಲಿದೆ ಎಂದು ರೈತ ಮುಖಂಡರು ಎಚ್ಚರಿಸಿದರು.
ಪಾದಯಾತ್ರೆಗೆ ಸಂಬಂಧಿಸಿದಂತೆ ಪೊಲೀಸ್ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳಿಗೆ ಈಗಾಗಲೇ ಮಾಹಿತಿ ನೀಡಲಾಗಿದೆ. ಬಂದೋಬಸ್ತ್, ಆರೋಗ್ಯ, ಕುಡಿಯುವ ನೀರು, ಸ್ವಚ್ಛತೆ, ಸಂಚಾರ ಹಾಗೂ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳುವಂತೆ ಮನವಿ ಸಲ್ಲಿಸಲಾಗಿದೆ ಎಂದು ತಿಳಿಸಿದರು.
ಸೆ.22ರಂದು ಬೆಳಿಗ್ಗೆ 7 ಗಂಟೆಗೆ ಬಿರಂಜಿ ಹೊಳೆ–ಮಳಲೂರು ಏತ ನೀರಾವರಿ ಯೋಜನೆಯ ಆರಂಭಿಕ ಸ್ಥಳದಲ್ಲಿ ಪೂಜೆ ಸಲ್ಲಿಸಿ ಪಾದಯಾತ್ರೆ ಆರಂಭವಾಗಲಿದೆ. ಬೆಳಿಗ್ಗೆ 8 ಗಂಟೆಗೆ ಹಳುವಳ್ಳಿ, 9 ಗಂಟೆಗೆ ಮಳಲೂರು, 11 ಗಂಟೆಗೆ ರಾಂಪುರ–ಕೆ.ಎಂ.ರಸ್ತೆ ಮಾರ್ಗವಾಗಿ ಕದ್ರಿಮಿದ್ರಿ ಗಡಿ ತಲುಪಲಿದೆ. ಮಧ್ಯಾಹ್ನ 12 ಗಂಟೆಗೆ ಬೋಳರಾಮೇಶ್ವರ ದೇವಸ್ಥಾನ ತಲುಪಿದ ಬಳಿಕ ಐ.ಜಿ. ರಸ್ತೆ–ಎನ್ಎಂಸಿ ಸರ್ಕಲ್–ಹನುಮಂತಪ್ಪ ಸರ್ಕಲ್–ಎಂ.ಜಿ. ರಸ್ತೆ ಮಾರ್ಗವಾಗಿ ತೆರಳಿ ಮಧ್ಯಾಹ್ನ 1.30ಕ್ಕೆ ಆಜಾದ್ ಸರ್ಕಲ್ನಲ್ಲಿ ಪಾದಯಾತ್ರೆ ಮುಕ್ತಾಯಗೊಳ್ಳಲಿದೆ.
ಮಳಲೂರು ಏತ ನೀರಾವರಿ ಯೋಜನೆಗೆ ಭೂಮಿ ಕಳೆದುಕೊಂಡ ರೈತರು, ನೀರಿನ ಫಲಾನುಭವಿಗಳು, ಅರಸನ ನಾಲೆ ಫಲಾನುಭವಿಗಳು ಸೇರಿದಂತೆ ಜಾವಣಿಗೆನಾಡಿನ ರೈತರು ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆಯಲ್ಲಿ ಪಾಲ್ಗೊಂಡು ಬೆಂಬಲಿಸಬೇಕು ಎಂದು ರೈತ ಸಂಘದ ಮುಖಂಡರು ಮನವಿ ಮಾಡಿದರು.
ಪತ್ರಿಕಾಗೋಷ್ಠಿಯಲ್ಲಿ ನಜ್ಮಾಅಲಿ, ಎಂ.ಡಿ.ಶಂಕರ್, ಮಲ್ಲುಂಡಪ್ಪ, ಕಾಂತರಾಜು, ಚಂದ್ರಶೇಖರ್ ಸೇರಿದಂತೆ ರೈತ ಮುಖಂಡರು ಉಪಸ್ಥಿತರಿದ್ದರು
Farmers march today demanding revival of Arasana Nale
Leave a comment