ಚಿಕ್ಕಮಗಳೂರು: ಯಾವುದೇ ಪರವಾನಗಿ ಇಲ್ಲದೆ ಅಕ್ರಮವಾಗಿ ಮನೆಯಲ್ಲಿ ಒಂಟಿ ನಳಿಕೆಯ ನಾಡಬಂದೂಕು ಬಚ್ಚಿಟ್ಟುಕೊಂಡಿದ್ದ ವ್ಯಕ್ತಿಯೊಬ್ಬನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಚಿಕ್ಕಮಗಳೂರು ತಾಲೂಕಿನ ಮುತ್ತಿನಪುರ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಫಲಹಾರಸ್ವಾಮಿ ಮಠದ ನಿವಾಸಿ ಸತೀಶ (28) ಎಂಬಾತ ತನ್ನ ಮನೆಯಲ್ಲಿ ಯಾವುದೇ ಅಧಿಕೃತ ದಾಖಲೆ ಅಥವಾ ಪರವಾನಗಿ ಇಲ್ಲದೆ ಬಂದೂಕು ಇಟ್ಟುಕೊಂಡಿರುವ ಬಗ್ಗೆ ಗ್ರಾಮಾಂತರ ಠಾಣೆಯ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು, ಪಂಚರ ಸಮಕ್ಷಮದಲ್ಲಿ ಆತನ ಮನೆಗೆ ದಿಢೀರ್ ದಾಳಿ ನಡೆಸಿ ತಪಾಸಣೆ ಕೈಗೊಂಡಿದ್ದಾರೆ.
ಮನೆಯ ಬೆಡ್ರೂಂ ಅನ್ನು ಪರಿಶೀಲಿಸಿದಾಗ ಮಂಚದ ಅಡಿಯಲ್ಲಿ ಸುಮಾರು ನಾಲ್ಕೂವರೆ ಅಡಿ ಉದ್ದದ, ಕಬ್ಬಿಣದ ಬ್ಯಾರಲ್ ಹಾಗೂ ಹಿತ್ತಾಳೆ ಲೋಹದ ಪಟ್ಟಿ ಸುತ್ತಿದ ಒಂಟಿ ನಳಿಕೆಯ ಮಸಿ ಬಂದೂಕು (ಎಸ್.ಬಿ.ಎಂ.ಎಲ್) ಇರುವುದು ಪತ್ತೆಯಾಗಿದೆ.
ಪರವಾನಗಿ ಇಲ್ಲದೆ ಕಾನೂನುಬಾಹಿರವಾಗಿ ಬಂದೂಕು ಹೊಂದಿದ್ದ ಹಿನ್ನಲೆಯಲ್ಲಿ ಪೊಲೀಸರು ಬಂದೂಕನ್ನು ಮಹಜರ್ ನಡೆಸಿ ಜಪ್ತಿ ಮಾಡಿಕೊಂಡಿದ್ದು, ಆರೋಪಿ ಸತೀಶನ ವಿರುದ್ಧ ಶಸ್ತ್ರಾಸ್ತ್ರ ಕಾಯ್ದೆಯಡಿ (Arms Act) ಪ್ರಕರಣ ದಾಖಲಿಸಿಕೊಂಡು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.
Illegal muzzle-loading gun found in Muttinapura village
Leave a comment