ಚಿಕ್ಕಮಗಳೂರು: ಮನೆಗೆ ಬೀಗ ಹಾಕಿ ಮಾಲೀಕರು ದೂರದ ಊರಿಗೆ ತೆರಳಿದ್ದನ್ನೇ ಹೊಂಚು ಹಾಕಿದ ಖದೀಮರು, ಹಿಂಬಾಗಿಲು ಮುರಿದು ಒಳನುಗ್ಗಿ ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ ವಸ್ತುಗಳು ಹಾಗೂ ನಗದನ್ನು ದೋಚಿ ಪರಾರಿಯಾಗಿರುವ ಘಟನೆ ಚಿಕ್ಕಮಗಳೂರು ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಕಣದಾಳ್ ರಸ್ತೆ ಕೋಟೆಯಲ್ಲಿ ನಡೆದಿದೆ ಎಂದು ದೂರಲಾಗಿದೆ.
ಕಣದಾಳ್ ರಸ್ತೆ ಕೋಟೆಯ ನಿವಾಸಿ ಸಿ. ಮೋಹನ್ ಎಂಬುವವರು ಸುಮಾರು ಒಂದು ತಿಂಗಳ ಹಿಂದೆ ಮುಂಬೈನಲ್ಲಿರುವ ತಮ್ಮ ಪುತ್ರಿಯ ಮನೆಗೆ ತೆರಳಿದ್ದರು. ಮನೆ ಬೀಗ ಹಾಕಿರುವುದನ್ನು ಗಮನಿಸಿದ ಕಳ್ಳರು, ಯಾವುದೋ ಹರಿತವಾದ ಆಯುಧದಿಂದ ಮನೆಯ ಹಿಂಬಾಗಿಲನ್ನು ಮೀಟಿ ಒಳಪ್ರವೇಶಿಸಿದ್ದಾರೆ ಎನ್ನಲಾಗಿದೆ.
ಮನೆಯ ಹಿಂಬಾಗಿಲು ತೆರೆದಿರುವುದನ್ನು ಗಮನಿಸಿದ ಅಕ್ಕಪಕ್ಕದ ಮನೆಯವರು ಮೋಹನ್ ಅವರಿಗೆ ಮಾಹಿತಿ ನೀಡಿದ್ದು ಅವರು ತಮ್ಮ ಸಹೋದರ ಪ್ರಕಾಶ್ ಅವರಿಗೆ ಸ್ಥಳಕ್ಕೆ ತೆರಳಿ ಪರಿಶೀಲಿಸುವಂತೆ ತಿಳಿಸಿದ್ದಾರೆ.
ಪ್ರಕಾಶ್ ಸ್ಥಳಕ್ಕೆ ತೆರಳಿ ನೋಡಿದಾಗ ಮನೆಯಲ್ಲಿದ್ದ ವಸ್ತುಗಳು ಚೆಲ್ಲಾಪಿಲ್ಲಿಯಾಗಿದ್ದು, ಗಾಡ್ರೆಜ್ ಹಾಗೂ ವಾರ್ಡ್ ರೋಬ್ ಬೀರುಗಳನ್ನು ಒಡೆದು ಹಾಕಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.
ವೀಡಿಯೋ ಕಾಲ್ ಮೂಲಕ ಪರಿಶೀಲಿಸಿದಾಗ ಬೀರುವಿನಲ್ಲಿದ್ದ ₹30,000 ನಗದು ಹಾಗೂ ದೇವರ ಮನೆಯಲ್ಲಿದ್ದ ಎರಡು ಜೊತೆ ಬೆಳ್ಳಿ ದೀಪ, ಆರತಿ ತಟ್ಟೆ, ಪಂಚಪಾತ್ರೆ, ಉದ್ದರಣೆ ಸೇರಿದಂತೆ ಸುಮಾರು 1 ಲಕ್ಷ ಮೌಲ್ಯದ ಬೆಳ್ಳಿ ಸಾಮಗ್ರಿಗಳು ಕಳವಾಗಿರುವುದು ಬೆಳಕಿಗೆ ಬಂದಿದೆ ಎಂದು ಹೇಳಲಾಗಿದೆ.
ಈ ಕುರಿತು ಪ್ರಕಾಶ್ ನೀಡಿದ ಗಣಕೀಕೃತ ದೂರಿನ ಮೇರೆಗೆ ಚಿಕ್ಕಮಗಳೂರು ನಗರ ಠಾಣೆ ಪೊಲೀಸರು ಸ್ಥಳ ಪರಿಶೀಲನೆ ನಡೆಸಿ, ಕಳ್ಳರ ಪತ್ತೆಗೆ ಜಾಲ ಬೀಸಿದ್ದಾರೆ.
Silver items worth lakhs of rupees
Leave a comment