ಕಡೂರು: ಕುಟುಂಬ ಕಲಹ ಹಾಗೂ ಕ್ಷುಲ್ಲಕ ಜಿದ್ದಾಜಿದ್ದಿ ಅಂತಿಮವಾಗಿ ಭೀಕರ ಕೊಲೆಯಲ್ಲಿ ಅಂತ್ಯವಾಗಿರುವ ಆಘಾತಕಾರಿ ಘಟನೆಯೊಂದು ಚಿಕ್ಕಮಗಳೂರು ಜಿಲ್ಲೆಯ ಕಡೂರು ತಾಲೂಕಿನ ಪಂಚನಹಳ್ಳಿ ಸಮೀಪದ ಆಲದಹಳ್ಳಿ ತಾಂಡ್ಯಾದಲ್ಲಿ ನಡೆದಿದೆ.
ಕೇವಲ ಎರಡು ತೆಂಗಿನ ಸಸಿಗಳನ್ನು ಕಡಿದಿದ್ದಕ್ಕೆ ರೊಚ್ಚಿಗೆದ್ದ ಮಾವನೊಬ್ಬ ತನ್ನ ಅಳಿಯನನ್ನೇ ಮಚ್ಚಿನಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾನೆ. ಆಲದಹಳ್ಳಿ ತಾಂಡ್ಯಾ ನಿವಾಸಿ ದೇವರಾಜ್ ನಾಯ್ಕ (35) ಕೊಲೆಯಾದ ದುರ್ದೈವಿ.
ರಾಜಾನಾಯ್ ಎಂಬುವವರ ಮಗಳನ್ನು ಮದುವೆಯಾಗಿದ್ದ ದೇವರಾಜ್ ನಾಯ್‌ಗೆ ಕೌಟುಂಬಿಕ ಕಲಹ ತೀವ್ರವಾಗಿತ್ತು. ಗಂಡನೊಂದಿಗೆ ಪದೇಪದೆ ಗಲಾಟೆ ಮಾಡಿಕೊಳ್ಳುತ್ತಿದ್ದ ಪತ್ನಿ, ಆತನನ್ನು ಬಿಟ್ಟು ಬೆಂಗಳೂರಿನಲ್ಲಿ ವಾಸವಾಗಿದ್ದಳು. ಇತ್ತ ಒಂದೇ ಊನಲ್ಲಿ ವಾಸವಿದ್ದ ಮಾವ ರಾಜಾನಾಯ್ ಹಾಗೂ ಅಳಿಯ ದೇವರಾಜ್ ನಾಯ್ ನಡುವೆ ಪ್ರತಿನಿತ್ಯ ಸಣ್ಣಪುಟ್ಟ ವಿಚಾರಗಳಿಗೂ ಕಿತ್ತಾಟ ನಡೆಯುತ್ತಿತ್ತು.
ಇದೇ ವೈಮನಸ್ಸಿನ ಹಿನ್ನೆಲೆಯಲ್ಲಿ ಅಳಿಯ ದೇವರಾಜ್, ಮಾವನ ಹೊಲಕ್ಕೆ ನುಗ್ಗಿ ಜಗಳವಾಡಿ ಅಲ್ಲಿದ್ದ ಎರಡು ತೆಂಗಿನ ಸಸಿಗಳನ್ನು ಮಚ್ಚಿನಿಂದ ಕಡಿದುಹಾಕಿದ್ದಾನೆ. ತೆಂಗಿನ ಸಸಿಗಳನ್ನು ಕಡಿದಿದ್ದನ್ನು ಕಂಡು ಕೆಂಡಾಮಂಡಲವಾದ ಮಾವ ರಾಜಾನಾಯ್, ಅಳಿಯನ ಕೈಯಲ್ಲಿದ್ದ ಅದೇ ಮಚ್ಚನ್ನು ಕಿತ್ತುಕೊಂಡು ಸ್ಥಳದಲ್ಲೇ ಆತನ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಕೊಲೆ ಮಾಡಿದ್ದಾನೆ.
ಘಟನಾ ಸ್ಥಳಕ್ಕೆ ಪಂಚನಹಳ್ಳಿ ಠಾಣೆಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಈ ಸಂಬಂಧ ಪಂಚನಹಳ್ಳಿ ಪೊಲೀಸ್ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದ್ದು, ಆರೋಪಿ ಮಾವನ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗಿದೆ.
Son-in-law brutally hacked to death with a machete for cutting down a coconut sapling.
Leave a comment