ಚಿಕ್ಕಮಗಳೂರು: ವಿದೇಶದಿಂದ ಕೊರಿಯರ್ ಮೂಲಕ ಗಿಫ್ಟ್ ಹಾಗೂ ಹಣ ಕಳುಹಿಸುವುದಾಗಿ ನಂಬಿಸಿ ವಿವಿಧ ಶುಲ್ಕಗಳ ನೆಪದಲ್ಲಿ ದಂಪತಿಯಿಂದ ₹2.05 ಲಕ್ಷ ಆನ್‌ಲೈನ್ ಮೂಲಕ ವರ್ಗಾಯಿಸಿಕೊಂಡು ವಂಚಿಸಿರುವ ಘಟನೆ ನಡೆದಿದೆ.
ತೊಗರಿಹಂಕಲ್ ಗ್ರಾಮ ಪಂಚಾಯಿತಿಯಲ್ಲಿ ವಾಟರ್‌ಮ್ಯಾನ್ ಆಗಿ ಕೆಲಸ ಮಾಡುತ್ತಿರುವ ಪ್ರದೀಪ್ ಹೆಚ್.ಬಿ. ಅವರ ಪತ್ನಿ ಸರಸ್ವತಿ ಅವರು ಸುಮಾರು ಎರಡು ತಿಂಗಳ ಹಿಂದೆ ಫೇಸ್‌ಬುಕ್‌ನಲ್ಲಿ ‘ಮೇಲ್ ವಿಲಿಯಂ ಜಾನ್’ ಎಂಬ ವ್ಯಕ್ತಿಯ ಸ್ನೇಹದ ಕೋರಿಕೆಯನ್ನು ಸ್ವೀಕರಿಸಿದ್ದರು. ಸ್ಕಾಟ್‌ಲ್ಯಾಂಡ್‌ನವನೆಂದು ಪರಿಚಯಿಸಿಕೊಂಡಿದ್ದ ಆತ, ಕಾಸ್ಮೆಟಿಕ್ಸ್ ಸೇರಿದಂತೆ ಕೆಲವು ವಸ್ತುಗಳನ್ನು ಉಡುಗೊರೆಯಾಗಿ ಕಳುಹಿಸುವುದಾಗಿ ನಂಬಿಸಿದ್ದ.
ಅದರಂತೆ ಅ.29ರಂದು ಅಪರಿಚಿತ ಸಂಖ್ಯೆಯಿಂದ ಕರೆ ಮಾಡಿದ ಮಹಿಳೆಯೊಬ್ಬರು, ನಿಮ್ಮ ಗಿಫ್ಟ್ ಕೊರಿಯರ್ ದೆಹಲಿ ವಿಮಾನ ನಿಲ್ದಾಣದಲ್ಲಿದ್ದು, ಅದನ್ನು ಪಡೆಯಲು ಶುಲ್ಕ ಪಾವತಿಸಬೇಕೆಂದು ತಿಳಿಸಿದ್ದಾರೆ. ಇದನ್ನು ನಂಬಿದ ಸರಸ್ವತಿ ಅವರು ಫೋನ್‌ಪೇ ಮೂಲಕ ₹35 ಸಾವಿರ ವರ್ಗಾಯಿಸಿದ್ದಾರೆ. ಬಳಿಕ ಗಿಫ್ಟ್‌ನಲ್ಲಿ 80 ಪೌಂಡ್ ಹಣವಿದ್ದು, ಅದನ್ನು ಪಡೆಯಲು ಜಿಎಸ್‌ಟಿ ಪಾವತಿಸಬೇಕೆಂದು ತಿಳಿಸಿದ ಹಿನ್ನೆಲೆಯಲ್ಲಿ ಪ್ರದೀಪ್ ಅವರು ಆರ್‌ಟಿಜಿಎಸ್ ಮೂಲಕ ಮತ್ತೊಂದು ಬ್ಯಾಂಕ್ ಖಾತೆಗೆ ₹1.70 ಲಕ್ಷ ವರ್ಗಾಯಿಸಿದ್ದಾರೆ.
ನಂತರವೂ ಹಣ ಪಾವತಿಸುವಂತೆ ಕರೆ ಬಂದಾಗ ಅನುಮಾನಗೊಂಡ ದಂಪತಿ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ತಕ್ಷಣ ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಪ್ರದೀಪ್ ಅವರು ನ.3ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಒಟ್ಟು ₹2,05,000 ವಂಚಿಸಿರುವ ಆರೋಪಿಗಳ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
₹2.05 lakh swindled after being led to believe a gift was being sent via courier
Leave a comment