ಮೂಡಿಗೆರೆ: ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿ ಏರ್ಗನ್ನಿಂದ ಗುಂಡು ಹಾರಿಸಿ ಗಾಯಗೊಳಿಸಲಾಗಿದೆ ಎಂದು ಆರೋಪಿಸಲಾಗಿರುವ ಯುವಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿರುವ ಘಟನೆ ವರದಿಯಾಗಿದೆ.
ಗೌರಿಕೆರೆ ಗ್ರಾಮದ ನವೀನ್ (ಮೃತ) ಎಂಬಾತನನ್ನು ಅ.28ರಂದು ಸಂಜೆ ಗೌರಿಕೆರೆ ಗ್ರಾಮದ ಕೆರೆ ಸಮೀಪದಿಂದ ಬಲವಂತವಾಗಿ ಕರೆದೊಯ್ದು ಹಲ್ಲೆ ನಡೆಸಿ ಗುಂಡು ಹಾರಿಸಲಾಗಿದೆ ಎಂದು ತಂದೆ ಕುಮಾರ್ ಮೂಡಿಗೆರೆ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.
ಗಾಯಗೊಂಡಿದ್ದ ನವೀನ್ನನ್ನು ಮೂಡಿಗೆರೆ, ಹಾಸನ ಹಾಗೂ ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ನ.3ರಂದು ಸಂಜೆ 6ರಿಂದ 6.30ರ ನಡುವೆ ಮೃತಪಟ್ಟಿದ್ದಾನೆ.
ಆಸ್ಪತ್ರೆಯಲ್ಲಿ ತಂದೆಯೊಂದಿಗೆ ಮಾತನಾಡಿದ್ದ ನವೀನ್, ಚೇತನ್, ಭರತ್, ಪ್ರಿತಂ ಹಾಗೂ ಆನಂದ ಎಂಬ ನಾಲ್ವರು ತನ್ನ ಮೇಲೆ ಹಲ್ಲೆ ನಡೆಸಿ ಗುಂಡು ಹಾರಿಸಿದ್ದಾರೆ ಎಂದು ತಿಳಿಸಿದ್ದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಮೊ.ಸಂ.179/2026ರಂತೆ ಭಾರತೀಯ ನ್ಯಾಯ ಸಂಹಿತೆ ಕಲಂ 103(1) ಹಾಗೂ ಶಸ್ತ್ರಾಸ್ತ್ರ ಕಾಯ್ದೆಯ ಕಲಂ 3, 25ರ ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Attack involving gunfire – Youth dies after treatment fails
Leave a comment