ಚಿಕ್ಕಮಗಳೂರು: ದಲಿತರಿಗೆ ಮೀಸಲಿಟ್ಟಿರುವ ಸರ್ಕಾರಿ ಭೂಮಿಯನ್ನು ಭೂಹೀನ ದಲಿತರಿಗೆ ಮಂಜೂರು ಮಾಡಬೇಕು ಎಂದು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿಯು ನರಸಿಂಹರಾಜಪುರ ತಾಲ್ಲೂಕು ತಹಶೀಲ್ದಾರ್ ಕಚೇರಿ ಎದುರು ನಡೆಸುತ್ತಿರುವ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹ ಒಂಬತ್ತನೇ ದಿನಕ್ಕೆ ಕಾಲಿಟ್ಟಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕರ್ನಾಟಕ ದಲಿತ ಸಂಘರ್ಷ ಸಮಿತಿಯ ರಾಜ್ಯ ಸಮಿತಿ ಸಂಚಾಲಕ ತರೀಕೆರೆ ಎನ್. ವೆಂಕಟೇಶ್, ನರಸಿಂಹರಾಜಪುರ ತಾಲ್ಲೂಕಿನ ರಾವೂರು ಗ್ರಾಮದ ಸರ್ವೆ ನಂ. 157, 158, 159, ಶಿರಗಳಲೆ ಗ್ರಾಮದ ಸರ್ವೆ ನಂ. 127 ಹಾಗೂ ನಾಗಲಾಪುರ ಗ್ರಾಮದ ಸರ್ವೆ ನಂ. 28ರಲ್ಲಿ ಲಭ್ಯವಿರುವ ಜಮೀನನ್ನು ಭೂಹೀನ ದಲಿತರಿಗೆ ಮಂಜೂರು ಮಾಡಬೇಕೆಂದು ಒತ್ತಾಯಿಸಿದರು.
ಭೂ ಕಂದಾಯ ಅಧಿನಿಯಮ 1969ರ ನಿಯಮ 5ರ ಅನ್ವಯ ಶೇ.50ರಷ್ಟು ಮೀಸಲಾತಿ ಆಧಾರದಲ್ಲಿ ದಲಿತರಿಗೆ ಭೂಮಿ ಒದಗಿಸಬೇಕಾಗಿದೆ. ಈ ಸಂಬಂಧ 2010ರ ಮಾರ್ಚ್ 2ರಂದು ಜಿಲ್ಲಾಧಿಕಾರಿಗಳು ಹಾಗೂ ತಹಶೀಲ್ದಾರ್ ಅವರ ಆದೇಶದಂತೆ ಅರಣ್ಯ ಇಲಾಖೆಗೆ ಸೇರಿದ ಜಮೀನನ್ನು ಹೊರತುಪಡಿಸಿ ಉಳಿದ ಲಭ್ಯವಿರುವ ಜಮೀನಿನ ಕುರಿತು ಗ್ರಾಮ ಲೆಕ್ಕಿಗರು, ರಾಜಸ್ವ ನಿರೀಕ್ಷಕರು, ಅರಣ್ಯ ಇಲಾಖೆ ಅಧಿಕಾರಿಗಳು ಹಾಗೂ ತಾಲ್ಲೂಕು ಸರ್ವೆಯರ್ ಜಂಟಿಯಾಗಿ ಸ್ಥಳ ಪರಿಶೀಲನೆ ನಡೆಸಿ ನಕ್ಷೆ ಸಿದ್ಧಪಡಿಸಿದ್ದಾರೆ ಎಂದು ತಿಳಿಸಿದರು.
ಅರಣ್ಯ ವ್ಯವಸ್ಥಾಪನಾಧಿಕಾರಿಗಳು ನೀಡಿರುವ ಲಿಖಿತ ಮಾಹಿತಿಯಂತೆ ಶಿರಗಳಲೆ ಗ್ರಾಮದ ಸರ್ವೆ ನಂ. 126 ಮತ್ತು 127ರಲ್ಲಿ 10 ಎಕರೆ, ನಾಗಲಾಪುರ ಗ್ರಾಮದ ಸರ್ವೆ ನಂ. 28ರಲ್ಲಿ 38 ಎಕರೆ ಹಾಗೂ ಶಿರಗಳಲೆ ಗ್ರಾಮದ ಸರ್ವೆ ನಂ. 177ರಲ್ಲಿ 48 ಎಕರೆ ಉಳಿಕೆ ಜಮೀನು ಲಭ್ಯವಿದೆ. ಈ ಜಮೀನನ್ನು ಭೂಹೀನ ದಲಿತರಿಗೆ ಮಂಜೂರು ಮಾಡಲು ಅಗತ್ಯ ಕಡತ ಸಿದ್ಧಪಡಿಸಿ ಕ್ರಮ ಕೈಗೊಳ್ಳುವಂತೆ 2025ರ ಅಕ್ಟೋಬರ್ 4ರಂದು ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಗಿದೆ. ಆದರೆ ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಫೆಬ್ರವರಿ 16ರಿಂದ ನರಸಿಂಹರಾಜಪುರ ತಾಲ್ಲೂಕು ಕಚೇರಿ ಎದುರು ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ನಡೆಸಲಾಗುತ್ತಿದೆ. ಒಂಬತ್ತು ದಿನಗಳು ಕಳೆದರೂ ಅಧಿಕಾರಿಗಳು ಸಮಸ್ಯೆ ಬಗೆಹರಿಸಲು ಮುಂದಾಗಿಲ್ಲ. ಜಿಲ್ಲಾಧಿಕಾರಿಗಳು ಪ್ರತಿಭಟನಾ ಸ್ಥಳಕ್ಕೆ ಭೇಟಿ ನೀಡಿ ಹೋರಾಟಗಾರರ ಅಹವಾಲು ಆಲಿಸಬೇಕು. ಲಭ್ಯವಿರುವ ಜಮೀನನ್ನು ಭೂಹೀನ ದಲಿತರಿಗೆ ಮಂಜೂರು ಮಾಡುವ ಮೂಲಕ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.
ಬೇಡಿಕೆ ಈಡೇರುವವರೆಗೆ ಅಹೋರಾತ್ರಿ ಅನಿರ್ದಿಷ್ಟಾವಧಿ ಧರಣಿ ಸತ್ಯಾಗ್ರಹವನ್ನು ಮುಂದುವರಿಸುವುದಾಗಿ ಎಚ್ಚರಿಸಿದರು.
ಸುದ್ದಿಗೋಷ್ಠಿಯಲ್ಲಿ ಸಂಘಟನೆಯ ಮುಖಂಡರಾದ ಭೀಮಯ್ಯ, ರಾಜೇಶ್, ಜಿಲ್ಲಾ ಸಂಘಟನಾ ಸಚಿವ ಗಣೇಶ್, ಅಬ್ದುಲ್ ರಹಮಾನ್, ರಮೇಶ್, ಮಾಗಡಿ ಮಂಜುನಾಥ್, ಜಿಲ್ಲಾ ಮಹಿಳಾ ಸಂಘಟನಾ ಸಂಚಾಲಕಿ ಸವಿತಾ ರಮೇಶ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
Demand for the allotment of land reserved for Dalits
Leave a comment