ಚಿಕ್ಕಮಗಳೂರು: ಆನ್ಲೈನ್ ಟ್ರೇಡಿಂಗ್ನಲ್ಲಿ ಪ್ರತಿದಿನ ಶೇ.10ರಷ್ಟು ಲಾಭ ನೀಡುವುದಾಗಿ ನಂಬಿಸಿ ವ್ಯಕ್ತಿಯೊಬ್ಬರಿಂದ ಹಂತ ಹಂತವಾಗಿ 21.32 ಲಕ್ಷ ರೂ. ಹಣ ವರ್ಗಾಯಿಸಿಕೊಂಡು ವಂಚಿಸಿರುವ ಪ್ರಕರಣ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಭದ್ರ ಎಸ್ಟೇಟ್ನ ದುರ್ಗಾದ ಬೆಟ್ಟದಲ್ಲಿ ಸುಮಾರು 30 ವರ್ಷಗಳಿಂದ ಕ್ಲರ್ಕ್ ಆಗಿ ಕೆಲಸ ಮಾಡುತ್ತಿರುವ ಪಿಂಜಾರ್ ತಾಯಪ್ಪ ವಂಚನೆಗೊಳಗಾದವರು.
ದೂರಿನ ಪ್ರಕಾರ, ಜುಲೈ 28ರಂದು ತಾಯಪ್ಪ ಅವರ ವಾಟ್ಸ್ಆ್ಯಪ್ಗೆ ಅಪರಿಚಿತ ಸಂಖ್ಯೆಯಿಂದ ಬಂದ ಲಿಂಕ್ ಕ್ಲಿಕ್ ಮಾಡಿದಾಗ ‘Aurora Alliance’ ಎಂಬ ಟ್ರೇಡಿಂಗ್ ವಾಟ್ಸ್ಆ್ಯಪ್ ಗ್ರೂಪ್ಗೆ ಸೇರ್ಪಡೆಯಾಗಿದ್ದರು. ಈ ಗುಂಪಿನ ಸದಸ್ಯರು ಟ್ರೇಡಿಂಗ್ನಲ್ಲಿ ಮಾರ್ಗದರ್ಶನ ನೀಡುವುದಾಗಿ ಹಾಗೂ ಹಣ ಹೂಡಿಕೆ ಮಾಡಿದರೆ ಪ್ರತಿದಿನ ಶೇ.10ರಷ್ಟು ಲಾಭ ದೊರೆಯುವುದಾಗಿ ಆಮಿಷವೊಡ್ಡಿದ್ದರು.
ಅವರ ಮಾತು ನಂಬಿದ ತಾಯಪ್ಪ ಅವರಿಗೆ ‘SAMCO Primary Market Trading Account’ ಹೆಸರಿನಲ್ಲಿ ಪ್ರಮಾಣಪತ್ರವೊಂದನ್ನು ಕಳುಹಿಸಿ ಹೂಡಿಕೆ ಮಾಡಲು ಪ್ರೇರೇಪಿಸಿದ್ದರು. ಅದರಂತೆ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಹಣ ವರ್ಗಾಯಿಸಿದ್ದಾರೆ.
ಆಗಸ್ಟ್ 31ರಂದು 70 ಸಾವಿರ ರೂ., ಸೆಪ್ಟೆಂಬರ್ 7ರಂದು 40 ಸಾವಿರ ರೂ. ಹಾಗೂ ಸೆಪ್ಟೆಂಬರ್ 8ರಂದು 25 ಸಾವಿರ ರೂ., ಸೆಪ್ಟೆಂಬರ್ 10ರಂದು 3.50 ಲಕ್ಷ ರೂ., ಸೆಪ್ಟೆಂಬರ್ 15ರಂದು 79 ಸಾವಿರ ರೂ., ಸೆಪ್ಟೆಂಬರ್ 17ರಂದು 1.70 ಲಕ್ಷ ರೂ. ವರ್ಗಾಯಿಸಿದ್ದಾರೆ.
ಇದಲ್ಲದೆ ಸೆಪ್ಟೆಂಬರ್ 24ರಂದು 8.88 ಲಕ್ಷ ರೂ., ಅಕ್ಟೋಬರ್ 7ರಂದು 70 ಸಾವಿರ ರೂ. ಹಾಗೂ ಅಕ್ಟೋಬರ್ 13ರಂದು 2.40 ಲಕ್ಷ ರೂ. ಹಣವನ್ನು ವಿವಿಧ ಬ್ಯಾಂಕ್ ಖಾತೆಗಳು ಮತ್ತು ಯುಪಿಐ ಮೂಲಕ ಪಾವತಿಸಿದ್ದಾರೆ.
ಒಟ್ಟು 21,32,000 ರೂ. ಹಣವನ್ನು ಹೂಡಿಕೆ ಮಾಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ.
ನಂತರ ತಾವು ಹೂಡಿಕೆ ಮಾಡಿದ ಹಣವನ್ನು ಹಿಂಪಡೆಯಲು ಮುಂದಾದಾಗ, ಹಣ ಬಿಡುಗಡೆ ಮಾಡಲು ‘ಪರ್ಫಾರ್ಮೆನ್ಸ್ ಫೀ’ ಹೆಸರಿನಲ್ಲಿ ಹೆಚ್ಚುವರಿಯಾಗಿ 28,18,529 ರೂ. ಪಾವತಿಸುವಂತೆ ವಂಚಕರು ಒತ್ತಾಯಿಸಿದ್ದಾರೆ. ಇದರಿಂದ ಅನುಮಾನಗೊಂಡ ತಾಯಪ್ಪ ಅವರು ಹಣ ಹಿಂಪಡೆಯಲು ಅವಕಾಶ ಕಲ್ಪಿಸುವಂತೆ SAMCO ಸಂಸ್ಥೆಯ ವಿಳಾಸಕ್ಕೆ ಪತ್ರವನ್ನೂ ಬರೆದಿದ್ದರು.
ಆದರೆ, ಅಕ್ಟೋಬರ್ 26ರಂದು ತಾವು ಸದಸ್ಯರಾಗಿದ್ದ ಟ್ರೇಡಿಂಗ್ ಗ್ರೂಪ್ ಅನ್ನು ತೆಗೆದುಹಾಕಲಾಗಿದ್ದು, ತಾವು ವಂಚನೆಗೊಳಗಾಗಿರುವುದು ಅರಿವಿಗೆ ಬಂದಿದೆ. ಬಳಿಕ ಅಕ್ಟೋಬರ್ 28ರಂದು ಸೈಬರ್ ಸಹಾಯವಾಣಿ 1930ಕ್ಕೆ ಕರೆ ಮಾಡಿ ಎರಡು ಸ್ವೀಕೃತಿ ಸಂಖ್ಯೆಗಳಡಿ ದೂರು ದಾಖಲಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 30ರಂದು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಿಸಿಕೊಂಡು ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Lure of 10% profit in online trading: Rs 21.32 lakh fraud
Leave a comment