ಚಿಕ್ಕಮಗಳೂರು: ಕುಟುಂಬ ಸಮೇತ ದೇವಸ್ಥಾನ ಹಾಗೂ ಪ್ರವಾಸಕ್ಕೆ ತೆರಳಿದ್ದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 70 ಸಾವಿರ ರೂ. ಮೌಲ್ಯದ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಣ ಹಾಗೂ ವಾಚ್‌ಗಳನ್ನು ಕಳವು ಮಾಡಿರುವ ಘಟನೆ ನಗರದ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ನಿವಾಸಿ, ಕೆಎಸ್‌ಆರ್‌ಟಿಸಿಯಲ್ಲಿ ಲೆಕ್ಕ ಸಹಾಯಕ ಅಧಿಕಾರಿಯಾಗಿರುವ ಕೆ.ಎ. ಜಯಣ್ಣ ಅವರ ಮನೆಯಲ್ಲಿ ಕಳ್ಳತನ ನಡೆದಿದೆ.
ಜಯಣ್ಣ ಅವರು ಅಕ್ಟೋಬರ್ 24ರಂದು ಬೆಳಿಗ್ಗೆ 8 ಗಂಟೆಗೆ ಕುಟುಂಬ ಸಮೇತ ದೇವಸ್ಥಾನ ಹಾಗೂ ಪ್ರವಾಸಕ್ಕೆಂದು ಊರಿಗೆ ತೆರಳಿದ್ದರು. ಪ್ರವಾಸ ಮುಗಿಸಿಕೊಂಡು ಅಕ್ಟೋಬರ್ 29ರಂದು ಬೆಳಗಿನ ಜಾವ 2.45ರ ಸುಮಾರಿಗೆ ಮನೆಗೆ ಹಿಂದಿರುಗಿದಾಗ ಮನೆಯ ಮುಖ್ಯ ಬಾಗಿಲಿನ ಒಳಗಿನ ಬೀಗವನ್ನು ಯಾವುದೋ ಆಯುಧದಿಂದ ಮೀಟಿ ಮುರಿದು ಕಳ್ಳರು ಒಳನುಗ್ಗಿರುವುದು ಕಂಡುಬಂದಿದೆ.
ಮನೆಯ ಒಳಗೆ ಪರಿಶೀಲಿಸಿದಾಗ ನೆಲ ಅಂತಸ್ತಿನ ಕೊಠಡಿಯ ಬಾಗಿಲಿನ ಬೀಗವನ್ನೂ ಮುರಿದು ಬೀರುವಿನಲ್ಲಿದ್ದ 25 ಬೆಳ್ಳಿ ನಾಣ್ಯಗಳು, 10 ಗ್ರಾಂ ತೂಕದ ಬೆಳ್ಳಿ ಒಡವೆ, 4 ಸಾವಿರ ರೂ. ನಗದು ಹಾಗೂ ಎರಡು ವಾಚ್‌ಗಳನ್ನು ಕಳವು ಮಾಡಿರುವುದು ಗೊತ್ತಾಗಿದೆ.
ಅಲ್ಲದೆ, ಮೊದಲ ಅಂತಸ್ತಿನ ಎರಡು ಮತ್ತು ಮೂರನೇ ಮಲಗುವ ಕೋಣೆಗಳ ಬಾಗಿಲು ಹಾಗೂ ಬೀರುಗಳನ್ನು ಮುರಿದು ಬಟ್ಟೆಗಳನ್ನು ಚೆಲ್ಲಾಪಿಲ್ಲಿ ಮಾಡಲಾಗಿದೆ. ಈ ಪೈಕಿ ಮೂರನೇ ಕೊಠಡಿಯಲ್ಲಿದ್ದ ಸುಮಾರು 40 ಸಾವಿರ ರೂ. ಮೌಲ್ಯದ 5 ಗ್ರಾಂ ತೂಕದ ಚಿನ್ನದ ಕಿವಿಯೋಲೆಗಳನ್ನೂ ಕಳ್ಳರು ಕದ್ದೊಯ್ದಿದ್ದಾರೆ.
ಕುಟುಂಬದವರು ಮನೆಯಲ್ಲಿ ಇಲ್ಲದಿರುವುದನ್ನು ಗಮನಿಸಿ ಕಳ್ಳರು ಈ ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ. ಕಳವಾಗಿರುವ ಚಿನ್ನಾಭರಣ, ಬೆಳ್ಳಿ ವಸ್ತುಗಳು, ನಗದು ಹಾಗೂ ವಾಚ್‌ಗಳ ಒಟ್ಟು ಮೌಲ್ಯ ಸುಮಾರು 70 ಸಾವಿರ ರೂ. ಎಂದು ದೂರಿನಲ್ಲಿ ತಿಳಿಸಲಾಗಿದೆ.
ಈ ಸಂಬಂಧ ಜಯಣ್ಣ ಅವರು ಅಕ್ಟೋಬರ್ 29ರಂದು ಮಧ್ಯಾಹ್ನ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Gold silver and cash worth ₹70000 stolen
Leave a comment