ಚಿಕ್ಕಮಗಳೂರು: ಚಿಕ್ಕಮಗಳೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳ ಕಾಫಿ ಮತ್ತು ಟೀ ಪ್ಲಾಂಟೇಷನ್ಗಳಲ್ಲಿ ದುಡಿಯುವ ಕಾರ್ಮಿಕರ ವೇತನ ಹೆಚ್ಚಳಕ್ಕೆ ಸಂಬಂಧಿಸಿದಂತೆ ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಹಾಗೂ ಕಾರ್ಮಿಕ ಸಂಘಟನೆಗಳ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಇದರನ್ವಯ ನಾನ್ಸ್ಟಾಫ್ (ಆರ್ಟಿಸನ್ಸ್) ಕಾರ್ಮಿಕರಿಗೆ ಶೇ.17ರಷ್ಟು ಹಾಗೂ ಸೂಪರ್ವೈಸರ್ಗಳಿಗೆ ಶೇ.16ರಷ್ಟು ವೇತನ ಹೆಚ್ಚಳವಾಗಲಿದೆ. ಈ ಒಪ್ಪಂದವು 2026ರ ಏಪ್ರಿಲ್ನಿಂದ ಜಾರಿಗೆ ಬರಲಿದೆ ಎಂದು ಪ್ಲಾಂಟೇಷನ್ ಕಾರ್ಮಿಕ ಸಂಘಗಳ ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
ಇದೇ ವೇಳೆ, ಕೇಂದ್ರ ಸರ್ಕಾರದ ಹೊಸ ಇಪಿಎಫ್ ಯೋಜನೆ–2026ರ ಅಡಿಯಲ್ಲಿ ಜಾರಿಗೊಳಿಸಿರುವ ಕಾರ್ಮಿಕ ವಿರೋಧಿ ಕಠಿಣ ನಿಯಮಗಳನ್ನು ಹಿಂಪಡೆಯಬೇಕು ಹಾಗೂ ತೋಟದ ಕಾರ್ಮಿಕರಿಗೆ ವಿಶೇಷ ವಿನಾಯಿತಿ ನೀಡಬೇಕು ಎಂದು ಜಂಟಿ ಕಾರ್ಮಿಕ ಸಂಘಟನೆಗಳು ಆಗ್ರಹಿಸಿವೆ.
### ನಾನ್ಸ್ಟಾಫ್ ಕಾರ್ಮಿಕರಿಗೆ ಶೇ.17ರಷ್ಟು ವೇತನ ಹೆಚ್ಚಳ
ವೇತನ ಒಪ್ಪಂದದ ಪ್ರಕಾರ, ಹೊಸದಾಗಿ ನೇಮಕಗೊಳ್ಳುವ ನಾನ್ಸ್ಟಾಫ್ ಕಾರ್ಮಿಕರ ವಿವಿಧ ವರ್ಗಗಳಿಗೆ ರೂ.18,800ರಿಂದ ರೂ.19,200ರವರೆಗೆ ಮೂಲವೇತನ ನಿಗದಿಪಡಿಸಲಾಗಿದೆ. ಇದರೊಂದಿಗೆ ರೂ.435.60 ತುಟ್ಟಿಭತ್ಯೆ ದೊರೆಯಲಿದೆ. ಸೂಪರ್ವೈಸರ್ಗಳ ವೇತನದಲ್ಲಿ ಶೇ.16ರಷ್ಟು ಹೆಚ್ಚಳವಾಗಿದ್ದು, ಹೊಸದಾಗಿ ನೇಮಕಗೊಳ್ಳುವವರಿಗೆ ರೂ.18,400 ಮೂಲವೇತನದ ಜೊತೆಗೆ ರೂ.435.60 ತುಟ್ಟಿಭತ್ಯೆ ನೀಡಲಾಗುತ್ತದೆ.
ವೇತನದ ಜತೆಗೆ ಕಾರ್ಮಿಕರಿಗೆ ವಾಸದ ಮನೆ, ಕುಡಿಯುವ ನೀರು, ಉಚಿತ ಆರೋಗ್ಯ ಸೇವೆ, ಭವಿಷ್ಯ ನಿಧಿ, ಗ್ರಾಚ್ಯುಟಿ ಹಾಗೂ ಬೋನಸ್ ಸೇರಿದಂತೆ ವಿವಿಧ ಸೌಲಭ್ಯಗಳು ದೊರೆಯಲಿವೆ. ಕಳೆದ ನಾಲ್ಕು ದಶಕಗಳಿಂದ ಐಎನ್ಟಿಯುಸಿ ಮತ್ತು ಎಐಟಿಯುಸಿಗೆ ಸೇರಿದ ಕಾರ್ಮಿಕ ಸಂಘಟನೆಗಳು ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್ ಜತೆ ವೇತನ ಒಪ್ಪಂದಗಳನ್ನು ಮಾಡಿಕೊಂಡು ಬರುತ್ತಿವೆ ಎಂದು ಜಂಟಿ ಕ್ರಿಯಾ ಸಮಿತಿ ತಿಳಿಸಿದೆ.
### ಹೊಸ ಇಪಿಎಫ್ ನಿಯಮಗಳಿಗೆ ವಿರೋಧ
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಎನ್ಟಿಯುಸಿ ಪ್ರಧಾನ ಕಾರ್ಯದರ್ಶಿ ವಿ. ಮಾಣಿಕ್ಯ, ತೋಟದ ಕಾರ್ಮಿಕರು ಕಡಿಮೆ ದಿನಗೂಲಿ, ಉದ್ಯೋಗದ ಅನಿಶ್ಚಿತತೆ, ಮಕ್ಕಳ ಶಿಕ್ಷಣ ಹಾಗೂ ವೈದ್ಯಕೀಯ ವೆಚ್ಚ ಸೇರಿದಂತೆ ಹಲವು ಆರ್ಥಿಕ ಸವಾಲುಗಳನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಭವಿಷ್ಯ ನಿಧಿಯ ಹಣವು ಕಾರ್ಮಿಕರ ಪಾಲಿಗೆ ಪ್ರಮುಖ ಸಾಮಾಜಿಕ ಭದ್ರತೆಯಾಗಿದ್ದು, ತುರ್ತು ಅಗತ್ಯಗಳಿಗೆ ಅದನ್ನು ಬಳಸಿಕೊಳ್ಳಲು ಅನಗತ್ಯ ನಿರ್ಬಂಧ ವಿಧಿಸುವುದು ಸರಿಯಲ್ಲ ಎಂದರು.
ಪಿಎಫ್ ಮುಂಗಡ ಪಡೆಯುವಾಗ ಒಟ್ಟು ಮೊತ್ತದ ಶೇ.25ರಷ್ಟು ಹಣವನ್ನು ಖಾತೆಯಲ್ಲೇ ಉಳಿಸಿಕೊಳ್ಳಬೇಕೆಂಬ ಕಡ್ಡಾಯ ನಿಯಮದಿಂದ ಪ್ಲಾಂಟೇಷನ್ ಕಾರ್ಮಿಕರಿಗೆ ವಿನಾಯಿತಿ ನೀಡಬೇಕು. ವೈದ್ಯಕೀಯ ಚಿಕಿತ್ಸೆ, ಮಕ್ಕಳ ಶಿಕ್ಷಣ ಹಾಗೂ ಕುಟುಂಬದ ತುರ್ತು ಅಗತ್ಯಗಳಿಗಾಗಿ ಅರ್ಹ ಮೊತ್ತವನ್ನು ಪಡೆಯಲು ಅವಕಾಶ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
ಅದೇ ರೀತಿ, ಉದ್ಯೋಗ ಕಳೆದುಕೊಂಡ ಅಥವಾ ಕೆಲಸ ತೊರೆದ ಕಾರ್ಮಿಕರು ಪೂರ್ಣ ಪಿಎಫ್ ಸೆಟಲ್ಮೆಂಟ್ ಪಡೆಯಲು 12 ತಿಂಗಳವರೆಗೆ ಕಾಯಬೇಕೆಂಬ ನಿಯಮದಿಂದಲೂ ವಿನಾಯಿತಿ ನೀಡಬೇಕು. ಉದ್ಯೋಗವಿಲ್ಲದ ಅವಧಿಯಲ್ಲಿ ಜೀವನ ನಿರ್ವಹಣೆಗೆ ಸಂಕಷ್ಟ ಎದುರಿಸುವ ಕಾರ್ಮಿಕರು ತಮ್ಮದೇ ಹಣಕ್ಕಾಗಿ ದೀರ್ಘಕಾಲ ಕಾಯುವ ಪರಿಸ್ಥಿತಿ ನಿರ್ಮಾಣವಾಗಬಾರದು ಎಂದು ಹೇಳಿದರು.
### ಬೇಡಿಕೆ ಈಡೇರದಿದ್ದರೆ ಹೋರಾಟದ ಎಚ್ಚರಿಕೆ
ಕೇಂದ್ರ ಸರ್ಕಾರ ತಕ್ಷಣವೇ ಕಾರ್ಮಿಕ ಸಂಘಟನೆಗಳ ಬೇಡಿಕೆಗಳನ್ನು ಪರಿಗಣಿಸಿ ನ್ಯಾಯ ಒದಗಿಸಬೇಕು. ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಪ್ಲಾಂಟೇಷನ್ ವಲಯದಾದ್ಯಂತ ಹಂತ ಹಂತವಾಗಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು. ಕಾರ್ಮಿಕರ ನ್ಯಾಯಯುತ ಬೇಡಿಕೆಗಳಿಗೆ ವ್ಯಾಪಕ ಪ್ರಚಾರ ನೀಡಿ, ಸರ್ಕಾರದ ಗಮನ ಸೆಳೆಯಲು ಮಾಧ್ಯಮಗಳ ಸಹಕಾರವನ್ನೂ ಕೋರಿದರು.
ಸುದ್ದಿಗೋಷ್ಠಿಯಲ್ಲಿ ಕಾರ್ಮಿಕ ಸಂಘಟನೆಗಳ ಮುಖಂಡರಾದ ರಾಮಚಂದ್ರ ಒಡೆಯರ್, ಎ.ಪಿ. ಸಲ್ವಂ, ಗೋವಿಂದನ್, ಎಂ.ಸಿ. ಶಿವಾನಂದ ಸ್ವಾಮಿ ಹಾಗೂ ಸಿ. ಧರ್ಮರಾಜ್ ಉಪಸ್ಥಿತರಿದ್ದರು.
17% wage hike for plantation workers
Leave a comment