ನರಸಿಂಹರಾಜಪುರ: ಮನೆಯ ಗಾಡ್ರೇಜ್ ಬೀರುವಿನಲ್ಲಿಟ್ಟಿದ್ದ 47 ಗ್ರಾಂ ತೂಕದ ಚಿನ್ನಾಭರಣ ಕಳವಾಗಿದ್ದು, ಸುಮಾರು ₹4.70 ಲಕ್ಷ ನಷ್ಟ ಸಂಭವಿಸಿರುವ ಘಟನೆ ಪಟ್ಟಣದ ನೇತಾಜಿನಗರದ ಹೊಸ ಬಡಾವಣೆಯಲ್ಲಿ ಬೆಳಕಿಗೆ ಬಂದಿದೆ.
ಇಲ್ಲಿನ ನಿವಾಸಿ, ಪುಷ್ಪಾ ಆಸ್ಪತ್ರೆಯಲ್ಲಿ ನರ್ಸ್ ಆಗಿ ಕೆಲಸ ಮಾಡುತ್ತಿರುವ ರಮಾಮಣಿ (52) ಅವರು ಈ ಕುರಿತು ನರಸಿಂಹರಾಜಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಮಾಮಣಿ ಅವರು ಪತಿ ಹಾಗೂ ಮಗಳೊಂದಿಗೆ ವಾಸವಾಗಿದ್ದು, ಪತಿ ಚಾಲಕರಾಗಿ ಕೆಲಸ ಮಾಡುತ್ತಿದ್ದಾರೆ. ಮಗಳು ಶೃಂಗೇರಿಯಲ್ಲಿ ಪ್ರಥಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದಾರೆ. ಮನೆಯಲ್ಲಿದ್ದ ಗಾಡ್ರೇಜ್ ಬೀರುವಿನಲ್ಲಿ ಹಲವು ವರ್ಷಗಳಿಂದ ಚಿನ್ನಾಭರಣಗಳನ್ನು ಸಂಗ್ರಹಿಸಿಟ್ಟಿದ್ದರು.
ಸೆ.19ರಂದು ಕಾರ್ಯಕ್ರಮವೊಂದಕ್ಕೆ ಚಿನ್ನಾಭರಣಗಳನ್ನು ಧರಿಸಿದ್ದ ರಮಾಮಣಿ, ಕಾರ್ಯಕ್ರಮ ಮುಗಿದ ಬಳಿಕ ಅವುಗಳನ್ನು ಮತ್ತೆ ಬೀರುವಿನಲ್ಲಿ ಇಟ್ಟಿದ್ದರು. ಅ.6ರಂದು ಸಂಜೆ ಕೆಲಸ ಮುಗಿಸಿಕೊಂಡು ಮನೆಗೆ ಬಂದಾಗ, ಚಿನ್ನಾಭರಣಗಳಿದ್ದ ಪರ್ಸ್ ಮಂಚದ ಮೇಲಿರುವುದನ್ನು ಗಮನಿಸಿದ್ದಾರೆ. ಅನುಮಾನಗೊಂಡು ಬೀರು ತೆರೆದು ಪರಿಶೀಲಿಸಿದಾಗ, 22 ಗ್ರಾಂ ತೂಕದ ಲಾಂಗ್ ನೆಕ್ಲೆಸ್ ಹೊರತುಪಡಿಸಿ ಉಳಿದ ಚಿನ್ನಾಭರಣಗಳು ಕಾಣೆಯಾಗಿರುವುದು ಗೊತ್ತಾಗಿದೆ.
ಕಳವಾಗಿರುವ ಆಭರಣಗಳಲ್ಲಿ 17 ಗ್ರಾಂ ತೂಕದ ನೆಕ್ಲೆಸ್, 12 ಗ್ರಾಂ ತೂಕದ ಸರ, 4 ಗ್ರಾಂ ತೂಕದ ಹ್ಯಾಂಗಿಂಗ್ಸ್, 4 ಗ್ರಾಂ ತೂಕದ ಒಂದು ಜೊತೆ ಬೆಂಡೋಲೆ, 4 ಗ್ರಾಂ ತೂಕದ ಜುಮುಕಿ ಬೆಂಡೋಲೆ, 2 ಗ್ರಾಂ ತೂಕದ ಬೆಂಡೋಲೆ ಹಾಗೂ 4 ಗ್ರಾಂ ತೂಕದ ಮಾಟಿ ಸೇರಿವೆ. ಒಟ್ಟು 47 ಗ್ರಾಂ ಚಿನ್ನಾಭರಣಗಳ ಮೌಲ್ಯ ಸುಮಾರು ₹4.70 ಲಕ್ಷ ಎಂದು ಅಂದಾಜಿಸಲಾಗಿದೆ.
ಮನೆಯ ಬಾಗಿಲು ಅಥವಾ ಬೀರುವಿನ ಬೀಗ ಮುರಿದಿರಲಿಲ್ಲ. ಮನೆಯವರನ್ನು ವಿಚಾರಿಸಿದಾಗ ಯಾರೂ ಆಭರಣಗಳನ್ನು ತೆಗೆದುಕೊಂಡಿಲ್ಲ ಎಂದು ತಿಳಿಸಿದ್ದಾರೆ. ಸೆ.19ರ ಬಳಿಕ ಮನೆಗೆ ಆಗಾಗ್ಗೆ ಬಂದು ಹೋಗುತ್ತಿದ್ದ ಸೋದರಳಿಯನನ್ನು ಹೊರತುಪಡಿಸಿ ಬೇರೆ ಯಾರೂ ಬಂದಿರಲಿಲ್ಲ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಆಭರಣಗಳು ಮರಳಿ ಸಿಗಬಹುದು ಎಂಬ ನಿರೀಕ್ಷೆಯಿಂದ ಕುಟುಂಬದವರ ಬಳಿ ವಿಚಾರಿಸಿ ಕಾದಿದ್ದ ರಮಾಮಣಿ, ಆಭರಣಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ಅ.21ರಂದು ರಾತ್ರಿ 9.30ರ ಸುಮಾರಿಗೆ ಪೊಲೀಸ್ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ನರಸಿಂಹರಾಜಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
47 grams of gold jewellery stolen from a cupboard in a nurse’s home; loss of ₹4.70 lakh.
Leave a comment