ಚಿಕ್ಕಮಗಳೂರು: ಆರ್ಟಿಒ (RTO) ಚಲನ್ ಪಾವತಿಸುವ ನೆಪದಲ್ಲಿ ಮೊಬೈಲ್ಗೆ APK ಫೈಲ್ ಡೌನ್ಲೋಡ್ ಮಾಡಿಕೊಂಡ ಪರಿಣಾಮ ರೈತರೊಬ್ಬರ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ 6.08 ಲಕ್ಷ ರೂ. ಹಣ ವರ್ಗಾವಣೆಯಾಗಿರುವ ಸೈಬರ್ ವಂಚನೆ ಪ್ರಕರಣ ಅಜ್ಜಂಪುರ ತಾಲ್ಲೂಕಿನಲ್ಲಿ ಬೆಳಕಿಗೆ ಬಂದಿದೆ.
ಅಜ್ಜಂಪುರ ತಾಲ್ಲೂಕಿನ ಗರಗದಹಳ್ಳಿ ಗ್ರಾಮದ ಪ್ರವೀಣ್.ಜಿ.ಎನ್. (43) ಹಣ ಕಳೆದುಕೊಂಡವರು. ಇವರು ಕೆನರಾ ಬ್ಯಾಂಕ್ನ ಅಜ್ಜಂಪುರ ಶಾಖೆಯಲ್ಲಿ ಖಾತೆ ಹೊಂದಿದ್ದು, ಅದಕ್ಕೆ ಮೊಬೈಲ್ ಸಂಖ್ಯೆ ಲಿಂಕ್ ಮಾಡಿಕೊಂಡು ಫೋನ್ಪೇ ಬಳಸುತ್ತಿದ್ದರು.
ಅಕ್ಟೋಬರ್ 26ರಂದು ಸಂಜೆ ಸುಮಾರು 5.45ರ ವೇಳೆಗೆ ಹೊಸದುರ್ಗದಲ್ಲಿದ್ದಾಗ ಅವರ ಮೊಬೈಲ್ಗೆ ಬ್ಯಾಂಕ್ ಖಾತೆಯಿಂದ ಹಣ ಡೆಬಿಟ್ ಆಗಿರುವ ಸಂದೇಶಗಳು ಸರಣಿಯಾಗಿ ಬಂದಿವೆ. ಮೊದಲಿಗೆ 2,12,058.40 ರೂ., ನಂತರ 1,88,742 ರೂ., 1,07,007 ರೂ. ಹಾಗೂ 80,875 ರೂ. ಹಣ ವರ್ಗಾವಣೆಯಾಗಿದೆ. ಇದಲ್ಲದೆ 10 ಸಾವಿರ, 5 ಸಾವಿರ ಹಾಗೂ 4,715.04 ರೂ. ಸೇರಿದಂತೆ ಒಟ್ಟು 6,08,397.44 ರೂ. ಹಣವನ್ನು ವಂಚಕರು ವಿವಿಧ ಹಂತಗಳಲ್ಲಿ ವರ್ಗಾಯಿಸಿಕೊಂಡಿದ್ದಾರೆ ಎನ್ನಲಾಗಿದೆ.
ಹಣ ಕಡಿತವಾಗುತ್ತಿರುವುದನ್ನು ಗಮನಿಸಿದ ಪ್ರವೀಣ್ ಅವರು ತಕ್ಷಣ ಸಂಜೆ 6 ಗಂಟೆಗೆ ಕೆನರಾ ಬ್ಯಾಂಕ್ ಸಹಾಯವಾಣಿಗೆ ಕರೆ ಮಾಡಿ ಖಾತೆಯನ್ನು ಡೆಬಿಟ್ ಫ್ರೀಜ್ ಮಾಡಿಸಿದ್ದಾರೆ. ಬಳಿಕ ಸೈಬರ್ ಅಪರಾಧ ಸಹಾಯವಾಣಿ 1930ಕ್ಕೆ ಕರೆ ಮಾಡಿ ಎರಡು ಸ್ವೀಕೃತಿ ಸಂಖ್ಯೆಗಳಲ್ಲಿ ದೂರು ದಾಖಲಿಸಿದ್ದಾರೆ.
ಮರುದಿನ ಬ್ಯಾಂಕ್ಗೆ ತೆರಳಿ ಖಾತೆಯಲ್ಲಿನ ಹಣ ವರ್ಗಾವಣೆ ಕುರಿತು ಮಾಹಿತಿ ಪಡೆದುಕೊಂಡಿದ್ದಾರೆ. ತಮ್ಮ ಗಮನಕ್ಕೆ ಬಾರದೆ ಮೊಬೈಲ್ನಲ್ಲಿ ಆರ್ಟಿಒ ಚಲನ್ APK ಫೈಲ್ ಡೌನ್ಲೋಡ್ ಆಗಿದ್ದು, ಅದರ ಮೂಲಕ ವೈಯಕ್ತಿಕ ಹಣಕಾಸು ಮಾಹಿತಿಯನ್ನು ಕದ್ದು ಖಾತೆಯಲ್ಲಿದ್ದ ಹಣವನ್ನು ವರ್ಗಾಯಿಸಿಕೊಳ್ಳಲಾಗಿದೆ ಎಂದು ಅವರು ದೂರಿನಲ್ಲಿ ಆರೋಪಿಸಿದ್ದಾರೆ.
ಈ ಸಂಬಂಧ ಅಕ್ಟೋಬರ್ 29ರಂದು ಚಿಕ್ಕಮಗಳೂರು ಸೈಬರ್ ಕ್ರೈಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Cybercriminals hacked into farmer’s account after downloading RTO Challan APK
Leave a comment