ಚಿಕ್ಕಮಗಳೂರು: ಜಿಲ್ಲೆಯ ಕಡೂರು ತಾಲ್ಲೂಕಿನ ಯಳ್ಳಂಬಳಸೆ ಗ್ರಾಮದಲ್ಲಿ ವಾಲ್ಮೀಕಿ ಸಮುದಾಯದ ಐದು ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಲಾಗಿದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಬಹಿಷ್ಕಾರದಿಂದಾಗಿ ಸಾಮಾಜಿಕವಾಗಿ ಅವಮಾನ ಹಾಗೂ ಮಾನಸಿಕ ಕಿರುಕುಳ ಅನುಭವಿಸುತ್ತಿರುವ ಕುಟುಂಬಗಳಿಗೆ ನ್ಯಾಯ ಒದಗಿಸಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಹೋರಾಟಗಾರ್ತಿ ಗೀತಾದೇವಿ ಜಿ.ಎಚ್. ಆಗ್ರಹಿಸಿದರು.
ನಗರದ ಪ್ರೆಸ್ ಕ್ಲಬ್ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮದ ವಾಲ್ಮೀಕಿ ಸಮುದಾಯದ 35 ಕುಟುಂಬಗಳು ಸೇರಿ ಐದು ಕುಟುಂಬಗಳನ್ನು ಸಾಮಾಜಿಕವಾಗಿ ಪ್ರತ್ಯೇಕಿಸಿವೆ ಎಂದು ಆರೋಪಿಸಿದರು.
ಗ್ರಾಮದೇವತೆ ಹಳದಮ್ಮ ದೇವಿಯ ಧಾರ್ಮಿಕ ಕಾರ್ಯಗಳನ್ನು ನಡೆಸುವ ವಿಚಾರದಲ್ಲಿ ಉಂಟಾದ ಭಿನ್ನಾಭಿಪ್ರಾಯವೇ ವಿವಾದಕ್ಕೆ ಕಾರಣವಾಗಿದೆ. ದೇವರ ಕಾರ್ಯದಲ್ಲಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಐದು ಕುಟುಂಬಗಳನ್ನು ಸಮಾಜದಿಂದ ದೂರವಿಡಲಾಗಿದ್ದು, ಶುಭ ಸಮಾರಂಭಗಳಿಗೆ ಆಹ್ವಾನಿಸದಿರುವುದು ಹಾಗೂ ಸಾಮಾಜಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ಅಡ್ಡಿಪಡಿಸುವಂತಹ ಘಟನೆಗಳು ನಡೆದಿವೆ ಎಂದು ತಿಳಿಸಿದರು.
ಸಮುದಾಯದ ವೃದ್ಧೆಯೊಬ್ಬರ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಳ್ಳಲು ತೆರಳಿದ್ದ ಐದು ಕುಟುಂಬಗಳ ಸದಸ್ಯರಿಗೆ, ಅವರು ಬಂದರೆ ಇತರರು ಕಾರ್ಯಕ್ರಮದಲ್ಲಿ ಭಾಗವಹಿಸುವುದಿಲ್ಲ ಎಂದು ತಿಳಿಸಿದ್ದರಿಂದ ಹಿಂದಿರುಗಬೇಕಾಯಿತು ಎಂದು ಆರೋಪಿಸಿದರು. ಸೆಪ್ಟೆಂಬರ್ 10ರಂದು ನಡೆದ ಸಭೆಯ ಸಂದರ್ಭದಲ್ಲಿ ಐದು ಕುಟುಂಬಗಳ ಸದಸ್ಯರ ಮೇಲೆ ಹಲ್ಲೆ ನಡೆದಿದ್ದು, ಈ ಘಟನೆಗೆ ಸಂಬಂಧಿಸಿದ ಆಡಿಯೋ ಮತ್ತು ವಿಡಿಯೋ ದಾಖಲೆಗಳು ತಮ್ಮ ಬಳಿ ಇವೆ ಎಂದರು.
ಇದಲ್ಲದೆ, ನ್ಯಾಯಕ್ಕಾಗಿ ಪೊಲೀಸ್ ಠಾಣೆಗೆ ತೆರಳಿದಾಗ ಸಮರ್ಪಕವಾಗಿ ಸ್ಪಂದಿಸಿಲ್ಲ ಹಾಗೂ ಯಗಟಿ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ಸೈಯದ್ ಅಫ್ರೀದ್ ಅವರು ಗೀತಾದೇವಿಯವರ ವೈಯಕ್ತಿಕ ಬದುಕಿನ ಕುರಿತು ಆಕ್ಷೇಪಾರ್ಹವಾಗಿ ಮಾತನಾಡಿ ಅವಮಾನಿಸಿದ್ದಾರೆ ಎಂಬ ಆರೋಪವನ್ನೂ ಮಾಡಿದರು. ಈ ಸಂಬಂಧ ಹಿರಿಯ ಪೊಲೀಸ್ ಅಧಿಕಾರಿಗಳು, ಜಿಲ್ಲಾಧಿಕಾರಿ ಹಾಗೂ ಮಹಿಳಾ ಆಯೋಗಕ್ಕೆ ದೂರು ಸಲ್ಲಿಸಿರುವುದಾಗಿ ತಿಳಿಸಿದರು.
ಸಾಮಾಜಿಕ ಬಹಿಷ್ಕಾರದ ಆರೋಪ ಮತ್ತು ಪೊಲೀಸ್ ಅಧಿಕಾರಿಯ ವಿರುದ್ಧದ ದೂರುಗಳ ಕುರಿತು ನಿಷ್ಪಕ್ಷಪಾತ ತನಿಖೆ ನಡೆಸಿ ನ್ಯಾಯ ಒದಗಿಸಬೇಕು. ಗ್ರಾಮದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಶಾಶ್ವತ ಪರಿಹಾರ ಕಲ್ಪಿಸಬೇಕು. ನ್ಯಾಯ ಸಿಗುವವರೆಗೂ ತಮ್ಮ ಹೋರಾಟ ನಿಲ್ಲುವುದಿಲ್ಲ ಎಂದು ಗೀತಾದೇವಿ ಜಿ.ಎಚ್. ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಗವಿರಂಗಪ್ಪ, ವಿನಯ್ ಹಾಗೂ ಲಕ್ಷ್ಮೀದೇವಿ ಉಪಸ್ಥಿತರಿದ್ದರು.
Allegations of social boycott against 5 Valmiki families in Yallambalase
Leave a comment