ಚಿಕ್ಕಮಗಳೂರು: ನಗರದಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಅರಣ್ಯ ಭವನ ಸಂಕೀರ್ಣ ಅ.೨೭ರಂದು ಲೋಕಾರ್ಪಣೆಗೊಳ್ಳಲಿದ್ದು, ಅರಣ್ಯ ಸಚಿವ ರಾಮಲಿಂಗಾರೆಡ್ಡಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ. ಜಾರ್ಜ್ ಅವರು ಉದ್ಘಾಟಿಸಲಿದ್ದಾರೆ.
ಈ ಹಿನ್ನೆಲೆಯಲ್ಲಿ ಶಾಸಕ ಹೆಚ್.ಡಿ. ತಮ್ಮಯ್ಯ, ವಿಧಾನ ಪರಿಷತ್ ಸದಸ್ಯೆ ಗಾಯತ್ರಿ ಶಾಂತೇಗೌಡ ಹಾಗೂ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಭಾನುವಾರ ಸಂಕೀರ್ಣಕ್ಕೆ ಭೇಟಿ ನೀಡಿ ಪೂರ್ವಸಿದ್ಧತೆಗಳನ್ನು ಪರಿಶೀಲಿಸಿದರು.
ಇದೇ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಹೆಚ್.ಡಿ. ತಮ್ಮಯ್ಯ ಅವರು, ಅರಣ್ಯ ಭವನ ಸಂಕೀರ್ಣ ನಿರ್ಮಾಣಕ್ಕೆ ೨೦೨೨ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿದ್ದು, ಅಕ್ಟೋಬರ್ ೨೯, ೨೦೨೨ರಂದು ಟೆಂಡರ್ ಪ್ರಕ್ರಿಯೆ ಮತ್ತು ತಾಂತ್ರಿಕ ಅನುಮೋದನೆ ಪೂರ್ಣಗೊಂಡಿತ್ತು. ೨೦೨೩ರ ಅಕ್ಟೋಬರ್ ೨೦ರಂದು ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಿ, ಎರಡು ವರ್ಷಗಳೊಳಗೆ ಕಾಮಗಾರಿ ಪೂರ್ಣಗೊಳಿಸುವ ಗುರಿ ನಿಗದಿಪಡಿಸಲಾಗಿತ್ತು ಎಂದರು.
ಆರಂಭದಲ್ಲಿ ಅನುದಾನದ ಕೊರತೆಯಿಂದ ಕಾಮಗಾರಿ ಪ್ರಗತಿಗೆ ಅಡ್ಡಿಯಾಗಿತ್ತು. ಬಳಿಕ ಅರಣ್ಯ ಇಲಾಖೆಯ ಸಚಿವರು ಹಾಗೂ ಹಿರಿಯ ಅಧಿಕಾರಿಗಳ ಸಹಕಾರದಿಂದ ಹಂತ ಹಂತವಾಗಿ ಅನುದಾನ ಬಿಡುಗಡೆಯಾಗಿ ಕಟ್ಟಡ ನಿರ್ಮಾಣ ಪೂರ್ಣಗೊಂಡಿದೆ ಎಂದು ಹೇಳಿದರು.
೨೦೨೩-೨೪ನೇ ಸಾಲಿನಲ್ಲಿ ೯೩.೧೯ ಲಕ್ಷ ಹಾಗೂ ೨೦೨೪-೨೫ನೇ ಸಾಲಿನಲ್ಲಿ ೫೩ ಲಕ್ಷ ಬಿಡುಗಡೆ ಮಾಡಲಾಗಿತ್ತು. ನಂತರ ೨೦೨೫-೨೬ನೇ ಸಾಲಿನಲ್ಲಿ ೪೫೩ ಲಕ್ಷ ಮತ್ತು ೨೦೨೬-೨೭ನೇ ಸಾಲಿನಲ್ಲಿ ೩೦೮ ಲಕ್ಷ ಬಿಡುಗಡೆ ಮಾಡಲಾಗಿದೆ ಎಂದ ಶಾಸಕರು, ಒಟ್ಟಾರೆ ೯೦೮ ಲಕ್ಷ ಜಿಎಸ್ಟಿ ಸೇರಿದಂತೆ ಅನುದಾನ ಬಿಡುಗಡೆಯಾಗಿದ್ದು, ಜಿಎಸ್ಟಿ ಹೊರತುಪಡಿಸಿ ಕಾಮಗಾರಿಯ ಅಂದಾಜು ವೆಚ್ಚ ೭೪೯.೪೯ ಲಕ್ಷವಾಗಿದೆ ಎಂದು ತಿಳಿಸಿದರು.
ಒಂದೇ ಸೂರಿನಡಿ ಅರಣ್ಯ ಇಲಾಖೆಯ ಕಚೇರಿಗಳು ನಗರದಲ್ಲಿ ವಿವಿಧೆಡೆ ಕಾರ್ಯ ನಿರ್ವಹಿಸುತ್ತಿದ್ದ ಅರಣ್ಯ ಇಲಾಖೆಯ ಕಚೇರಿಗಳನ್ನು ಒಂದೇ ಸಂಕೀರ್ಣದಡಿ ತರುವುದರಿಂದ ಸಾರ್ವಜನಿಕರಿಗೆ ಹೆಚ್ಚಿನ ಅನುಕೂಲವಾಗಲಿದೆ. ವಿವಿಧ ಅಧಿಕಾರಿಗಳನ್ನು ಭೇಟಿಯಾಗಲು ಬೇರೆ ಬೇರೆ ಸ್ಥಳಗಳಿಗೆ ಅಲೆದಾಡುವ ಪರಿಸ್ಥಿತಿ ತಪ್ಪಲಿದ್ದು, ಅರಣ್ಯ ಇಲಾಖೆಗೆ ಸಂಬಂಧಿಸಿದ ಸೇವೆಗಳನ್ನು ಒಂದೇ ಸ್ಥಳದಲ್ಲಿ ಪಡೆಯಲು ಸಾಧ್ಯವಾಗಲಿದೆ ಎಂದರು.
ಕಟ್ಟಡದ ನಿರ್ಮಾಣ ಕಾರ್ಯ ಉತ್ತಮ ಗುಣಮಟ್ಟದಲ್ಲಿ ಮೂಡಿಬಂದಿದ್ದು, ಚಿಕ್ಕಮಗಳೂರು ಜಿಲ್ಲೆಯ ಅಭಿವೃದ್ಧಿಗೆ ಮತ್ತೊಂದು ಉತ್ತಮ ಕಟ್ಟಡ ಸೇರ್ಪಡೆಯಾಗಿದೆ ಎಂದು ಶಾಸಕ ತಮ್ಮಯ್ಯ ಸಂತಸ ವ್ಯಕ್ತಪಡಿಸಿದರು.
ಅ.೨೭ರಂದು ಉದ್ಘಾಟನಾ ಕಾರ್ಯಕ್ರಮದ ಬಳಿಕ ಅರಣ್ಯ ಇಲಾಖೆಯ ಅಧಿಕಾರಿಗಳ ಸಭೆ ಹಾಗೂ ಪ್ರಗತಿ ಪರಿಶೀಲನಾ ಸಭೆ ನಡೆಯಲಿದೆ. ಅ.೨೮ರಿಂದ ನೂತನ ಸಂಕೀರ್ಣದ ಕಚೇರಿಗಳು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿವೆ ಎಂದು ತಿಳಿಸಿದರು.
ಕಟ್ಟಡ ಪರಿಶೀಲನೆಯ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯೆ ಎ.ವಿ. ಗಾಯತ್ರಿ ಶಾಂತೇಗೌಡ, ಸಿಡಿಎ ಅಧ್ಯಕ್ಷ ಮಂಜೇಗೌಡ, ಸಿಸಿಎಫ್ ಯಶ್ ಪಾಲ್ ಕ್ಷೀರಸಾಗರ್, ಭದ್ರಾ ಹುಲಿ ಸಂರಕ್ಷಿತಾ ಪ್ರದೇಶದ ನಿರ್ದೇಶಕ ಪುಲಕಿತ್ ಮೀನಾ, ಡಿಸಿಎಫ್ ಕೆ.ಟಿ. ಬೋರಯ್ಯ, ಸಾಮಾಜಿಕ ಅರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಕೆ.ಸಿ. ಆನಂದ್, ಎಸಿಎಫ್ ಚರಣ್ ಚಂಗಪ್ಪ, ಆರ್ಎಫ್ಓ ಹರೀಶ್, ರಜಾಕ್ ನಡಪ್, ದೀಪಕ್, ಕಾಂಗ್ರೇಸ್ ಪಕ್ಷದ ಮುಖಂಡರಾದ ಪ್ರವೀಣ್ ಬೆಟಗೆರೆ, ಮಲ್ಲೇಶ್ ಸ್ವಾಮಿ, ಶಿವಕುಮಾರ್ ಹಾಜರಿದ್ದರು.
Leave a comment