ಚಿಕ್ಕಮಗಳೂರು: ತಾನು ಬೆಂಗಳೂರಿನ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ನಂಬಿಸಿ, ಚಿನ್ನ, ಹಣ, ಮೊಬೈಲ್ ಹಾಗೂ ಕಾರು ಪಡೆದು ವಂಚಿಸಿರುವ ಆರೋಪದಡಿ ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಮಹಿಳೆಯೊಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಜಯಪುರದ ರಕ್ಷಿತಾ ಎಂಬುವವರು ಸೆ.29ರಂದು ಬಸವನಹಳ್ಳಿ ಠಾಣೆಗೆ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ. ದೂರಿನ ಪ್ರಕಾರ, ಅಮ್ಮುಗೌಡ ಅಲಿಯಾಸ್ ನಿವೇದಿತ ಎಂಬ ಮಹಿಳೆ ವಿಜಯಪುರದ ಫುಡ್ ಕೋರ್ಟ್‌ನಲ್ಲಿ ರಕ್ಷಿತಾ ಅವರ ಅಕ್ಕ ಲಕ್ಷ್ಮೀ ನಡೆಸುತ್ತಿದ್ದ ಹೋಳಿಗೆ ಹೋಟೆಲ್‌ಗೆ ಆಗಾಗ್ಗೆ ಬರುತ್ತಿದ್ದರು. ಈ ವೇಳೆ ಪರಿಚಯವಾಗಿದ್ದ ಆಕೆ, ತಾನು ಬೆಂಗಳೂರಿನಲ್ಲಿ ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಆಗಿದ್ದು, ಪೊಲೀಸ್ ಸಮವಸ್ತ್ರದಲ್ಲಿರುವ ಫೋಟೋವನ್ನೂ ತೋರಿಸಿ ನಂಬಿಸಿದ್ದಾಳೆ ಎನ್ನಲಾಗಿದೆ.
ನಂತರ ರಕ್ಷಿತಾ ಅವರ ಕುಟುಂಬದೊಂದಿಗೆ ಆತ್ಮೀಯತೆ ಬೆಳೆಸಿಕೊಂಡಿದ್ದ ಆರೋಪಿತೆ, ಬೆಂಗಳೂರಿನ ಮಲಬಾರ್ ಗೋಲ್ಡ್‌ನಲ್ಲಿ 100 ಗ್ರಾಂ ಚಿನ್ನ ಮೆಚ್ಯೂರ್ ಆಗಿದ್ದು, ಅದಕ್ಕೆ ಜಿಎಸ್‌ಟಿ ಪಾವತಿಸಲು ಹಣ ಬೇಕಿದೆ ಎಂದು ಹೇಳಿ 2–3 ದಿನಗಳಲ್ಲಿ ವಾಪಸ್ ನೀಡುವುದಾಗಿ ಭರವಸೆ ನೀಡಿ ರಕ್ಷಿತಾ ಅವರ 8 ಗ್ರಾಂ ಚಿನ್ನದ ಸರವನ್ನು ಪಡೆದುಕೊಂಡಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಇದಲ್ಲದೆ, ರಕ್ಷಿತಾ ಅವರ ಹೆಸರಿನಲ್ಲಿ ಸಾಲದ ಮೂಲಕ ಮೊಬೈಲ್ ಕೊಡಿಸುವಂತೆ ಕೇಳಿಕೊಂಡು, ಆ.10ರಂದು ಚಿಕ್ಕಮಗಳೂರು ನಗರದ ಐ.ಜಿ. ರಸ್ತೆಯಲ್ಲಿರುವ ಮೊಬೈಲ್ ಅಂಗಡಿಗೆ ಕರೆದೊಯ್ದು ಸುಮಾರು ₹78 ಸಾವಿರ ಮೌಲ್ಯದ ಐಫೋನ್ ಪಡೆದುಕೊಂಡಿದ್ದಾಳೆ ಎಂದು ಆರೋಪಿಸಲಾಗಿದೆ.
ರಕ್ಷಿತಾ ಅವರ ಅಕ್ಕ ಲಕ್ಷ್ಮೀ ಅವರಿಂದಲೂ ಎರಡು ತಿಂಗಳಲ್ಲಿ 100 ಗ್ರಾಂ ಚಿನ್ನ ಕೊಡಿಸುವುದಾಗಿ ನಂಬಿಸಿ 11.5 ಗ್ರಾಂ ತೂಕದ ಚಿನ್ನದ ಸರವನ್ನು ಪಡೆದುಕೊಂಡಿದ್ದಾಳೆ ಎನ್ನಲಾಗಿದೆ.
ಇದೇ ವೇಳೆ ರಕ್ಷಿತಾ ಅವರ ತಂಗಿ ಪೂಜಾಗೆ ಪೊಲೀಸ್ ಇಲಾಖೆಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ₹2 ಲಕ್ಷ ಪಡೆದಿರುವ ಆರೋಪವೂ ಕೇಳಿಬಂದಿದೆ. ಈ ಪೈಕಿ ₹1.50 ಲಕ್ಷವನ್ನು ಕೆನರಾ ಬ್ಯಾಂಕ್ ಮೂಲಕ ವರ್ಗಾವಣೆ ಮಾಡಿಸಿಕೊಂಡು, ₹50 ಸಾವಿರವನ್ನು ನಗದಾಗಿ ಪಡೆದಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದಲ್ಲದೆ, ರಕ್ಷಿತಾ ಅವರ ಭಾವ ಶ್ರೀಧರ್ ಅವರ ಕೆಎ-18-ಎನ್-2597 ನೋಂದಣಿ ಸಂಖ್ಯೆಯ ಆಲ್ಟೋ ಕಾರನ್ನು ಓಡಾಡಲು ಬೇಕೆಂದು ಪಡೆದುಕೊಂಡು, ಅದನ್ನು ಬೇರೆಯವರಿಗೆ ಮಾರಾಟ ಮಾಡಿ ಹಣವನ್ನು ಸ್ವಂತಕ್ಕೆ ಬಳಸಿಕೊಂಡಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಪೊಲೀಸ್ ಸಬ್‌ಇನ್ಸ್‌ಪೆಕ್ಟರ್ ಎಂದು ಸುಳ್ಳು ಪರಿಚಯ ಮಾಡಿಕೊಂಡು ವಿವಿಧ ರೀತಿಯಲ್ಲಿ ನಂಬಿಸಿ ಚಿನ್ನ, ಹಣ, ಮೊಬೈಲ್ ಹಾಗೂ ಕಾರು ಪಡೆದು ವಂಚಿಸಿರುವ ಅಮ್ಮುಗೌಡ ಅಲಿಯಾಸ್ ನಿವೇದಿತ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳುವಂತೆ ರಕ್ಷಿತಾ ಮನವಿ ಮಾಡಿದ್ದಾರೆ. ದೂರಿನ ಆಧಾರದ ಮೇಲೆ ಬಸವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
Fake Lady PSI Arrested for Defrauding People of Crores of Rupees
Leave a comment