Home namma chikmagalur chikamagalur ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು
chikamagalurHomeLatest Newsnamma chikmagalur

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

Share
Share

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ ಶ್ರೇಷ್ಠ ಗಾಯಕ ಡಾ.ವಿದ್ಯಾಭೂಷಣ ಹಾಗೂ ಅವರ ಪುತ್ರಿ ಮೇಧಾ ವಿದ್ಯಾಭೂಷಣ ಅವರ ಅಮೋಘ ಗಾಯನ ಸುಧೆಗೆ ಮನಸೋತ ಶ್ರೋತೃಗಳನ್ನು ಭಾವ ಪರವಶಗೊಳಿಸಿತು.

ತಂದೆ-ಮಗಳು ತಮ್ಮ ಸುಮಧುರ ಕಂಠಸಿರಿಯಲ್ಲಿ ತನ್ಮಯರಾಗಿ ಸುಮಾರು ಎರಡೂವರೆ ಗಂಟೆ ಕಾಲ ನೀಡಿದ ಭಕ್ತಿಗೀತೆಗಳ ಗಾಯನವು ಕಲಾಮಂದಿರದಲ್ಲಿ ಕಿಕ್ಕಿರಿದು ಸೇರಿದ್ದ ಶ್ರೋತೃಗಳನ್ನು ಹಿಡಿದಿಟ್ಟು ರಂಜಿಸುವಲ್ಲಿ ಯಶಸ್ವಿಯಾಯಿತು.

ನಗರದ ಮಥಾಯಿಸ್ ಫೌಂಡೇಶನ್, ರೇನ್ ರಾಗ ಹೋಂ ಸ್ಟೇ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕುವೆಂಪು ವಿದ್ಯಾನಿಕೇತನದ ಆಶ್ರಯದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಗಣೇಶ ಸ್ತುತಿಯಿಂದ ತನ್ನ ಗಾಯನ ಆರಂಭಿಸಿದ ಮೇಧಾ ಅನಂತರ ದಾಸಶ್ರೇಷ್ಠರಾದ ಕನಕದಾಸರು, ಪುರಂದರದಾಸರು ಮತ್ತಿತರ ದಾಸವರೇಣ್ಯರ ಕೃತಿಗಳನ್ನು ಅತ್ಯಂತ ಸುಶ್ರಾವ್ಯವಾಗಿ ಹಾಡುತ್ತಾ ಹೋದ ಹಾಗೆ ಪ್ರೇಕ್ಷಕರು ಆಕೆಯ ಗಾನ ಮಾಧುರ್ಯಕ್ಕೆ ತಲೆದೂಗಿದರಲ್ಲದೆ, ಪ್ರತೀ ಕೃತಿ ಸಂಪನ್ನವಾದ ತಕ್ಷಣ ಗಡಚಿಕ್ಕುವ ಚಪ್ಪಾಳೆಗಳ ಮೂಲಕ ತಮ್ಮ ಹರ್ಷ ಹೊರ ಹಾಕಿದರು.

ಆರಂಭದ ಒಂದು ಗಂಟೆಗೂ ಹೆಚ್ಚು ಕಾಲ ತೊರೆದು ಜೀವಿಸಬಹುದೇ ಹರಿ ನಿನ್ನ ಚರಣವಾ.., ಮರೆಯಬೇಡ ಮನವೇ ನೀನು ಹರಿಯ ಸ್ಮರಣೆಯಾ.., ಮಾಜೇ ಮಹರ್ ಪಂಡರಿ.., ಪಿಬರೇ ರಾಮರಸಂ.. ಹೀಗೆ ಹಲವಾರು ಕೃತಿಗಳನ್ನು ಮೇಧಾ ತಮ್ಮ ಗಾಯನ ವೈವಿಧ್ಯದಿಂದ ಪ್ರಸ್ತುತಪಡಿಸಿ ಶ್ರೋತೃಗಳನ್ನು ಸೆರೆಹಿಡಿದರೆ, ಅನಂತರ ವೇದಿಕೆಗೆ ಬಂದ ಡಾ.ವಿದ್ಯಾಭೂಷಣರು ಹಲವು ಪ್ರಸಿದ್ಧ ದಾಸರ ಕೃತಿಗಳನ್ನು ತಮ್ಮ ಅಮೋಘ ಕಂಠಸಿರಿಯಲ್ಲಿ ಪ್ರಸ್ತುತಪಡಿಸಿದರು.

ಇಷ್ಟು ದಿನ ಈ ವೈಕುಂಠ.., ಮರುಳು ಮಾಡಿಕೊಂಡೆಯಲ್ಲೆ ಮಾಯಾ ದೇವಿಯೇ…, ಪಿಳ್ಳಂಗೋವಿಯ ಚೆಲ್ವ ಕೃಷ್ಣನ ಎಲ್ಲಿ ನೋಡಿದಿರಿ.., ಭಾಗ್ಯದಾ ಲಕ್ಷ್ಮೀ ಬಾರಮ್ಮ.. ಹೀಗೆ ಹಲವಾರು ಕೃತಿಗಳನ್ನು ಡಾ.ವಿದ್ಯಾಭೂಷಣರು ತಮ್ಮ ಸಹಜ ಗಂಭೀರ ಧ್ವನಿಯಲ್ಲಿ ಸುಶ್ರಾವ್ಯವಾಗಿ ಪ್ರಸ್ತುತಪಡಿಸಿದಾಗ ಪ್ರೇಕ್ಷಕರು ಮನಸೋತು ತಲೆದೂಗಿದರು. ಅಲ್ಲಿ ವ್ಯಕ್ತವಾಗುತ್ತಿದ್ದ ಜೋರಾದ ಕರತಾಡನ ಇದಕ್ಕೆ ಸಾಕ್ಷಿಯಾಯಿತು. ಕೃಷ್ಣಾ ನೀ ಬೇಗನೇ ಬಾರೋ, ಶ್ರೀ ರಾಮಚಂದ್ರ ಕೃಪಾಳು ಭಜಮನ.. ತಂದೆ-ಮಗಳು ಒಟ್ಟಿಗೆ ಪ್ರಸ್ತುತಪಡಿಸಿದ ಗೀತೆ. ಭಾಷಣಗಳ ಭರಾಟೆ ಇಲ್ಲದೆ, ನೇರವಾಗಿ ಕಾರ್ಯಕ್ರಮ ಆರಂಭವಾದುದು ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.

ಸ್ವಾಗತಿಸಿದ ಕಾರ್ಯಕ್ರಮದ ಸಂಯೋಜಕ ಮಥಾಯಿಸ್ ಫೌಂಡೇಶನ್ ಮುಖ್ಯಸ್ಥ ಜಾನ್ ಮಥಾಯಿಸ್ ಪ್ರಾಸ್ತಾವಿಕ ಮಾತನಾಡಿ, ಡಾ.ವಿದ್ಯಾಭೂಷಣರ ಕಾರ್ಯಕ್ರಮ ಆಯೋಜಿಸುವುದು ತಮ್ಮ ದಶಕಗಳ ಕನಸು. ನಾವಿಲ್ಲಿ ಸೇರಿರುವುದು ಸಂಗೀತ ಆಲಿಸುವುದಕ್ಕಷ್ಟೇ ಅಲ್ಲ, ಶ್ರೀಮಂತ ದಾಸ ಪರಂಪರೆಯ ಸಂಗೀತ ಮತ್ತು ಸಾಹಿತ್ಯವನ್ನು ನಮ್ಮ ಮನಸ್ಸಿಗೆ ಇನ್ನಷ್ಟು ಹತ್ತಿರ ಮಾಡಿಕೊಳ್ಳುವ ಉದ್ದೇಶ ನಮ್ಮದು ಎಂದರು.

ಪುರಂದರದಾಸರು, ಕನಕದಾಸರು ಸೇರಿದಂತೆ ಹರಿದಾಸರು ಬರೆದ ಸಾಹಿತ್ಯ ನೂರಾರು ವರ್ಷಗಳ ಹಿಂದಿನವು. ಆದರೆ ಅವುಗಳಲ್ಲಿರುವ ಮಾನವೀಯತೆ, ಭಕ್ತಿ, ಮಾನವೀಯತೆ, ನೈತಿಕತೆ ಮತ್ತು ಬದುಕಿನ ಸತ್ಯಗಳು ಇಂದಿಗೂ ಪ್ರಸ್ತುತ. ಆ ಸಾಹಿತ್ಯವನ್ನು ಇಂದಿನ ತಲೆಮಾರಿಗೆ ಪರಿಚಯಿಸುವಲ್ಲಿ ಡಾ.ವಿದ್ಯಾಭೂಷಣರ ಪಾತ್ರ ಬಹಳ ದೊಡ್ಡದು. ಅವರು ಕೀರ್ತನೆಗಳನ್ನು ಹಾಡುವ ಮೂಲಕ ನಮ್ಮೊಳಗೆ ಅಮೋಘವಾದ ಭಾವನೆಗಳನ್ನು ಮೂಡಿಸುತ್ತಿರುವುದು ಗಮನಾರ್ಹ ಎಂದರು.

ಗಾಯನದ ಬಳಿಕ ಮಾತನಾಡಿದ ಡಾ.ವಿದ್ಯಾಭೂಷಣ ಅವರು, ಶಾಂತಿ, ಸಮಾಧಾನ, ಸಮಾಜದ ಸ್ವಾಸ್ಥ್ಯಕ್ಕೆ ಸಂಗೀತ ಅಗತ್ಯ ಎಂದು ಹೇಳಿದರು. ಹಿರಿಯ ಗಮಕಿ ರಾಮ್ ಸುಬ್ರಾಯ ಶೇಟ್ ಸಸಿಗೆ ನೀರೆರೆಯುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಸಿ.ರಮೇಶ್, ರಮಾ ವಿದ್ಯಾಭೂಷಣ ಕಾರ್ಯಕ್ರಮದಲ್ಲಿದ್ದರು. ಪಕ್ಕವಾದ್ಯದಲ್ಲಿ ಪ್ರದೇಶ್ (ವಯೋಲಿನ್), ನಾಗೇಂದ್ರ ಪ್ರಸಾದ್ (ಮೃದಂಗ), ಉದಯರಾಜ್ ಕರ್ಪೂರ್(ತಬಲ) ಸಾಥ್ ನೀಡಿದರು. ವಯೋಲಿನ್ ವಾದಕ ಎನ್.ವೆಂಕಟೇಶ್ ಡಾ.ವಿದ್ಯಾಭೂಷಣರನ್ನು ಪರಿಚಯಿಸಿದರು. ಪಲ್ಲವಿಗೌಡ ಕಾರ್ಯಕ್ರಮ ನಿರೂಪಿಸಿದರು.

The audience was captivated by the melodious singing of the father and daughter.

 

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ...

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್ ಯಶಸ್ವಿಯಾಯಿತು. ಬಂದ್ ಅಂಗವಾಗಿ ನಡೆದ ಪಟ್ಟಣದ ಸ್ವಾಗತ ಮಂಟಪದಿಂದ ಕುವೆಂಪು ಬಸ್ ನಿಲ್ದಾಣದವರೆಗೆ ನಡೆದ...

Related Articles

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್...

ಅಕ್ಟೋಬರ್ ೧ ರಿಂದ ವಿದ್ಯುತ್ ಪೂರೈಕೆ ಸುಧಾರಣೆ

ಚಿಕ್ಕಮಗಳೂರು: ಜಿಲ್ಲೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ...

 ಪ್ರವಾಸೋದ್ಯಮ ಬೆಳೆಸುವ ಉತ್ಸಾಹದಲ್ಲಿ ಪರಿಸರ ಸಂರಕ್ಷಣೆ ಮರೆಯಬಾರದು

ಚಿಕ್ಕಮಗಳೂರು: ಪ್ರವಾಸೋದ್ಯಮ ಕ್ಷೇತ್ರದಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಸ್ಥಳೀಯ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದೆ. ಆದರೆ ಪ್ರವಾಸೋದ್ಯಮ...