ಕೊಪ್ಪ: ತಾಲೂಕಿನ ಕುಂಚೂರು ಗ್ರಾಮದ ಶ್ರೀ ದುರ್ಗಾಪರಮೇಶ್ವರಿ ಅಮ್ಮನವರ ದೇವಸ್ಥಾನದಲ್ಲಿ ಕಳ್ಳತನ ನಡೆದಿದ್ದು, ದೇವಿಗೆ ಅಲಂಕರಿಸಿದ್ದ ಚಿನ್ನಾಭರಣ, ಬೆಳ್ಳಿಯ ವಿಗ್ರಹಗಳು ಹಾಗೂ ಕಾಣಿಕೆ ಹುಂಡಿಯ ಹಣವನ್ನು ಕಳ್ಳರು ದೋಚಿಕೊಂಡು ಪರಾರಿಯಾಗಿರುವ ಘಟನೆ ಸೆ.24ರ ಬೆಳಗಿನ ಜಾವ ಬೆಳಕಿಗೆ ಬಂದಿದೆ.
ಕುಂಚೂರು ಗ್ರಾಮದ ಕೋಡ್ರು ನಿವಾಸಿ ದುರ್ಗಾಚರಣ್ ಕೆ.ಎಸ್. ಅವರು ಹರಿಹರಪುರ ಪೊಲೀಸ್ ಠಾಣೆಗೆ ನೀಡಿರುವ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಾಗಿದೆ.
ದೂರಿನ ಪ್ರಕಾರ, ಸೆ.23ರಂದು ಬೆಳಿಗ್ಗೆ ಸುಮಾರು 8.30ಕ್ಕೆ ದೇವಸ್ಥಾನದ ಅರ್ಚಕ ವೆಂಕಟರಮಯ್ಯ ಅವರು ಎಂದಿನಂತೆ ಪೂಜೆ ನೆರವೇರಿಸಿ ದೇವಸ್ಥಾನವನ್ನು ಬಂದ್ ಮಾಡಿ ತೆರಳಿದ್ದರು. ಸೆ.24ರಂದು ಬೆಳಿಗ್ಗೆ ಸುಮಾರು 6.20ಕ್ಕೆ ದೇವಸ್ಥಾನಕ್ಕೆ ಆಗಮಿಸಿದಾಗ ಮುಂಭಾಗದ ಬಾಗಿಲು ತೆರೆದಿರುವುದು ಕಂಡುಬಂದಿದೆ. ಅಲ್ಲದೆ, ದೇವಸ್ಥಾನದ ಗರ್ಭಗುಡಿಯ ಬಾಗಿಲು ಹಾಗೂ ಪಕ್ಕದ ಬಾಗಿಲಿನ ಬೀಗವನ್ನು ಯಾವುದೋ ಆಯುಧದಿಂದ ಕತ್ತರಿಸಿ ಕಳ್ಳರು ಒಳನುಗ್ಗಿರುವುದು ಗಮನಕ್ಕೆ ಬಂದಿದೆ.
ಕಳ್ಳತನದ ಮಾಹಿತಿ ತಿಳಿದು ದೇವಸ್ಥಾನದ ಕಮಿಟಿ ಸದಸ್ಯರು ಸ್ಥಳಕ್ಕೆ ಆಗಮಿಸಿದ್ದು, ಬಳಿಕ ಹರಿಹರಪುರ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪಿಎಸ್‌ಐ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಬಳಿಕ, ಚಿಕ್ಕಮಗಳೂರಿನಿಂದ ಬೆರಳಚ್ಚು ತಜ್ಞರು ಹಾಗೂ ಶ್ವಾನದಳವನ್ನು ಕರೆಸಲಾಗಿತ್ತು. ತಜ್ಞರು ಸ್ಥಳದಲ್ಲಿ ಪರಿಶೀಲನೆ ನಡೆಸಿದ್ದಾರೆ.
ನಂತರ ಗರ್ಭಗುಡಿಯನ್ನು ಪರಿಶೀಲಿಸಿದಾಗ ದೇವಿಯ ಕುತ್ತಿಗೆಯಲ್ಲಿದ್ದ ಸುಮಾರು 8 ಗ್ರಾಂ ತೂಕದ ಬಂಗಾರದ ಮಾಂಗಲ್ಯ ಸರ, ಬಂಗಾರದ ಎರಡು ಗುಂಡು ಹಾಗೂ ಕರಿಮಣಿ ಸೇರಿದಂತೆ ಸುಮಾರು ₹80 ಸಾವಿರ ಮೌಲ್ಯದ ಆಭರಣ ಕಳುವಾಗಿರುವುದು ಗೊತ್ತಾಗಿದೆ. ದೇವಿಗೆ ಹಾಕಲಾಗಿದ್ದ ಸುಮಾರು 3 ಗ್ರಾಂ ತೂಕದ ಬಂಗಾರದ ಮೂಗುತಿ, ಅಂದಾಜು ₹30 ಸಾವಿರ ಮೌಲ್ಯದದು, ಸಹ ಕಳುವಾಗಿದೆ.
ಇದಲ್ಲದೆ ಗರ್ಭಗುಡಿಯಲ್ಲಿದ್ದ ಬೆಳ್ಳಿಯ ಗಣಪತಿ, ಲಕ್ಷ್ಮಿ ಹಾಗೂ ನಾಗರ ವಿಗ್ರಹಗಳು, ಶೃಂಗೇರಿ ಮಠದಿಂದ ನೀಡಲಾಗಿದ್ದ ಬೆಳ್ಳಿಯ ದೊಡ್ಡ ನಾಣ್ಯ ಸೇರಿದಂತೆ ಹೊರಭಾಗದ ಈಶ್ವರ ಹಾಗೂ ಗಣಪತಿ ದೇಗುಲದಲ್ಲಿದ್ದ ಚಿಕ್ಕ ಬೆಳ್ಳಿ ಸಾಮಗ್ರಿಗಳು ಕಳುವಾಗಿವೆ. ಒಟ್ಟು ಸುಮಾರು 350 ಗ್ರಾಂ ಬೆಳ್ಳಿ, ಅಂದಾಜು ₹50 ಸಾವಿರ ಮೌಲ್ಯದದು, ಕಳುವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ದೇವಸ್ಥಾನದಲ್ಲಿದ್ದ ಮೂರು ಕಾಣಿಕೆ ಹುಂಡಿಗಳ ಬೀಗಗಳನ್ನು ಮುರಿದು, ಅವುಗಳಲ್ಲಿದ್ದ ಅಂದಾಜು ₹10 ಸಾವಿರ ಕಾಣಿಕೆ ಹಣವನ್ನೂ ಕಳ್ಳರು ದೋಚಿಕೊಂಡು ಹೋಗಿದ್ದಾರೆ. ಒಟ್ಟಾರೆ ಚಿನ್ನಾಭರಣ, ಬೆಳ್ಳಿ ವಸ್ತುಗಳು ಹಾಗೂ ಕಾಣಿಕೆ ಹಣ ಸೇರಿದಂತೆ ಸುಮಾರು ₹1.70 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತುಗಳು ಕಳುವಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
ಸೆ.23ರ ಬೆಳಿಗ್ಗೆ 8.30ರಿಂದ ಸೆ.24ರ ಬೆಳಿಗ್ಗೆ 6.20ರ ನಡುವಿನ ಅವಧಿಯಲ್ಲಿ ಕಳ್ಳತನ ನಡೆದಿರುವ ಶಂಕೆ ವ್ಯಕ್ತವಾಗಿದೆ. ಬೀಗಗಳನ್ನು ಆಯುಧದಿಂದ ಕತ್ತರಿಸಿ ಕಳ್ಳರು ದೇವಸ್ಥಾನದೊಳಗೆ ಪ್ರವೇಶಿಸಿರುವುದು ಕಂಡುಬಂದಿದೆ. ಹರಿಹರಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಕಳ್ಳರ ಪತ್ತೆಗೆ ತನಿಖೆ ಮುಂದುವರಿಸಿದ್ದಾರೆ. ಸ್ಥಳದಲ್ಲಿ ದೊರೆತಿರುವ ಬೆರಳಚ್ಚು ಹಾಗೂ ಶ್ವಾನದಳದ ಪರಿಶೀಲನಾ ಮಾಹಿತಿಯ ಆಧಾರದ ಮೇಲೆ ತನಿಖೆ ನಡೆಸಲಾಗುತ್ತಿದೆ.
Theft at Sri Durgaparameshwari Temple
Leave a comment