Home namma chikmagalur chikamagalur  ಪ್ರವಾಸೋದ್ಯಮ ಬೆಳೆಸುವ ಉತ್ಸಾಹದಲ್ಲಿ ಪರಿಸರ ಸಂರಕ್ಷಣೆ ಮರೆಯಬಾರದು
chikamagalurHomeLatest Newsnamma chikmagalur

 ಪ್ರವಾಸೋದ್ಯಮ ಬೆಳೆಸುವ ಉತ್ಸಾಹದಲ್ಲಿ ಪರಿಸರ ಸಂರಕ್ಷಣೆ ಮರೆಯಬಾರದು

Share
Share

ಚಿಕ್ಕಮಗಳೂರು: ಪ್ರವಾಸೋದ್ಯಮ ಕ್ಷೇತ್ರದಿಂದ ಲಕ್ಷಾಂತರ ಜನರಿಗೆ ಉದ್ಯೋಗ ಸೃಷ್ಟಿಯಾಗುತ್ತಿದ್ದು, ಸ್ಥಳೀಯ ಆರ್ಥಿಕತೆಯೂ ಚೇತರಿಸಿಕೊಳ್ಳುತ್ತಿದೆ. ಆದರೆ ಪ್ರವಾಸೋದ್ಯಮ ಬೆಳೆಸುವ ಉತ್ಸಾಹದಲ್ಲಿ ಪರಿಸರ ಸಂರಕ್ಷಣೆಯನ್ನು ಮರೆಯಬಾರದು ಎಂದು ಶಾಸಕ ಹೆಚ್.ಡಿ.ತಮ್ಮಯ್ಯ ಅಭಿಪ್ರಾಯಪಟ್ಟರು.

ನಗರದ ಹೊರವಲಯದ ‘ಮೈ ಸಿಲ್ವರ್ ಸ್ಕೈ ರೆಸಾರ್ಟ್’ನಲ್ಲಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಪ್ರಯುಕ್ತ ಚಿಕ್ಕಮಗಳೂರು ರೆಸಾರ್ಟ್, ಹೋಮ್ ಸ್ಟೇ ಹಾಗೂ ಟೂರ್ಸ್ ಅಂಡ್ ಟ್ರಾವೆಲ್ಸ್ ಸಂಘಗಳ ಸಹಯೋಗದೊಂದಿಗೆ ಭಾನುವಾರ ಆಯೋಜಿಸಿದ್ದ ‘ಬ್ಲಾಗರ್ಸ್ ಮೀಟ್’ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚಿಕ್ಕಮಗಳೂರು ಎಂದ ತಕ್ಷಣ ಪ್ರವಾಸಿಗರಿಗೆ ಕೇವಲ ಮುಳ್ಳಯ್ಯನಗಿರಿ, ಬಾಬಾಬುಡನ್ ಗಿರಿ ಹಾಗೂ ಕೆಮ್ಮಣ್ಣುಗುಂಡಿ ಮಾತ್ರ ನೆನಪಾಗುತ್ತವೆ. ಇದರಿಂದಾಗಿ ನಿರ್ದಿಷ್ಟ ಸ್ಥಳಗಳಲ್ಲಿ ಅತಿಯಾದ ಒತ್ತಡ ಸೃಷ್ಟಿಯಾಗುತ್ತಿದೆ. ನಮ್ಮ ಜಿಲ್ಲೆಯಲ್ಲಿ ೧೮ಕ್ಕೂ ಹೆಚ್ಚು ಜಲಪಾತಗಳು, ಬೆಳವಾಡಿ ಗಣಪತಿ ದೇವಾಲಯ, ಮರಲೆ, ಹಿರೇಮಗಳೂರಿನ ಕೋದಂಡ ರಾಮಸ್ವಾಮಿ ದೇವಾಲಯ, ಕವಿಶೈಲ, ಆಂಬಳೆ ಮುಂತಾದ ಐತಿಹಾಸಿಕ ಹಾಗೂ ನೈಸರ್ಗಿಕ ತಾಣಗಳಿವೆ. ಬ್ಲಾಗರ್ಸ್ ಹಾಗೂ ವ್ಲಾUರ್ಸ್‌ಗಳು ಇಂತಹ ಪ್ರಸಿದ್ಧಿಯಿಲ್ಲದ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಕೆಲಸ ಮಾಡಬೇಕು ಎಂದು ಶಾಸಕರು ಮನವಿ ಮಾಡಿದರು.

೪೦-೪೨ ವರ್ಷಗಳ ಹಿಂದೆ ನಾವು ಕಂಡಿದ್ದ ಭೀಕರ ಬರಗಾಲವನ್ನು ಈ ವರ್ಷ ಮತ್ತೆ ಕಾಣುತ್ತಿದ್ದೇವೆ. ಸೆಪ್ಟೆಂಬರ್ ತಿಂಗಳಿನಲ್ಲೇ ಕುಡಿಯುವ ನೀರು ಹಾಗೂ ವಿದ್ಯುತ್ ಸಮಸ್ಯೆ ಎದುರಾಗುತ್ತಿರುವುದು ಆತಂಕಕಾರಿ. ಪ್ರವಾಸೋದ್ಯಮವನ್ನು ಕೇವಲ ಆದಾಯದ ಮೂಲವಾಗಿ ನೋಡದೆ, ಪ್ರಕೃತಿ ಮತ್ತು ಪರಿಸರವನ್ನು ಮುಂದಿನ ಪೀಳಿಗೆಗೆ ಉಳಿಸುವ ಜವಾಬ್ದಾರಿಯನ್ನು ನಾವೆಲ್ಲರೂ ಹೊರಬೇಕಿದೆ ಎಂದರು.

ಜಿಲ್ಲೆಯಲ್ಲಿ ಪ್ರವಾಸೋದ್ಯಮವನ್ನು ಮತ್ತಷ್ಟು ಶಿಸ್ತುಬದ್ಧವಾಗಿ ಅಭಿವೃದ್ಧಿಪಡಿಸಲು ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಶೀಘ್ರದಲ್ಲೇ ಸಭೆ ಕರೆಯಲಾಗುವುದು. ಈ ಸಭೆಯಲ್ಲಿ ಹೋಮ್ ಸ್ಟೇ, ರೆಸಾರ್ಟ್ ಮಾಲೀಕರು, ಬ್ಲಾಗರ್ಸ್ ಹಾಗೂ ಪರಿಸರ ಪ್ರೇಮಿಗಳನ್ನು ಆಹ್ವಾನಿಸಿ ಸೂಕ್ತ ಸಲಹೆ-ಸೂಚನೆಗಳನ್ನು ಪಡೆಯಲಾಗುವುದು ಎಂದು ತಿಳಿಸಿದರು.

ವಿಧಾನ ಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಜಿಲ್ಲೆಗೆ ದೇಶ-ವಿದೇಶಗಳಲ್ಲೂ ತನ್ನದೇ ಆದ ವಿಶಿಷ್ಟ ಗುರುತಿದೆ. ಜಿಲ್ಲೆಯಲ್ಲಿ ಸುಸ್ಥಿರ ಪ್ರವಾಸೋದ್ಯಮ ಬೆಳೆಯಬೇಕಾದರೆ ಉತ್ತಮ ರಸ್ತೆ ಸಂಪರ್ಕ, ಮೂಲಸೌಕರ್ಯ, ಪ್ರವಾಸಿಗರ ಸುರಕ್ಷತೆ ಹಾಗೂ ಹಿತಕರವಾದ ಸರ್ಕಾರಿ ನೀತಿಗಳು ಅತ್ಯಗತ್ಯ ಎಂದು ಹೇಳಿದರು.

ಹಿಂದೆ ಬೆಂಗಳೂರಿನಿಂದ ಹೊರಡುವ ಪ್ರವಾಸಿಗರು ಹೆಚ್ಚಾಗಿ ಕೊಡಗು ಅಥವಾ ವಯನಾಡಿನತ್ತ ಮುಖ ಮಾಡುತ್ತಿದ್ದರು. ಕುದುರೆಮುಖ, ಭದ್ರಾ ಅಭಯಾರಣ್ಯ, ಮುಳ್ಳಯ್ಯನಗಿರಿ ಮೊದಲಿನಿಂದಲೂ ಇದ್ದರೂ ಚಿಕ್ಕಮಗಳೂರಿನತ್ತ ಪ್ರವಾಸಿಗರು ಬರಲು ಪ್ರಾರಂಭಿಸಿದ್ದು ರಸ್ತೆ ಸಂಪರ್ಕ ಹಾಗೂ ಉತ್ತಮ ಆತಿಥ್ಯ ಉದ್ಯಮ ಬೆಳೆದ ನಂತರವೇ. ಹೋಮ್ಸ್ಟೇ ಹಾಗೂ ಹೋಟೆಲ್ ಉದ್ಯಮಗಳು ವಿಸ್ತರಣೆಯಾದಂತೆ ಪ್ರವಾಸೋದ್ಯಮಕ್ಕೂ ಉತ್ತೇಜನ ಸಿಕ್ಕಿದೆ ಎಂದರು.

ಸರ್ಕಾರದ ನೀತಿಗಳು ಪ್ರವಾಸೋದ್ಯಮವನ್ನು ಬೆಳೆಸುವಂತಿರಬೇಕೇ ವಿನಃ ಕುಸಿಯುವಂತೆ ಮಾಡಬಾರದು. ಏಕಾಏಕಿ ವಾಹನ ಸಂಚಾರ ನಿಷೇಧ ಅಥವಾ ಆನ್‌ಲೈನ್ ಬುಕಿಂಗ್ ನಿಯಮಗಳಿಂದ ಹೋಮ್ಸ್ಟೇಗಳ ಬೇಡಿಕೆ ಕುಸಿಯುತ್ತಿದೆ. ಗಂಟೆಗಟ್ಟಲೆ ಟ್ರಾಫಿಕ್‌ನಲ್ಲಿ ಸಿಲುಕುವ ಪ್ರವಾಸಿಗರು ಕಹಿ ಅನುಭವ ಎದುರಿಸಿದರೆ ಅದು ನಕಾರಾತ್ಮಕವಾಗಿ ಪ್ರಚಾರವಾಗುತ್ತದೆ. ಹೀಗಾಗಿ ಸುಸ್ಥಿರ ಅಭಿವೃದ್ಧಿಗೆ ಪೂರಕವಾದ ಸ್ಪಷ್ಟ ಪಾಲಿಸಿ ರೂಪುಗೊಳ್ಳಬೇಕು ಎಂದರು.

ಹೊರ ಜಿಲ್ಲೆ ಅಥವಾ ಹೊರ ರಾಜ್ಯಗಳಿಂದ ಬರುವ ಪ್ರವಾಸಿಗರ ವಾಹನಗಳನ್ನು ಸಂಚಾರಿ ಪೊಲೀಸರು ಅನಗತ್ಯವಾಗಿ ತಡೆದು ಕಿರುಕುಳ ನೀಡುವುದು, ದಂಡ ವಸೂಲಿ ಮಾಡುವುದನ್ನು ತಡೆಯಬೇಕು. ಸ್ಥಳೀಯ ವಾಹನಗಳನ್ನು ಬಿಟ್ಟು ಪ್ರವಾಸಿಗರ ವಾಹನಗಳನ್ನೇ ಗುರಿಯಾಗಿಸಿಕೊಂಡರೆ ಜಿಲ್ಲೆಗೆ ಬರುವ ಪ್ರವಾಸಿಗರ ಸಂಖ್ಯೆ ಕಡಿಮೆಯಾಗುತ್ತದೆ. ಈ ಬಗ್ಗೆ ಸೂಕ್ತ ಸೂಚನೆ ನೀಡುವ ಅಗತ್ಯವಿದೆ ಎಂದರು.

ಪ್ರವಾಸಿಗರು ಕೇವಲ ಮುಳ್ಳಯ್ಯನಗಿರಿ, ದತ್ತಪೀಠ ಅಥವಾ ಕೆಮ್ಮಣ್ಣುಗುಂಡಿಗೆ ಮಾತ್ರ ಸೀಮಿತವಾಗದೆ ಎತ್ತಿನ ಭುಜ ಮುಂತಾದ ಇತರ ಸುಂದರ ತಾಣಗಳಿಗೂ ತೆರಳುವಂತೆ ಮಾರ್ಗದರ್ಶನ ಮಾಡಬೇಕು. ಕಾಫಿ ಎಸ್ಟೇಟ್ ವಾಕಿಂಗ್, ಗೈಡೆಡ್ ಟೂರ್, ಪ್ರಕೃತಿಯ ನಡುವೆ ಊಟದ ವ್ಯವಸ್ಥೆಯಂತಹ ವೈವಿಧ್ಯಮಯ ಚಟುವಟಿಕೆಗಳ ಮೂಲಕ ಪ್ರವಾಸಿಗರನ್ನು ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾಧಿಕಾರಿ ಭಂವರ್ ಸಿಂಗ್ ಮೀನಾ ಪ್ರವಾಸೋದ್ಯಮ ಎಂದರೆ ಕೇವಲ ರಜೆ ದಿನಗಳಲ್ಲಿ ಸುಮ್ಮನೆ ಸುತ್ತಾಡುವುದು, ಮೋಜು ಮಾಡುವುದು ಅಥವಾ ಹಣ ವೆಚ್ಚ ಮಾಡುವುದಷ್ಟೇ ಅಲ್ಲ. ಆಯಾ ಪ್ರದೇಶದ ಸಾಮಾಜಿಕ, ಸಾಂಸ್ಕೃತಿಕ ಹಾಗೂ ನೈಸರ್ಗಿಕ ಮೌಲ್ಯಗಳನ್ನು ಗೌರವಿಸಿ ಅರ್ಥೈಸಿಕೊಳ್ಳುವುದಾಗಿದೆ ಎಂದು ಹೇಳಿದರು.

ಸಾಮಾನ್ಯವಾಗಿ ಪ್ರವಾಸಿಗರು ಜಲಪಾತ, ಬೆಟ್ಟ-ಗುಡ್ಡಗಳನ್ನು ನೋಡಿ ಹಿಂತಿರುಗುತ್ತಾರೆ. ಆದರೆ, ಚಿಕ್ಕಮಗಳೂರಿನಂತಹ ಮಲೆನಾಡು ಭಾಗಕ್ಕೆ ಬಂದಾಗ ಇಲ್ಲಿನ ಸಂಸ್ಕೃತಿ, ಮದುವೆ ಹಾಗೂ ಆಚಾರ-ವಿಚಾರಗಳು, ಜನರ ಜೀವನಶೈಲಿಯನ್ನು ಜಗತ್ತಿಗೆ ಪರಿಚಯಿಸುವ ಕೆಲಸವಾಗಬೇಕು. ಕೇವಲ ಮುಳ್ಳಯ್ಯನಗಿರಿ, ದತ್ತಪೀಠ ಅಥವಾ ಹೆಬ್ಬೆ ಜಲಪಾತಕ್ಕೆ ಸೀಮಿತವಾಗದೆ, ಇಲ್ಲಿನ ಶೋಲಾ ಅರಣ್ಯ, ಪಶ್ಚಿಮ ಘಟ್ಟಗಳ ಪರಿಸರ ಮಹತ್ವ ಹಾಗೂ ಜೀವ ನದಿಗಳ ಉಗಮದ ಕುರಿತು ಕಂಟೆಂಟ್ ಕ್ರಿಯೇಟರ್ಸ್ ಮಾಹಿತಿ ನೀಡಬೇಕು ಎಂದು ಸಲಹೆ ನೀಡಿದರು.

ಜಿಲ್ಲೆಗೆ ಬರುವ ಪ್ರವಾಸಿಗರು ಕೆಲವೇ ನಿರ್ದಿಷ್ಟ ತಾಣಗಳಿಗೆ ಮುಗಿಬೀಳುವುದರಿಂದ ದಟ್ಟಣೆ ಹೆಚ್ಚಾಗುತ್ತದೆ. ಜಿಲ್ಲೆಯಲ್ಲಿ ಇನ್ನುಳಿದ ಅನೇಕ ಅಪರೂಪದ ಪ್ರವಾಸಿ ತಾಣಗಳಿದ್ದು, ಬ್ಲಾಗರ್ಸ್ ಮತ್ತು ವ್ಲಾಗರ್ಸ್ ಅಂತಹ ಜಾಗಗಳನ್ನು ಗುರುತಿಸಿ ಪ್ರಚಾರ ನೀಡಬೇಕು. ಇದರಿಂದ ಪ್ರವಾಸಿ ತಾಣಗಳ ವಿಕೇಂದ್ರೀಕರಣವಾಗಿ, ಸ್ಥಳೀಯ ಜನರಿಗೆ ಹಾಗೂ ಗ್ರಾಮೀಣ ಭಾಗದ ಆರ್ಥಿಕತೆಗೆ ನೆರವಾಗುತ್ತದೆ ಎಂದು ಅಭಿಪ್ರಾಯಪಟ್ಟರು.

ಪ್ರವಾಸೋದ್ಯಮ ಬೆಳೆದಂತೆ ಪರಿಸರ ನೈರ್ಮಲ್ಯ ಕಾಪಾಡುವುದು ಎಲ್ಲರ ಹೊಣೆ. ಜಿಲ್ಲಾಡಳಿತದಿಂದ ಸ್ವಚ್ಛತೆಗಾಗಿ ಟೆಂಡರ್ ಕರೆಯಲಾಗಿದ್ದು, ಹೊಸ ಏಜೆನ್ಸಿ ಹಾಗೂ ಎನ್ಜಿಒಗಳ ಸಹಕಾರದೊಂದಿಗೆ ಸ್ವಚ್ಛತಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುತ್ತಿದೆ. ಕ್ಯೂಆರ್ ಕೋಡ್, ಎಐ ಹಾಗೂ ಡಿಜಿಟಲ್ ತಂತ್ರಜ್ಞಾನ ಬಳಸಿ ಪ್ರವಾಸೋದ್ಯಮವನ್ನು ಮರು ರೂಪಿಸುವ ಅಗತ್ಯವಿದೆ ಎಂದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ, ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಪೃಥ್ವಿಜಿತ್, ಗ್ಲೋಬಲ್ ವಿಲೇಜ್ ರೆಸಾರ್ಟ್ ಅಸೋಸಿಯೇಷನ್ ಕಾರ್ಯದರ್ಶಿ ಪರಮೇಶ್, ಇನಾಯತ್, ಮೊಹಮ್ಮದ್ ಯೂಸುಫ್, ಮೂಡಿಗೆರೆ ಹೋಂಸ್ಟೇನ ಜಗದೀಶ್ ಸೇರಿದಂತೆ ಹಲವು ಗಣ್ಯರು, ಬ್ಲಾಗರ್‌ಗಳು, ಯೂಟ್ಯೂಬರ್‌ಗಳು ಇದ್ದರು.

Environmental conservation should not be overlooked in the enthusiasm to boost tourism.

Share

Leave a comment

Leave a Reply

Your email address will not be published. Required fields are marked *

Don't Miss

ಪ್ರತಾಪ ಸಿಂಹ ವಿರುದ್ಧ ಭೀಮ್ ಆರ್ಮಿ ಪ್ರತಿಭಟನೆ

ಚಿಕ್ಕಮಗಳೂರು: ದಲಿತ ಸಂಘಟನೆಗಳ ಬಗ್ಗೆ ಮಾಜಿ ಸಂಸದ ಪ್ರತಾಪ ಸಿಂಹ ಲಘುವಾಗಿ ಮಾತನಾಡಿದ್ದು, ಕೂಡಲೇ ಕ್ಷಮೆ ಕೇಳಬೇಕು ಎಂದು ಆಗ್ರಹಿಸಿ ಭೀಮ್ ಆರ್ಮಿ ಮುಖಂಡರು ನಗರದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದರು. ನಗರದ...

ಕಸ್ತೂರಿರಂಗನ್ ವರದಿ ವಿರೋಧಿಸಿ ಶೃಂಗೇರಿ ಬಂದ್‌ ಯಶಸ್ವಿ

ಶೃಂಗೇರಿ: ಕಸ್ತೂರಿರಂಗನ್ ವರದಿ ವಿರೋಧಿ ಸಮಿತಿ ನೇತೃತ್ವದಲ್ಲಿ ಸೋಮವಾರ ಕರೆ ನೀಡಿದ್ದ ಶೃಂಗೇರಿ ಪಟ್ಟಣ ಬಂದ್ ಯಶಸ್ವಿಯಾಯಿತು. ಬಂದ್ ಅಂಗವಾಗಿ ನಡೆದ ಪಟ್ಟಣದ ಸ್ವಾಗತ ಮಂಟಪದಿಂದ ಕುವೆಂಪು ಬಸ್ ನಿಲ್ದಾಣದವರೆಗೆ ನಡೆದ...

Related Articles

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಭತ್ತದ ಗದ್ದೆಯಲ್ಲಿ 12 ಅಡಿ ಉದ್ದದ ಬೃಹತ್ ಗಾತ್ರದ ಕಾಳಿಂಗ ಸರ್ಪ

ಕಳಸ: ಭತ್ತದ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ರೈತರ ಕಣ್ಣಿಗೆ ಸುಮಾರು 12 ಅಡಿ ಉದ್ದದ ಬೃಹತ್...

ತಂದೆ-ಮಗಳ ಗಾಯನ ಮಾಧುರ್ಯಕ್ಕೆ ಮನಸೋತ ಶ್ರೋತೃಗಳು

ಚಿಕ್ಕಮಗಳೂರು: ನಗರದ ಕುವೆಂಪು ಕಲಾಮಂದಿರದಲ್ಲಿ ಶನಿವಾರ ಸಂಜೆ ಅನುರಣಿಸಿದ ಕರ್ನಾಟಕ ಶಾಸ್ತ್ರೀಯ ಹಾಗೂ ಹರಿದಾಸ ಸಾಹಿತ್ಯದ...

ಅಕ್ಟೋಬರ್ ೧ ರಿಂದ ವಿದ್ಯುತ್ ಪೂರೈಕೆ ಸುಧಾರಣೆ

ಚಿಕ್ಕಮಗಳೂರು: ಜಿಲ್ಲೆಯ ವಿದ್ಯುತ್ ಬೇಡಿಕೆಗೆ ಅನುಗುಣವಾಗಿ ಪೂರೈಕೆ ಹೆಚ್ಚಿಸುವುದು ಸೇರಿದಂತೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿನ...