ಚಿಕ್ಕಮಗಳೂರು: ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಮತ್ತು ಜೆಡಿಎಸ್ ರಾಜ್ಯ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಅವರ ವಿರುದ್ಧ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್ ನೀಡಿರುವ ಹೇಳಿಕೆಯನ್ನು ಜೆಡಿಎಸ್ ರಾಜ್ಯ ಅಲ್ಪಸಂಖ್ಯಾತ ಘಟಕದ ಉಪಾಧ್ಯಕ್ಷ ಝಕರಿಯ ಝಾಕೀರ್ ಖಂಡಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಲಪಾಡ್ ಅವರು ಈ ಹಿಂದೆಯೂ ಮುಸ್ಲಿಂ ಸಮುದಾಯದ ಕುರಿತು ಅವಹೇಳನಕಾರಿ ಹೇಳಿಕೆ ನೀಡಿದ್ದಾರೆ ಎಂದು ಆರೋಪಿಸಿದರು. ರಾಜಕೀಯವಾಗಿ ಭಿನ್ನಾಭಿಪ್ರಾಯಗಳಿದ್ದರೂ ವೈಯಕ್ತಿಕವಾಗಿ ಹಾಗೂ ಸಮುದಾಯದ ಭಾವನೆಗಳಿಗೆ ಧಕ್ಕೆ ತರುವ ರೀತಿಯಲ್ಲಿ ಹೇಳಿಕೆ ನೀಡುವುದು ಸರಿಯಲ್ಲ. ನಲಪಾಡ್ ತಮ್ಮ ಹೇಳಿಕೆಯನ್ನು ಹಿಂಪಡೆದು ಬಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಮುಂದುವರಿದು, 4ರಷ್ಟು ಮುಸ್ಲಿಂ ಮೀಸಲಾತಿ ಮರುಜಾರಿ, ಅಲ್ಪಸಂಖ್ಯಾತರ ಸಮಗ್ರ ಅಭಿವೃದ್ಧಿಗೆ ₹10ರಿಂದ ₹15 ಸಾವಿರ ಕೋಟಿ ಅನುದಾನ ಹಾಗೂ ಸಮುದಾಯದ ರಕ್ಷಣೆಗೆ ಸಂಬಂಧಿಸಿದ ಬೇಡಿಕೆಗಳನ್ನು ಸರ್ಕಾರ ಈಡೇರಿಸಬೇಕು ಎಂದು ಆಗ್ರಹಿಸಿದರು. ಈ ಬೇಡಿಕೆಗಳ ಈಡೇರಿಕೆಗೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ರಾಜ್ಯಾದ್ಯಂತ ಹೋರಾಟ ನಡೆಸಲಾಗುವುದು. ಮುಂದಿನ ದಿನಗಳಲ್ಲಿ ವಿಧಾನಸೌಧ ಚಲೋ ಹಮ್ಮಿಕೊಳ್ಳುವ ಉದ್ದೇಶವಿದೆ ಎಂದರು.
ಬಿಡದಿ ಟೌನ್‌ಶಿಪ್ ಸೇರಿದಂತೆ ವಿವಿಧೆಡೆ ರೈತರ ಕೃಷಿ ಜಮೀನುಗಳನ್ನು ಸ್ವಾಧೀನಪಡಿಸಿಕೊಳ್ಳುತ್ತಿರುವ ಸರ್ಕಾರದ ಕ್ರಮವನ್ನು ಝಕರಿಯ ಝಾಕೀರ್ ಟೀಕಿಸಿದರು. ರೈತರ ಪರವಾಗಿ ಜೆಡಿಎಸ್ ವತಿಯಿಂದ ಆರಂಭಿಸಿರುವ ಸ್ವಾಭಿಮಾನ ಯಾತ್ರೆಯನ್ನು ರಾಜ್ಯಾದ್ಯಂತ ವಿಸ್ತರಿಸಲಾಗುವುದು. ಚಿಕ್ಕಮಗಳೂರು ಜಿಲ್ಲೆಯಲ್ಲಿಯೂ ಸ್ವಾಭಿಮಾನ ಯಾತ್ರೆ ನಡೆಸಿ ರೈತರು, ಅಲ್ಪಸಂಖ್ಯಾತರು ಹಾಗೂ ದೀನದಲಿತರ ಸಮಸ್ಯೆಗಳ ಕುರಿತು ಹೋರಾಟ ನಡೆಸಲಾಗುವುದು ಎಂದು ತಿಳಿಸಿದರು.
ನಲಪಾಡ್ ಅವರು ಇದೇ ರೀತಿಯ ಹೇಳಿಕೆಗಳನ್ನು ಮುಂದುವರಿಸಿದರೆ ಜೆಡಿಎಸ್ ಅಲ್ಪಸಂಖ್ಯಾತ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ಗುಲ್ಲನ್‌ಪೇಟೆ ಮುನ್ನಾ, ಚಿಕ್ಕಮಗಳೂರು ವಸೀಂ, ನಗರಾಧ್ಯಕ್ಷ ಇರ್ಷಾದ್, ಸಮೀರ್, ಸಯ್ಯದ್ ರಿಜ್ವಾನ್, ಸಮೀರ್ ಆಸೀಫ್, ಅಣಜೂರು ಮೊಹಮ್ಮದ್, ಫೈಯಾಜ್ ಆಲಿ, ಸುರೇಶ್, ಶಾಕೀರ್ ಹುಸೇನ್, ಖಲಂದರ್ ಸೇರಿದಂತೆ ಇತರರು ಉಪಸ್ಥಿತರಿದ್ದರು.
JD(S) Minority Wing expresses outrage condemning Nalapad’s statement.
Leave a comment