ಚಿಕ್ಕಮಗಳೂರು: ರಾಜ್ಯದಲ್ಲಿ ಮುಸ್ಲಿಂ ಸಮುದಾಯಕ್ಕೆ ನೀಡಲಾಗುತ್ತಿದ್ದ ಶೇ.4ರಷ್ಟು 2ಬಿ ಮೀಸಲಾತಿಯನ್ನು ಮರುಸ್ಥಾಪಿಸಲು ರಾಜ್ಯ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಮುಸ್ಲಿಂ ಬಾಂಧವ್ಯ ವೇದಿಕೆ ಕರ್ನಾಟಕ ಆಗ್ರಹಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ವಕ್ತಾರ ಮುಸ್ತಾಕ್ ಮುನ್ನಾಬಿ, 2023ರಲ್ಲಿ ಅಂದಿನ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರ ಮುಸ್ಲಿಮರಿಗೆ ನೀಡಲಾಗುತ್ತಿದ್ದ 2ಬಿ ಮೀಸಲಾತಿಯನ್ನು ರದ್ದುಪಡಿಸಿ, ಅದರ ಪಾಲನ್ನು ಇತರ ವರ್ಗಗಳಿಗೆ ಹಂಚಿಕೆ ಮಾಡಿರುವುದು ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಪ್ರಶ್ನಾರ್ಹವಾಗಿದೆ ಎಂದು ಆರೋಪಿಸಿದರು.
ಮುಸ್ಲಿಮರಿಗೆ ಮೀಸಲಾತಿ ಧರ್ಮದ ಆಧಾರದ ಮೇಲೆ ನೀಡಲಾಗಿರಲಿಲ್ಲ. ಸಾಮಾಜಿಕ ಮತ್ತು ಶೈಕ್ಷಣಿಕ ಹಿಂದುಳಿದಿರುವಿಕೆ ಹಾಗೂ ಸರ್ಕಾರಿ ಉದ್ಯೋಗಗಳಲ್ಲಿ ಸಮರ್ಪಕ ಪ್ರಾತಿನಿಧ್ಯವಿಲ್ಲದಿರುವುದನ್ನು ಆಧಾರವಾಗಿಟ್ಟುಕೊಂಡು ಮೀಸಲಾತಿ ನೀಡಲಾಗಿತ್ತು ಎಂದು ಅವರು ಹೇಳಿದರು.
ಹಿಂದಿನ ಹಿಂದುಳಿದ ವರ್ಗಗಳ ಆಯೋಗಗಳ ವರದಿಗಳು ಹಾಗೂ ಸಚ್ಚಾರ್ ಸಮಿತಿಯ ವರದಿಗಳಲ್ಲಿ ಮುಸ್ಲಿಂ ಸಮುದಾಯದ ಸಾಮಾಜಿಕ, ಶೈಕ್ಷಣಿಕ ಮತ್ತು ಆರ್ಥಿಕ ಸ್ಥಿತಿಗತಿಗಳ ಕುರಿತು ಉಲ್ಲೇಖಿಸಲಾಗಿದೆ. ಈ ಹಿನ್ನೆಲೆಯಲ್ಲಿ 2ಬಿ ಮೀಸಲಾತಿಯನ್ನು ಮರುಸ್ಥಾಪಿಸುವ ಕುರಿತು ಸರ್ಕಾರ ಸಮಗ್ರವಾಗಿ ಪರಿಶೀಲಿಸಬೇಕು ಎಂದು ಒತ್ತಾಯಿಸಿದರು.
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಸಚಿವ ಸಂಪುಟ ಸಭೆ ಕರೆದು 2ಬಿ ಮೀಸಲಾತಿ ರದ್ದತಿ ಕುರಿತು ಮರುಪರಿಶೀಲನೆ ನಡೆಸಬೇಕು. ಸರ್ಕಾರ ಕೈಗೊಳ್ಳುವ ನಿರ್ಧಾರವನ್ನು ಈಗಾಗಲೇ ಪ್ರಕರಣದ ವಿಚಾರಣೆ ನಡೆಸುತ್ತಿರುವ ಸುಪ್ರೀಂಕೋರ್ಟ್‌ನ ಗಮನಕ್ಕೂ ತರಬೇಕು ಎಂದು ಆಗ್ರಹಿಸಿದರು.
ಮೀಸಲಾತಿ ವಿಚಾರದಲ್ಲಿ ಸರ್ಕಾರ ಸ್ಪಷ್ಟ ನಿರ್ಧಾರ ಕೈಗೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಸಂಘಟನೆ ಹಾಗೂ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಚರ್ಚಿಸಿ ರಾಜಕೀಯವಾಗಿ ತಮ್ಮ ನಿಲುವು ಪ್ರಕಟಿಸಲಾಗುವುದು ಎಂದು ಮುಸ್ತಾಕ್ ಮುನ್ನಾಬಿ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಅನೀಶ್ ಷಾಷ, ಜಾಕೀರ್ ಹುಸೇನ್, ಪನೇಸ್ ಅಹಮದ್, ಇಬ್ರಾಹಿಂ, ಅಬ್ದುಲ್ ಖಾಸೀಮ್ ಹಾಗೂ ಮಹಮದ್ ಶಫಿಉಲ್ಲಾ ಉಪಸ್ಥಿತರಿದ್ದರು.
Muslim Bandhavya Vedike demands restoration of 2B reservation.
Leave a comment