ಅಜ್ಜಂಪುರ: ರಸ್ತೆ ಬದಿಯಲ್ಲಿ ನಡೆದುಕೊಂಡು ಹೋಗುತ್ತಿದ್ದ ವ್ಯಕ್ತಿಯೊಬ್ಬರಿಗೆ ಅಪರಿಚಿತ ವಾಹನ ಡಿಕ್ಕಿ ಹೊಡೆದು, ಚಾಲಕ ವಾಹನ ಸಮೇತ ಪರಾರಿಯಾಗಿರುವ ಘಟನೆ ಅಜ್ಜಂಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಮೃತರನ್ನು ಬುಕ್ಕಾಂಬೂದಿ ಗ್ರಾಮದ ಅಂಬೇಡ್ಕರ್ ಕಾಲೋನಿ ನಿವಾಸಿ ಶಂಕ್ರಪ್ಪ (45) ಎಂದು ಗುರುತಿಸಲಾಗಿದೆ. ಅವರು ಕೂಲಿ ಕೆಲಸ ಮಾಡಿಕೊಂಡು ಕುಟುಂಬದೊಂದಿಗೆ ವಾಸವಾಗಿದ್ದರು.
ಸೆ.26ರಂದು ಬುಕ್ಕಾಂಬೂದಿ ಗ್ರಾಮದಲ್ಲಿ ಗಣಪತಿ ವಿಸರ್ಜನೆ ಕಾರ್ಯಕ್ರಮ ನಡೆದ ಹಿನ್ನೆಲೆಯಲ್ಲಿ ಶಂಕ್ರಪ್ಪ ಅವರು ಸಂಜೆ ಗಣಪತಿ ಮೆರವಣಿಗೆಯೊಂದಿಗೆ ತೆರಳಿದ್ದರು. ರಾತ್ರಿ ಸುಮಾರು 10.30ರ ವೇಳೆಯಲ್ಲಿ ಅವರನ್ನು ಬುಕ್ಕಾಂಬೂದಿ ಸರ್ಕಲ್ ಬಳಿ ಸ್ಥಳೀಯರು ನೋಡಿದ್ದರು ಎನ್ನಲಾಗಿದೆ.
ನಂತರ ಸೆ.27ರಂದು ಬೆಳಿಗ್ಗೆ ಸುಮಾರು 6 ಗಂಟೆಗೆ ಬುಕ್ಕಾಂಬೂದಿ–ಉಬ್ರಾಣಿ ರಸ್ತೆಯ ಅಭಿಷೇಕ್ ಬಾರ್ ಅಂಡ್ ರೆಸ್ಟೋರೆಂಟ್ ಸಮೀಪ ರಸ್ತೆ ಬದಿಯಲ್ಲಿ ಶಂಕ್ರಪ್ಪ ಅವರ ಮೃತದೇಹ ಬಿದ್ದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ವಿಷಯ ತಿಳಿದು ಸ್ಥಳಕ್ಕೆ ತೆರಳಿದ ಪತ್ನಿ ಗೌರಮ್ಮ ಅವರು, ತಲೆಗೆ ಹಾಗೂ ಕಿವಿಯ ಬಳಿ ತೀವ್ರ ಪೆಟ್ಟಾಗಿ ರಕ್ತಗಾಯಗಳಿಂದ ಶಂಕ್ರಪ್ಪ ಮೃತಪಟ್ಟಿರುವುದನ್ನು ಕಂಡಿದ್ದಾರೆ.
ಸೆ.26ರ ರಾತ್ರಿ 10.30ರಿಂದ ಸೆ.27ರ ಬೆಳಿಗ್ಗೆ 5 ಗಂಟೆಯ ನಡುವಿನ ಅವಧಿಯಲ್ಲಿ ಶಂಕ್ರಪ್ಪ ಅವರು ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಅಪರಿಚಿತ ವಾಹನ ಡಿಕ್ಕಿ ಹೊಡೆದಿರುವ ಸಾಧ್ಯತೆಯಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಅಪಘಾತದ ಬಳಿಕ ಚಾಲಕ ಗಾಯಾಳುವಿಗೆ ಯಾವುದೇ ನೆರವು ನೀಡದೆ ವಾಹನ ಸಮೇತ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.
ಶವವನ್ನು ಅಜ್ಜಂಪುರ ಸರ್ಕಾರಿ ಆಸ್ಪತ್ರೆಗೆ ರವಾನಿಸಿದ ಬಳಿಕ ಮೃತರ ಪತ್ನಿ ಗೌರಮ್ಮ ಅವರು ಅಜ್ಜಂಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ದೂರಿನ ಆಧಾರದ ಮೇಲೆ ಅಜ್ಜಂಪುರ ಠಾಣೆ ಪೊಲೀಸರು ಮೊ.ನಂ. 254/2026ರಲ್ಲಿ ಪ್ರಕರಣ ದಾಖಲಿಸಿಕೊಂಡು ಅಪಘಾತಕ್ಕೆ ಕಾರಣವಾದ ವಾಹನ ಹಾಗೂ ಪರಾರಿಯಾಗಿರುವ ಚಾಲಕನ ಪತ್ತೆಗೆ ತನಿಖೆ ಕೈಗೊಂಡಿದ್ದಾರೆ.
Man dies after being hit by an unidentified vehicle in Ajjampura.
Leave a comment