ಚಿಕ್ಕಮಗಳೂರು: ಮನೆಯವರೊಂದಿಗೆ ನಗುನಗುತ್ತಾ ಸೀಮಂತ ಕಾರ್ಯಕ್ರಮಕ್ಕೆ ಹೆಜ್ಜೆ ಹಾಕುತ್ತಿದ್ದ ವೃದ್ಧೆಯೊಬ್ಬರ ಮೇಲೆ ಕಣ್ಣಿಟ್ಟ ಖದೀಮರು ಹಾಡಹಗಲೇ ಲಕ್ಷಾಂತರ ರೂಪಾಯಿ ಮೌಲ್ಯದ ಮಾಂಗಲ್ಯ ಸರವನ್ನು ಕಸಿದು ಪರಾರಿಯಾಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ.
ಯಾವುದೇ ಭಯವಿಲ್ಲದೆ ಹೆಲೈಟ್ ಧರಿಸಿ ಬೈಕ್ನಲ್ಲಿ ಬಂದ ದುಷ್ಕರ್ಮಿಗಳು ವೃದ್ಧೆಯ ಪ್ರತಿರೋಧದ ನಡುವೆಯೂ ಬಲವಂತವಾಗಿ ಚಿನ್ನವನ್ನು ಕಿತ್ತುಕೊಂಡು ಧೂಳೆಬ್ಬಿಸಿ ಪರಾರಿಯಾಗಿದ್ದಾರೆ. ಎಂದು ಚಿಕ್ಕಮಗಳೂರು ಗ್ರಾಮಾಂತರ ಠಾಣೆಗೆ ದೂರು ನೀಡಲಾಗಿದೆ.
ಅಂಬಳೆ ಹೋಬಳಿಯ ಸಿರಗಾಪುರ ಗ್ರಾಮದ ನಿವಾಸಿ ರಂಗಮ್ಮ ಎಂಬ 67 ವರ್ಷದ ವೃದ್ದೆ, ತಮ್ಮ ಸಂಬಂಧಿಕರ ಮನೆಯ ಸೀಮಂತ ಕಾರ್ಯಕ್ರಮಕ್ಕೆಂದು ಶಾಸ್ತ್ರದ ಅಕ್ಕಿಯನ್ನು ತಲೆಯ ಮೇಲೆ ಹೊತ್ತುಕೊಂಡು ಗ್ರಾಮದ ಭೂತಪ್ಪನ ದೇವಸ್ಥಾನದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದರು.
ಈ ವೇಳೆ ಹಿಂದಿನಿಂದ ಪಲ್ಸರ್ ಬೈಕ್ನಲ್ಲಿ ಹೆಲೈಟ್ ಧರಿಸಿ ಬಂದ ಇಬ್ಬರು ಅಪರಿಚಿತರು ಏಕಾಏಕಿ ರಂಗಮ್ಮ ಅವರ ಕುತ್ತಿಗೆಯಲ್ಲಿದ್ದ ಮಾಂಗಲ್ಯ ಸರಕ್ಕೆ ಕೈಹಾಕಿದ್ದಾರೆನ್ನಲಾಗಿದೆ. ಮಹಿಳೆ ತಕ್ಷಣ ಎಚ್ಚೆತ್ತುಕೊಂಡು ತನ್ನ ಸರವನ್ನು ಬಿಡಿಸಿಕೊಳ್ಳಲು ಜೀವದ ಹಂಗು ತೊರೆದು ಪ್ರತಿರೋಧ ತೋರಿದರೂ, ಕಿರಾತಕರು ಬಲಪ್ರಯೋಗ ಮಾಡಿ ಕುತ್ತಿಗೆಯಲ್ಲಿದ್ದ ಆಭರಣವನ್ನು ಕಿತ್ತುಕೊಂಡಿದ್ದಾರೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಈ ಕೃತ್ಯದಲ್ಲಿ ತಾಳಿ ಗುಂಡು ಸೇರಿದಂತೆ ಒಟ್ಟು 47 ಗ್ರಾಂ ತೂಕದ ಮಾಂಗಲ್ಯ ಸರ ದುಷ್ಕರ್ಮಿಗಳ ಪಾಲಾಗಿದ್ದು, ಇದರ ಅಂದಾಜು ಮೌಲ್ಯ ಸುಮಾರು 2,82,000 ರೂಪಾಯಿ ಎಂದು ಅಂದಾಜಿಸಲಾಗಿದೆ. ಘಟನೆಯಿಂದ ಬೆಚ್ಚಿಬಿದ್ದ ವೃದ್ದೆ ನೀಡಿದ ದೂರಿನ ಮೇರೆಗೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹಾಡಹಗಲೇ ಇಂತಹ ಕೃತ್ಯ ಎಸಗಿದ ಬೈಕ್ ಸವಾರರ ಪತ್ತೆಗೆ ಪೊಲೀಸರು ಜಾಲ ಬೀಸಿದ್ದಾರೆ.
Theft of Mangalsutra chains worth lakhs of rupees in broad daylight.
Leave a comment